ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ: ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ

ಸೈದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿ ಕೊರತೆ
Last Updated 4 ಅಕ್ಟೋಬರ್ 2020, 16:27 IST
ಅಕ್ಷರ ಗಾತ್ರ

ಸೈದಾಪುರ: ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಮುದಾಯ ಆರೋಗ್ಯ ಕೇಂದ್ರವಾಗಿ ಬಡ್ತಿ ಹೊಂದಿ ಸುಮಾರು ವರ್ಷಗಳೇ ಕಳೆದರೂ ಸೌಲಭ್ಯದ ವಿಚಾರದಲ್ಲಿ ಇಲ್ಲಿನ ಆಸ್ಪತ್ರೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಮುಖವಾಗಿ ಜೀವ ರಕ್ಷಕ ಆಂಬುಲೆನ್ಸ್ ಇಲ್ಲ. ಸ್ವಚ್ಛತೆ ಇಲ್ಲ. ವೈದ್ಯರ ಕೊರತೆ ಇದೆ.

ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದಆಂಬುಲೆನ್ಸ್ ಅನ್ನು 2 ತಿಂಗಳ ಹಿಂದೆ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ನೀಡಲಾಗಿದೆ. ಹೀಗಾಗಿ ಸದ್ಯ ಇಲ್ಲಿ ಒಂದೇ ಒಂದು ಆಂಬುಲೆನ್ಸ್‌ ಕೂಡ ಇಲ್ಲ. ಗ್ರಾಮೀಣ ಭಾಗದಿಂದ ಗರ್ಭಿಣಿಯರು, ಅಪಘಾತದ ಗಾಯಾಳುಗಳನ್ನು ತುರ್ತು ಚಿಕಿತ್ಸೆಗೆ ಕರೆತರಲು ತೀವ್ರ ಸಮಸ್ಯೆ ಆಗುತ್ತಿದೆ. ರೋಗಿಗಳನ್ನು ಖಾಸಗಿ ವಾಹನಗಳಲ್ಲಿ ದುಬಾರಿ ಹಣ ನೀಡಿ ಕರೆತರುವ ದುಸ್ಥಿತಿ ಇಲ್ಲಿನ ಸಾರ್ವಜನಿಕರದ್ದು.

ಸೌಕರ್ಯದ ಕೊರತೆ: 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಪ್ರಾಥಮಿಕ ತಪಾಸಣೆ ಮಾಡುವುದು ಹೊರತುಪಡಿಸಿದರೆ, ಬೇರೆ ಯಾವುದೇ ಸೌಕರ್ಯಗಳಿಲ್ಲ. ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ವಾಸಿಸಲು ನಿರ್ಮಿಸುತ್ತಿರುವ ವಸತಿ ಕಟ್ಟಡದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ವೈದ್ಯರು, ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ.

ವೈದ್ಯರು, ಸಿಬ್ಬಂದಿ ಕೊರತೆ: ಒಬ್ಬರು ಕಾಯಂ ವೈದ್ಯರು, ಮೂವರು ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಒಬ್ಬರು ದಂತ ವೈದ್ಯರು, 9 ಶುಶ್ರೂಷಕಿಯರು, 9 ಜನ ‘ಡಿ’ ಗ್ರೂಪ್ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ತಿಂಗಳಿಗೆ 50 ರಿಂದ 60 ಹೆರಿಗೆ ಆಗುವ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. 1 ಅರವಳಿಕೆ ತಜ್ಞರು, 1 ಮಕ್ಕಳ ತಜ್ಞರು, 1 ಕ್ಷ-ಕಿರಣ ತಜ್ಞರು, 1 ಸ್ತ್ರೀ ರೋಗ ತಜ್ಞರು ಹಾಗೂ 4 ‘ಡಿ’ ಗ್ರೂಪ್ ನೌಕರರ ಸ್ಥಾನ ಖಾಲಿ ಇವೆ. ಎಕ್ಸ್‌ರೇ ಯಂತ್ರ ಇದ್ದರೂ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿದೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಿಶುಗಳ ಆರೈಕೆಗಾಗಿ ತೀವ್ರ ನಿಗಾ ಘಟಕವಿಲ್ಲ. ನವಜಾತು ಶಿಶುಗಳಿಗೆ ತೊಂದರೆ ಆದರೆ ದೂರದ ಜಿಲ್ಲಾ ಆಸ್ಪತ್ರೆಗಳಿಗೆ ಕರೆದೊಯ್ಯಬೇಕಾದ ಸ್ಥಿತಿ ಇದೆ.

ಯುನಾನಿ ಆಸ್ಪತ್ರೆಗೆ ಹೋಗಲು ರಸ್ತೆ ಇಲ್ಲ: ಆರೋಗ್ಯ ಕೇಂದ್ರದ ಹಿಂದೆ ಯುನಾನಿ ಆಸ್ಪತ್ರೆ ನಿರ್ಮಿಸಲಾಗಿದೆ. ಆದರೆ ರೋಗಿಗಳು ಇಲ್ಲಿಗೆ ಹೋಗಲು ರಸ್ತೆಯೇ ಇಲ್ಲ. ಸುತ್ತಲು ಕಸ, ಮುಳ್ಳು ಕಂಟಿಗಳು, ದಟ್ಟ ಹುಲ್ಲು ಬೆಳೆದಿದೆ.

***

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಮಸ್ಯೆಗಳ ಬಗ್ಗೆ ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದಷ್ಟು ಬೇಗ ಅಧಿಕಾರಿಗಳು ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಬೇಕು

ಶಶಿಕಲಾ ಭೀಮಣ್ಣಗೌಡ ಕ್ಯಾತ್ನಾಳ, ಜಿಲ್ಲಾ ಪಂಚಾಯಿತಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT