ಮಂಗಳವಾರ, ಜುಲೈ 5, 2022
26 °C

ಸುರಪುರ: ಪುನರಾರಂಭಗೊಂಡ ಶಾಲೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಕಲಿಕಾ ಚೇತರಿಕೆ ಕಾರ್ಯಕ್ರಮದಡಿ ಸೋಮವಾರ ತಾಲ್ಲೂಕಿನಾದ್ಯಂತ ಶಾಲೆಗಳು ಆರಂಭಗೊಂಡದ್ದು, 45 ದಿನಗಳ ಬೇಸಿಗೆ ರಜೆಯಿಂದ ಬಂದ್ ಆಗಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪುನರಾರಂಭಗೊಂಡವು.

ಮಕ್ಕಳಿಲ್ಲದೆ ಬಣಗುಡುತ್ತಿದ್ದ ಶಾಲಾ ಅಂಗಳದಲ್ಲಿ ಮಕ್ಕಳ ಕಲರವ ಕಂಡು ಬಂದಿತು. ಶಾಲೆ ಆರಂಭದ ಹಿನ್ನಲೆಯಲ್ಲಿ ಶಾಲಾ ಮುಖ್ಯಸ್ಥರು ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಾಗತಿಸಲು ಭಾನುವಾರ ಸಕಲ ಸಿದ್ದತೆ ಮಾಡಿಕೊಂಡಿದ್ದರು. ತರಗತಿಯ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗಿತ್ತು. ಶಾಲೆಯ ಮುಖ್ಯದ್ವಾರಕ್ಕೆ ತಳಿರು ತೋರಣ ಕಟ್ಟಿ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಸ್ವಾಗತಿಸಿದರು. ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ಅಡುಗೆ ಉಣಬಡಿಸಿದರು.

ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆ, ಸುರಪುರದ ಬಾಲಕರ ಪ್ರೌಢಶಾಲೆ, ದರಬಾರ ಹಿರಿಯ ಪ್ರಾಥಮಿಕ ಶಾಲೆ. ಸೇರಿದಂತೆ ಇತರೆ ಶಾಲೆಗಳಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತರಗತಿ ಆರಂಭಿಸಿದರು.

ತಳವಾರಗೇರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯಗುರು, ಶಿಕ್ಷಕರು ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರು ಮತ್ತು ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರು ಶಾಲೆಗೆ ಆಗಮಿಸಿ ಮಕ್ಕಳಿಗೆ ಗುಲಾಬಿ ನೀಡಿ ಸ್ವಾಗತಿಸಿದರು.

ಶಾಲೆ ಆರಂಭದ ಮೊದಲ ದಿನವಾಗಿದ್ದರಿಂದ ಮತ್ತು ಬಿಸಿಲು ಜೋರಾಗಿರುವುದರಿಂದ ಮಕ್ಕಳ ಹಾಜರಾತಿ ಅಷ್ಟೊಂದು ಪ್ರಮಾಣದಲ್ಲಿ ಕಂಡು ಬರಲಿಲ್ಲ. ಕೆಲ ಶಾಲೆಗಳಲ್ಲಿ ಬೆರಳೆಣಿಕೆಯಷ್ಟು ಮಕ್ಕಳು ಹಾಜರಾಗಿದ್ದರು. ರಂಗಂಪೇಟ, ಹಸನಾಪುರ, ದಿವಳಗುಡ್ಡ ಸತ್ಯಂಪೇಟ, ಬಿಜಾಸ್ಪೂರ ಇತರೆ ಗ್ರಾಮಗಳಲ್ಲಿ ಶಿಕ್ಷಕರು ಮನೆಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರಲ್ಲಿ ಮನವಿ ಮಾಡಿದರು.

‘ಪ್ರತಿ ವರ್ಷ ಮೇ ಕೊನೆಯಲ್ಲಿ ಶಾಲೆ ಆರಂಭವಾಗುತ್ತಿದ್ದವು. ಕೋವಿಡ್‍ನಿಂದಾಗಿ ಎರಡು ವರ್ಷಗಳಿಂದ ಶಾಲೆಗಳು ಸರಿಯಾದ ಸಮಯಕ್ಕೆ ಆರಂಭವಾಗಿಲ್ಲ. ಮಕ್ಕಳ ಕಲಿಕಾ ದೃಷ್ಠಿಯಿಂದ ಪ್ರಸಕ್ತ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಸರ್ಕಾರ ಘೋಷಿಸಿದೆ. ಹೀಗಾಗಿ ಈ ಬಾರಿ 15 ದಿನ ಮುಂಚಿತವಾಗಿ ಆರಂಭಿಲಾಗಿದ್ದು ಪ್ರತಿ ಶಾಲೆಗಳಲ್ಲಿ ನೊಂದಣಿ ಆರಂಭಗೊಂಡಿದೆ’ ಎಂದು ಬಿಇಒ ಮಹಾದೇವರೆಡ್ಡಿ ತಿಳಿಸಿದರು.

‘ಸಮವಸ್ತ್ರ ಸರಬರಾಜು ಆಗಿಲ್ಲ. ಪಠ್ಯಪುಸ್ತಕಗಳು ಬಂದಿದ್ದು ಆಯಾ ಶಾಲೆಗಳ ಬೇಡಿಕೆಯಂತೆ ಪೂರೈಕೆ ಪ್ರಕ್ರಿಯೆ ನಡೆದಿದೆ. ಬಿಆರ್‌ಸಿ ಮತ್ತು ಸಿಆರ್‌ಸಿ ಸಭೆ ನಡೆಸಿ ಪ್ರತಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಲಾಗಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು