ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲಿನ ಝಳಕ್ಕೆ ಬಸವಳಿದ ಪ್ರಾಣಿಸಂಕುಲ

ದಿನೇ ದಿನೆ ಹೆಚ್ಚುತ್ತಿರುವ ತಾಪಮಾನ, ತಾಲ್ಲೂಕು ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತ
ಎಂ.ಪಿ. ಚಪೆಟ್ಲಾ
Published 13 ಏಪ್ರಿಲ್ 2024, 6:14 IST
Last Updated 13 ಏಪ್ರಿಲ್ 2024, 6:14 IST
ಅಕ್ಷರ ಗಾತ್ರ

ಗುರುಮಠಕಲ್: ತಾಲ್ಲೂಕು ವ್ಯಾಪ್ತಿಯಲ್ಲಿ ದಿನೇ ದಿನೇ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು, ಜನ–ಜಾನುವಾರು, ಪಕ್ಷಿಗಳೂ ಸೂರ್ಯನ ಬಿಸಿಲಿನ ಅಬ್ಬರಕ್ಕೆ ತಲ್ಲಣಗೊಳ್ಳುತ್ತಿವೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಶುಕ್ರವಾರ(ಏ.5) ರಾತ್ರಿ ಸರಾಸರಿ 29 ಡಿಗ್ರಿ ಸೆಲ್ಸಿಯಸ್‌ ಮತ್ತು ಶನಿವಾರ(ಏ.6) ಬೆಳಿಗ್ಗೆ 36 ಡಿಗ್ರಿ ಸೆಲ್ಸಿಯಸ್‌, ಮಧ್ಯಾಹ್ನ 41 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಬೆಳಿಗ್ಗೆ 9ರ ನಂತರ ಮನೆಯಿಂದ ಹೊರಬರಲು ಭಯವಾಗುತ್ತಿದೆ. ಮಧ್ಯಾಹ್ನದ ವೇಳೆ ಬಿಸಿಲಲ್ಲಿ ಕೆಲಸಕ್ಕೆಂದು ಹೊರ ಹೋಗಿ ಮನೆಗೆ ಬಂದರೆ ತಲೆನೋವು. ರಾತ್ರಿಯಿಡೀ ನಿದ್ರೆ ಬರುವುದಿಲ್ಲ. ಕೈ ಕಾಲುಗಳ ಶಕ್ತಿ ಕಳೆದುಕೊಂಡ ಅನುಭವ. ಸಾಕಷ್ಟು ನೀರು ಕುಡಿದರೂ ದಾಹ ತಣಿಯುತ್ತಿಲ್ಲ ಎನ್ನುತ್ತಾರೆ ಸಾಮಗ್ರಿ ಖರೀದಿಗೆ ಬಂದಿದ್ದ ವೃದ್ಧೆಯೊಬ್ಬರು.

ತಂಪು ಪಾನೀಯಕ್ಕೆ ಹೆಚ್ಚಿದ ಬೇಡಿಕೆ: ಕಳೆದ ತಿಂಗಳಿಗೆ ಹೋಲಿಸಿದರೆ ಸದ್ಯ ಕುಡಿಯುವ ನೀರಿನ ಬಾಟಲಿ ಮಾರಾಟ ಬಹುತೇಕ ದ್ವಿಗುಣವಾಗಿದೆ. ಅಂಗಡಿಯೊಂದರಲ್ಲಿ ಈ ಮೊದಲು ವಿವಿಧ ಗಾತ್ರದ ಬಾಟಲಿಗಳ 4 ಕೇಸ್(20 ಲೀ.) ಬಿಕರಿಯಾಗುತ್ತಿತ್ತು. ಸದ್ಯ 8ರಿಂದ 9 ಕೇಸ್ (40ರಿಂದ 45 ಲೀ.) ಬಿಕರಿಯಾಗುತ್ತಿದೆ.

ವಿವಿಧ ಕಂಪನಿಗಳ ಸಾಫ್ಟ್ ಡ್ರಿಂಕ್ಸ್ ಬೇಡಿಕೆಯೂ ದ್ವಿಗುಣಗೊಂಡಿದೆ ಅಥವಾ ಅದಕ್ಕೂ ಹೆಚ್ಚೆನ್ನಬಹುದು. ಸದ್ಯ ಗ್ರಾಹಕರ ಬೇಡಿಕೆಯಷ್ಟು ಬಾಟಲಿಗಳನ್ನು ತಂಪಾಗಿಸಲು ಸಾಧ್ಯವಾಗುಗುತ್ತಿಲ್ಲ. ಬೇಡಿಕೆಯಷ್ಟು ತಂಪು ಬಾಟಲಿಗಳಿದ್ದರೆ, ಇನ್ನೂ ಹೆಚ್ಚಿನ ಮಾರಾಟವಾಗುತ್ತಿತ್ತು ಎಂದು ಅಂಗಡಿ ಮಾಲೀಕರೊಬ್ಬರು ಮಾಹಿತಿ ನೀಡಿದರು.

ಅಂತರಜಲ ಕುಸಿತ: ಪಟ್ಟಣ ಸೇರಿದಂತೆ ತಾಲ್ಲೂಕು ವ್ಯಾಪ್ತಿಯ ಬಹುತೇಕ ಬಾವಿ, ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಅಂತರ್ಜಲಮಟ್ಟ ಕುಸಿದ ಪರಿಣಾಮ ಗ್ರಾಮೀಣ ಜನರಿಗೆ ಕೆಲವೊಂದೆಡೆ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಉಲ್ಬಣಿಸದಂತೆ ಆಯಾ ಪಂಚಾಯಿತಿ ಮಟ್ಟದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಸಿದ್ಧತೆ ನಡೆಸಲಾಗುತ್ತಿರುವ ಕುರಿತು ಪಂಚಾಯಿತಿಯೊಂದರ ಸಿಬ್ಬಂದಿ ಮಾಹಿತಿ ನೀಡಿದರು.

ಬಿಸಿಲಿಗೆ ತತ್ತರಿಸಿದ ಜೀವ ಸಂಕುಲ: ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚಿದ ತಾಪಕ್ಕೆ ಜನ ಜೀವನ ಮಾತ್ರವಲ್ಲದೆ, ಜಾನುವಾರುಗಳು, ಪಕ್ಷಿಗಳೂ ತಲ್ಲಣಿಸುತ್ತಿವೆ. ಮೇವು ಹುಡುಕುವ ಬದಲು ನೆರಳು ಹುಡುಕಿಕೊಂಡು ಮಲಗುತ್ತಿವೆ. ಹಕ್ಕಿಗಳು ಮನೆಗಳ ಮುಂದೆ, ಚರಂಡಿಗಳಲ್ಲಿ, ನಳಗಳ ಹತ್ತಿರ ನೀರಿಗಾಗಿ ಬರುತ್ತಿವೆ. ಒಟ್ಟಾರೆಯಾಗಿ ಊಟಕ್ಕಿಂತಲೂ, ದಾಹ ತಣಿಸಿಕೊಳ್ಳುವುದಕ್ಕೆ ಆದ್ಯತೆ ಎನ್ನುವಂತಾಗಿದೆ.

ಗುರುಮಠಕಲ್ ಪಟ್ಟಣದಲ್ಲಿ ಬಾಗಿಲು ಮುಚ್ಚಿದ ಹೋಟೆಲ್ ಒಂದರ ಮುಂದೆ ಬಿದ್ದಿ ಹಸಿಯಾಗಿದ್ದ ಗೋಣೆ ಚೀಲವನ್ನು ನೆಕ್ಕುತ್ತಿರುವ ರಾಸು.
ಗುರುಮಠಕಲ್ ಪಟ್ಟಣದಲ್ಲಿ ಬಾಗಿಲು ಮುಚ್ಚಿದ ಹೋಟೆಲ್ ಒಂದರ ಮುಂದೆ ಬಿದ್ದಿ ಹಸಿಯಾಗಿದ್ದ ಗೋಣೆ ಚೀಲವನ್ನು ನೆಕ್ಕುತ್ತಿರುವ ರಾಸು.
ಗುರುಮಠಕಲ್ ತಾಲ್ಲೂಕಿನ ಚಪೆಟ್ಲಾ ಗ್ರಾಮದ ಹೊರ ವಲಯದಲ್ಲಿರುವ ನೀರಿನ ತೊಟ್ಟಿಗೆ ಮದ್ಯಾಹ್ನ ನೀರು ಕುಡಿಯಲು ಬಂದಿದ್ದ ಜಾನುವಾರುಗಳು.
ಗುರುಮಠಕಲ್ ತಾಲ್ಲೂಕಿನ ಚಪೆಟ್ಲಾ ಗ್ರಾಮದ ಹೊರ ವಲಯದಲ್ಲಿರುವ ನೀರಿನ ತೊಟ್ಟಿಗೆ ಮದ್ಯಾಹ್ನ ನೀರು ಕುಡಿಯಲು ಬಂದಿದ್ದ ಜಾನುವಾರುಗಳು.

ಬಿಸಿಲಿನಿಂದಾಗಿ ಹೊರಗೆ ತಿರುಗಾಡಲು ಹಿಂಜರಿಕೆಯಾಗುತ್ತಿದೆ. ಆದರೆ ಕೃಷಿ ಚಟುವಟಿಕೆಗಳು ಸಾಮಗ್ರಿ ಖರೀದಿಗೆ ಬಿಸಿಲಲ್ಲಿ ತಿರುಗಾಡುವುದು ಅನಿವಾರ್ಯ. ಹಿಂದೆಂದಿಗಿಂತಲೂ ಈ ಬಾರಿ ಬಿಸಿಲು ಹೆಚ್ಚಿದೆ -ವೆಂಕಟಪ್ಪ ಕೃಷಿಕ

ಮದ್ಯಪಾನ ಕಾಫಿ-ಟೀ ಕಾರ್ಬೋನೇಟೆಡ್ ಪಾನೀಯಗಳು ಮತ್ತು ಜಂಕ್ ಫುಡ್ ಸೇವನೆ ಬೇಡ. ಹೆಚ್ಚೆಚ್ಚು ನೀರು ಕುಡಿಯಿರಿ. ನೆರಳಿನಲ್ಲಿರಿ. ಬಿಸಿಲಲ್ಲಿ ತಿರುಗಾಡುವುದನ್ನು ತಪ್ಪಿಸಿ. ಆರೋಗ್ಯದಲ್ಲಿ ಏರುಪೇರಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ

-ಡಾ.ಭಾಗರೆಡ್ಡಿ ಆರ್‌ಬಿಎಸ್‌ಕೆ ವೈದ್ಯಾಧಿಕಾರಿ

ಕೊಳವೆಬಾವಿ ಪೈಪ್‌ಲೈನ್ ದುರಸ್ತಿಗೆ ₹ 26 ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ. ಆಯಾ ಗ್ರಾಮಗಳಲ್ಲಿ ಹತ್ತಿರದ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆಯುವುದು ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಟೆಂಡರ್ ಕರೆದು ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಸೂಚಿಸಿದ್ದು ಎಲ್ಲೂ ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಲಾಗುವುದು

-ವಿಲಾಸರಾಜ ಪ್ರಸನ್ನ ತಾ.ಪಂ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT