ಸೋಮವಾರ, ಜೂನ್ 21, 2021
28 °C
ಪರೀಕ್ಷೆ ಮಾಡಿಸಿಕೊಂಡವರ ಪೈಕಿ ಶೇ 52.5ರಷ್ಟು ಜನರಲ್ಲಿ ಕೋವಿಡ್ ದೃಢ

ಶಹಾಪುರ: ಗ್ರಾಮೀಣ ಪ್ರದೇಶಕ್ಕೆ ಹರಡಿದ ಕೋವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಗುಳೆ ಹೋಗಿ ಮತ್ತೆ ಮರಳಿ ಗೂಡು ಸೇರಿದ ಜನರಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ಈಗ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿಕೊಂಡು ಜನರ ಜೀವ  ಹಿಂಡುತ್ತಿದೆ. ಸೋಂಕಿಗೆ ಒಳಗಾದ ವ್ಯಕ್ತಿ ಪರೀಕ್ಷೆ ಒಳಗಾಗದೆ ಇರುವುದು ತಾಲ್ಲೂಕು ಆಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ ಮಾಡಿಸಿಕೊಂಡವರ ಪೈಕಿ ಶೇ 52.5ರಷ್ಟು ಜನರಲ್ಲಿ ಕೋವಿಡ್ ದೃಢಪಟ್ಟರೆ, ನಗರ ಪ್ರದೇಶದಲ್ಲಿ ಶೇ 34ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ತಾಲ್ಲೂಕಿನಲ್ಲಿ ಇದುವರೆಗೂ 54 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.

ಸೋಂಕು ಲಕ್ಷಣಗಳು ಕಾಣಿಸಿಕೊಂಡರೂ ಗ್ರಾಮೀಣ ಪ್ರದೇಶದ ಜನತೆ ಪರೀಕ್ಷೆಗೆ ಒಳಗಾಗುತ್ತಿಲ್ಲ. ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾದ ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದ ವೈದ್ಯರು ಸಂಕಷ್ಟ ಎದುರಿಸುವಂತೆ ಆಗಿದೆ. ಸೋಂಕು ನಿಯಂತ್ರಣವಾಗಬೇಕಾದರೆ ತಕ್ಷಣ ಪರೀಕ್ಷೆಗೆ ಒಳಗಾಗಬೇಕು. ಸುರಕ್ಷಿತ ಅಂತರ ಹಾಗೂ ಮಾಸ್ಕ್ ಧರಿಸಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ರಮೇಶ ಗುತ್ತೆದಾರ ಮನವಿ ಮಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಜನತೆ ನಕಲಿ ವೈದ್ಯರ ಮೊರೆ ಹೊಗಿದ್ದಾರೆ. ನಕಲಿ ವೈದ್ಯರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಆರೋಗ್ಯದ ಸಮಸ್ಯೆ ಉಂಟಾಗಿದೆ. ಗ್ರಾಮೀಣ ಪ್ರದೇಶಕ್ಕೆ ನಗರ ಪ್ರದೇಶದಿಂದ ಹೆಚ್ಚಾಗಿ ಔಷಧಿ ಸರಬರಾಜು ಆಗುತ್ತಿರುವುದು ಇದಕ್ಕೆ ನಿದರ್ಶನವಾಗಿದೆ. ಔಷಧಿ ನಿಯಂತ್ರಣಾಧಿಕಾರಿಗಳು ಗಮನಹರಿಸುತ್ತಿಲ್ಲ. ಜಿಲ್ಲಾಡಳಿತ ಕಾಟಾಚಾರಕ್ಕೆ ನಕಲಿ ವೈದ್ಯರ ಮಳಿಗೆ ಮೇಲೆ ದಾಳಿ ಮಾಡಿ ದೂರು ದಾಖಲಿಸಿಕೊಂಡಿರುವುದನ್ನು ಬಿಟ್ಟರೆ ದಿಟ್ಟಕ್ರಮ ತೆಗೆದುಕೊಂಡಿಲ್ಲ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುತ್ತಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದ ಜನರು ಮುಂದೆ ಬಂದು ಪರೀಕ್ಷೆ ಮಾಡಿಕೊಳ್ಳಬೇಕು. ಮನೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದರೆ ಇಡಿ ಕುಟುಂಬ ತೊಂದರೆಗೆ ಸಿಲುಕುತ್ತದೆ. ಆರೋಗ್ಯ ಇಲಾಖೆಯು ಇನ್ನೂ ಹೆಚ್ಚು ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರು ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಮನವಿ ಮಾಡಿದ್ದಾರೆ.

* ಪ್ರತಿಯೊಬ್ಬರು ಕೋವಿಡ್ ಪರೀಕ್ಷೆ ಮಾಡಿಕೊಳ್ಳಬೇಕು. ತಪ್ಪು ತಿಳುವಳಿಕೆಯಿಂದ ಸೋಂಕು ಹೆಚ್ಚು ಹರಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಅಘಾತ ಉಂಟು ಮಾಡಿದೆ.

–ಶರಣಬಸಪ್ಪ ದರ್ಶನಾಪುರ, ಶಾಸಕ

* ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಹೆಚ್ಚು ಹರಡುತ್ತಿದೆ. ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕೋವಿಡ್ ನಿಯಮ ಪಾಲಿಸಲು ಸೂಚಿಸಿದೆ. ಸೋಂಕು ತಗಲಿದ ವ್ಯಕ್ತಿಯನ್ನು ಕೋವಿಡ್ ಕೇಂದ್ರಕ್ಕೆ ದಾಖಲು ಮಾಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ

–ಡಾ.ಆರ್.ರಾಗಪ್ರಿಯಾ, ಜಿಲ್ಲಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು