ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರ್ಥವಿಲ್ಲದೆ ಆಚರಣೆಗಳೇ ಮೌಢ್ಯ: ಬಾಬುರಾಯ ದೊರೆ

Published 31 ಡಿಸೆಂಬರ್ 2023, 5:17 IST
Last Updated 31 ಡಿಸೆಂಬರ್ 2023, 5:17 IST
ಅಕ್ಷರ ಗಾತ್ರ

ಕಂದಕೂರ (ಗುರುಮಠಕಲ್): ‘ನಾವು ಮಾಡುವ ಆಚರಣೆಗಳ ಹಿಂದೆ ಆಯಾ ಕಾಲದ ಕೆಲವು ಕಾರಣಗಳು ಇದ್ದಿರಬಹುದು. ಆದರೆ, ಸದ್ಯ ನಾವು ಆ ಕಾರಣದ ಅರಿವಿಲ್ಲದೆ ಮತ್ತು ಅದರ ಅಗತ್ಯವೂ ಇಲ್ಲದೆ ಆಚರಣೆಯನ್ನು ಮುಂದುವರಿಸಿದರೆ ಅದು ಮೌಢ್ಯವಾಗುತ್ತದೆ’ ಎಂದು ಉಪನ್ಯಾಸಕ ಬಾಬುರಾಯ ದೊರೆ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಂದಕೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-50 ಹಿನ್ನೆಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಯೋಜಿಸಿದ್ದ ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಬದುಕು–ಬರಹ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪು ಕುರಿತಾಗಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ರಾಮನು ಶ್ರೀರಾಮನಾಗಲು ಮಂಥರೆ ಕಾರಣ. ಮಂಥರೆಯು ಭರತನನ್ನು ರಾಜನನ್ನಾಗಿಸಲು ಕೈಕೇಯಿಗೆ ಹೇಳಿದ್ದರ ನಂತರವೇ ರಾಮ ಕಾಡಿಗೆ ಹೋದ. ಈ ಕಾರಣದಿಂದಲೇ ರಾಮನು ಶ್ರೀರಾಮನಾಗಿ ಜಗದ್ವಿಖ್ಯಾತನಾಗಲು ಸಾಧ್ಯವಾಯಿತು’ ಎಂದರು.

‘ಶೃತಿಯಂತೆ ಕೃತಿಯಿರಬೇಕು ಎಂದು ಪ್ರತಿಪಾದಿಸಿದ ಕುವೆಂಪು ಅವರು ತಮ್ಮ ಮಗ ಪೂರ್ಣಚಂದ್ರ ತೇಜಸ್ವಿಯ ಮದುವೆಯನ್ನು ತಮ್ಮದೇ ಚಿಂತನೆಯ ‘ಮಂತ್ರ ಮಾಂಗಲ್ಯ’ ‍ಪದ್ಧತಿಯಂತೆ ಮಾಡಿದರು. ಯಾವ ಕಾರಣಕ್ಕೂ ಮೌಢ್ಯ, ಶೋಷಣೆಗಳನ್ನು ಸಮಾಜದಲ್ಲಿ ಹೇರಬಾರದೆಂಬ ನಿಲುವು ಅವರದು’ ಎಂದರು.

‘ಮೊದಲಿಗೆ ಇಂಗ್ಲಿಷ್‌ ಭಾಷೆಯಲ್ಲಿ ಕವನಗಳನ್ನು ರಚಿಸಿದ್ದ ಕುವೆಂಪು ಅವರು ಐರಿಷ್‌ ವಿದ್ವಾಂಸ ಜೇಮ್ಸ್ ಕಜಿನ್ಸ್ ಪ್ರಭಾವದಿಂದ ಕನ್ನಡದಲ್ಲಿ ಸಾಹಿತ್ಯ ಕೃಷಿ ಆರಂಭಿಸಿದರು. ವಾಲ್ಮೀಕಿ ರಾಮಾಯಣವನ್ನು ಆಧರಿಸಿ ಹಲವು ರಾಮಾಯಣಗಳು ರಚನೆಯಾಗಿವೆ. ಮಹಾಕಾವ್ಯಗಳ ರಚನೆ ಮತ್ತು ಓದುವುದು ಬಹುತೇಕ ನಿಂತುಹೋದ ಕಾಲಘಟ್ಟದಲ್ಲಿ ಕುವೆಂಪು ಅವರು ರಾಮಾಯಣ ದರ್ಶನಂ ರಚಿಸಿದರು’ ಎಂದರು.

‘ಜತೆಗೆ ವಾಲ್ಮೀಕಿ ರಾಮಾಯಣದಲ್ಲಿ ರಾಮ ರಾವಣನ್ನು ವಧಿಸುತ್ತಾನೆ, ಕುವೆಂಪು ಅವರ ರಾಮಾಯಣದಲ್ಲಿ ರಾಮ ರಾವಣನ ಮನವನ್ನು ಪರಿವರ್ತಿಸುತ್ತಾನೆ. ಸಂಹಾರಕ್ಕಿಂತಲೂ ಪರಿವರ್ತನೆಯೇ ಉತ್ತಮ ಮಾರ್ಗವೆನ್ನುವುದನ್ನು ಮಹಾಕಾವ್ಯದ ಮೂಲಕ ಸಂದೇಶ ನೀಡಿದ್ದಾರೆ’ ಎಂದು ತಿಳಿಸಿದರು.

ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ ಸಾನಿಧ್ಯವಹಿಸಿ, ಆಶೀರ್ವಚನ ನೀಡಿದರು. ಸಾಹಿತಿ ಕೃಷ್ಣಪ್ರಿಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯಶಿಕ್ಷಕ ಗಂಗಾಧರ ಬಡಿಗೇರ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸರೆಡ್ಡಿ ಎಂ.ಟಿ.ಪಲ್ಲಿ., ವಿನೋದಕುಮಾರ ಗುರಿ, ನಾಗಪ್ಪ ಸೇರಿದಂತೆ ಶಿಕ್ಷಕರು ಇದ್ದರು.

ಶಿಕ್ಷಕರಾದ ಮಧುಮತಿ ಸಿಂಘೆ ಸ್ವಾಗತಿಸಿ, ಬಸಲಿಂಗಪ್ಪ ನಿರ್ವಹಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT