ಭಾನುವಾರ, ಸೆಪ್ಟೆಂಬರ್ 19, 2021
22 °C

ಯಾದಗಿರಿ: 2025ರೊಳಗೆ ಮಲೇರಿಯಾ ಪ್ರಕರಣ ಸೊನ್ನೆಗೆ ತರಲು ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ರಾಷ್ಟ್ರೀಯ ಮಲೇರಿಯಾ ನಿರ್ಮೂಲನೆ ಚೌಕಟ್ಟಿ (ಎನ್‍ಎಫ್‍ಎಂಇ)ನಲ್ಲಿ ಜಿಲ್ಲೆಯು 1ನೇ ಕೆಟಗರಿಯಲ್ಲಿದ್ದು, ರಾಜ್ಯ ಸರ್ಕಾರ 2025ರೊಳಗೆ ಮಲೇರಿಯಾ ಪ್ರಕರಣಗಳನ್ನು ಸೊನ್ನೆಗೆ ತರಲು ಕಾರ್ಯಕ್ರಮ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡು ಮಲೇರಿಯಾ ಮುಕ್ತ ಜಿಲ್ಲೆಗೆ ಸಹಕರಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸೂರ್ಯಪ್ರಕಾಶ ಎಂ.ಕಂದಕೂರ ಮನವಿ ಮಾಡಿದರು.

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಾರ್ಯಾಲಯದ ವತಿಯಿಂದ ಜಿಲ್ಲೆಯಾದ್ಯಂತ ಜೂನ್ 1ರಿಂದ 30ರವರೆಗೆ ಹಮ್ಮಿಕೊಂಡಿರುವ ಮಲೇರಿಯಾ ವಿರೋಧಿ ಮಾಸಾಚರಣೆ ಕುರಿತಂತೆ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಲೇರಿಯಾ ಒಂದು ಪ್ರಾಥಮಿಕ ಕಾಯಿಲೆಯಾಗಿದ್ದು, ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯು ಒಬ್ಬರಿಂದ ಒಬ್ಬರಿಗೆ ಈ ರೋಗವನ್ನು ಹರಡುತ್ತದೆ. ಜ್ವರ, ಚಳಿ, ತಲೆನೋವು, ವಾಂತಿ, ಮೈ-ಕೈ ನೋವು ರೋಗದ ಲಕ್ಷಣಗಳಾಗಿವೆ. ಯಾವುದೇ ಜ್ವರ ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಆರೋಗ್ಯ ಕೇಂದ್ರಕ್ಕೆ ತೆರಳಿ ಮಲೇರಿಯಾ ಪರೀಕ್ಷೆಯನ್ನು ಮಾಡಿಸಿ, ತ್ವರಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸಂಪೂರ್ಣ ಚಿಕಿತ್ಸೆ ಪಡೆದರೆ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.

ನಿಂತ ನೀರಿನ ತಾಣಗಳು ಸೊಳ್ಳೆ ಉತ್ಪತ್ತಿಯ ಕೇಂದ್ರವಾಗಿರುತ್ತವೆ. ಅನಾಫಿಲೀಸ್ ಸೊಳ್ಳೆಯು ನೀರಿನ ಮೇಲೆ 160ರಿಂದ 300 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ಮರಿಯಾಗಿ ಹೊರ ಬರುತ್ತವೆ. ಆದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕಾಗಿ ನಮ್ಮ ಸುತ್ತಮುತ್ತಲಿನ ಪರಿಸರ, ಮನೆಯ ಅಕ್ಕ-ಪಕ್ಕದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಇಂಥ ಮುಂಜಾಗ್ರತಾ ಕ್ರಮಗಳಿಂದ ಮಾತ್ರ ರಾಜ್ಯವನ್ನು 2025ರೊಳಗೆ ಮಲೇರಿಯಾ ಮುಕ್ತ ರಾಜ್ಯವನ್ನಾಗಿಸಲು ಸಾಧ್ಯ ಎಂದರು.

ಚಿಕನ್‍ಗುನ್ಯಾ, ಡೆಂಘಿ, ಮೆದುಳು ಜ್ವರ ಹಾಗೂ ಆನೆಕಾಲು ರೋಗಗಳು ಕೂಡ ಸೊಳ್ಳೆ ಕಡಿತದಿಂದ ಹರಡುತ್ತವೆ. ಮನೆಯ ಸುತ್ತಮುತ್ತ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಸೊಳ್ಳೆ ಪರದೆ, ಮುಲಾಮು, ಲಿಕ್ವಿಡೆಟರ್, ಬೇವಿನಮರ ಸೊಪ್ಪಿನ ಹೊಗೆ ಹಾಕುವುದರಿಂದ ಸೊಳ್ಳೆ ಕಡಿತದಿಂದ ತಪ್ಪಿಸಿಕೊಂಡು ರೋಗಗಳಿಂದ ದೂರ ಇರಬಹುದು. ಸೊಳ್ಳೆ ಪರದೆ ಬಳಸುವುದು ಉತ್ತಮ. ವೃದ್ಧರು, ಗರ್ಭಿಣಿಯರು, ಬಾಣಂತಿಯರು, ಸಣ್ಣಮಕ್ಕಳು ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ ಬಳಸಬೇಕು ಎಂದು ತಿಳಿಸಿದರು.

ಹಿರಿಯ ಆರೋಗ್ಯ ಸಹಾಯಕ ಪರಮರಡ್ಡಿ ಕಂದಕೂರ, ಹಿರಿಯ ಪ್ರಯೋಗಶಾಲಾ ತಂತ್ರಜ್ಞ ವಿಕ್ರಮ್, ಬೆರಳಚ್ಚುಗಾರ ಅಂಬಾದಾಸ್ ಇದ್ದರು.‌

***

ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಕಡಿಮೆಆಗುತ್ತಿವೆ. 2016ರಲ್ಲಿ 132, 2017ರಲ್ಲಿ 209, 2018ರಲ್ಲಿ 72, 2019ರಲ್ಲಿ 13 ಹಾಗೂ 2020ರಲ್ಲಿ ಇಲ್ಲಿಯವರೆಗೆ 2 ಪ್ರಕರಣಗಳು ವರದಿಯಾಗಿವೆ

ಡಾ.ಸೂರ್ಯಪ್ರಕಾಶ ಎಂ.ಕಂದಕೂರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು