ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ: 24 ಗಂಟೆ ಕಳೆದರೂ ಆರದ ಬೆಂಕಿ

ಮೌನಕ್ಕೆ ಜಾರಿದ ಕುಟುಂಬಸ್ಥರು, ಬಟ್ಟೆ ತೆರವುಗೊಳಿಸಿದ ಕೆಲಸಗಾರರು
Last Updated 28 ಮಾರ್ಚ್ 2023, 16:14 IST
ಅಕ್ಷರ ಗಾತ್ರ

ಸೈದಾಪುರ: ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ವಿದ್ಯುತ್ ಅವಘಡದಿಂದ ಬಟ್ಟೆ ಅಂಗಡಿಗೆ ತಗುಲಿದ ಬೆಂಕಿಯಿಂದ ಸುಟ್ಟು ಕರಕಲಾದ ಬಟ್ಟೆಗಳನ್ನು ಮಂಗಳವಾರ ಕೆಲಸಗಾರರು ಸ್ವಚ್ಛಗೊಳಿಸಿದರು.

ಈ ದುರ್ಘಟನೆಯಿಂದ ಇಡೀ ದಿನ ವ್ಯಾಪಾರ ಸ್ತಬ್ಧವಾಗಿ ನೀರವ ಮೌನ ಆವರಿಸಿತ್ತು. ಆದರೆ, ಮಂಗಳವಾರ ಯಥಾ ಪ್ರಕಾರ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ಆರಂಭಿಸಿದ ದೃಶ್ಯ ಕಂಡು ಬಂದಿತು.

ಮಾರ್ಚ್‌ 27 ರಂದು ಬೆಳಗಿನ ಜಾವ ಸುಮಾರು 5 ಗಂಟೆಗೆ ಕಾಣಿಸಿಕೊಂಡ ಬೆಂಕಿಯು ಮಾ.28 ಮಂಗಳವಾರ ಮಧ್ಯಾಹ್ನ 3 ಗಂಟೆಯವರೆಗೂ ಅಲ್ಲಲ್ಲಿ ಬೆಂಕಿ ಕಾಣಿಸುತ್ತಿರುವುದನ್ನು ಕಂಡ ಅಕ್ಕ-ಪಕ್ಕದ ಜನ ಭಯ ಭೀತರಾಗಿದ್ದರು. ಯಾದಗಿರಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸಂಪೂರ್ಣವಾಗಿ ಬೆಂಕಿ ನಂದಿಸಿದರು. ಆದರೆ, ಬೆಂಕಿ ಕೆನ್ನಾಲಿಗೆ ಸಿಲುಕಿದ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿದೆ.

‘ಬಟ್ಟೆ ಅಂಗಡಿಯಲ್ಲಿನ ಪಾಲಿಸ್ಟರ್ ಬಟ್ಟೆಗಳಿಗೆ ಹೊತ್ತಿಕೊಂಡ ಬೆಂಕಿಯ ಕಾವು ಸುಮಾರು 2 ದಿನಗಳವರೆಗೂ ಇರುವ ಸಂಭವವಿರುತ್ತದೆ’ ಎಂದು ಅಗ್ನಿ ಶಾಮಕ ದಳದ ಸಿಬ್ಬಂದಿ ತಿಳಿಸಿದರು.

ಬಟ್ಟೆ ಅಂಗಡಿಯ ಮೇಲ್ಮಹಡಿಯಲ್ಲಿದ್ದ ಸುಮಾರು ₹3 ರಿಂದ 4 ಕೋಟಿ ಮೌಲ್ಯದ ಬಟ್ಟೆಗಳು ಸುಟ್ಟು ಹೋಗಿದ್ದವು. ಕೆಳ ಮಹಡಿಯಲ್ಲಿದ್ದ ಶೇ 10 ರಷ್ಟು ಬಟ್ಟೆಗಳನ್ನು ತೆಗೆದು ಬೇರೆಡೆ ಸಾಗಿಸಲಾಯಿತು.

ಮೌನಕ್ಕೆ ಜಾರಿದ ಕುಟುಂಬಸ್ಥರು:

ಕುಟುಂಬದ ಆಧಾರ ಸ್ತಂಭವಾಗಿದ್ದ ಕೆ.ಬಿ.ರಾಘವೇಂದ್ರ ಹಾಗೂ ಪತ್ನಿ ಕೆ.ಬಿ.ಶಿಲ್ಪಾ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಅವರ ಅಕಾಲಿಕ ಮರಣವು ಕುಟುಂಬಸ್ಥರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನೂ ಪ್ರಾಣಾಪಯದಿಂದ ಬದುಕುಳಿದ ತಂದೆ-ತಾಯಿ ಹಿರಿಯ ಜೀವಗಳು ಮೌನಕ್ಕೆ ಜಾರಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡ ರಾಘವೇಂದ್ರರವರ ಇಬ್ಬರು ಮಕ್ಕಳು ಅಪ್ಪ. ಅಮ್ಮ ಮತ್ತೆ ಮರಳಿ ಬರುತ್ತಾರೆ ಎಂಬ ಆಸೆ ಭಾವನೆಯೊಂದಿಗೆ ಕಾಲ ಕಳೆಯುತ್ತಿದ್ದಾರೆ.

****

ಮಾ.27ರಂದು ನಡೆದ ವಿದ್ಯುತ್ ಅವಘಡದಿಂದ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಹೆಚ್ಚಿನ ವಿಚಾರಣೆ ನಂತರ ನಿಖರವಾದ ಮಾಹಿತಿ ದೊರಕಲಿದೆ. ಈ ಘಟನೆಯಲ್ಲಿ ಸುಮಾರು ₹3 ರಿಂದ 4 ಕೋಟಿ ಮೌಲ್ಯದ ಬಟ್ಟೆಗಳು ಸುಟ್ಟು ಹೋಗಿವೆ ಎಂದು ಅಂದಾಜಿಸಲಾಗಿದೆ

ಕಾಳಪ್ಪ ಬಡಿಗೇರ್, ಪಿಐ, ಸೈದಾಪುರ ಪೊಲೀಸ್‌ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT