ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಊರು ನಮ್ಮ ಜಿಲ್ಲೆ: ಕಲ್ಯಾಣ ಚಾಲುಕ್ಯರ ಕಾಲದ ಸೋಮನಾಥೇಶ್ವರ ದೇವಾಲಯ

ಪುರಾತನ ಇತಿಹಾಸ ಸಾರುವ ಕಡೇಚೂರು
Last Updated 28 ಮಾರ್ಚ್ 2021, 3:44 IST
ಅಕ್ಷರ ಗಾತ್ರ

ಕಡೇಚೂರು (ಸೈದಾಪುರ): ಜಿಲ್ಲಾ ಕೇಂದ್ರದಿಂದ ರಾಯಚೂರು ಮಾರ್ಗವಾಗಿ ಸುಮಾರು 45 ಕಿ.ಮೀ ಕ್ರಮಿಸಿದರೆ ಕಡೇಚೂರು ಎಂಬ ಗ್ರಾಮ ಸಿಗುತ್ತದೆ. ಈ ಗ್ರಾಮದ ಹೊರವಲಯದಲ್ಲಿರುವ ಸೋಮನಾಥೇಶ್ವರ ದೇವಾಲಯವು ಕಲ್ಯಾಣ ಚಾಲುಕ್ಯರ ಕಾಲದ್ದೆಂದು ದೇವಾಲಯದ ಮುಂಭಾಗದಲ್ಲಿರುವ ಶಾಸನವು ತಿಳಿಸುತ್ತದೆ.

ಸಮೀಪದ ಕಡೇಚೂರು ಗ್ರಾಮದಲ್ಲಿ ದೊರೆತಿರುವ ಶಾಸನಗಳು ಸೇರಿದಂತೆ ಯಾದಗಿರಿ ತಾಲ್ಲೂಕಿನ ಸುತ್ತಮುತ್ತ ದೊರೆತ ಬಹುತೇಕ ಶಾಸನಗಳು ಕಲ್ಯಾಣ ಚಾಲುಕ್ಯರ ಶಾಸನಗಳಾಗಿವೆ. ಇಲ್ಲಿ ದೊರೆತ ಶಿಲ್ಪದ 3 ಭಾಗಗಳಲ್ಲಿ ಶಾಸನವನ್ನು ಕೆತ್ತಲಾಗಿದೆ.

ಎಡಬದಿಯಲ್ಲಿ ವಿಘ್ನೇಶ್ವರ, ಷಣ್ಮುಖ ಶಿಲ್ಪಗಳು ಹಾಗೂ ಮತ್ತೆರೆಡು ಚಿಕ್ಕ ಮೂರ್ತಿಗಳಿವೆ. ಇವುಗಳ ಕೆಳಗೆ ಎಡಬದಿ ಯಲ್ಲಿ ಕರು ಮತ್ತು ಆಕಳು ಮುಂದೆ ಏಳು ಸಾಲಿನ ದೇವನಾಗರಿ ಲಿಪಿಯ ಶಾಸನ ವನ್ನು ಕಾಣಬಹುದಾಗಿದೆ. ಈ ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಬ್ರಹ್ಮ, ಶಿವಲಿಂಗ, ವಿಷ್ಣು, ಚಂದ್ರನ ಉಬ್ಬು ಶಿಲ್ಪಗಳಿದ್ದು ಕೆಳಭಾಗದಲ್ಲಿ ಶಾಸನವಿದೆ. ಆದರೆ, ಕೆಳಭಾಗವು ತುಂಡಾಗಿರುವುದರಿಂದ ಕೇವಲ ಒಂದು ಸಾಲು ಮಾತ್ರ ಕಾಣಸಿಗುತ್ತದೆ.

ಸಿಡಿತಲೆ ಶಿಲ್ಪ: ತನ್ನನ್ನು ಪೋಷಿಸುವ ವ್ಯಕ್ತಿಗೆ ಪುತ್ರ ಸಂತಾನವಾದರೆ ಸಿಡಿತಲೆ ನೀಡುವುದಾಗಿ ಹರಸಿ ಕೊಂಡಿರುತ್ತಾರೆ. ಅದರಂತೆ ಒಟ್ಟು 3 ಸಿಡಿತಲೆ ಶಿಲ್ಪಗಳಿರುವುದರಿಂದ 3 ಜನರು ಇಲ್ಲಿ ಆತ್ಮ ಬಲಿದಾನ ಮಾಡಿಕೊಂಡಿರಬಹುದೆಂದು ಅಂದಾಜಿಸಬಹುದು. ಸುಮಾರು 4 ಅಡಿ ಎತ್ತರದ ಸಿಡಿ ತಲೆ ಶಿಲ್ಪವು ಎರಡು ಹಂತದಲ್ಲಿದ್ದು, ಇನ್ನುಳಿದ 2 ಶಿಲ್ಪಗಳು ಸುಮಾರು 3 ಅಡಿ ಎತ್ತರದಲ್ಲಿದ್ದು ಎರಡು ಹಂತಗಳನ್ನೊಳಗೊಂಡಿದೆ.

ಸೋಮನಾಥೇಶ್ವರ ದೇವಾಲಯದ ವಿಶೇಷತೆ: ಈ ದೇವಾಲಯದಲ್ಲಿ ಶಿವಲಿಂಗವಿದ್ದು, ಎದುರುಗಡೆ ನಂದಿಯ ವಿಗ್ರಹವಿದೆ. ಪಕ್ಕದಲ್ಲಿ ಕುದುರೆ ಮೇಲೆ ಕುಳಿತಿರುವ ಸೋಮನಾಥೇಶ್ವರನ ವಿಗ್ರಹವಿದೆ. ಅದರ ಪಕ್ಕದಲ್ಲಿ ತ್ರಿಶೂಲಧಾರಿ ದೇವಿಯ ಬೃಹತ್ ಮೂರ್ತಿಯಿದೆ.

ದೇಗುಲದ ಮುಂಭಾಗದ ಮೇಲ್ಛಾವಣೆಯ ಗೋಪುರದಲ್ಲಿ 3 ಕಮಾನುಗಳಿವೆ. ಮೊದಲ ಕಮಾನಿನಲ್ಲಿ ಸಿಂಹದ ಮೇಲೆ ಕುಳಿತಿರುವ ದೇವಿ ಚತುರ್ಭುಜೆಯಾಗಿದ್ದಾಳೆ. ಎಡಗೈಯಲ್ಲಿ ತ್ರಿಶೂಲ ಹೊಂದಿದ್ದಾಳೆ. ಬಲಗೈಯಲ್ಲಿ ಖಡ್ಗ ಹಾಗೂ ರುಂಡವನ್ನು ಹಿಡಿದಿದ್ದಾಳೆ.

ಈ ಗೋಪುರದ ಮಧ್ಯದ ಕಮಾನಿನಲ್ಲಿ ಶಿವ ಪಾರ್ವತಿ ಕುಟುಂಬ ಸಮೇತರಾಗಿರುವ ಶಿಲ್ಪಗಳಿವೆ. ಎಡ ಭಾಗದಲ್ಲಿ ಷಣ್ಮುಖ, ಬಲಬದಿಯಲ್ಲಿ ಗಣೇಶನ ವಿಗ್ರಹವಿದೆ.

ಕಡೇಚೂರಿನಲ್ಲಿ ದೊರೆತ ಶಾಸನಗಳು: ತ್ರಿಭುವನಮಲ್ಲ 6ನೇ ವಿಕ್ರಮಾದಿತ್ಯನ ಕಾಲದ ಶಾಸನವಾಗಿದ್ದು, 1094-98ರ ಅವಧಿಯ ಶಾಸನವೆಂದು ಹಿರಿಯ ಸಂಶೋಧಕ ಸೀತಾರಾಮ ಜಾಗಿರದಾರ ಅಭಿಪ್ರಾಯಪಡುತ್ತಾರೆ. ನಮಸ್ತುಂಗಶಿರಶ್ಚುಂಬಿ ಎಂದು ಪ್ರಾರಂಭವಾಗಿ ತಾವಿನೆಲೆ ರಾಜ್ಯಂಗೆಯ್ಯುತ್ತಿಮಿರೆ ಎಂದು ಕೊನೆಗೊಳ್ಳುತ್ತದೆ. ತಾವಿನೆಲೆ(ತಪತಿ ನದಿ) ಯಲ್ಲಿರುವಾಗ ಈ ಶಾಸನವನ್ನು ಕೆತ್ತಿಸಲಾಗಿದೆ. ಈ ಶಾಸನವು 10 ಸೆ.ಮೀ ಉದ್ದ, 10 ಸೆ.ಮೀ ಅಗಲ ಹಾಗೂ 4 ಇಂಚು ದಪ್ಪನೆಯ ಶಾಸನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT