ವಡಗೇರಾ: ತಾಲ್ಲೂಕಿನ ರೈತರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹರಿಸಿಕೊಳ್ಳುತ್ತಿದ್ದಾರೆ.
ಪಟ್ಟಣದ ಯುವ ರೈತ ಕಾಶಿನಾಥ್ ಕಲ್ಲಪ್ಪನೂರ ತಮ್ಮ ಎರಡು ಎಕರೆ ಹತ್ತಿ, ತೊಗರಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹರಿಸಿಕೊಂಡಿದ್ದಾರೆ. ಬೆಳೆ ಕೈಗೆ ಬರಬೇಕೆನ್ನುವಷ್ಟರಲ್ಲಿ ಮಳೆ ಕೈಕೊಟ್ಟ ಕಾರಣ ಮತ್ತು ವಡಗೇರಾ ಕೊನೆ ಭಾಗದ ಕಾಲುವೆಗಳಿಗೆ ನೀರು ಬಾರದೆ ಇರುವುದರಿಂದ ರೈತರು ಕಂಗಾಲಾಗಿದ್ದಾರೆ.
‘ಬೆಳೆಗಳು ಒಣಗಿ ಹೋಗುತ್ತಿರುವುದನ್ನು ಕಂಡು ರೈತರು ಸಾಲ ಮಾಡಿ ಹೊಲಗಳಿಗೆ ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದಾರೆ. ‘ಈಗಾಗಲೇ ರೈತರು ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ ಕಳೆ ತೆಗೆಸುವುದು ಇನ್ನಿತರ ಕೆಲಸಗಳಿಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಹೈರಾಣಾಗಿದ್ದಾರೆ' ಎಂದು ತಾಲ್ಲೂಕು ರಾಜ್ಯ ರೈತ ಸಂಘ ಹಸಿರು ಸೇನೆಯ ವಾಸುದೇವ ಮೇಟಿ ಬಣದ ತಾಲ್ಲೂಕು ಅಧ್ಯಕ್ಷ ವಿದ್ಯಾಧರ್ ಬಿ.ಜಾಕಾ ಹೇಳಿದರು. ರೈತ ಸಂಘದ ಪದಾಧಿಕಾರಿಗಳು ರೈತನ ಹೊಲಕ್ಕೆ ಭೇಟಿ ನೀಡಿ ಮಾತನಾಡಿದರು.
‘ಒಂದು ಎಕರೆಗೆ ₹20ಸಾವಿರ ಖರ್ಚಾಗುತ್ತಿದೆ. ಕಾಲುವೆ ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಿದ್ದರೆ ರೈತರು ಇಷ್ಟೊಂದು ಕಷ್ಟ ಪಡಬೇಕಾಗಿರಲಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಸರ್ಕಾರ ವಡಗೇರಾ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಹೆಸರಿಗಿಷ್ಟೇ ಘೋಷಣೆ ಮಾಡಿದೆ. ಇಲ್ಲಿಯವರೆಗೆ ಯಾವುದೇ ರೀತಿಯಾದ ಬರ ಪರಿಹಾರದ ಕಾರ್ಯ ಆರಂಭವಾಗಿಲ್ಲ' ಎಂದು ದೂರಿದರು.
ಈ ವೇಳೆ ಮಹಮ್ಮದ್ ಖುರೇಶಿ, ಕೃಷ್ಣಾ ಟೇಲರ್, ವೆಂಕಟೇಶ್ ಇಟಿಗಿ, ನಿಂಗಪ್ಪ ಕುರ್ಕಳಿ, ಹಳ್ಳೆಪ್ಪ ತೇಜೇರ, ಮಲ್ಲು ನಾಟೇಕಾರ, ಮರಲಿಂಗ ಗೋನಾಲ, ತಿರುಮಲ ಮುಸ್ತಾಜೀರ್, ಮಲ್ಲು ಬಾಡದ, ರಾಘವೇಂದ್ರ ಗುತ್ತೇದಾರ, ನಾಗರಾಜ ಸ್ವಾಮಿ, ಸುರೇಶ್ ಬಾಡದ, ಚಂದ್ರು ಕಾಡಂನೂರ, ದೇವು ಜಡಿ, ಸಿದ್ದಪ್ಪ ಕಲ್ಲಪ್ಪನೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.