ಗುರುವಾರ , ಆಗಸ್ಟ್ 5, 2021
28 °C
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

ಗ್ರಾಮೀಣ ಉದ್ಯೋಗ ಖಾತ್ರಿ: ಜಾತಿ ತಾರತಮ್ಯ ನಿವಾರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಾರರಿಗೆ ಜಾತಿ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾ ಪಂಚಾಯಿತಿ ಬಳಿ ಸೋಮವಾರ ಜಮಾಯಿಸಿ ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಸಂಘದ ಅಧ್ಯಕ್ಷ ದಾವಲಸಾಬ ನದಾಫ್ ಮಾತನಾಡಿ, ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಅಡಿಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ವೇತನ ನೀಡುವಾಗ ತಾರತಮ್ಯ ಮಾಡುವ ಸರ್ಕಾರದ ಉದ್ದೇಶವನ್ನು ಖಂಡಿಸುತ್ತೇವೆ. ದೇಶಾದ್ಯಂತ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ ಮತ್ತು ದಲಿತ ಶೋಷಣ್ ಮುಕ್ತಿ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಉದ್ಯೋಗ ಖಾತ್ರಿ ವೇತನವನ್ನು ಜಾತಿ ಆಧಾರದಲ್ಲಿ ವಿಭಜಿಸುವುದು ಮತ್ತು ಅವರಲ್ಲಿ ಎಸ್.ಸಿ., ಎಸ್.ಟಿ. ಮುಂತಾದ ತಾರತಮ್ಯ ಮಾಡುವುದು ಎಂದಿಗೂ ಸಮರ್ಥನೀಯವಲ್ಲ ಎಂದು ಆರೋಪಿಸಿದರು.

ಸಮಾನ ವೇತನ ಪಡೆಯಬೇಕಾದ ಕೆಲಸಗಾರರಿಗೆ ತಾರತಮ್ಯ ಮಾಡಿದಂತಾಗುತ್ತದೆ. ವೇತನ ಪಾವತಿಯಲ್ಲಿ ಅನಗತ್ಯ ವಿಳಂಬ ಆಗುವುದು. ವೇತನ ಪಾವತಿಯ ಪ್ರಕಿಯೆಯಲ್ಲಿ ಯಾವ ಸದುದ್ದೇಶವಿಲ್ಲದ ಗೊಂದಲಕ್ಕೆ ಆಸ್ಪದ ಮಾಡಿದಂತೆ ಆಗುತ್ತದೆ. ಎಸ್.ಸಿ., ಎಸ್.ಟಿ., ಕೆಲಸಗಾರರ ಹಕ್ಕುಗಳಿಗೆ ಅನ್ಯಾಯವಾಗುತ್ತದೆ ಎಂದರು.

ಇಲಾಖೆಯ ಈ ಅನಗತ್ಯ ಶಿಫಾರಸನ್ನು ಹಿಂಪಡೆಯಬೇಕು. ಬದಲಾಗಿ ವರ್ಷದಲ್ಲಿ 200 ದಿನಗಳ ಕೆಲಸ ನೀಡಬೇಕು. ದಿನದ ವೇತನವನ್ನು ₹ 600ಕ್ಕೆ ಏರಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಕೆಲಸಗಾರರಿಗೆ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.

ರಂಗಮ್ಮ ಕಟ್ಟಿಮನಿ, ಭೀಮಣ್ಣ ನಾಯ್ಕೋಡಿ, ಅಂಬ್ಲಯ್ಯ ಬೇವಿನಕಟ್ಟಿ, ನಾಗಪ್ಪ ತೇರಿನ, ಬಾಬು ಗುಂಡಳ್ಳಿ, ಜಯಶ್ರೀ ಗುಲಸರಂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.