ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಮೈಲಾರ ಮಲ್ಲಯ್ಯನ ಪಲ್ಲಕ್ಕಿ ಉತ್ಸವಕ್ಕೆ ಸಿದ್ಧತೆ

ಎರಡು ವರ್ಷಗಳ ಕಾಲ ಕೋವಿಡ್‌ ಬಳಿಕ ಅದ್ಧೂರಿ ಜಾತ್ರೆ; ಸೂಕ್ತ ಪೊಲೀಸ್‌ ಬಂದೋಬಸ್ತ್‌
Last Updated 12 ಜನವರಿ 2023, 19:31 IST
ಅಕ್ಷರ ಗಾತ್ರ

ಯಾದಗಿರಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ತಾಲ್ಲೂಕಿನ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆ ಜ.13ರಿಂದ 18ರ ವರೆಗೆ ಜರುಗಲಿದೆ. ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿದ್ದು, ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ಸೂಕ್ತ ಪೊಲೀಸ್‌ ಬಂದೋಬಸ್ತ್‌ ಕ್ರಮ ಕೈಗೊಳ್ಳಲಾಗಿದೆ.

ಜ.14ರಂದು ಮಕರ ಸಂಕ್ರಮಣ ದಿನ ಮಲ್ಲಯ್ಯನ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಕಲ್ಯಾಣ ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದಲೂ ಲಕ್ಷಾಂತರ ಭಕ್ತರು ಮಲ್ಲಯ್ಯನ ಜಾತ್ರೆಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಕಳೆದ ಎರಡು ವರ್ಷಗಳ ಕಾಲ ಕೋವಿಡ್‌ ಕಾರಣದಿಂದ ಜಾತ್ರೆ ರದ್ದು ಪಡಿಸಲಾಗಿತ್ತು. ಈ ಬಾರಿ ಕೋವಿಡ್‌ ನಿರ್ಬಂಧಗಳಿಲ್ಲದ ಕಾರಣ ಎಲ್ಲೆಯಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷಿಸಲಾಗಿದೆ.

ಏಳು ಕೋಟಿ ಎಳೂಕೋಟಿ ಜೈಕಾರ: ಜಾತ್ರೆ ಸಂಭ್ರಮಕ್ಕಾಗಿ ವಿವಿಧ ಜಿಲ್ಲೆಗಳಿಂದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದು, ಯಾದಗಿರಿಯಿಂದ ಮೈಲಾಪುರಕ್ಕೆ ತೆರಳುವ ಭಕ್ತರು ಕಾಣಿಸುತ್ತಿದ್ದಾರೆ. ಏಳು ಕೋಟಿ ಎಳುಕೋಟಿ ಜೈಕಾರ ಮೂಲಕ ಪಾದಯಾತ್ರಿಗಳು ಮೈಲಾರಲಿಂಗೇಶ್ವರ ದರ್ಶನ ಮಾಡುತ್ತಿದ್ದಾರೆ.

11ರಿಂದಲೇ ಜಾತ್ರೆ ಶುರು: ಜನವರಿ 11ರಿಂದಲೇ ಜಾತ್ರೆ ಸಡಗರ ಆರಂಭವಾಗಿದ್ದು, ವಿವಿಧ ಅಂಗಡಿ ಮುಂಗಟ್ಟುಗಳು ಬಿಡುಬಿಟ್ಟಿವೆ. ಪೂಜಾ ಸಾಮಾಗ್ರಿ, ಬೆಂಡು ಬತ್ತಾಸು, ಕಬ್ಬಿನ ಹಾಲಿನ ಅಂಗಡಿಗಳು ಹಾಕಲು ಸಿದ್ಧತೆಡಿಕೊಳ್ಳುತ್ತಿದ್ದಾರೆ.

ಭದ್ರತೆ ಪೊಲೀಸ್‌ ಬಂದೋಬಸ್ತ್‌: ಜಾತ್ರೆಯ ಅಂಗವಾಗಿ ಪೊಲೀಸ್‌ ಇಲಾಖೆಯಿಂದ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. 400ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ, 300 ಹೋಂ ಗಾರ್ಡ್‌, 2 ಡಿಆರ್‌, 2 ಕೆಎಸ್‌ಆರ್‌ಪಿ, 40ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ. ಮೈಲಾಪುರ ಗ್ರಾಮ ಸಂಪರ್ಕಿಸುವ ಆರು ಕಡೆ ಚೆಕ್‌ಪೋಸ್ಟ್‌ ನಿರ್ಮಾಣ ಮಾಡಲಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಜನವರಿ 13ರಂದು ರಾತ್ರಿ 11ಯಿಂದ ಬೆಳಿಗ್ಗೆ 5ಗಂಟೆ ವರಗೆ ಮಹಾಪೂಜೆ ಹಾಗೂ ರುದ್ರಾಭಿಷೇಕ ನಡೆಯಲಿದೆ. ಜನವರಿ 14ರಂದು ಮೈಲಾರಲಿಂಗೇಶ್ವರನ ಕೆರೆಯಲ್ಲಿ 12:30ಕ್ಕೆ ಗಂಗಾಸ್ನಾನ, ಪಲ್ಲಕ್ಕಿ ಸೇವೆ, ನಂತರ ಸರಪಳಿ ಹರಿಯುವ ಕಾರ್ಯಕ್ರಮ ನಡೆಯಲಿದೆ. ಸಂಜೆ ಆರು 6.30ಕ್ಕೆ ಭಕ್ತರಿಂದ ತಪ್ಪದಗುಡ್ಡಕ್ಕೆ ತುಪ್ಪ ಮತ್ತು ಎಣ್ಣೆ ದೀಪ ಹಚ್ಚುವುದು ನಡೆಯಲಿದೆ. ರಾತ್ರಿ 11:30ಕ್ಕೆ ಮೈಲಾರಲಿಂಗೇಶ್ವರ ಹಾಗೂ ಗಂಗಿ ಮಾಳಮ್ಮ ವಿವಾಹ ಮಹೋತ್ಸವ ನಡೆಯಲಿದೆ.

ಜನವರಿ 15 ರಂದು ರಾತ್ರಿ 10.30ಕ್ಕೆ ನಾಗೋಲಿ– ಚಾಗೋಲಿ ಕಾರ್ಯಕ್ರಮ ನಡೆಯಲಿದೆ. ಜಾತ್ರೆ ಮುಗಿದ ನಂತರ ಐದು ಸೋಮವಾರಗಳಂದು ರಾತ್ರಿ 9ಕ್ಕೆ ಮೈಲಾರಲಿಂಗೇಶ್ವರ ಹಾಗೂ ಗಂಗಿ ಮಾಳಮ್ಮ ಮೆರವಣಿಗೆ ನಡೆಯಲಿದೆ.

ಕುರಿ ಹಾರಿಸುವುದಕ್ಕೆ ನಿಷೇಧ
ಯಾದಗಿರಿ
: ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ ಮೈಲಾಲಿಂಗೇಶ್ವ ಜಾತ್ರೆ ಜನವರಿ 13 ರಿಂದ 18ರ ವರೆಗೆ ಜರುಗಲಿರುವ ಜಾತ್ರೆಯ ದಿನಗಳಂದು ದೇವರ ಪಲ್ಲಕ್ಕಿಗೆ ಕುರಿಗಳನ್ನು ಹಾರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಆದೇಶ ಹೊರಡಿಸಿದ್ದಾರೆ.

ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿ ಹಕ್ಕು ಕಾಯ್ದೆ 1960 ನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ 1960 ನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಜನವರಿ 12ರ ಮಧ್ಯರಾತ್ರಿಯಿಂದ ಜನವರಿ 18ರ ರಾತ್ರಿಯ ವರೆಗೆ ಗ್ರಾಮಕ್ಕೆ ಹೊಂದಿಕೊಂಡಿರುವ, ಕೂಡು ರಸ್ತೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಕುರಿಗಳು ಜಾತ್ರೆಯಲ್ಲಿ ಪ್ರವೇಶ ವಾಗದಂತೆ ನಿರ್ಬಂಧಿಸಿದೆ ಎಂದು ಆದೇಶದಲ್ಲಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮದ್ಯ ಮಾರಾಟ ಸಂಪೂರ್ಣ ನಿಷೇಧ
ಮೈಲಾಪುರ ಗ್ರಾಮದಲ್ಲಿ ಮೈಲಾಲಿಂಗೇಶ್ವ ಜಾತ್ರೆ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಮೈಲಾಪುರ, ಅರಕೇರಾ ಹಾಗೂ ರಾಮಸಮುದ್ರ ಗ್ರಾಮಗಳಲ್ಲಿ ಜನವರಿ 11ರ ಮಧ್ಯರಾತ್ರಿಯಿಂದ ಜನವರಿ 18ರ ಮಧ್ಯರಾತ್ರಿಯ ವರೆಗೆ ಎಲ್ಲಾ ವೈನ್‌ಶಾಪ್, ಬಾರ್‌ಗಳು, ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಸ್ನೇಹಲ್ ಆರ್., ಆದೇಶ ಹೊರಡಿಸಿದ್ದಾರೆ.

ಮೈಲಾಪುರ ಜಾತ್ರೆಗೆ ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತರ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಮೊಬೈಲ್ ಕಳವು, ಜೇಬು ಕಳ್ಳರು, ಸರಕಳ್ಳತನ ತಡೆಯಲು ಪೊಲೀಸ್‌ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ.
ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

***

ಜಿಲ್ಲಾಡಳಿತದಿಂದ ಯಾವ ರೀತಿ ಸೂಚನೆ ಬಂದಿದಿಯೋ ಆ ರೀತಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಜಾತ್ರೆ ಸುಗಮವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಚನ್ನಮಲ್ಲಪ್ಪ ಘಂಟಿ, ಯಾದಗಿರಿ ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT