ಭಾನುವಾರ, ಮೇ 16, 2021
22 °C
ನಗರದ ವಿವಿಧ ವಾರ್ಡ್‌ಗಳ ನಳಗಳಲ್ಲಿ ಅಶುದ್ಧ ನೀರು ಪೂರೈಕೆ

ಶುದ್ಧ ನೀರು ಪೂರೈಕೆಗೆ ಪೈಪ್‌ಲೈನ್‌ ಕಂಟಕ

ಮಲ್ಲೇಶ್ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

ಯಾದಗಿರಿಯ ಕಮಲ ಪಾರ್ಕ್ ಬಳಿಯ ವಾಲ್ಮೀಕಿ ನಗರದಲ್ಲಿ ಚರಂಡಿ ಮೇಲೆ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸಿರುವ ದೃಶ್ಯ

ಯಾದಗಿರಿ: ನಗರದಲ್ಲಿ ಪೈಪ್‌ಲೈನ್‌ ಅಳವಡಿಕೆ ಕಾರ್ಯ ಅಸಮರ್ಪಕವಾಗಿರುವುದರಿಂದ ಅಶುದ್ಧ ಕುಡಿಯುವ ಪೂರೈಕೆಯಾಗುತ್ತಿದ್ದು, ಇದರಿಂದ ಜನರು ರೋಗಭೀತಿ ಎದುರಿಸುತ್ತಿದ್ದಾರೆ.

ಮುಸ್ಲಿಂಪುರ, ಚಾಮಲೇಔಟ್, ರಾಯಚೂರು ಮೊಹಲ್ಲಾ, ಆಸಾರ್ ಮೊಹಲ್ಲಾ, ದಬೀರ್ ಕಾಲೊನಿ, ಅಜಿದ್‌ ಕಾಲೊನಿ, ಸದರ ದರ್ವಾಜ, ಮದನಪುರ, ಬುಕಾರಿ ಮೊಹಲ್ಲಾಗಳಲ್ಲಿ ನಗರಸಭೆ ಅಳವಡಿಸಿರುವ ಕುಡಿಯುವ ನೀರಿನ ಪೈಪ್‌ಗಳು ಕಳಪೆ ಗುಣಮಟ್ಟದ್ದಾಗಿದ್ದು, ಪೈಪ್‌ಗಳನ್ನು ನೆಲೆದ ಮೇಲೆಯೇ ಅಳವಡಿಸಿರುವುದು ಕಂಡುಬರುತ್ತಿವೆ.

ಭೂಮಿಯಲ್ಲಿ ಹೆಚ್ಚು ಕಲ್ಲು ಇರುವುದರಿಂದ ಅಗೆದು ಪೈಪ್‌ ಅಳವಡಿಸಲು ಸಾಧ್ಯವಿಲ್ಲ ಎಂದು ಹೇಳುವ ನಗರಸಭೆ, ನೆಲದ ಮೇಲೆ ಅಳವಡಿಸಿರುವ ಪೈಪ್‌ಗಳ ಸುರಕ್ಷತೆಗೆ ಗಮನ ಕೊಡುತ್ತಿಲ್ಲ.

ಪೈಪ್‌ಗಳನ್ನು ಚರಂಡಿಗಳ ಪಕ್ಕದಲ್ಲಿ ಇಲ್ಲವೇ ಚರಂಡಿಯ ಮೇಲೆ ಅಳವಡಿಸಲಾಗಿದೆ. ಮಳೆಗಾಲದಲ್ಲಿ ಚರಂಡಿಗಳು ಉಕ್ಕಿ ಹರಿಯುವುದರಿಂದ ಈ ಪೈಪ್‌ಗಳಲ್ಲೂ ಚರಂಡಿ ನೀರು ತುಂಬಿಕೊಳ್ಳುತ್ತಿವೆ. ನಂತರ ನಗರಸಭೆ ಇವೇ ಪೈಪ್‌ಗಳ ಮೂಲಕ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತದೆ. ಇಂತಹ ನೀರನ್ನೇ ಕುಡಿಯುತ್ತಿರುವ ಜನರು ಸಾಮಾನ್ಯ ಜ್ವರದಿಂದ ಬಳಲಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಜೂನ್‌ ತಿಂಗಳಲ್ಲಿ 6 ಸಾವಿರ ಜನರು ಸಾಮಾನ್ಯ ಜ್ವರದಿಂದ ಬಳಲಿ ಚಿಕಿತ್ಸೆ ಪಡೆದಿರುವುದು ಜಿಲ್ಲಾ ಆಸ್ಪತ್ರೆ ಹೊರರೋಗಿ ವಿಭಾಗದ ನೋಂದಣಿ ವರದಿ ತಿಳಿಸುತ್ತದೆ. ಇನ್ನು ಡೆಂಗಿ, ಚಿಕೂನ್‌ ಗುನ್ಯ, ಮಲೇರಿಯಾ, ವಾಂತಿ ಭೇದಿ ಹರಡುವ ಆತಂಕ ಜನರನ್ನು ಕಾಡುತ್ತಿದೆ.

ತೆರಿಗೆ ಕಟ್ಟಿದರೂ ಶುದ್ಧ ನೀರಿಲ್ಲ:
ನಗರದ ವಿವಿಧ ವಾರ್ಡ್‌ಗಳಲ್ಲಿ 6,525 ನಳಗಳಿವೆ. ಪ್ರತಿಯೊಬ್ಬರೂ ನೀರಿ ಶುಲ್ಕ ಪಾವತಿಸುತ್ತಾ ಬಂದಿದ್ದಾರೆ. ನಗರಸಭೆ ಅಧಿಕಾರಿಗಳು ನೀರಿನ ಕರ ವಸೂಲಿಯನ್ನು ಕಟ್ಟುನಿಟ್ಟಾಗಿ ಮಾಡುತ್ತಿದ್ದಾರೆ. ಆದರೆ, ಶುದ್ಧ ಕುಡಿಯುವ ನೀರು ಕೇಳಿದರೆ ಮಾತ್ರ ಸಬೂಬು ಹೇಳುತ್ತಾರೆ. ನಗರಸಭೆ ಅಧ್ಯಕ್ಷ– ಪೌರಾಯುಕ್ತರ ಮಧ್ಯೆ ಸಮನ್ವಯದ ಕೊರತೆಯಿಂದಾಗಿ ಈ ವರ್ಷವೂ ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗಿಲ್ಲ ಎಂಬುದಾಗಿ ಮುಸ್ಲಿಂಪುರ ವಾರ್ಡ್‌ ನಿವಾಸಿಗಳಾದ ಸೈಫುಲ್ಲಾ, ಅನ್ವರ್‌ ಸಾಬ್‌ ದೂರುತ್ತಾರೆ.

ಹತ್ತು ವರ್ಷಗಳಲ್ಲಿ ಸರ್ಕಾರಿ ವಸತಿ ಗೃಹಗಳ ನೀರಿನ ಕರ ₹15 ಲಕ್ಷದಷ್ಟು ಬಾಕಿ ಇದೆ. ಆದರೂ, ಸರ್ಕಾರಿ ಅಧಿಕಾರಿಗಳು ನೆಲೆಸಿರುವ ವಸತಿ ಗೃಹಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ನೀರು ಪೂರೈಕೆ ವಿಚಾರದಲ್ಲೂ ನಗರಸಭೆ ತಾರತಮ್ಯ ಮಾಡುತ್ತಿದೆ ಎಂದು ಅವರು ಆರೋಪಿಸುತ್ತಾರೆ.

24X7 ಯೋಜನೆ ವಿಫಲ: 24X7 ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಆರಂಭಗೊಂಡು ಎರಡು ವರ್ಷ ಕಳೆದರೂ ಯೋಜನೆ ಸಂಪೂರ್ಣವಾಗಿ ಮುಗಿದಿಲ್ಲ. ಭೀಮಾ ನದಿಯಿಂದ ನೀರು ಶುದ್ಧೀಕರಿಸಿ ನಗರದ 31 ವಾರ್ಡ್‌ಗಳಿಗೆ ಪೂರೈಕೆ ಮಾಡುವ ನಗರಸಭೆಯ ಗುರಿ ಇದುವರೆಗೂ ಈಡೇರಿಲ್ಲ. 24X7 ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿಯ ಇ –ಟೆಂಡರ್ ಪಡೆದ ಕಂಪನಿ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಈ ಕಾರಣಕ್ಕೆ ಶುದ್ಧ ಕುಡಿಯುವ ನೀರು ನಿವಾಸಿಗಳಿಗೆ ದಕ್ಕುತ್ತಿಲ್ಲ.

2018–19ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ನೀರಿನ ಕರ ಪಾವತಿಸುವ ಪದ್ಧತಿಯನ್ನು ನಗರಸಭೆ ಜಾರಿಗೆ ತಂದಿದೆ. ಕರ ವಸೂಲಿಯಲ್ಲಿ ಆಸಕ್ತಿ ತೋರುವ ನಗರಸಭೆ ಶುದ್ಧ ಕುಡಿಯುವ ನೀರು ಪೂರೈಕೆಯಲ್ಲೂ ಆಸಕ್ತಿ ತೋರುತ್ತಿಲ್ಲ ಎಂಬುದು ನಗರದ ವಿವಿಧ ವಾರ್ಡ್‌ಗಳ ನಿವಾಸಿಗಳ ದೂರು.

ಶುದ್ಧ ಕುಡಿಯುವ ನೀರು ಕೇಳುವುದು ನಿವಾಸಿಗಳ ಹಕ್ಕು. ನಗರಸಭೆ ಜನರ ಕನಿಷ್ಠ ಅಗತ್ಯ ಪೂರೈಸುವಲ್ಲಿ ವಿಫಲಗೊಂಡಿದೆ.
 – ಉಮೇಶ್ ಮುದ್ನಾಳ, ಸಾಮಾಜಿಕ ಹೋರಾಟಗಾರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು