ಭಾನುವಾರ, ಜನವರಿ 19, 2020
20 °C

ಇಸಿಸಿಇ ನೀತಿ ಶೀಘ್ರ ಜಾರಿಗೊಳಿಸಿ: ವಿಠಲ ಚಿಕಣಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಪರಿಷ್ಕೃತ ‘ಚಿಲಿಪಿಲಿ’ ಪಠ್ಯಕ್ರಮವನ್ನು ಅಂತಿಮಗೊಳಿಸಿ, ರಾಜ್ಯದಲ್ಲಿ ‘ಬಾಲ್ಯಾರಂಭದ ಪೋಷಣೆ ಮತ್ತು ಶಿಕ್ಷಣ ನೀತಿ’ (ಇಸಿಸಿಇ) ಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಸಾಮಾಜಿಕ ಪರಿವರ್ತನ ಜನಾಂದೋಲನ ಕಾರ್ಯದರ್ಶಿ ವಿಠಲ ಚಿಕಣಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಿಪಿಒ, ಎಸಿಡಿಪಿಒ ಮತ್ತು ಅಂಗನವಾಡಿ ಮೇಲ್ವಿಚಾರಕಿಯರಿಗೆ ಪ್ರತಿ ಜಿಲ್ಲೆಗೊಂದು ತರಬೇತಿ ಕೇಂದ್ರ ಹಾಗೂ ಅಂಗನವಾಡಿ ಕಾಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಪ್ರತಿ ಸರ್ಕಲ್‍ಗೊಂದು ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಲಭ್ಯವಿರುವ ಕಟ್ಟಡಗಳನ್ನು ಜಿಲ್ಲಾ ತರಬೇತಿ ಕೇಂದ್ರಗಳನ್ನಾಗಿಯೂ ಮತ್ತು ಮಾದರಿ ಅಂಗನವಾಡಿ ಕೇಂದ್ರಗಳನ್ನು ಸರ್ಕಲ್ ಮಟ್ಟದ ಸಂಪನ್ಮೂಲ ಕೇಂದ್ರಗಳನ್ನಾಗಿಯೂ ಪರಿವರ್ತಿಸಬೇಕು. ಗುಣಮಟ್ಟದ ಶಾಲಾಪೂರ್ವ ಶಿಕ್ಷಣಕ್ಕೆ, ಪೂರಕವಾಗಿ ತರಬೇತಿ ವಿಧಾನ ಪರಿಕರಗಳು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ರೂಪಿಸಿ ನಾಲ್ಕು ತಿಂಗಳಿಗೊಮ್ಮೆ 4 ದಿನಗಳ ತರಬೇತಿ ನೀಡಬೇಕು ಎಂದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷ ಡಾ.ಹಣಮಂತರಾಯ ಕರಡ್ಡಿ ಮಾತನಾಡಿ, ನ್ಯಾಯಮೂರ್ತಿ ಎನ್.ಕೆ ಪಾಟೀಲ ಸಮಿತಿಯ ಶಿಫಾರಸ್ಸಿನಂತೆ, ಅಂಗನವಾಡಿ ಶಿಕ್ಷಕಿಯರನ್ನು ಶಾಲಪೂರ್ವ ಶಿಕ್ಷಣದ ಚಟುವಟಿಕೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಚಟುವಟಿಕೆಗಳಿಗೆ ನಿಯೋಜಿಸಬಾರದು. 20ಕ್ಕಿಂತ ಹೆಚ್ಚು ಮಕ್ಕಳಿರುವ ಅಂಗನವಾಡಿಗಳಿಗೆ ಹೆಚ್ಚುವರಿ ಕಾರ್ಯಕರ್ತೆಯರನ್ನು ನಿಯೋಜಿಸಬೇಕು ಮತ್ತು ಎಲ್ಲ ಅಂಗನವಾಡಿ ಕಾರ್ಯಕರ್ತೆಯರನ್ನು ಕಾಯಂ ಸರ್ಕಾರಿ ನೌಕರರನ್ನಾಗಿ ಕ್ರಮಬದ್ದಗೊಳಿಸಬೇಕು ಎಂದು ಆಗ್ರಹಿಸಿದರು.

ಅಂಗನವಾಡಿಗಳ ಸಬಲೀಕರಣ ಮತ್ತು ಶಾಲಾಪೂರ್ವ ಶಿಕ್ಷಣದ ಬಲವರ್ಧನೆಗಾಗಿ ಮುಂಬರುವ ಬಜೇಟನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು. ಮಕ್ಕಳ ಅಪೌಷ್ಟಿಕತೆ ನಿರ್ಮೂಲನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎನ್.ಕೆ.ಪಾಟೀಲ ಸಮಿತಿ ವರದಿಯ ಶಿಫಾರಸ್ಸುಗಳನ್ನು ಯಥವತ್ತಾಗಿ ಜಾರಿಗೊಳಿಸಬೇಕು. ದಲಿತ, ಆದಿವಾಸಿ, ಹಿಂದುಳಿದ ವರ್ಗ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳೇ ಪೋಷಣೆ ಮತ್ತು ಶಾಲಾಪೂರ್ವ ಶಿಕ್ಷಣದ ಆಧಾರವಾಗಿರುವುದರಿಂದ ಯಾವುದೇ ಕಾರಣಕ್ಕೂ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣಗೊಳಿಸಬಾರದು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಚನ್ನದಾಸರು ಅಲೆಮಾರಿ ಸಮುದಾಯ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ವೆಂಕಟೇಶ ಕಟ್ಟಿಮನಿ ನಾಯ್ಕಲ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು