ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚದಲ್ಲಿ ವರ್ಣ ಚಿತ್ತಾರ ಮೂಡಿಸುವ ಸಾರಿಗೆ ನೌಕರ

Last Updated 2 ಮೇ 2021, 7:37 IST
ಅಕ್ಷರ ಗಾತ್ರ

ಗುರುಮಠಕಲ್: ‘ಚಿಕ್ಕಂದಿನಿಂದಲೂ ಚಿತ್ರ ಬಿಡಿಸುವುದೆಂದರೆ ಅಪಾರ ಆಸಕ್ತಿ. ಆದರೆ ಬದುಕು ಕಟ್ಟಿಕೊಳ್ಳುವ ಒತ್ತಡದಲ್ಲಿ ಶಾಲೆ ಮುಗಿದ ಬಳಿಕ ಕೈಗಾರಿಕಾ ತರಬೇತಿಗೆ ಸೇರಿಕೊಂಡು, ನಂತರ ಸಾರಿಗೆ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆದರೆ ಮನಸ್ಸಿನಲ್ಲಿ ಚಿತ್ರ ಬಿಡಿಸುವ ಹಂಬಲ ಸದಾ ಕಾಡುತ್ತಿತ್ತು. ಆಸಕ್ತಿ, ಕುಟುಂಬ ಮತ್ತು ಗೆಳೆಯರ ಸಹಕಾರದಿಂದ ಕುಂಚ ಕೈಗೆತ್ತಿಕೊಂಡು ಹಲವಾರು ಚಿತ್ರಕಲಾ ಕೃತಿಗಳನ್ನು ರಚಿಸಿದೆ’ ಹೀಗೆ ತಮ್ಮ ಚಿತ್ರಕಲೆಯ ಪಯಣವನ್ನು ವಿವರಿಸಿದವರು ಕಲಾವಿದ ಗುರುರಾಜ ನವಲಿ.

ಗುರುರಾಜ ಅವರ ಊರು ರಾಯಚೂರು ಜಿಲ್ಲೆಯ ರಾಮದುರ್ಗ. 2002ರಲ್ಲಿ ಸಾರಿಗೆ ಸಂಸ್ಥೆಯ ಗುರುಮಠಕಲ್ ಘಟಕದ ತಾಂತ್ರಿಕ ಸಹಾಯಕನಾಗಿ ನೇಮಕವಾದ ನಂತರ ಅವರು ಇಲ್ಲಿಯೇ ನೆಲೆಯೂರಿದ್ದಾರೆ. ಪ್ರಸ್ತುತ ಸಾರಿಗೆ ಸಂಸ್ಥೆಯ ಯಾದಗಿರಿ ವರ್ಕ್‌ಶಾಪ್‌ನಲ್ಲಿ ಸಹಾಯಕ ಕುಶಲಕರ್ಮಿಯಾಗಿ ಬಡ್ತಿ ಪಡೆದಿದ್ದಾರೆ.

‘ಬಿಡುವಿನ ಸಮಯದಲ್ಲಿ ಕೈಗೆ ಸಿಕ್ಕ ಪೇಪರ್ ನಲ್ಲಿ ಚಿತ್ರಗಳನ್ನು ಬಿಡಿಸುವ ಪ್ರಯತ್ನ ಮಾಡುತ್ತಿದ್ದೆ. ಒಮ್ಮೆ ಮನೆಯಲ್ಲಿ ಚಿತ್ರ ಬಿಡಿಸುತ್ತಿರು ವುದನ್ನು ನೋಡಿದ ಕುಟುಂಬದ ಸದಸ್ಯರು ಮತ್ತುಕಲಾವಿದ ಜಿ.ಕೂರ್ಮಪ್ಪ ಅವರ ಪ್ರೋತ್ಸಾಹದ ಮಾತುಗಳು ನನ್ನನ್ನ ಹುರಿದುಂಬಿಸಿ, ಕಲೆಯೆಡೆಗೆ ಆಕರ್ಷಣೆಯನ್ನು ಬೆಳೆಸಿತು’ ಎಂದು ಸ್ಮರಿಸುತ್ತಾರೆ ಅವರು.

2006-07ರಿಂದ ಜಿಲ್ಲಾಮಟ್ಟದ ಗಣರಾಜ್ಯೋತ್ಸವದ ಸಮಯದಲ್ಲಿ ಸಾರಿಗೆ ಸಂಸ್ಥೆಯನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳನ್ನು ತಯಾರಿಸುವ ಜವಾಬ್ದಾರಿ ಗುರುರಾಜ ಅವರಿಗೆ ಸಿಕ್ಕಿತ್ತು. ಸರ್ವಧರ್ಮ ಬೆಸುಗೆಯ ತಿಂಥಿಣಿ ಮೌನೇಶ್ವರ, ಕರ್ನಾಟಕದ ಸಾಂಸ್ಕೃತಿಕ ಪ್ರತೀಕವಾದ ಹಂಪಿಯ ಏಕಶಿಲಾ ರಥ ಸೇರಿದಂತೆ ಅವರ ಕೈಚಳಕಕ್ಕೆ ಮೂಲ ಕೃತಿಯಷ್ಟೇ ನೈಜತೆಯ ಸ್ತಬ್ಧಚಿತ್ರಗಳು ಸೃಷ್ಟಿಯಾಗಿ, ಮೆಚ್ಚುಗೆಯನ್ನೂ ಗಿಟ್ಟಿಸಿವೆ.

ಪೆನ್ಸಿಲ್‌ನಿಂದ 3ಡಿ ಚಿತ್ರ, ಆರ್ಕೇಲಿಕ್ ಪೇಂಟ್, ರಿಯಲಿಸ್ಟಿಕ್, ಲೈಫ್ ಸ್ಟೈಲ್, ರೇಖಾಚಿತ್ರ, ಕ್ರೈಯಾನ್ ಪೇಂಟ್, ಜಲವರ್ಣ, ತೈಲವರ್ಣ, ಭಿತ್ತಿಚಿತ್ರ, ಕ್ಲೇ ವರ್ಕ್, ವಾಹನಗಳ ಗುಜರಿಯಿಂದ ಮಾದರಿ ತಯಾರಿ ಸೇರಿದಂತೆ ಕಲೆಗೆ ಸಂಬಂಧಿಸಿದ ಹಲವು ಪ್ರಕಾರಗಳಲ್ಲಿ ಪ್ರಯೋಗ ಮಾಡಿ ಸೈ ಎನಿಸಿಕೊಂಡದ್ದಾರೆ.

‘ನಮ್ಮೊಳಗಿನ ಆಸಕ್ತಿಯೇ ನಮಗೆ ಮೊದಲ ಗುರು, ಉಳಿದವರೆಲ್ಲಾ ಮಾರ್ಗ ದರ್ಶಕರು. ಮನದ ಭಾವನೆಗಳೇ ಕಲಾಕೃತಿ ಗಳಾ ಗುತ್ತವೆ. ಜಗತ್ತಿ ನೊಡನೆಯ ನಮ್ಮ ಸಂಬಂಧ-ಸ್ಪಂದನೆಗಳೆ ಕಲೆಗೆ ಜೀವಂತಿಕೆ ನೀಡುತ್ತವೆ. ಬಣ್ಣಗಳ ಸಂಯೋಗವನ್ನು ಮೊದಲು ಚೆನ್ನಾಗಿ ಅರಿತರೆ ಚಿತ್ರಗಳಿಗೆ ಮೆರುಗು ನೀಡಬಹುದು. ಆಸಕ್ತರು ಈ ಪ್ರಾಥಮಿಕ ತತ್ವಗಳನ್ನು ಅಳವಡಿಸಿಕೊಂಡರೆ ಖಂಡಿತ ಕಲೆಯಲ್ಲಿ ಬೆಳೆದು, ಬದುಕನ್ನೂ ಕಟ್ಟಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT