ಭಾನುವಾರ, ಜುಲೈ 3, 2022
26 °C

ಸುರಪುರ: ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಕೊರೊನಾ ನಿಯಂತ್ರಣದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಸೇವೆ ಅವಿಸ್ಮರಣೀವಾಗಿದೆ. ಇದಕ್ಕೆ ಕೈ ಜೋಡಿಸಿ ಆಶಾ ಮತ್ತು ಅಂಗನವಾಡಿ ಸೇರಿದಂತೆ ಇತರೆ ಇಲಾಖೆಗಳ ಕೊರಾನಾ ವಾರಿಯರ್ಸ್‍ಗಳಿಗೆ ತಾಲ್ಲೂಕಿನ ಸಮಸ್ತ ಜನತೆ ಋಣಿಯಾಗಿದೆ’ ಎಂದು ಶಾಸಕ ರಾಜೂಗೌಡ ಹೇಳಿದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಶನಿವಾರ ಏರ್ಪಡಿಸಿದ್ದ ಕೋವಿಡ್-19 ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸರ್ಕಾರದ ನಿರ್ದೇಶನದಂತೆ ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ 360, ಆಶಾ ಕಾರ್ಯಕರ್ತೆಯರು 390, ಅಂಗನವಾಡಿ ಕಾರ್ಯಕರ್ತೆಯರು 928 ಸಿಬ್ಬಂದಿ ಸೇರಿ ಒಟ್ಟು 1,670 ಕೊರೊನಾ ವಾರಿಯರ್ಸ್‍ಗಳಿಗೆ ಲಸಿಕೆ ನೀಡಲಾಗುವುದು. ನಂತರ ಪೊಲೀಸ್, ಸೈನಿಕರು, ಕಂದಾಯ ಇಲಾಖೆ ಸೇರಿದಂತೆ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸಿದ ಇತರೆ ಇಲಾಖೆ ಸಿಬ್ಬಂದಿಗೂ ಲಸಿಕೆ ನೀಡಲಾಗುವುದು’ ಎಂದು ವಿವರಿಸಿದರು.

‘ಕೊರೊನಾ ತೊಲಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಶ್ರಮಿಸಿವೆ. ಪ್ರಧಾನಿ ನರೇಂದ್ರ ಮೋದಿಯವರ ಸಾರ್ಥಕ ಶ್ರಮದ ಫಲವಾಗಿ ಇಂದು ಲಸಿಕೆ ಲಭಿಸಿದೆ. ಲಸಿಕೆ ಕಂಡು ಹಿಡಿದು ಲೋಕಕ್ಕೆ ಸಮರ್ಪಿಸಿದ ಭಾರತೀಯ ಔಷಧಾಲಯದ ವೈದ್ಯ ವಿಜ್ಞಾನಿಗಳು ಮತ್ತು ಪ್ರಧಾನಿಯರನ್ನು ಅಭಿನಂದಿಸಬೇಕಾಗಿದೆ’ ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ ಮಾತನಾಡಿ, ‘ಬೇಡಿಕೆಗೆ ಅನುಗುಣವಾಗಿ ವ್ಯಾಕ್ಸಿನ್ ವಯಲ್ಸ್ ಸರಬರಾಜು ಆಗಿದೆ. ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ನಗರ ಆರೋಗ್ಯ ಕೇಂದ್ರ 2 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕೇಂದ್ರಕ್ಕೆ ತರಬೇತಿ ಪಡೆದ 6 ಜನರಂತೆ 12 ವ್ಯಾಕ್ಸಿನೇಟರ್ಸ್‌ಗಳನ್ನು ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸೋಮವಾರ ಹುಣಸಗಿ, ಬುಧವಾರ ಕಕ್ಕೇರಾ, ಶುಕ್ರವಾರ ಕೆಂಭಾವಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುವುದು. ನಂತರ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಮೊದಲು ಲಸಿಕೆ ಪಡೆದವರು 28 ದಿನಗಳ ನಂತರ ಎರಡನೆ ಡೋಸ್ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ಮೊದಲ ದಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 99 ಜನರಿಗೆ ಲಸಿಕೆ ನೀಡುವ ಗುರಿ ನೀಡಲಾಗಿತ್ತು. ಅದರಲ್ಲಿ 61 ಜನರಿಕೆ ಲಸಿಕೆ ನೀಡಲಾಗಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 79 ಜನರ ಗುರಿ ನೀಡಲಾಗಿತ್ತು. ಅದರಲ್ಲಿ 36 ಜನರಿಗೆ ಲಸಿಕೆ ನೀಡಲಾಗಿದೆ. ಯಾರಿಗೂ ಅಡ್ಡ ಪರಿಣಾಮ ಉಂಟಾಗಿಲ್ಲ. ಕೆಲವರು ಲಸಿಕೆ ತೆಗೆದುಕೊಳ್ಳಲು ಬರಲಿಲ್ಲ. ಮುಂದಿನ ನಿಗದಿ ದಿನದಂದು ಉಳಿದವರಿಗೂ ಲಸಿಕೆ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಿದ 200 ಖಾಸಗಿ ವೈದ್ಯರಿದ್ದು ಅವರಿಗೂ ಎರಡನೆ ಹಂತದಲ್ಲಿ ಲಸಿಕೆ ನೀಡಲಾಗುವುದು’ ಎಂದು ಹೇಳಿದರು.

ಲಸಿಕೆ ನೋಡಲ್ ಅಧಿಕಾರಿ ಡಾ.ಓಂ ಪ್ರಕಾಶ ಅಂಬೂರೆ, ವೈದ್ಯಾಧಿಕಾರಿಗಳಾದ ಹರ್ಷವರ್ಧನ ರಫುಗಾರ, ಶಫಿ ಉಜ್ಜಮ, ಖಾಜಾ ಹುಸೇನ, ಎಸ್.ಬಿಲ್ಲರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು