ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿ: ಡಿಸಿ ಡಾ.ರಾಗಪ್ರಿಯಾ

ಬೆಡ್‌ಗಳ ಸಂಖ್ಯೆ ಹೆಚ್ಚಿಸಲು ವೈದ್ಯರಿಗೆ ಸೂಚನೆ
Last Updated 6 ಜೂನ್ 2021, 3:27 IST
ಅಕ್ಷರ ಗಾತ್ರ

ಯಾದಗಿರಿ: ಕೊರೊನಾ 3ನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರು ವೈದ್ಯರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನಾ 3ನೇ ಅಲೆಯು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಹಾಗೂ ಸಿದ್ಧತೆ ಮಾಡಿಕೊಳ್ಳಲು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಆಸ್ಪತ್ರೆಗಳಲ್ಲಿ ಅಗತ್ಯಕ್ಕಗನುಣವಾಗಿ ಬೆಡ್‌ಗಳು, ಆಮ್ಲಜನಕ ಬೆಡ್ ಮುಂತಾದವುಗಳನ್ನು ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ 3 ಲಕ್ಷಕ್ಕಿಂತ ಅಧಿಕ ಮಕ್ಕಳಿದ್ದು, ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ 100 ಆಮ್ಲಜನಕ ಹಾಸಿಗೆಗಳು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 200 ಆಮ್ಲಜನಕ ಹಾಸಿಗೆಗಳು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಮಕ್ಕಳ ಚಿಕಿತ್ಸೆಗಾಗಿ ಅತಿಅವಶ್ಯವಾಗಿ ಬೇಕಾಗಿರುವ ಯಂತ್ರೋಪಕರಣಗಳು ಹಾಗೂ ಔಷಧಿಗಳನ್ನು ಕಾಯ್ದಿರಿಸಿಕೊಳ್ಳಲು ಕಟ್ಟುನಿಟ್ಟಾಗಿ ಹೇಳಿದರು.

ಶಹಾಪುರ ಮತ್ತು ಸುರಪುರ ತಾಲ್ಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ ತಲಾ 50 ಹಾಸಿಗೆಗಳು ನಿರ್ವಹಣೆಯಲ್ಲಿದ್ದು, ಕೂಡಲೇ 100 ಹಾಸಿಗೆಗೆ ಹೆಚ್ಚಿಸಿಕೊಳ್ಳಲು ತಿಳಿಸಿದರು. ಹೆಚ್ಚುವರಿಯಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 50 ಸಾಮಾನ್ಯ ವಾರ್ಡ್‌ಗಳು ಮತ್ತು 20 ಆಕ್ಸಿಜನ್ ಬೆಡ್‌ಗಳನ್ನು ಸಿದ್ಧಪಡಿಸಿಕೊಳ್ಳಲು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ನಿರ್ಹಹಿಸುತ್ತಿರುವ ಶುಶ್ರೂಷಾಧಿಕಾರಿಗಳಿಗೆ ಕೋವಿಡ್-19 ರ ತರಬೇತಿ ಪಡೆಯಲು ಪ್ರಾದೇಶಿಕ ತರಬೇತಿ ಕೇಂದ್ರ ಕಲಬುರ್ಗಿ, ರಾಯಚೂರು, ಬೀದರ್‌ಗೆ ಕಳುಹಿಸಲು ಸಲಹೆ ನೀಡಿದರು.

ಆಸ್ಪತ್ರೆಗಳಲ್ಲಿರುವ ಎಲ್ಲಾ ವೈದ್ಯರು ಮಕ್ಕಳನ್ನು ಪೋಷಕರು ಚಿಕಿತ್ಸೆಗಾಗಿ ಕರೆ ತಂದಲ್ಲಿ ಹಿಂದೆ ಸರಿಯದೇ ಕೂಡಲೇ ಮಕ್ಕಳಿಗೆ ಚಿಕಿತ್ಸೆ ನೀಡಬೇಕು ಎಂದು ತಿಳಿ ಹೇಳಿದರು.

ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಕಾರ್ಯನಿರ್ಹಿಸುತ್ತಿರುವ 18 ಎಂ.ಬಿ.ಬಿ.ಎಸ್ ವೈದ್ಯರಿಗೆ ಕೋವಿಡ್-19ರ ತರಬೇತಿ ತರಬೇತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಅವರಿಗೆ ತರಬೇತಿ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳ ತಜ್ಞ ಡಾ.ಮಲ್ಲಿಕಾರ್ಜುಮ ಮಕ್ಕಳಿಗೆ ಅವಶ್ಯವಾಗಿ ಬೇಕಾಗುವ ಔಷಧಿ ಮತ್ತು ಉಪಕರಣಗಳ ವಿವರಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರಕರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಭಗವಂತ ಅನವಾರ್, ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ನೀಲಮ್ಮ ಎಸ್.ರೆಡ್ಡಿ, ಶಹಾಪುರ ತಾಲ್ಲೂಕು ಐಎಂಎ ಅಧ್ಯಕ್ಷ ಡಾ.ಸುದತ್ ದರ್ಶನಾಪುರ, ಶಹಾಪುರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ರಮೇಶ ಗುತ್ತೇದಾರ, ಯಾದಗಿರಿ ಲ್ಲೂಕು ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ, ಮಕ್ಕಳ ತಜ್ಞರಾದ ಡಾ.ವಿಜಯಕುಮಾರ, ಡಾ.ರವಿಕುಮಾರ, ಡಾ.ಪ್ರಶಾಂತ ಬಾಸುತ್ಕರ್, ಡಾ.ಬಸವರಾಜ ಬೊಂಬಾಯಿ, ಡಾ.ಸಚಿನ್, ಡಾ.ರಾಘವೇಂದ್ರ, ವೈದ್ಯಕೀಯ ತಜ್ಞ ಡಾ.ಸುನೀಲ್ ಇದ್ದರು.

***

ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಯೋಜನೆ ಅಡಿಯಲ್ಲಿ ಆಕ್ಸಿಜನ್ ಪ್ಲಾಂಟ್ ವ್ಯವಸ್ಥೆ ಮಾಡಿಕೊಳ್ಳಬೇಕು

-ಡಾ. ರಾಗಪ್ರಿಯಾ ಆರ್.ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT