ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಮ್‍ಡೆಸಿವಿರ್, ಆಮ್ಲಜನಕ ಪೂರೈಕೆಗೆ ಕ್ರಮ: ವಿವಿಧೆಡೆ ಸಭೆ ನಡೆಸಿದ ಚವಾಣ್

Last Updated 7 ಮೇ 2021, 16:17 IST
ಅಕ್ಷರ ಗಾತ್ರ

ಯಾದಗಿರಿ:ಪಶುಸಂಗೋಪನೆ ಸಚಿವ ಪ್ರಭು ಬಿ.ಚವಾಣ್‌ ಅವರು ಜಿಲ್ಲೆಯಲ್ಲಿ ಶುಕ್ರವಾರ ವಿವಿಧ ತಾಲ್ಲೂಕುಗಳಲ್ಲಿ ಸಭೆ ನಡೆಸಿದರು. ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮೊದಲಿಗೆಸುರಪುರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣ ಕುರಿತಂತೆ ಸುರಪುರ ತಾಲ್ಲೂಕಿನ ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ರೆಮ್‍ಡೆಸಿವಿರ್ ಹಾಗೂ ಆಕ್ಸಿಜನ್ ಪೂರೈಕೆಗೆ ಕೂಡಲೇ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ರೆಮ್‍ಡೆಸಿವಿರ್ ಹಾಗೂ ಆಕ್ಸಿಜನ್ ನಿರ್ವಹಣೆ ಹೊಣೆಹೊತ್ತಿರುವ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಶಹಾಪುರ ಶಾಸಕ ಶರಣಪ್ಪ ದರ್ಶನಾಪುರ, ಜಿಲ್ಲೆಗೆ ಅಗತ್ಯವಿರುವ ರೆಮ್‍ಡೆಸಿವಿರ್ ಔಷಧಿ ದೊರೆತಿಲ್ಲ. ಲಭ್ಯವಿರುವ ಔಷಧಿಯನ್ನು ತಾಲ್ಲೂಕುವಾರು ಪೂರೈಸುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಸುರಪುರ ಶಾಸಕ ರಾಜೂಗೌಡ ಅವರು ದನಿಗೂಡಿಸಿದರು.

ಈ ವೇಳೆ ಸಚಿವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ ಅವರಿಗೆ ಮಾಹಿತಿ ಕೇಳಲಾಗಿ, ಜಿಲ್ಲೆಯಲ್ಲಿ ರೆಮ್‍ಡೆಸಿವಿರ್ ಔಷಧಿ ಸಮಸ್ಯೆಯಿಲ್ಲ. ಸಮರ್ಪಕವಾಗಿ ಪೂರೈಕೆಯಾಗುತ್ತದೆ ಎಂದು ವಿವರಿಸಿದರು. ಇದರಿಂದ ಸಮಾಧಾನಗೊಳ್ಳದ ಶಾಸಕ ದರ್ಶನಾಪುರ ಅವರು, ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜುಗೌಡ ಅವರು, ಕೋವಿಡ್ ಸೋಂಕಿತರನ್ನು ಮೊರಾರ್ಜಿ ದೇಸಾಯಿಯಂಥ ವಸತಿ ಶಾಲೆಗಳಲ್ಲಿ ಕ್ವಾರಂಟೈನ್‍ನಲ್ಲಿಡಬೇಕು. ಇಲ್ಲದಿದ್ದರೆ ಕೋವಿಡ್ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂದು ನೋವಿನಿಂದ ನುಡಿದರು. ಕೊಡೇಕಲ್‍ನಲ್ಲಿ ತನ್ನ ಸ್ವಂತ ಖರ್ಚಿನಲ್ಲಿ 30 ಬೆಡ್ ಸಾಮರ್ಥ್ಯದ ಕೋವಿಡ್ ಅಸ್ಪತ್ರೆ ನಿರ್ಮಿಸುತ್ತಿರುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು.

ಸಚಿವ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಚೆಕ್‍ಪೋಸ್ಟ್ ಬಲಪಡಿಸಿ, ಒಳಬರುವವರ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಬೇಕೆಂದು ಸಚಿವರು ಸೂಚಿಸಿದರು. ಪ್ರಸಕ್ತ ಬೇಸಿಗೆ ಜೊತೆಗೆ ಕೋವಿಡ್ ಇರುವುದರಿಂದ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ಜನತೆ ನನಗೆ ತುಂಬಾ ಸಹಕಾರ ನೀಡಿದ್ದೀರಿ ಎಂದು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.

ಸಭೆಯಲ್ಲಿ ಡಿವೈಎಸ್‍ಪಿ ವೆಂಕಟೇಶ್ ಉಗಿಬಂಡಿ, ಉಪವಿಭಾಗಾಧಿಕಾರಿ ಸೋಮನಾಳ, ತಹಶೀಲ್ದಾರ್ ಗ್ರೇಡ್-2 ಸೋಫಿಯಾ ಸುಲ್ತಾನ, ತಾಲ್ಲೂಕು ವೈದ್ಯಾಧಿಕಾರಿ ಹರ್ಷವರ್ಧನ್ ರಫಗಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಮರೇಶ್ ಇದ್ದರು.

***

ವಡಗೇರಾದಲ್ಲಿ ಶೀಘ್ರ ಕೋವಿಡ್‌ ಆಸ್ಪತ್ರೆ

ಯಾದಗಿರಿ: ವಡಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶೀಘ್ರ ಕೋವಿಡ್ ಆಸ್ಪತ್ರೆ ಸಿದ್ಧಪಡಿಸುವಂತೆ ಪಶುಸಂಗೋಪನೆ ಸಚಿವ ಪ್ರಭು ಬಿ.ಚವಾಣ್‌ ಸೂಚಿಸಿದರು.

ವಡಗೇರಾದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆಮ್ಲಜನಕ ಪ್ಲಾಂಟ್ ವೀಕ್ಷಿಸಿ ಅವರು ಮಾತನಾಡಿದರು.

ಹಾಸಿಗೆ, ಆಮ್ಲಜನಕ, ಮಾತ್ರೆ, ಔಷಧಿ, ವೈದ್ಯಕೀಯ ಉಪಕರಣ ಮುಂತಾದವುಗಳ ವ್ಯವಸ್ಥೆ ಮಾಡಿಕೊಂಡು ಕೋವಿಡ್ ಆಸ್ಪತ್ರೆ ಕಾರ್ಯಾರಂಭಿಸಬೇಕು ಎಂದು ಹೇಳಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ, ಜಿಲ್ಲೆಯಲ್ಲಿ ಗುರುಮಠಕಲ್, ಸೈದಾಪುರ, ವಡಗೇರಾ, ಅರಕೇರಾ, ದೋರನಹಳ್ಳಿ ಹಾಗೂ ಹುಣಸಗಿ ಕೇಂದ್ರಗಳಲ್ಲಿ ಆಕ್ಸಿಜನ್ ಪ್ಲಾಂಟ್ ಸಿದ್ಧವಿದ್ದು, ಮೂರ್ನಾಲ್ಕು ದಿನಗಳಲ್ಲಿ ಆಕ್ಸಿಜನ್ ಜಂಬೋ ಸಿಲಿಂಡರ್‌ಗಳು ಬರಲಿವೆ. ಶೀಘ್ರವೇ ವಡಗೇರಾದಲ್ಲಿ ಕೋವಿಡ್ ಆಸ್ಪತ್ರೆಗೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

30 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ 18 ಬೆಡ್‍ಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗುತ್ತದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಆಸ್ಪತ್ರೆಯಲ್ಲಿ ಖಾಲಿ ಇರುವ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಹಾಗೂ ಅರವಳಿಕೆ (ಅನಸ್ತೇಶಿಯಾ) ತಜ್ಞ ವೈದ್ಯರು ಹಾಗೂ ಅಂಬ್ಯುಲೆನ್ಸ್ ವ್ಯವಸ್ಥೆಗೆ ಕ್ರಮವಹಿಸಬೇಕು. ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ಕೋವಿಡ್ ಆಸ್ಪತ್ರೆ ಆರಂಭಿಸುವ ಮೂಲಕ ಈ ಭಾಗದ ಸೋಂಕಿತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಶೀಲ್ದಾರ್ ಸುರೇಶ ಅಂಕಲಗಿ, ವಡಗೇರಾ ಮೆಡಿಕಲ್ ಆಫೀಸರ್ ಜಗನ್ನಾಥ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT