ಮಂಗಳವಾರ, ಜೂನ್ 28, 2022
23 °C
ಮಾನವ ಸರಪಳಿ ರಚಿಸಿ ಹೋರಾಟ, ಸರ್ಕಾರದ ವಿರುದ್ಧ ಆಕ್ರೋಶ

ಸುರಪುರ: ಮೀಸಲಾತಿ ಹೆಚ್ಚಳಕೆ ಆಗ್ರಹ, ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಹೋರಾಟ ಕ್ರಿಯಾ ಸಮಿತಿ ಮತ್ತು ವಿವಿಧ ಸಂಘಟನೆಗಳು ಶುಕ್ರವಾರ ಹಮ್ಮಿಕೊಂಡಿದ್ದ ಸುರಪುರ ಬಂದ್ ಶಾಂತಿಯುತವಾಗಿ ನಡೆಯಿತು.

ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿದ್ದರು. ಬೆಳಿಗ್ಗೆ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನೆಡೆಸಿದರು. ಮಾನವ ಸರಪಳಿ ರಚಿಸಿ 4 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ಮುಖಂಡರಾದ ಗಂಗಾಧರ ನಾಯಕ, ಮಲ್ಲಕಾರ್ಜುನ ಕ್ರಾಂತಿ, ನಾಗಣ್ಣ ಕಲ್ಲದೇವನಹಳ್ಳಿ, ರಮೇಶ ದೊರೆ, ವೆಂಕಟೇಶ ಬೇಟೆಗಾರ, ಭೀಮರಾಯ ಸಿಂಧಗೇರಿ ಇತರರು ಮಾತನಾಡಿ, ‘ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಕುಳಿತು 100 ದಿನವಾದರೂ ಸರ್ಕಾರ ಸ್ವಾಮೀಜಿಯವರನ್ನು ಸೌಜನ್ಯಕ್ಕೂ ಮಾತನಾಡಿಸುತ್ತಿಲ್ಲ’ ಎಂದು ಆರೋಪಿಸಿದರು.

‘1961 ಮತ್ತು 2011ರ ಜನಗಣತಿಗೆ ಹೋಲಿಕೆ ಮಾಡಿದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇ 22 ಹೆಚ್ಚಾಗಿದ್ದು ಅದೇ ಮೀಸಲಾತಿ ಮುಂದುವರಿಸುತ್ತಿರುವುದು ಸರಿಯಲ್ಲ. ಬಡ, ಪ್ರತಿಭಾವಂತ
ಯುವಕರು ಶೈಕ್ಷಣಿಕ ಮತ್ತು ಉದ್ಯೋಗಿಕವಾಗಿ ಅನ್ಯಯಕ್ಕೆ ಒಳಗಾಗಿದ್ದಾರೆ’ ಎಂದು ದೂರಿದರು

‘ಕೂಡಲೇ ಸರ್ಕಾರ ನಾಗಮೋಹನದಾಸ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ನಿರ್ಲಕ್ಷ ವಹಿಸಿದಲ್ಲಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು
ಎಚ್ಚರಿಸಿದರು.

ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಿದರು.

ಪ್ರತಿಭನಟನೆಯಲ್ಲಿ ಮುಖಂಡರಾದ ಅಯ್ಯಣ್ಣ ಹಾಲಭಾವಿ, ಹಣಮಂತ ಕಟ್ಟಿಮನಿ, ಶಂಕರಗೌಡ ಕೋಳಿಹಾಳ, ರಾಜಾ ಪಿಡ್ಡನಾಯಕ, ರವಿಚಂದ್ರ ದರಬಾರಿ, ಬುಚ್ಚಪ್ಪ ನಾಯಕ, ದಾನಪ್ಪ ಕಡಿಮನಿ, ಭೀಮರಾಯ ಭಜಂತ್ರಿ, ನಿಂಗಣ್ಣ ಗೋನಾಲ, ಎಂ. ಪಟೇಲ, ಖಾಜಾ ಅಜ್ಮೀರ್ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಘಟನೆಗಳ ಮುಖಂಡರು
ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು