ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಸುರಪುರಕ್ಕೆ ಹಲವು ಬಾರಿ ಭೇಟಿ ನೀಡಿದ್ದ ಚಂಪಾ

Last Updated 10 ಜನವರಿ 2022, 14:37 IST
ಅಕ್ಷರ ಗಾತ್ರ

ಸುರಪುರ: ಸೋಮವಾರ ನಿಧನರಾದ ಸಾಹಿತಿ ಚಂದ್ರಶೇಖರ ಪಾಟೀಲ ಸುರಪುರಕ್ಕೆ ಹತ್ತಾರು ಸಲ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

1978 ರಲ್ಲಿ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ನಾಡಹಬ್ಬ ಸಮಾರಂಭದಲ್ಲಿ ವಿಶೇಷ ಭಾಷಣ ಮಾಡಿದ್ದರು. 2003ರಲ್ಲಿ ನಡೆದ ಇದೇ ಸಾಹಿತ್ಯ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಎರಡೂ ಸಮಾರಂಭಗಳಲ್ಲಿ ಸಾಕ್ಷಿಯಾಗಿದ್ದ ಸಂಘದ ಇಂದಿನ ಪ್ರಧಾನ ಕಾರ್ಯದರ್ಶಿ ಸಾಹಿತಿ ಶಾಂತಪ್ಪ ಬೂದಿಹಾಳ, ‘ಚಂಪಾ ಅತ್ಯಂತ ಸರಳ ಸ್ವಭಾವದವರು. ಬಂಡಾಯ ಸಿದ್ಧಾಂತ ಬಂದಾಗ ಎಂದೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಎಲ್ಲರೊಡನೆ ಬೆರೆಯುತ್ತಿದ್ದರು’ ಎಂದು ಅವರೊಡನೆ ಕಳೆದ ದಿನಗಳನ್ನು ಮೆಲುಕು ಹಾಕಿದರು.

1993ರಲ್ಲಿ ನಗರದ ಆರಾಧನಾ ಭವನದಲ್ಲಿ ಉರ್ದು ಕವಿ ಮಂಜೂರ ಅಹ್ಮದ್ ತನ್ಹಾ ಅವರ ‘ಛಲನಿ ಛಲನಿ ಸಾಹೀಬಾ’ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದ್ದರುರು. ಅಂದು ಸಚಿವರಾಗಿದ್ದ ರಾಜಾ ಮದನಗೋಪಾಲನಾಯಕ, ಸಾಹಿತಿಗಳಾಗಿದ್ದ ಎ.ಕೃಷ್ಣ, ಗುರುಬಸವಯ್ಯ ಅಮ್ಮಾಪುರ, ಬಸವೇಶ್ವರನಾಥ ಸುಗೂರಮಠ ಭಾಗವಹಿಸಿದ್ದರು.

ಅಂದು ಕಾರ್ಯಕ್ರಮ ನಿರೂಪಕರಾಗಿದ್ದ ಸಾಹಿತಿ ಶ್ರೀನಿವಾಸ ಜಾಲವಾದಿ ಚಂಪಾ ಅವರ ನೆನಪುಗಳನ್ನು ಮೆಲುಕು ಹಾಕುತ್ತಾ, ‘ಚಂಪಾ ಅವರ ಮಾತು, ಚುಟುಕು ಇಡೀ ಸಭಿಕರಿಗೆ ಕಚಗುಳಿ ಇಟ್ಟಿದ್ದವು. ನೇರ ಮಾತುಗಳಿಂದ ಆಕರ್ಷಿತರಾಗುತ್ತಿದ್ದರು’ ಎಂದರು.

2014ರಲ್ಲಿ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಸಾಹಿತಿ ಶಿವಕುಮಾರ ಅಮ್ಮಾಪುರ ಅವರು ತಮ್ಮ ತಂದೆ ಗುರುಬಸವಯ್ಯ ಅಮ್ಮಾಪುರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಚಂಪಾ ಅವರನ್ನು ಆಹ್ವಾನಿಸಿದ್ದರು. ಹೀಗೆ ಸುರಪುರಕ್ಕೂ ಚಂಪಾ ಅವರಿಗೂ ಅವಿನಾಭಾವ ಸಂಬಂಧವಿತ್ತು. ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಬಿಡುವು ಮಾಡಿಕೊಂಡು ಬರುತ್ತಿದ್ದರು. ಹೀಗಾಗಿ ಇಲ್ಲಿ ಚಂಪಾ ಅವರ ಅಭಿಮಾನಿ ಬಳಗವೂ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT