ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣ ಬಿಸಿಲಿಗೆ ತತ್ತರಿಸಿದ ಸುರಪುರ: ಮತ್ತೊಂದೆಡೆ ಕೊರೊನಾ ಹಾವಳಿ

Last Updated 27 ಏಪ್ರಿಲ್ 2021, 3:53 IST
ಅಕ್ಷರ ಗಾತ್ರ

ಸುರಪುರ: ಕಳೆದ 15 ದಿನಗಳಿಂದ ನಗರದಲ್ಲಿ ಸೂರ್ಯದೇವ ರಣ ಭೀಕರ ಬಿಸಿಲು ನೀಡುತ್ತಿದ್ದಾನೆ. ಒಂದೆಡೆ ಬಿರು ಬಿಸಿಲು, ಮತ್ತೊಂದೆಡೆ ಕೊರೊನಾ ಅಬ್ಬರದಿಂದ ನಾಗರಿಕರು ತತ್ತರಿಸಿ ಹೋಗಿದ್ದಾರೆ.

ನಗರ ಏಳು ಸುತ್ತು ಗುಡ್ಡಗಳಿಂದ ಅವೃತವಾಗಿದೆ. ಬಿಸಿಲಿಗೆ ಕಾಯುವ ಕಲ್ಲು ಬಂಡೆಗಳು ಸಂಜೆವರೆಗೂ ಬಿಸಿಗಾಳಿಯನ್ನು ಸೂಸುತ್ತವೆ. ಬೆಳಿಗ್ಗೆಯಿಂದಲೆ ಜನರು ಬೆವರಿನ ಸ್ನಾನ ಮಾಡುತ್ತಿದ್ದಾರೆ. ನಿತ್ಯ 40ರಿಂದ 44 ಡಿಗ್ರಿವರೆಗೂ ತಾಪಮಾನ ದಾಖಲಾಗುತ್ತಿದೆ.

ಆರ್‌ಸಿಸಿ ಮನೆಗಳ ಛತ್ತು ಕಾಯ್ದು ಜನರು ಒದ್ದಾಡುವಂತೆ ಆಗಿದೆ. ಮನೆಯಲ್ಲಿನ ಸ್ಟೀಲ್ ಸಾಮಾನುಗಳು ಕಾಯುತ್ತಿವೆ. ವೃದ್ಧರ ಮತ್ತು ಮಕ್ಕಳ ಪಾಡು ದೇವರೇ ಬಲ್ಲ. ಫ್ಯಾನ್ ಗಾಳಿಯೂ ಬಿಸಿಯಾಗಿ ಬರುತ್ತಿದೆ.

ಬಿಸಿಲಿನ ಬೇಗೆಯಿಂದ ತಾತ್ಕಾಲಿಕ ಶಮನ ಪಡೆಯಲು ಜನರಿಗೆ ಈಗ ಎಳನೀರು, ತಂಪು ಪಾನೀಯ, ಐಸ್‍ಕ್ರೀಮ್ ಸಿಗುತ್ತಿಲ್ಲ. ಕೋವಿಡ್ ನಿಯಮಗಳು ಜಾರಿಯಲ್ಲಿರುವುದರಿಂದ ಈ ಅಂಗಡಿಗಳು ತೆರೆಯುತ್ತಿಲ್ಲ. ನಗರದಲ್ಲಿ ಸಾಕಷ್ಟು ಬಾವಿಗಳು ಇವೆ. ಈ ಎಲ್ಲ ಬಾವಿಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಯುವಕರು, ಮಕ್ಕಳು ಬಿಸಿಲ ಜಳದಿಂದ ಪಾರಾಗಲು ಈಜಾಡುವ ದೃಶ್ಯ ಕಂಡು ಬರುತ್ತಿದೆ.

ಬಿಸಿಲಿನ ತಾಪಕ್ಕೆ ಮಕ್ಕಳಿಗೆ, ಯುವಕರಿಗೆ ಜ್ವರ, ಬೇಧಿ ಇತರ ಕಾಯಿಲೆಗಳು ಕಂಡು ಬರುತ್ತಿವೆ. ಬಹುತೇಕ ಜನ ರಾತ್ರಿ ಸಮಯದಲ್ಲಿ ಮಾಳಿಗೆ ಮೇಲೆ ಮಲಗುತ್ತಿದ್ದಾರೆ. ಗಾಳಿ ಬೀಸುತ್ತಿಲ್ಲವಾದ್ದರಿಂದ ನಿದ್ದೆಯೂ ದೂರದ ಮಾತಾಗಿದೆ.

ಕೊರೊನಾ ಅಬ್ಬರವೂ ಜಾಸ್ತಿಯಾಗಿದೆ. ಚಿಕ್ಕದಾದ ಯಾದಗಿರಿ ಜಿಲ್ಲೆಯಲ್ಲಿ ಪ್ರತಿನಿತ್ಯ 100 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.
ಈ ಹೆದರಿಕೆಯೂ ನಗರದ ಜನತೆಯನ್ನು ಕಂಗೆಡಿಸಿದೆ.

ಶಾಲಾ, ಕಾಲೇಜುಗಳು ಬಂದ್ ಆಗಿರುವುದರಿಂದ ಮಕ್ಕಳು ಮನೆಯಲ್ಲೆ ಇದ್ದಾರೆ. ವ್ಯಾಪಾರ, ವಹಿವಾಟು ಸ್ಥಗಿತಗೊಂಡಿರುವುದರಿಂದ ವ್ಯಾಪಾರಿಗಳು ಮನೆಯಲ್ಲೆ ಬಿಡಾರ ಹೂಡಿದ್ದಾರೆ. ಇವರಿಗೆಲ್ಲ ಬಿಸಿಲಿಗೆ ಕೆಂಡದಂತೆ ಕಾಯುವ ಮನೆಯಲ್ಲಿ ಇರಲು ಮತ್ತು ಕೊರೊನಾ ಕಾರಣ ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ.

*
ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮನೆಯಿಂದ ಯಾರೂ ಹೊರಗೆ ಬರಬೇಡಿ. ಬಿಸಿಲು ಹೆಚ್ಚಿರುವುದರಿಂದ ಸನ್‍ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ. ಆದಷ್ಟು ತಂಪು ವಾತಾವರಣದಲ್ಲಿ ಇರಿ
- ಡಾ. ಮುಕುಂದ ಯನಗುಂಟಿ, ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT