ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ನಮ್ಮ ಜನ ನಮ್ಮ ಧ್ವನಿ: ಮಕ್ಕಳಿಗೆ ದೂರವಾದ ಆರ್‌ಟಿಇ ಕಾಯ್ದೆ

ಜಿಲ್ಲೆಯಲ್ಲಿ ಕೇವಲ 13 ಸೀಟುಗಳು ಶಿಕ್ಷಣ ಹಕ್ಕು ಕಾಯ್ದೆ ವ್ಯಾಪ್ತಿಗೆ, 2019 ಕಾಯ್ದೆ ತಿದ್ದುಪಡಿಯಿಂದ ಹೊಡೆತ
Last Updated 8 ಮೇ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಗೆ ತಂದ ನಂತರ ಖಾಸಗಿ ಶಾಲೆಗಳಲ್ಲಿ ಈ ಕಾಯ್ದೆಯಡಿ ದಾಖಲಾಗುವವರ ಸಂಖ್ಯೆ ಹೆಚ್ಚಿತ್ತು. 2019ರಲ್ಲಿ ತಿದ್ದುಪಡಿ ತಂದ ನಂತರ ಸೀಟುಗಳು ಕಡಿಮೆಯಾಗಿದ್ದು, ಈಗ ಮಕ್ಕಳಿಗೆ ಉಪಯೋಗವಿಲ್ಲದಂತೆ ಆಗಿದೆ.

ಆರ್‌ಟಿಇ ಕಾಯ್ದೆ 2009ರಲ್ಲಿ ಜಾರಿಗೆ ಬಂದಿದೆ. 2019ರಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದರಿಂದ ಖಾಸಗಿ ಅನುದಾನ ರಹಿತ ಶಾಲೆಗಳು ಇದೇ ಸೀಟುಗಳ ಆಧಾರದ ಮೇಲೆ ಹಲವಾರು ಶಿಕ್ಷಣ ಸಂಸ್ಥೆಗಳು ಆರಂಭವಾಗಿದ್ದವು. ಸರ್ಕಾರ 1 ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇಲ್ಲದಿದ್ದರೆ ಮಾತ್ರ ಖಾಸಗಿ ಶಾಲೆಗಳಿಗೆ ಸೇರಲು ಅವಕಾಶ ಕಲ್ಪಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಈ ಯೋಜನೆ ಇದ್ದೂ ಇಲ್ಲದಂತೆ ಆಗಿದೆ.

ಯಾದಗಿರಿ ತಾಲ್ಲೂಕಿನ ಬಸವಂತಪುರ ಖಾಸಗಿ ಶಾಲೆಯಲ್ಲಿ ಮಾತ್ರ 13 ಸೀಟುಗಳು ಲಭ್ಯವಿದ್ದು, ಪ್ರಸ್ತುತ 7 ಸೀಟುಗಳು ಭರ್ತಿಯಾಗಿವೆ. ಇನ್ನೂ 6 ಸೀಟುಗಳು ಬಾಕಿ ಇವೆ.

ಈ ಹಿಂದೆ ಆರ್‌ಟಿಇ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಎಲ್‌ಕೆಜಿ, ಯುಕೆಜಿಗೆ ₹8 ಸಾವಿರ ಶುಲ್ಕ ಭರಿಸುತ್ತದೆ. 1ರಿಂದ 8ನೇ ತರಗತಿವರೆಗೆ ₹16 ಸಾವಿರ ನೀಡಲಾಗುತ್ತಿದೆ. 16 ಸಾವಿರ ಗರಿಷ್ಠ ಶುಲ್ಕವಾಗಿದೆ. ಇದಕ್ಕಿಂತ ಹೆಚ್ಚು ಕೊಡಲು ಅವಕಾಶವಿಲ್ಲದಂತೆ ಆಗಿದೆ.

ಏನಿದು ಯೋಜನೆ: ಖಾಸಗಿ ಶಾಲೆಗಳಲ್ಲೂ ಪರಿಶಿಷ್ಟ ಜಾತಿ, ಪಂಗಡ ಇತರೆ ವರ್ಗದ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲಿ ಎನ್ನುವ ಉದ್ದೇಶದಿಂದ 2009ರಲ್ಲಿ ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಗೊಳಿಸಿತ್ತು. ಆರಂಭದಲ್ಲಿ ಸಾವಿರಾರು ಅರ್ಜಿ ಸಲ್ಲಿಕೆಯಾಗುತ್ತಿತ್ತು. ನಂತರದ ದಿನಗಳಲ್ಲಿ ಇದರ ಲಾಭ ಪಡೆಯಲು ಖಾಸಗಿ ಶಾಲೆಗಳು ಅಲ್ಲಲ್ಲಿ ತಲೆ ಎತ್ತಿದವು. ಆರ್‌ಟಿಇ ಸೀಟುಗಳಿಗಾಗಿಯೇ ಖಾಸಗಿ ಶಾಲೆಗಳನ್ನು ತೆಗೆಯಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಅಂಥ ಶಾಲೆಗಳು ಈಗ ಬಹುತೇಕ ಮುಚ್ಚಿವೆ. ಶಿಕ್ಷಣ ಸೇವಾ ಮನೋಭಾವ ಇರುವ ಶಾಲೆಗಳು ಮಾತ್ರ ಉಳಿದುಕೊಂಡಿವೆ ಎನ್ನಲಾಗುತ್ತಿದೆ.

ಅಲ್ಲದೇ ಕೆಲ ಕಡೆ ವಿಳಾಸ ಬದಲಾಯಿಸಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಆದಾಯ ಪ‍್ರಮಾಣ ಪತ್ರ ದುರುಪಯೋಗದ ಬಗ್ಗೆ ಆಗಿನ ಸಂದರ್ಭದಲ್ಲೇ ತಹಶೀಲ್ದಾರ್‌ ಮೂಲಕ ಪರಿಶೀಲನೆ ನಡೆಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಂತುಗಳಲ್ಲಿ ಹಣ ಪಾವತಿ:ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಎರಡು ಕಂತುಗಳಲ್ಲಿ ಹಣ ಪಾವತಿ ಹಣ ಪಾವತಿ ಮಾಡಲಾಗುತ್ತಿದ್ದು, ಒಂದೇ ಬಾರಿ ಹಣ ಬಿಡುಗಡೆ ಮಾಡುವಂತೆ ಖಾಸಗಿ ಶಾಲೆಯ ಮುಖ್ಯಸ್ಥರು ಒತ್ತಾಯಿಸುತ್ತಿದ್ದಾರೆ.

2021–22ರ ಸಾಲಿನ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಇದರಿಂದ ಅನುದಾನ ರಹಿತ ಖಾಸಗಿ ಶಾಲೆಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

‘ಈಗ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು ವಿತರಿಸುತ್ತಿದ್ದು, ಇದರಿಂದ ನಮ್ಮಲ್ಲಿ ದಾಖಲಾದ ಮಕ್ಕಳು ಟಿಸಿ ಕೊಡಿ ಸರ್ಕಾರಿ ಶಾಲೆಗೆ ಹೋಗುತ್ತೇವೆ ಎನ್ನುತ್ತಾರೆ. ಕೋವಿಡ್‌ ನೆಪ ಹೇಳಿ ಪೋಷಕರು ಶುಲ್ಕ ಕಟ್ಟಿಲ್ಲ. ಇದರಿಂದ ಹಣಕಾಸು ಮುಗ್ಗಟ್ಟು ಎದುರಾಗಿದೆ. ಬೇರೆ ಜಿಲ್ಲೆಗಳಲ್ಲಿ ಆರ್‌ಟಿಇ ಸೀಟುಗಳು ಹೆಚ್ಚು ಇವೆ. ಶಿಕ್ಷಣದಲ್ಲಿ ಹಿಂದುಳಿದ ಜಿಲ್ಲೆಯಲ್ಲಿ ಆರ್‌ಟಿಇ ಒಂದೇ ಶಾಲೆ ಇದೆ. 5ನೇ ತರಗತಿ ಮುಗಿದರೆ ನಮಗೆ ಆರ್‌ಟಿಇ ಸೀಟುಗಳೇ ಇಲ್ಲದಂತೆ ಆಗಿದೆ. ಶಾಲೆಯನ್ನು ಮುನ್ನಡೆಸುವುದು ಸಾವಲಾಗಿದೆ. ಅನುದಾನವೂ ಬಿಡುಗಡೆ ಮಾಡದಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಖಾಸಗಿ ಶಾಲೆಯ ಮುಖ್ಯಸ್ಥರೊಬ್ಬರು ತಮ್ಮ ಅಳಲು ತೋಡಿಕೊಂಡರು.

***

ಸಾರ್ವಜನಿಕರಿಂದ ದೂರವಾದ ಕಾಯ್ದೆ

ಹುಣಸಗಿ: ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಸಾರ್ವಜನಿಕರಿಗೆ ಅನುಕೂಲವಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಮೊದಲು ಈ ಆರ್‌ಟಿಇ ಕಾಯ್ದೆಯಡಿ ಯಾವುದೇ ಮಗು ಸರ್ಕಾರಿ ಕೋಟಾದಡಿ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ಅನುಕೂಲ ಕಲ್ಪಿಸಲಾಗಿತ್ತು. ಇದರಿಂದಾಗಿ ಖಾಸಗಿ ಶಾಲೆಗೆ ಶುಲ್ಕದ ರೂಪವಾಗಿ ₹16,000 ಮಗುವಿನಿಂದ ಖಾಸಗಿ ಶಾಲೆಗೆ ಸಂದಾಯವಾಗುತ್ತಿತ್ತು. ಅದರೆ, ಕಾಯ್ದೆ ತಿದ್ದುಪಡಿಯಿಂದಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪಾಲಕರು ಹೇಳಿದರು.

ಸುರಪುರ, ಹುಣಸಗಿ ತಾಲ್ಲೂಕು ಸೇರಿದಂತೆ 104 ಶಾಲೆಗಳಲ್ಲಿ ಮೂರು ಶಾಲೆಗಳಿಗೆ ಮಾತ್ರ ಮಕ್ಕಳ ಶುಲ್ಕ ಪಾವತಿಯಾಗಿದೆ ಎಂದು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹೇಳಿದರು.

ಈ ಕುರಿತು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ನಾಗರಾಜ್ ಭಾವಿಹೊಲ ಮಾಹಿತಿ ನೀಡಿ, ಯೋಜನೆ ನಮ್ಮ ತಾಲ್ಲೂಕಿನಲ್ಲಿ ಯಾವುದೇ ಅನುಕೂಲವಾಗುತ್ತಿಲ್ಲ. ಪಾಲಕರಿಗೆ ಯೋಜನೆ ಎಂಬುದು ಹಲ್ಲುಕಿತ್ತ ಹಾವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಯೋಜನೆ ಕುರಿತಂತೆ ಕಚೇರಿ ಸೇರಿದಂತೆ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ಸಮರ್ಪಕ ಮಾಹಿತಿ ಇಲ್ಲ. ಶುಲ್ಕ ಹಂಚಿಕೆ ಸೇರಿದಂತೆ ಇತರ ವಿಷಯಗಳ ಕುರಿತು ಅಧಿಕಾರಿಗಳು ಸಮರ್ಪಕ ಮಾಹಿತಿ ಕೊಡುತ್ತಿಲ್ಲ ಎಂದು ದೂರಿದರು.
***
ಆಯೋಮಯವಾದ ಖಾಸಗಿ ಶಿಕ್ಷಣ ಸಂಸ್ಥೆಯ ಪಾಡು

ಶಹಾಪುರ: ಕಳೆದ ನಾಲ್ಕು ವರ್ಷದಿಂದ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಬಡ ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುವುದನ್ನು ಸ್ಥಗಿತಗೊಳಿಸಿದೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಡು ಅಯೋಮಯವಾಗಿದೆ. ತಾಲ್ಲೂಕಿನಲ್ಲಿ 125 ಖಾಸಗಿ ಶಿಕ್ಷಣ ಸಂಸ್ಥೆಗಳು ಇದ್ದವು. ಈಗ 115ಕ್ಕೆ ತಲುಪಿದೆ. ಗ್ರಾಮೀಣ ಪ್ರದೇಶದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚಿವೆ ಎನ್ನುತ್ತಾರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆರ್.ಚೆನ್ನಬಸ್ಸು ವನದುರ್ಗ.

ಇದರ ಜತೆಗೆ ಕೋವಿಡ್ ಸಂಕಷ್ಟವು ಖಾಸಗಿ ಶಿಕ್ಷಣ ಸಂಸ್ಥೆಗಳ ಜಂಘಾಬಲವನ್ನು ಉಡುಗಿಸಿದೆ. ಹೆಚ್ಚುಕಡಿಮೆ ಎರಡು ವರ್ಷ ಶಾಲೆ ಬಂದ್‌ ಆದವು. ಅಲ್ಲದೆ ಅನುದಾನವು ಸ್ಥಗಿತಗೊಂಡಿತು. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಸಂಬಳ ನೀಡಲು ಆಗದೆ ಪರದಾಡುವ ದುಸ್ಥಿತಿ ಎದುರಾಗಿದೆ. ಅನುದಾನ ದುರ್ಬಳಕೆಯ ಆರೋಪವು ಹೊತ್ತುಕೊಂಡು ಬಂದಿತು ಎನ್ನುತ್ತಾರೆ ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಒಬ್ಬರು.

ಸರ್ಕಾರ ಅನುದಾನ ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ. ಬಿಲ್ ಪಡೆಯಲು ಸಾಕಷ್ಟು ಸಲ ಕಚೇರಿಗೆ ಅಲೆಯುವಂತೆ ಆಗಿದೆ. ಅಲ್ಲಿಯೂ ಸಿಬ್ಬಂದಿಗೆ ಕೈ ಬೆಚ್ಚಗೆ ಮಾಡಿದರೆ ಫೈಲ್ ಮುಂದೆ ಸಾಗುತ್ತದೆ. ಯಾಕಪ್ಪ ನಾವು ಇಂಥ ಸಂದಿಗ್ಧ ಸ್ಥಿತಿಯಲ್ಲಿ ಬಂದು ನಿಂತಿದ್ದೇವೆ. ಶಾಲೆ ಮುನ್ನಡೆಸುವುದು ಸಾಧ್ಯವಿಲ್ಲ ಎನ್ನುವ ಸ್ಥಿತಿಗೆ ಬಂದಿದ್ದೇವೆ ಎನ್ನುತ್ತಾರೆ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಶಾಲೆಯ ಮುಖ್ಯಸ್ಥರೊಬ್ಬರು.
***
ಆರ್‌ಟಿಇ ದುರ್ಬಳಕೆ

ಐದಾರು ವರ್ಷಗಳ ಹಿಂದೆ ಆರ್‌ಟಿಇ ದುರ್ಬಳಕೆ ಆಗುತ್ತಿತ್ತು. ಕೆಲ ಪೋಷಕರು ಸೀಟು ಪಡೆಯಲು ಆದಾಯ ಪ್ರಮಾಣ ಮತ್ತು ವಿಳಾಸವನ್ನು ಬದಲಿಸಿ ಮಕ್ಕಳನ್ನು ಶಾಲೆಗೆ ದಾಖಲಿಸುತ್ತಿದ್ದರು. ಇದರಿಂದ ನಿಜವಾದ ಫಲಾನುಭವಿಗಳಿಗೆ ತೊಂದರೆಯಾಗುತ್ತಿತ್ತು. ಆನ್‌ಲೈನ್‌ ನೋಂದಣಿ ಇಲ್ಲದ ವೇಳೆ ಖಾಸಗಿ ಶಾಲೆಗಳ ಮುಖ್ಯಸ್ಥರು, ಪೋಷಕರು ಕರಾಮತ್ತು ಮಾಡಿ ದಾಖಲು ಮಾಡಿದ್ದಾರೆ.

ಈಗ ಮಕ್ಕಳು ಶಾಲೆಗೆ ದಾಖಲಾತಿ ಪಡೆದರೆ ಆನ್‌ಲೈನ್‌ನಲ್ಲಿ ದಾಖಲಾತಿ ಸಿಗುತ್ತದೆ. 1ರಿಂದ 8ನೇ ತರಗತಿ ವರೆಗೆ ಸ್ಯಾಟ್‌ ಸಂಖ್ಯೆ ಬರುತ್ತದೆ. ಇದನ್ನು ತೆಗೆಯಲು ಬರುವುದಿಲ್ಲ. ಇದರಿಂದ ದುರುಪಯೋಗ ಆಗುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ಮಾತಾಗಿದೆ.

****

ಆರ್‌ಟಿಇ ಶಾಲೆಗಳ ವಿವರ
ತಾಲ್ಲೂಕು;ಶಾಲೆಗಳ ಸಂಖ್ಯೆ
ಸುರಪುರ;104
ಶಹಾಪುರ;86
ಯಾದಗಿರಿ;80
ಒಟ್ಟು;270

***

ಖಾಸಗಿ ಶಾಲೆಗಳಿಗೆ ಪಾವತಿಸುವ ಶುಲ್ಕ ಬಾಕಿ ಉಳಿಸಿಕೊಂಡಿಲ್ಲ. ಕೆಲ ಖಾಸಗಿ ಶಾಲೆಗಳು ನವೀಕರಣ ಬಾಕಿ ಇದ್ದರೆ ಸಮಸ್ಯೆ ಆಗುತ್ತದೆ. ಜಿಲ್ಲೆಯ ಒಂದೇ ಶಾಲೆಯಲ್ಲಿ ಆರ್‌ಟಿಇ ಸೀಟು ಲಭ್ಯವಿವೆ
-ಶಾಂತಗೌಡ ಪಾಟೀಲ, ಡಿಡಿಪಿಐ

***

ಯಾದಗಿರಿ ತಾಲ್ಲೂಕಿನ ಬಸವಂತಪುರ ಶಾಲೆಯಲ್ಲಿ ಆರ್‌ಟಿಇ ಸೀಟುಗಳು ಲಭ್ಯವಿವೆ. ಅಲ್ಲಿ ನೋಂದಣಿ ಮಾಡಲು ಯಾರೂ ಮುಂದೆಬರುತ್ತಿಲ್ಲ. ಇದರಿಂದ ಸೀಟುಗಳ ಉಳಿದಿವೆ
-ಚಂದ್ರಕಾಂತ ರಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ

***

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ, ಶಾಲಾ ಕಟ್ಟಡ ಬಾಡಿಗೆ, ವಿದ್ಯುತ್ ಬಿಲ್‌ ಹಾಗೂ ಶಾಲಾ ವಾಹನಗಳ ಸಾಲದ ಕಂತುಗಳನ್ನು ಕಟ್ಟಲು ಸಂಸ್ಥೆಗಳು ಆರ್ಥಿಕ ಹೊಡೆತಕ್ಕೆ ತುತ್ತಾಗಿವೆ
-ವಿಜಯ ರಾಠೋಡ, ಜಿಲ್ಲಾ ಘಟಕದ ಅಧ್ಯಕ್ಷ, ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಯ ಒಕ್ಕೂಟ

***

ಜಿಲ್ಲೆಯಲ್ಲಿ 270 ಆರ್‌ಟಿಇ ಶಾಲೆಗಳಿದ್ದು, ಒಂದು ಹಂತದಲ್ಲೂ ಶಾಲಾ ಶುಲ್ಕ ಪಾವತಿಸಿಲ್ಲ. ನಿಖರ ಮಾಹಿತಿ ಇಲ್ಲ. ಖಾಸಗಿ ಶಾಲೆಗಳನ್ನು ನಡೆಸುವುದೇ ಕಷ್ಟವಾಗಿದೆ
-ಪ್ರಕಾಶ ಗುಡಿಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ

***

ಪೂರಕ ವರದಿ: ಭೀಮಶೇನರಾವ ಕುಲಕರ್ಣಿ, ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT