ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಬೆಳೆ ಜಲಾವೃತ, ಮುಳುಗಿದ ಸೇತುವೆಗಳು

ಅತಿವೃಷ್ಟಿಯಿಂದ ಅಪಾರ ಬೆಳೆ ನಾಶ: ರೈತ ಕಂಗಾಲು
Last Updated 14 ಅಕ್ಟೋಬರ್ 2020, 17:34 IST
ಅಕ್ಷರ ಗಾತ್ರ

ಸುರಪುರ: ಕಳೆದ ಮೂರು ದಿನಗಳಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಅನೇಕ ಆವಾಂತರ ಸೃಷ್ಟಿಸಿದೆ. ಹಳ್ಳಕೊಳ್ಳ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಸಣ್ಣ ಪುಟ್ಟ ಸೇತುವೆಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿ ಸಂಚಾರ ಕಡಿತಗೊಂಡಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ಕೆರೆ, ಕಾಲುವೆ, ಹಳ್ಳಕೊಳ್ಳಗಳ ನೀರು ಜಮೀನುಗಳಿಗೆ ನುಗ್ಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಹತ್ತಿ, ತೊಗರಿ, ಸಜ್ಜಿ, ಮೆಣಸಿನ ಕಾಯಿ, ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಕೊಯ್ಲಿನ ಹಂತಕ್ಕೆ ತಲುಪಿದ್ದ ಭತ್ತ ನೆಲಕ್ಕೆ ಉರುಳಿಬಿದ್ದಿದೆ. ಕೆಲಕಡೆ ಹತ್ತಿ ಕಾಯಿಗಳು (ಅರಳಿ) ಹೊಡೆದ್ದರಿಂದ ರೈತರು ಹತ್ತಿ ಬಿಡಿಸುವ ಸಿದ್ಧತೆಯಲ್ಲಿದ್ದರು. ಸಜ್ಜೆಸತ್ವ ಇಲ್ಲದೆ ನೆಲಕುರುಳಿದ್ದು ಮೊಳಕೆ ಹೊಡೆಯುತ್ತಿದೆ. ಕೆಲ ಕಡೆ ಹಳ್ಳ ಕೊಳ್ಳ ನಾಲೆಗಳ ನೀರು ಜಮೀನಿಗೆ ನುಗಿದ್ದು ಬೆಳೆಯೊಂದಿಗೆ ಹೊಲದ ಮಣ್ಣು ಕೊಚ್ಚಿ ಹೋಗಿದೆ.

‘ತಾಲ್ಲೂಕಿನಲ್ಲಿ ಒಟ್ಟು 4 ಸಾವಿರ ಎಕರೆಯಷ್ಟು ಬೆಳೆ ನಾಶವಾಗಿದೆ. ಈ ಕುರಿತು ಸರ್ವೆ ನಡೆದಿದ್ದು, ಎರಡು ಮೂರು ದಿನಗಳಲ್ಲಿ ನಷ್ಟದ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಕೃಷಿ ಅಧಿಕಾರಿ ಡಾ. ಭೀಮರಾಯ ನಾಯಕ ತಿಳಿಸಿದರು.

ನೆಲಕ್ಕುರುಳಿದ ಭತ್ತ: ಸುರಪುರ, ದೇವಾಪುರ, ಕಕ್ಕೇರಾ, ಕೆಂಭಾವಿ, ಕೊಡೇಕಲ್, ಹೆಗ್ಗಣದೊಡ್ಡಿ, ಬಂಡೊಳ್ಳಿ, ಅರಳಹಳ್ಳಿ, ಕೆಂಭಾವಿ, ಕಿರದಳ್ಳಿ, ತಿಪ್ಪನಟಗಿ, ಸಿದ್ದಾಪುರ, ತಳವಾರಗೇರಾ, ವಾಗಣಗೇರಾ, ಆಲ್ದಾಳ, ಮಂಗ್ಯಾಳ, ಹಾವಿನಾಳ, ನಾಗರಾಳ, ಹಂದ್ರಾಳ, ಪೇಠಾಅಮ್ಮಾಪುರ, ಕನ್ನೆಳ್ಳಿ, ಬೋನಾಳ, ಚಿಕ್ಕನಳ್ಳಿ ಸೇರಿದಂತೆ ಇತೆರೆಡೆ ಭತ್ತ ನೆಲಕ್ಕುರುಳಿದೆ.

ಕುಸಿದ ಮನೆಗಳು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸುರಪುರದ ಭೋವಿಗಲ್ಲಿ 2, ಹಸನಾಪುರದಲ್ಲಿ 2, ರತ್ತಾಳದಲ್ಲಿ 10ಕ್ಕಿಂತ ಹೆಚ್ಚು ಮನೆಗಳು ಕುಸಿದಿವೆ.

ಕಿತ್ತು ಹೋಗಿರುವ ಸೇತುವೆಗಳು: ಮಾವಿನಮಟ್ಟಿಯ ಚಿಗರಿಹಾಳದ ಸೇತುವೆಯ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದರಿಂದ ಹೆಗ್ಗಣದೊಡ್ಡಿ, ಮಂಗಳೂರು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಸಿದ್ದಾಪುರ ಹತ್ತಿರದ ಶೆಟಗೇರಾ ರಸ್ತೆಯ ಸೇತುವೆ ಕಿತ್ತು ಹೋಗಿದೆ. ದೇವಿಕೇರಾ ರಸ್ತೆಯ ಸೇತುವೆ ಸಂಪೂರ್ಣ ಕುಸಿಯುವ ಹಂತದಲ್ಲಿದೆ. ರಂಗಂಪೇಟೆಯ ಸೇತುವೆ ಕಾಂಕ್ರಿಟ್ ಕಿತ್ತು ಹೋಗಿ ಸಂಚಾರಕ್ಕೆ ತೊಂದರೆಯಾಗಿದೆ. ರತ್ತಾಳ ಗ್ರಾಮದ ರಸ್ತೆ ಮೂರು ಕಡೆ ಕಿತ್ತುಹೋಗಿ ಸಂಚಾರ ಬಂದ್ ಆಗಿದೆ. ತಾಲ್ಲೂಕಿನ ಇತೆರೆಡೆಯೂ ರಸ್ತೆಗಳು ಹಾಗೂ ಸೇತುವೆಗಳು ಕಿತ್ತು ಹೋಗಿರುವ ಸಾಧ್ಯತೆಯಿದೆ.

‘ಬೆಳೆ ನಾಶ ಮತ್ತು ಮನೆಗಳು ಬಿದ್ದಿರುವ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಸೇರಿ ಜಂಟಿ ಸರ್ವೆ ಮಾಡಿ ಎರಡು ದಿನಗಳಲ್ಲಿ ವರದಿ ನೀಡುವಂತೆ ತಹಶೀಲ್ದಾರ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರೈತರು ಮತ್ತು ಮನೆ ಕಳೆದುಕೊಂಡ ಬಡವರು ಚಿಂತಿಸುವ ಅಗತ್ಯವಿಲ್ಲ. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡಲಾಗುವುದು’ ಎಂದು ಶಾಸಕ ರಾಜೂಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT