ಮಂಗಳವಾರ, ಜೂನ್ 22, 2021
22 °C
ಬೆಳಿಗ್ಗೆ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ; ನಗರಕ್ಕೆ ಬಂದ 2,500 ವಲಸೆ ಕಾರ್ಮಿಕರು

ಲಾಕ್‌ಡೌನ್‌ಗೆ ಸ್ತಬ್ಧವಾದ ಜನಜೀವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೋವಿಡ್ ಎರಡನೇ ಅಲೆಯ ಸೋಂಕು ಹೆಚ್ಚಳವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿ ಮಾಡಿದ ಲಾಕ್‌ಡೌನ್‌ಗೆ ಬುಧವಾರ ಯಾದಗಿರಿ ನಗರದ ಜನಜೀವನ ಸ್ತಬ್ಧಗೊಂಡಿದೆ. ಬೆಳಿಗ್ಗೆ ಹತ್ತು ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರಿಂದ, ಜನ ತರಕಾರಿ, ಹಾಲು ಸೇರಿದಂತೆ ದಿನಸಿ ಖರೀದಿಸಿದರು.

ಮಧ್ಯಾಹ್ನದ ಅವಧಿಯಲ್ಲಿ ನಗರದ ರಸ್ತೆಯಲ್ಲಿ ಅನವಶ್ಯಕವಾಗಿ ತಿರುಗಾಡುತ್ತಿರುವ ವಾಹನಗಳನ್ನು ನಿಲ್ಲಸಿ, ಪರಿಶೀಲನೆ ಮಾಡಿದ ಟ್ರಾಫಿಕ್ ಪೊಲೀಸರು, ದಂಡ ವಿಧಿಸಿದರು.

14 ದಿನಗಳ ಲಾಕ್‌ಡೌನ್ ಮಂಗಳ ವಾರದಿಂದ ಘೋಷಣೆಯಾಗಿದ್ದು, ಜಿಲ್ಲಾಡಳಿತ, ನಗರಸಭೆ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾರಾಂತ್ಯದ ಕರ್ಫ್ಯೂ ಅವಧಿಯಿಂದಲೇ ಜನರನ್ನು ಅನಗತ್ಯವಾಗಿ ಹೊರಗೆ ತಿರುಗಾಡದಂತೆ, ಮಾಸ್ಕ್ ಧರಿಸುವುದು, ಅವಶ್ಯಕವಾದ ಸಂದರ್ಭಗಳಲ್ಲಿ ಮಾತ್ರ ಸಂಪೂರ್ಣ ನಿಯಮಗಳ ಪಾಲನೆಯೊಡನೆ ಹೊರಗೆ ಬರುವಂತೆ ಜಾಗೃತಿ ಮೂಡಿಸುವಲ್ಲಿ ನಿರತರಾಗಿದ್ದರು.

‘ನಿರಂತರ ಪ್ರಚಾರ, ಜಾಗೃತಿಯ ನಂತರ ನಗರದಲ್ಲಿ ಜನರ ಓಡಾಟವನ್ನು ನಿಯಂತ್ರಿಸುವಲ್ಲಿ ಉತ್ತಮ ಫಲಿತಾಂಶವನ್ನು ಪಡೆದರೂ ಸಹ, ಕೆಲವರು ಅನಗತ್ಯ ಓಡಾಟ ಮಾಡುತ್ತಿರುವುದು ತಿಳಿದುಬಂದಿದ್ದು, ಅನಗತ್ಯ ತಿರುಗಾಡುತ್ತಿದ್ದ ವಾಹನ ಸವಾರರಿಂದ ಒಟ್ಟು ₹6 ಸಾವಿರ ದಂಡ ಸಂಗ್ರಹಿಸಲಾಗಿದೆ’ ಎಂದು ಟ್ರಾಫಿಕ್ ವಿಭಾಗದ ಪಿಎಸ್‌ಐ ಪ್ರದೀಪ್ ತಿಳಿಸಿದರು.

‘ಮಾಸ್ಕ್ ಧರಿಸದಿರುವುದು, ಅಂತರ ಕಾಯ್ದುಕೊಳ್ಳದ ಕಾರಣಕ್ಕೆ ನಗರಸಭೆಯಿಂದ ₹3 ಸಾವಿರ ದಂಡ ಸಂಗ್ರಹ ಮಾಡಿರುವುದಾಗಿ’ ನಗರಸಭೆ ಪೌರಾಯುಕ್ತ ಭೀಮಣ್ಣ ನಾಯಕ್ ಮಾಹಿತಿ ನೀಡಿದರು.

ಬಿಸಿಲಿನ ತಾಪ ಮತ್ತು ಓಡಾಟದ ಮೇಲೆ ನಿಯಂತ್ರಣದ ಕಾರಣದಿಂದ ನಗರದ ಬಸ್ ನಿಲ್ದಾಣದಲ್ಲಿ ಭಿಕ್ಷುಕರು ಆಶ್ರಯಪಡೆದಿದ್ದು, ಬೆರಳೆಣಿಕೆಯ ಜನ ಬಸ್ ನಿಲ್ದಾಣದಲ್ಲಿ ಕುಳಿತ್ತಿದ್ದರು.

ದೂರದ ನಗರಗಳಿಂದ ಜಿಲ್ಲೆಗೆ ಹಿಂದಿರುಗಿದ ವಲಸೆ ಕಾರ್ಮಿಕರಿಗೆ ರೈಲು ನಿಲ್ದಾಣದಲ್ಲಿ ತಪಾಸಣೆ ಮಾಡಲಾಗುತ್ತಿದೆ. ರೈಲು ಸೇರಿದಂತೆ ಇತರೆ ವಾಹನಗಳ ಮೂಲಕ ಬುಧವಾರ ಸಂಜೆ 6ರ ವರೆಗೆ ನಗರಕ್ಕೆ ಒಟ್ಟು 2500 ಜನ ಹಿಂದಿರುಗಿದ್ದಾರೆ. ಎಲ್ಲರಿಗೂ ತಪಾಸಣೆ ಮಾಡಲಾಗಿ, ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು