ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ದೀಪಾವಳಿಗೆ ‘ಬೆಲೆ ಏರಿಕೆ’ ಬಿಸಿ

Last Updated 3 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಸುರಪುರ: ಬೆಳಕಿನ ಹಬ್ಬ ದೀಪಾವಳಿಗೆ ಬೆಲೆ ಏರಿಕೆ ಕತ್ತಲು ಬರಿಸಿದೆ. ಗುರುವಾರವೇ ಹಬ್ಬವಿದ್ದರೂ ಮಾರುಕಟ್ಟೆ ಅಷ್ಟೇನೂ ಜನ ಸಂದಣಿಯಿಂದ ಕೂಡಿಲ್ಲ.

ವ್ಯಾಪಾರಿಗಳು ಎರಡು ದಿನದಿಂದಲೇ ಹಣತೆ, ಕುಂಬಳಕಾಯಿ, ಹಣ್ಣು ಇತರ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿಕೊಂಡು ಮಾರುಕಟ್ಟೆಯಲ್ಲಿ ಗ್ರಾಹಕರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆ ಒಂದು ವಾರ ಮೊದಲೆ ವ್ಯಾಪಾರ, ವಹಿವಾಟಿ ಜೋರು ಪಡೆದುಕೊಳ್ಳುತ್ತಿತ್ತು. ಸಿದ್ದ ಉಡುಪು, ಬಟ್ಟೆ ಅಂಗಡಿ, ಆಕಾಶ ಬುಟ್ಟಿ, ಮದರಂಗಿ, ಪಟಾಕಿ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಆದರೆ ಈ ಬಾರಿ ಗ್ರಾಹಕರಿಲ್ಲದೆ ವ್ಯಾಪಾರ ಕಳೆ ಗುಂದಿದೆ.

ಬೆಲೆ ಏರಿಕೆಯೂ ಹಬ್ಬ ಕಳಾಹೀನವಾಗಲು ಕಾರಣ ಎನ್ನಲಾಗುತ್ತಿದೆ. ಕುಂಬಳಕಾಯಿ ಬೆಲೆ ಒಂದಕ್ಕೆ ₹100 ರಿಂದ 120 ಇದೆ. ಹೂವಿನ ದರ ₹30ಕ್ಕೆ ಮೊಳ, ಒಂದು ಹಾರಕ್ಕೆ ₹100 ನಿಗದಿ ಮಾಡಲಾಗಿದೆ.

ಹಣ್ಣಿನ ದರ ಸಾಮಾನ್ಯ ದಿನಗಳಿಗಿಂತ ದುಪ್ಪಟ್ಟು ಮಾಡಲಾಗಿದೆ. ಬಾಳೆಗೊನೆ, ತೆಂಗಿನ ಪರಕೆ ಬೆಲೆಯೂ ಗಗನಕ್ಕೇರಿದೆ. ಹೀಗಾಗಿ ಗ್ರಾಹಕರು ಖರೀದಿಸಲು ಹಿಂದೇಟು ಹಾಕುವಂತಾಗಿದೆ. ತೀರಾ ಅಗತ್ಯವಿದ್ದವಷ್ಟೆ ಕೊಂಡು ಸಂಕ್ಷಿಪ್ತ ಹಬ್ಬ ಅಚರಿಸಿದರಾಯಿತು ಎಂದು ನಾಗರಿಕರು ಮಾತಾಡಿಕೊಳ್ಳುತ್ತಿದ್ದಾರೆ.

ನಗರದಲ್ಲಿ ಗುರುವಾರ ಬೆಳಿಗ್ಗೆ ಆರತಿ, ಸಂಜೆ ಲಕ್ಷ್ಮಿ ಪೂಜೆ ಮಾಡಲಾಗುತ್ತಿದೆ. ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆಯನ್ನು ಪ್ರತಿ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಅಂಗಡಿಗಳಿಗೆ ಬಣ್ಣ, ಬಳಿದು ಸಿಂಗರಿಸಲಾಗುತ್ತಿತ್ತು. ಬಣ್ಣದ ಬೆಲೆಯೂ ಹೆಚ್ಚಾದ ಕಾರಣ ಬಹುತೇಕ ವ್ಯಾಪಾರಿಗಳು ಕೇವಲ ಸುಣ್ಣವನ್ನು ಗೋಡೆಗೆ ಹಚ್ಚಿದ್ದಾರೆ.

ಮಣ್ಣಿನ ಹಣತೆಯ ಬೆಲೆ ಮಾತ್ರ ಕಡಿಮೆ ಇದೆ. ₹10ಕ್ಕೆ 4 ಹಣತೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಣತೆ ಮಾರುವವರ ಸಂಖ್ಯೆಯೂ ಹೆಚ್ಚಾಗಿದೆ. ಪಿಓಪಿ ಹಣತೆಗಳು ಪೈಪೋಟಿಗೆ ಇಳಿದಿವೆ. ಇದರಿಂದ ಕುಂಬಾರನ ಜೇಬು ತುಂಬುತ್ತಿಲ್ಲ. ಆದರೂ ಗೃಹಿಣಿಯರೂ ತಮ್ಮ ಮನೆ, ಅಂಗಳವನ್ನು ಸ್ವಚ್ಛಗೊಳಿಸಿ, ಮನೆಯ ಮುಂದೆ ಹಣತೆ ಹಚ್ಚಿ ಹಬ್ಬಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

****

ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಇದ್ದರೂ ಕಷ್ಟ ಪಟ್ಟು ಬೆಳೆದ ರೈತನಿಗೆ ಮಾತ್ರ ಸಮರ್ಪಕ ಬೆಲೆ ಸಿಗುತ್ತಿಲ್ಲ. ಹಣ ದಲ್ಲಾಳಿ ಮತ್ತು ವ್ಯಾಪಾರಿಗಳ ಕೈ ಸೇರುತ್ತಿದೆ.

-ಹಣಮಂತ್ರಾಯ ಮಡಿವಾಳ, ರೈತ

****

ದೀಪಾವಳಿ ಸಡಗರದಿಂದ ಆಚರಿಸಬೇಕೆಂದರೆ ಬೆಲೆ ಏರಿಕೆ ಇದಕ್ಕೆ ಅನುವು ಮಾಡಿಕೊಳ್ಳುತ್ತಿಲ್ಲ. ಕಾರಣ ನಮ್ಮ ಇತಿಮಿತಿಯಲ್ಲಿ ಸಂಕ್ಷಿಪ್ತವಾಗಿ ಹಬ್ಬ ಮಾಡಲು ನಿರ್ಧರಿಸಿದ್ದೇವೆ.

-ಶರಣಪ್ಪ ಬಡಗಾ, ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT