ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಿ: ಬಸವರಾಜ ಶರಬೈ

ನರೇಗಾದಡಿ ಸಮಗ್ರ ಶಾಲಾ ಅಭಿವೃದ್ಧಿ ಕಾಮಗಾರಿ ಅನುಷ್ಠಾನ ಸಭೆ
Last Updated 21 ಮೇ 2022, 4:27 IST
ಅಕ್ಷರ ಗಾತ್ರ

ಯಾದಗಿರಿ: ಶೈಕ್ಷಣಿಕ ವರ್ಷ ಆರಂಭವಾಗಿದ್ದು, 5 ವರ್ಷ ಮೇಲ್ಪಟ್ಟ ಗ್ರಾಮೀಣ ಪ್ರದೇಶದ ಎಲ್ಲ ಮಕ್ಕಳು ಶಾಲೆಗೆ ದಾಖಲಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ ಅವರು ಸಿಆರ್‌ಪಿ ಅವರಿಗೆ ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಅಂಗನವಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ನರೇಗಾ ಯೋಜನೆಯಡಿ ಸಮಗ್ರ ಶಾಲಾ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಹಾಗೂ ದೇಶಿಯ ಕ್ರೀಡಾ ಅಂಕಣ ನಿರ್ಮಾಣ ಮಾಡುವ ಕಾರಣ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ), ಶಾಲಾ ಮುಖ್ಯ ಗುರುಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದರು.

ಶಾಲೆಗಳಲ್ಲಿ ತರಗತಿವಾರು ನೋಂದಣಿಯಾದ, ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಎಷ್ಟು ಎಂದು ಗ್ರಾಮ ಪಂಚಾಯಿತಿಗೆ ವರದಿ ನೀಡಿ, ಶಾಲಾ ಮಕ್ಕಳ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.

ಕೆಲವು ಶಾಲೆಗಳಿಗೆ ಅಗತ್ಯಕ್ಕೆ ಅನುಸಾರ ಯುವಜನ ಮತ್ತು ಕ್ರೀಡಾ ಇಲಾಖೆಯು ಗ್ರಾಮೀಣ ಭಾಗದ ಶಾಲಾ ಮಕ್ಕಳಲ್ಲಿ ಕ್ರೀಡಾ ಮನೋಭಾವ ಹೆಚ್ಚಿಸಲು ಪೂರಕವಾದ ಹಲವು ಕ್ರೀಡಾ ಸಾಮಗ್ರಿಗಳನ್ನು ಕೊಡಿಸಲು ಕ್ರಮ ವಹಿಸಲಾಗುತ್ತದೆ. ಎಲ್ಲ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಮೂರು ತಿಂಗಳಲ್ಲಿ ನಿಗದಿತ ಗುರಿ ಸಾಧಿಸಲಾಗುತ್ತದೆ ಎಂದರು.

ಪ್ರತಿ ಶಾಲೆಗಳಲ್ಲಿ ಇರುವ ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಚಟುವಟಿಕೆ ಕೋಣೆ ಹಾಗೂ ಶಾಲಾ ಗ್ರಂಥಾಲಯಗಳು ಮಕ್ಕಳಿಗೆ ಸದುಪಯೋಗವಾಗಬೇಕು. ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸಲು ಶಾಲೆಗಳಲ್ಲಿ ಲಭ್ಯವಿರುವ ಹೆಚ್ಚುವರಿ ಕೋಣೆಯನ್ನು ವ್ಯಾಸಂಗ ಕೋಣೆಯಾಗಿ ಪರಿವತಿಸಬೇಕು. ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುವ ಜೊತೆಗೆ ಮಕ್ಕಳಲ್ಲಿ ವೈಚಾರಿಕ ಮನೋಭಾವ ಬೆಳೆಯುವಂತೆ ಮಾಡಲು ಶಾಲಾ ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಮಕ್ಕಳ ಸಮಗ್ರ ಶೈಕ್ಷಣಿಕ ಸಾಮರ್ಥ್ಯದ ಅಭಿವೃದ್ಧಿ ದೃಷ್ಟಿಯಿಂದ ನಿಗದಿತ ಅವಧಿಯಲ್ಲಿ ಕಾಲಕಾಲಕ್ಕೆ ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್‌ಡಿಎಂಸಿ)ಸಭೆ ಹಾಗೂ ವಿದ್ಯಾರ್ಥಿಗಳ ಪಾಲಕರ ಸಭೆ ಕರೆದು ಮಕ್ಕಳ ಶೈಕ್ಷಣಿಕ ಸಮಸ್ಯೆಗಳ ಕುರಿತು ಚರ್ಚಿಸಿ, ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ನಡಾವಳಿ ಪುಸ್ತಕದಲ್ಲಿ ನಮೂದಿಸುವಂತೆ ತಿಳಿಸಿದರು.

ಈ ವೇಳೆ ಯಾದಗಿರಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಪಂಚಾಯತ್‌ ರಾಜ್) ಖಾಲಿದ್ ಅಹ್ಮದ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಚ್.ಸೋಮಪ್ಪ, ಮಹಾತ್ಮ ಗಾಂಧಿ ನರೇಗಾ ಯೋಜನೆ ವಿಷಯ ನಿರ್ವಾಹಕ ಅನಸರ ಪಟೇಲ್, ಶಶಿಧರ ಸ್ವಾಮಿ, ತಾಂತ್ರಿಕ ಸಂಯೋಜಕ ಶರಣಪ್ಪ ಬಂದರವಾಡ, ತಾಂತ್ರಿಕ ಸಹಾಯಕರಾದ ಸಂಗಾರೆಡ್ಡಿ, ವಿಜಯಕುಮಾರ ಪತ್ತಾರ, ನಿಂಗಪ್ಪ, ಸಮೂಹ ಸಂಪನ್ಮೂಲ ವ್ಯಕ್ತಿಗಳು (ಸಿಆರ್‌ಪಿ), ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಹಾಗೂ ನರೇಗಾ ಐಇಸಿ ಸಂಯೋಜಕ ಬಸಪ್ಪ ಹೋತಪೇಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT