ಗುರುವಾರ , ಮೇ 26, 2022
23 °C
‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ವೇದಮೂರ್ತಿ ಅಭಿಪ್ರಾಯ

ಜನರ ಸುರಕ್ಷತೆ, ನೆರವಿಗೆ ಸದಾ ಸಿದ್ಧ; ಎಸ್‌ಪಿ ಡಾ.ವೇದಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ‘ಪ್ರಜಾವಾಣಿ’ಯಿಂದ ಗುರುವಾರ ನಡೆದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಓದುಗರ ವಿವಿಧ ಪ್ರಶ್ನೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಉತ್ತರಿಸಿದರು.

ಅಕ್ರಮ ಮರಳು ದಂಧೆ ನಿಯಂತ್ರಣ, ಜೂಜಾಟ, ಮಟ್ಕಾ, ಸಂಚಾರ ವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಸೈಬರ್‌ ಕ್ರೈಂ ಸೇರಿದಂತೆ ವಿವಿಧ ಪ್ರಶ್ನೆಗಳಿಗೆ ಅವರು ಸ್ಪಷ್ಟ ಮಾಹಿತಿ ನೀಡುವುದರ ಜೊತೆಗೆ ಸಮಾಧಾನದಿಂದ ಉತ್ತರಿಸಿದರು.

‘ಕಾನೂನು ಗೌರವಿಸುವವರಿಗೆ ಪೊಲೀಸರ ಭಯ ಬೇಡ. ಪೊಲೀಸ್‌ ವ್ಯವಸ್ಥೆ ಜನಸ್ನೇಹಿಯಾಗಿ ಮಾಡಲಾಗಿದೆ. ಜನರ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ಪೊಲೀಸ್‌ ವ್ಯವಸ್ಥೆಯು ನೆರವಿಗೆ ಬರಲಿದೆ’ ಎಂದು ಅವರು ತಿಳಿಸಿದರು.

ನಿಂಗಣ್ಣ ಕುರಿಯರ, ವಡಗೇರಾ: ವಾರಾಂತ್ಯ ಕರ್ಫ್ಯೂ ವೇಳೆ ಬಸ್‌ನಲ್ಲಿ ಪ್ರಯಾಣಿಸುವ ಸಾಮಾನ್ಯ ಜನರಿಗೆ ಮಾಸ್ಕ್ ಇಲ್ಲ ಎಂದು ದಂಡ ವಿಧಿಸಲಾಯಿತು. ರಾಜಕೀಯ ವ್ಯಕ್ತಿಗಳ ಹಿಂಬಾಲಕರಿಗೆ ಯಾಕೆ ದಂಡ ಹಾಕುವುದಿಲ್ಲ?
ಮಾಸ್ಕ್ ಹಾಕದೆ ಯಾರೇ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿದರೂ ದಂಡ ವಿಧಿಸಲಾಗುತ್ತದೆ.

ವಿಶ್ವನಾಥ ಪಾಟೀಲ, ಶಹಾಪುರ: ಕೆಂಭಾವಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿ ಒಂದು ತಿಂಗಳು ಕಳೆದರೂ ಇನ್ನೂ ಚಾರ್ಜ್‌ಶೀಟ್ ಹಾಕಿಲ್ಲ. ಇದು ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣ. ಇದಕ್ಕೆ ಪರಿಹಾರ ಏನು?

ಉತ್ತರ: ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ಸ್ವಲ್ಪ ತಡವಾಗಿರಬಹುದು. ಅದನ್ನು ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಚಾರ್ಚ್‌ಶೀಟ್ ಹಾಕಲು ಹೇಳುತ್ತೇನೆ.

 

ದೇವಿಂದ್ರಪ್ಪ ಚಲುವಾದಿ, ಗೌಡೂರು: ಪರಿಶಿಷ್ಟ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿಲ್ಲ. ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

 

ಉತ್ತರ: ಪರಿಶಿಷ್ಟ ವ್ಯಕ್ತಿಯ ಮೇಲೆಯ ಹಲ್ಲೆ ಕುರಿತು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದೇವೆ. ಅದು ಸುಳ್ಳು ಎಂದು ಗೊತ್ತಾಗಿದೆ. ಮಹಿಳೆಯರ ಮೇಲೆ ಹೆಚ್ಚುತ್ತಿರುವ ಪ್ರಕರಣಗಳನ್ನು ಕಡಿಮೆ ಮಾಡಲು ಈಗಾಗಲೇ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.

ನಿಂಗಣ್ಣ ಬಡಿಗೇರ, ಬೊಮ್ಮನಹಳ್ಳಿ:  ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಇದೆ. ಅದರ ಬಗ್ಗೆ ದೂರು ನೀಡಿದರೆ ಶಹಾಪುರ ಪೊಲೀಸರು ಕೌಂಟರ್ ಕೇಸ್ ತೆಗೆದುಕೊಂಡು, ನಮಗೆ ಅನ್ಯಾಯ ಮಾಡುತ್ತಾರೆ.
ಉತ್ತರ: ಯಾರೇ ದೂರು ನೀಡಲು ಬಂದರೂ ದೂರು ತೆಗೆದುಕೊಳ್ಳಬೇಕು. ಈ ವಿಷಯವನ್ನು ಡಿವೈಎಸ್ಪಿ ಅವರ ಗಮನಕ್ಕೆ ತನ್ನಿ. ಅವರು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವರು.

ಅವಿನಾಶ ದಾಸನಕೇರಿ, ಕೃಷ್ಣ ದಾಸನಕೇರಿ ಯಾದಗಿರಿ: ಯಾದಗಿರಿ ನಗರದ ನ್ಯಾಯಾಲಯದ ಬಳಿ ಇರುವ ಎಸ್‌ಬಿಐ ಮುಂದುಗಡೆ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಆದ್ದರಿಂದ ಅಲ್ಲಿ ಸುಗಮ ಸಂಚಾರಕ್ಕೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು.

ಉತ್ತರ: ಯಾದಗಿರಿ ನಗರದಲ್ಲಿ ಎರಡು ವಾರಗಳಿಂದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿಯೂ ಸುಧಾರಿಸಲಾಗುವುದು.

ಪರಮಣ್ಣ, ಕಕ್ಕೇರಾ: ನಮ್ಮ ಭಾಗದಲ್ಲಿ ಹೆಚ್ಚಾಗಿ ಮಟ್ಕಾ ದಂಧೆ ನಡೆಯುತ್ತಿದೆ. ವಿದ್ಯಾರ್ಥಿನಿಯರಿಗೆ ಕಿಡಿಗೇಡಿಗಳಿಂದ  ಕಿರಿಕಿರಿಯಾಗುತ್ತಿದೆ.
ಉತ್ತರ: ಮಟ್ಕಾ ಬರೆಯುವ ಬಗ್ಗೆ ಅಲ್ಲಿರುವ ಅಧಿಕಾರಿಗಳಿಗೆ ಸೂಚನೆ ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯಾರ್ಥಿನಿಯರಿಗೆ ಕಿರಿಕಿರಿ ಉಂಟುಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಅಶೋಕ ನಾಯ್ಕಲ್: ಗ್ರಾಮದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿ.
ಉತ್ತರ: ಗ್ರಾಮ ಪಂಚಾಯಿತಿಯಲ್ಲಿ ಅನುದಾನವಿದ್ದರೆ, ಸಿಸಿಟಿವಿ ವ್ಯವಸ್ಥೆ ಮಾಡಲು ಅವರು ಕ್ರಮ ಕೈಗೊಳ್ಳುವರು. ಅನುದಾನ ಲಭ್ಯವಿರುವವರು ಸಿಸಿಟಿವಿ ಅಳವಡಿಸಿಕೊಳ್ಳಲು ತಿಳಿಸುವೆ.

ತಾಯಪ್ಪ ರಾಮಸಮುದ್ರ: ನಮ್ಮ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಸೇತುವೆ ನಿರ್ಮಿಸಲಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವ. ವಾಹನಗಳ ವೇಗ ನಿಯಂತ್ರಿಸಲು ರಸ್ತೆಯಲ್ಲಿ ಹಂಪ್ಸ್  ನಿರ್ಮಿಸಬೇಕು.
ಉತ್ತರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹಂಪ್ಸ್‌ಗಳನ್ನು ಹಾಕಲು ಬರುವುದಿಲ್ಲ. ಬದಲಾಗಿ ಸ್ಪೀಡ್ ಕಡಿಮೆಮಾಡುವ ಸೂಚನಾ ಫಲಕಗಳನ್ನು ಹಾಕಲಾಗುವುದು.

ಪಾರ್ವತಿ ಏವೂರು: ಆಸ್ತಿಯ ವಿಚಾರವಾಗಿ ಎಂಟು ತಿಂಗಳ ಹಿಂದೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಉತ್ತರ: ಸಿವಿಲ್ ವಿಷಯದಲ್ಲಿ ನಾವು ಹೆಚ್ಚಾಗಿ ಕ್ರಮಕೈಗೊಳ್ಳಲು ಬರುವುದಿಲ್ಲ. 145 ಸೆಕ್ಷನ್ ಜಾರಿಮಾಡಲು ತಹಶೀಲ್ದಾರ್‌ ಅವರಿಗೆ ಅಧಿಕಾರವಿದೆ. ನೀವು ಪೊಲೀಸ್ ಠಾಣೆಗೆ ಹೋಗಿ ನನಗೆ ಕರೆ ಮಾಡಿ, ಅಧಿಕಾರಿಗಳಿಗೆ ಸಹಾಯ ಮಾಡಲು ಸೂಚಿಸುವೆ.

ನಿರಂಜನ ಯಾದಗಿರಿ: ರೈಲು ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆ ಮಾಡುವ ಕೇಂದ್ರದಲ್ಲಿ ಹೋಮ್ ಗಾರ್ಡ್‌ಗಳನ್ನು ನೇಮಿಸಲಾಗಿದೆ. ಸಿವಿಲ್‌ ಪೊಲೀಸರನ್ನು ನೇಮಕ ಮಾಡಬೇಕು.

ಉತ್ತರ: ಈ ಬಗ್ಗೆ ಈಗಾಗಲೇ ದೂರು ಬಂದಿದೆ. ಹೋಂ ಗಾರ್ಡ್‌ಗಳ ಜೊತೆ ಸಿವಿಲ್ ಪೊಲೀಸರನ್ನು ನೇಮಿಸಲಾಗುತ್ತದೆ.

ಸಂಜೀವಕುಮಾರ್ ಕುಲಕರ್ಣಿ ಕೆಂಭಾವಿ: ಕೆಂಭಾವಿ ಪಟ್ಟಣದಲ್ಲಿ ಪೊಲೀಸರು ರಸ್ತೆಯಲ್ಲಿ ನಿಲ್ಲದ ಕಾರಣ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಿ.

ಉತ್ತರ: ಕೆಂಭಾವಿ ಪೊಲೀಸ್ ಠಾಣೆಯ ನಮ್ಮ ಅಧಿಕಾರಿಗಳಿಗೆ ಈ ವಿಷಯದ ಬಗ್ಗೆ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಾಗುತ್ತದೆ.

ಜುಮ್ಮಣ್ಣ ಹುಣಸಗಿ: ವಾಹನಗಳಲ್ಲಿ ಮಿತಿಗಿಂತ ಹೆಚ್ಚು ತೂಕದ ಸಾಮಗ್ರಿಗಳನ್ನು ಸಾಗಣೆ ಮಾಡುವ ಕುರಿತು ದೂರು ನೀಡಿದ್ದೇನೆ. ಇದರಿಂದ ವಾಹನದ ಮಾಲೀಕರು ನನಗೆ ಬೆದರಿಕೆ ಹಾಕುತ್ತಿದ್ದಾರೆ.

ಉತ್ತರ: ಬೆದರಿಕೆ ನೀಡಿದರೆ, ಅವರಿಂದ ನಿಮಗೆ ಏನಾದರೂ ತೊಂದರೆ ಉಂಟಾದರೆ ನಮ್ಮ ಪೊಲೀಸ್ ಠಾಣೆಗೆ ದೂರು ನೀಡಿ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಸುಜಾತಾ ಬೊಮ್ಮನಹಳ್ಳಿ: ನನ್ನ ಗಂಡ ಬೇರೆ ಮದುವೆ ಮಾಡಿಕೊಂಡಿದ್ದಾನೆ. ಇದರ ಬಗ್ಗೆ ದೂರು ನೀಡಿದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಉತ್ತರ: ಇದರ ಬಗ್ಗೆ ನೀವು ಮತ್ತೊಮ್ಮೆ ದೂರು ನೀಡಿ. ನೀವು ಪೊಲೀಸ್ ಠಾಣೆಗೆ ತೆರಳಿ, ನನ್ನ ದೂರವಾಣಿ ಸಂಖ್ಯೆಗೆ ಕರೆ ಮಾಡಿ. ನಮ್ಮ ಅಧಿಕಾರಿಗಳಿಗೆ ನಾನು ಹೇಳುತ್ತೇನೆ.

ಫಕೀರ್ ಅಹಮದ್ ವಡಗೇರಾ: ವಡಗೇರಾ ಪಟ್ಟಣದಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಸಾಕಷ್ಟು ಜಾಗ ಇದೆ. ಅಲ್ಲಿ ವಸತಿಗೃಹಗಳನ್ನು ನಿರ್ಮಿಸಬೇಕು.

ಉತ್ತರ: ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಮಕ್ಕಳು ಹೆಚ್ಚಾಗಿ ನಗರದಲ್ಲಿ ಶಾಲೆಗೆ ಹೋಗುವುದರಿಂದ ನಗರದಲ್ಲಿ ವಾಸವಾಗಿದ್ದಾರೆ. ಆದ್ದರಿಂದ ಕೋಟಿ ಕೋಟಿ ಹಣ ಖರ್ಚು ಮಾಡಿ ವಸತಿಗೃಹಗಳನ್ನು ನಿರ್ಮಿಸಿದರೆ ಉಪಯೋಗಕ್ಕೆ ಬರುವುದಿಲ್ಲ. ನಮ್ಮ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಅವಿನಾಶ್ ಜಗನ್ನಾಥ್ ಯಾದಗಿರಿ: ಆಟೊಗಳಿಂದ ನಗರದಲ್ಲಿ ಸಂಚಾರ ವ್ಯವಸ್ಥೆ ಹದಗೆಡುತ್ತಿದೆ.

ಉತ್ತರ: ಆಟೊ ಚಾಲಕರಿಗೆ ಈಗಾಗಲೇ ವೈಡಿಆರ್ ನಂಬರ್‌ಗಳನ್ನು ನೀಡಲಾಗಿದೆ. ಅವರು ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

****

ಸೈಬರ್ ಕ್ರೈಂ ನಿರ್ಲಕ್ಷ್ಯ ಬೇಡ
ಸೈಬರ್‌ ಕ್ರೈಂ ಎನ್ನುವುದು ವೈಟ್‌ ಕಾಲರ್‌ ಕ್ರೈಂ ಆಗಿದೆ. ಕುಳಿತಲ್ಲಿಯೇ ಸಾವಿರಾರು ರೂಪಾಯಿ ದೋಚುತ್ತಿದ್ದಾರೆ. ರಾಜಾರೋಷವಾಗಿ ಅಕೌಂಟ್‌ಗಳನ್ನು ಹ್ಯಾಕ್‌ ಮಾಡಿ ಹಣಗಳಿಸುತ್ತಿದ್ದಾರೆ. ಈ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ತಕ್ಷಣವೇ ಪೊಲೀಸರಿಗೆ ದೂರು ನೀಡಿದರೆ ಹಣವನ್ನು ಮರಳಿ ಪಡೆಯಲು ಅವಕಾಶವಿದೆ.

ಬ್ಯಾಂಕ್‌ ಸಿಬ್ಬಂದಿ ಎಂದಿಗೂ ಎಟಿಎಂ ಪಿನ್‌ ಮತ್ತು ಒಟಿಪಿ ಸಂಖ್ಯೆ ಕೇಳುವುದಿಲ್ಲ. ಹೀಗಾಗಿ ಬ್ಯಾಂಕ್‌ಗಳ ಹೆಸರಿನಲ್ಲಿ ಮೋಸ ಹೋಗಿ ಪಿನ್‌ ಸಂಖ್ಯೆ ನೀಡಬೇಡಿ. ಬಹುಮಾನ ಬಂದಿದೆ, ಇಷ್ಟು ಪಾವತಿಸಿದರೆ ದೊಡ್ಡ ಮೊತ್ತ ನೀಡುತ್ತೇವೆ ಎನ್ನುವವರ ಮಾತಿಗೆ ಮರುಳಾಗಬೇಡಿ.

ಸಾಕ್ಷಿ ಸರಿಯಾಗಿದ್ದರೆ ಶಿಕ್ಷೆ
ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಬಾಧಿತರು ನ್ಯಾಯಾಲಯಗಳಲ್ಲಿ ವಿರುದ್ಧ ಸಾಕ್ಷಿ ಹೇಳುವುದರಿಂದ ಕೇಸ್‌ ಬಿದ್ದು ಹೋಗುತ್ತದೆ. ಸಾಕ್ಷಿ ಸರಿಯಾಗಿದ್ದರೆ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ. ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ 2 ತಿಂಗಳಿಗೆ ಚಾರ್ಜ್‌ ಶೀಟ್‌ ಹಾಕಲಾಗುತ್ತಿದೆ. ಆರೋಪಿಗಳನ್ನು ತಕ್ಷಣವೇ ಬಂಧಿಸಲಾಗುತ್ತದೆ.

ಗೃಹ ಸುರಕ್ಷಾ ಆ್ಯಪ್‌ ಬಳಸಿ

ಕಳೆದ 7–8 ತಿಂಗಳಿಂದ ಗೃಹ ಸುರಕ್ಷಾ ಆ್ಯಪ್‌ ತಯಾರಿಸಲಾಗಿದೆ. ಕಳ್ಳತನ ತಡೆಯುವ ಉದ್ದೇಶದಿಂದ ಈ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ. ಮೂರ್ನಾಲ್ಕು ದಿನ ಬೇರೆ ಕಡೆ ಹೋದರೆ ಪೊಲೀಸ್‌ ಕಟ್ರೋಲ್‌ ರೂಂ 94808 03600 ಸಂಖ್ಯೆಗೆ ಮನೆಯ ಜಿಪಿಎಸ್‌, ಫೋಟೊ ಕಳಿಸಿದರೆ ಪೊಲೀಸರು ಜಾಗ್ರತೆ ವಹಿಸುತ್ತಾರೆ. ಇಲ್ಲಿಯವರೆಗೆ 80ರಿಂದ 85 ಜನರು ಮಾತ್ರ ಸದುಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಎಲ್ಲರೂ ಇದನ್ನು ಸದುಪಯೋಗ ಮಾಡಿಕೊಳ್ಳಿ.

ಜನಸ್ನೇಹಿ ಪೊಲೀಸ್‌ ವಿವಿಧ ಕಾರ್ಯಕ್ರಮ
ಜಿಲ್ಲೆ ಮತ್ತು ನಗರ ಪ್ರದೇಶಗಳಲ್ಲಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯಡಿ ಹಲವು ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಅದರಲ್ಲಿ ಸಸಿ ನೆಡುವುದು ಪ್ರಮುಖವಾಗಿದೆ. ನಗರದ ವಿವಿಧ ಕಡೆ ಸಸಿ ವಿತರಣೆ ಮತ್ತು ರಸ್ತೆ ವಿಭಜಕಗಳನ್ನು ಸಸಿ ನೆಡುವ ಕಾರ್ಯಕ್ರಮ ನಡೆಯುತ್ತಿದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ₹1 ಲಕ್ಷ ಮೌಲ್ಯದ ಪುಸ್ತಕಗಳನ್ನು ಖರೀದಿ ಮಾಡಲಾಗಿದೆ. ನಗರದ ಸಿದ್ಧಲಿಂಗೇಶ್ವರ ಕಾಲೇಜಿನಲ್ಲಿ ಈ ಪುಸ್ತಕಗಳನ್ನು ಇಟ್ಟಿದ್ದು, ವಿದ್ಯಾರ್ಥಿಗಳು ಓದಿ ಅಲ್ಲೇ ಇಡಬೇಕು.

ಗಡಿಪಾರಿಗೆ ಸಿದ್ಧತೆ: ಜಿಲ್ಲೆಯಲ್ಲಿ ಮಟ್ಕಾ ದಂಧೆ ಬಗ್ಗೆ ತೀವ್ರ ನಿಗಾ ಇಡಲಾಗಿದ್ದು, ಇದರಲ್ಲಿ ತೊಡಗಿಸಿಕೊಂಡವರನ್ನು ಗಡಿಪಾರು ಮಾಡಲು ಚಿಂತನೆ ನಡೆದಿದೆ. 4 ಜನರ ವಿರುದ್ಧ ಗೂಂಡಾ ಕಾಯ್ದೆ ಅಡಿ ಗಡಿಪಾರು ಮಾಡಲು ಸಿದ್ಧತೆ ನಡೆದಿದೆ.

‘ಅಕ್ರಮ ಮರಳು ದಂಧೆ, ಮಟ್ಕಾ, ಇಸ್ಪೀಟ್‌ ಜೂಜಾಟಕ್ಕೆ ಸಂಬಂಧಿಸಿದಂತೆ 94808 03601 ಈ ಸಂಖ್ಯೆಗೆ ಕರೆ ಮಾಡಿ ವಿವರ ನೀಡಿದರೆ, ಹೆಸರನ್ನು ಗೋಪ್ಯವಾಗಿ ಇಡಲಾಗುವುದು. ಪೊಲೀಸ್‌ ಠಾಣೆಯಲ್ಲಿ ನಿಮಗೆ ಯಾರಾದರೂ ಸ್ಪಂದಿಸದಿದ್ದರೆ ಅಲ್ಲಿಯೇ ಮೇಲಧಿಕಾರಿಗಳ ಮೊಬೈಲ್‌ ಸಂಖ್ಯೆ ಇರಲಿದೆ. ಅಂಥವರು ಕರೆ ಮಾಡಿ ಮೇಲಧಿಕಾರಿಗಳಿಗೆ ದೂರು ನೀಡಬಹುದು’ ಎಂದು ಡಾ. ಸಿ.ಬಿ.ವೇದಮೂರ್ತಿ ತಿಳಿಸಿದರು.

***

ಫೋನ್‌ ಇನ್‌ ನಿರ್ವಹಣೆ: ಬಿ.ಜಿ.ಪ್ರವೀಣಕುಮಾರ, ಪರಮೇಶರೆಡ್ಡಿ, ರಾಜಕುಮಾರ ನಳ್ಳಿಕರ, ದೇವಿಂದ್ರಪ್ಪ ಕ್ಯಾತನಾಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು