ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ-ದೇವದುರ್ಗ  ರಸ್ತೆ ಸಂಚಾರ ಸ್ಥಗಿತ

ಕೃಷ್ಣಾ ನದಿ ತಟದಲ್ಲಿ 23 ಹಳ್ಳಿಗಳಿಗೆ ಪ್ರವಾಹದ ಭೀತಿ
Last Updated 2 ಆಗಸ್ಟ್ 2019, 14:27 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗೆ ಹೊಂದಿಕೊಂಡು ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿರುವುದಿಂದ ಶುಕ್ರವಾರ ಮಧ್ಯಾಹ್ನ ಮೂರು ಗಂಟೆಯಿಂದ ಶಹಾಪುರ-ದೇವದುರ್ಗ ಹೆದ್ದಾರಿಯ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಕೃಷ್ಣಾ ನದಿ ಪಾತ್ರದ ವ್ಯಾಪ್ತಿಯಲ್ಲಿ ಅಧಿಕ ಪ್ರಮಾಣ ಮಳೆಯಾಗುತ್ತಿರುವದರಿಂದ ಮತ್ತು ನಾರಾಯಣಪುರ ಜಲಾಶಯದಿಂದ 2ಲಕ್ಷ ಕ್ಯುಸೆಕ್ ನೀರು ನದಿಗೆ ಹರಿ ಬಿಟ್ಟಿದೆ. ಈಗ ಸೇತುವೆಗೆ ಹೊಂದಿಕೊಂಡು ನೀರು ಸಾಗುತ್ತಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದರಿಂದ ಸಂಚಾರ ಬಂದ್ ಮಾಡಲಾಗಿದೆ ಎಂದು ತಹಶೀಲ್ದಾರ ಸಂಗಮೇಶ ಜಿಡಗೆ ತಿಳಿಸಿದರು.

ಅಲ್ಲದೆ ತಾಲ್ಲೂಕಿನ ಹತ್ತಿಗೂಡೂರ ಕ್ರಾಸ್ ಬಳಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಹೆದ್ದಾರಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಲಾರಿ, ಲಘು ವಾಹನವನ್ನು ಸಹ ಬಿಡುತ್ತಿಲ್ಲ. ನದಿ ದಂಡೆಯ ಬಳಿ ಐದು ಪೊಲೀಸ್ ಸಿಬ್ಬಂದಿಯ ತಂಡವನ್ನು ಬಂದೋಬಸ್ತಿಗಾಗಿ ಇರಿಸಲಾಗಿದೆ. ಅಗತ್ಯವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಇದರಿಂದ ನೆರೆ ದೇವದುರ್ಗದ ಮೂಲಕ ರಾಯಚೂರಿಗೆ ತೆರಳಬೇಕಾದರೆ ಪ್ರಯಾಣಿಕರು ಸುರಪುರ ತಾಲ್ಲೂಕಿನ ತಿಂಥಣಿ ಬ್ರೀಜ್ ಮೂಲಕ ಸಾಗಬೇಕಾಗಿದೆ. ಇದರಿಂದ ಪ್ರಯಾಣಿಕರು 45 ಕಿ.ಮೀ ದೂರ ಸುತ್ತವರೆದು ಮತ್ತು ₹42ಯನ್ನು ಹೆಚ್ಚಿನ ಬಸ್ ದರವನ್ನು ನೀಡಬೇಕಾಗಿದೆ. ಅಲ್ಲದೆ ಒಂದು ಗಂಟೆ ಹೆಚ್ಚುವರಿಯಾಗಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಪ್ರಯಾಣಿಕ ಶರಣಪ್ಪ.

ಪ್ರವಾಹದ ಭೀತಿ: ಕೃಷ್ಣಾ ನದಿಯ ದಂಡೆಯಲ್ಲಿ ಮರಕಲ್, ಐಕೂರ,ಅನಕಸೂಗೂರ, ಗೌಡೂರ, ಯಕ್ಷಿಂತಿ, ಮದರಕಲ್, ಗೊಂದೆನೂರ, ಹೈಯ್ಯಾಳ, ಗುಂಡ್ಲೂರ, ಗೋನಾಲ, ಬೆಂಡಬೆಂಬಳಿ ಗ್ರಾಮ ಸೇರಿದಂತೆ 23 ಹಳ್ಳಿಗಳು ಬರುತ್ತವೆ. ಮೂರು ವರ್ಷದ ಹಿಂದೆ ಕೃಷ್ಣಾ ನದಿಯ ಪ್ರವಾಹ ಬಂದಿತ್ತು. ಪ್ರಸಕ್ತ ವರ್ಷ ಪ್ರವಾಹ ಎದುರಾಗಿದೆ. ನದಿ ತುಂಬಿ ಹರಿಯುತ್ತಿದ್ದು ಭೋರ್ಗೆಯುವ ಶಬ್ದವು ಗ್ರಾಮಸ್ಥರಿಗೆ ಭೀತಿ ಉಂಟು ಮಾಡಿದೆ. ಅಲ್ಲದೆ ಎರಡು ದಿನದಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಹೈರಾಣಗೊಂಡಿದ್ದವೆ. ಇನ್ನೂ ನದಿಯಲ್ಲಿ ನೀರು ಏರುಮುಖವಾಗುತ್ತಿರುವುದು ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ ಎನ್ನುತ್ತಾರೆ ನದಿ ಪಾತ್ರದ ಗ್ರಾಮಸ್ಥರು.

ಗದ್ದೆಗೆ ನುಗ್ಗಿದ ನೀರು: ಕೃಷ್ಣಾ ನದಿಗೆ ಪ್ರವಾಹ ಉಂಟಾಗಿದ್ದರಿಂದ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದ ನಾಟಿ ಮಾಡಿದ ಭತ್ತ, ಹತ್ತಿ, ಬೆಳೆ ಸಂಕಷ್ಟಕ್ಕೆ ಸಿಲುಕಿವೆ. ಅಲ್ಲದೆ ನದಿ ದಂಡೆಯಲ್ಲಿರುವ ಪಂಪ್ ಸೆಟ್ ನದಿಯಲ್ಲಿ ಕೊಚ್ಚಿಕೊಂಡು ಹೋಗುವ ಅಪಾಯ ಎದುರಾಗಿದೆ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT