ಬಿಜೆಪಿ ಸರ್ಕಾರ ಎಲ್ಲ ವಿಧದಲ್ಲೂ ಭ್ರಷ್ಟಾಚಾರದಲ್ಲಿ ಮುಳುಗಿದೆ: ಸಿದ್ದರಾಮಯ್ಯ

ಯಾದಗಿರಿ: ‘ಬಿಜೆಪಿ ಸರ್ಕಾರ ಎಲ್ಲ ವಿಧದಲ್ಲೂ ಭ್ರಷ್ಟಾಚಾರದಲ್ಲಿ ಮುಳುಗಿದೆ. ಫೆ.3ರಿಂದ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಿಂದ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಮಾಡಲಿದ್ದು, ಬಿಜೆಪಿ ಪಾಪದ ಪುರಾಣ ಬಿಚ್ಚಡಲಿದ್ದೇವೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ವನಕೇರಿ ಲೇಔಟ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರಜಾಧ್ವನಿಯಾತ್ರೆ ನಡೆಯಲಿದೆ. ಕಲ್ಯಾಣ ಕರ್ನಾಟಕ ಭಾಗ ಹಾಗೂ ಕಿತ್ತೂರು ಕರ್ನಾಟಕದಿಂದ ನಾನು, ಹಳೆ ಮೈಸೂರು ಭಾಗದಲ್ಲಿ ಡಿ.ಕೆ.ಶಿವಕುಮಾರ ಸಂಚರಿಸಿ ಬಿಜೆಪಿ ಸರ್ಕಾರದ ಕರ್ಮಕಾಂಡಗಳನ್ನು ಬಿಚ್ಚಿಡಲಿದ್ದೇವೆ. ಬಿಜೆಪಿ ಸರ್ಕಾರ ಚಾರ್ಜ್‌ಶಿಟ್, ಪಾಪದ ಪುರಾಣವನ್ನು ಜನರಿಗೆ ತಲುಪಿಸಲಿದ್ದೇವೆ’ ಎಂದು ಹೇಳಿದರು.
‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ 200ರಿಂದ 300 ಮನೆ ಕೊಟ್ಟಿದ್ದೇವೆ. ಒಂದು ವರ್ಷದಲ್ಲಿ 3 ಲಕ್ಷ ಮನೆ, 5 ವರ್ಷಗಳಲ್ಲಿ 15 ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೇವೆ. ಆದರೆ, ಬಿಜೆಪಿ ಸರ್ಕಾರ ಬಂದ ಮೇಲೆ ಅನುದಾನವೂ ಬಿಡುಗಡೆ ಮಾಡದೇ ಒಂದು ಮನೆಯನ್ನು ನಿರ್ಮಿಸಿಲ್ಲ’ ಎಂದು ಹರಿಹಾಯ್ದರು.
‘ಈ ಭಾಗದಲ್ಲಿ ಬೆಳೆಯುವ ಒಂದೂವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಗೆ ಹಾಳಾಗಿದೆ. ಆದರೆ, ಹೆಕ್ಟೇರ್‌ಗೆ ಕೇವಲ ₹10 ಸಾವಿರ ಘೋಷಣೆ ಮಾಡಿದ್ದಾರೆ. ಹತ್ತಿ ಬೆಳೆಗೆ ಬೆಲೆ ಇಲ್ಲ. ಈ ಸರ್ಕಾರದಿಂದ ರೈತರಿಗೆ ಸಾಲ ಹೆಚ್ಚಾಗಿದೆ ಹೊರತು ಯಾವುದೇ ಆದಾಯ ಹೆಚ್ಚಾಗಿಲ್ಲ. ನಮ್ಮ ಸರ್ಕಾರ ಬಂದರೆ ಹೊಸ ಕೈಗಾರಿಕೆ ನೀತಿ ಜಾರಿಗೆ ತಂದು 1 ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
‘ನಾರಾಯಣಪುರ ಎಡದಂಡೆ ಕಾಲುವೆ ಸ್ಕಾಡಾ ಗೇಟ್ ಅಳವಡಿಸಲು ₹3,500 ಕೋಟಿ ಖರ್ಚು ಮಾಡಿ 2014 ರಿಂದ ಪ್ರಾರಂಭಿಸಿ 2017 ರಲ್ಲಿ ಮುಗಿಸಿದ್ದೇವೆ. ಆದರೆ, ಉದ್ಘಾಟನೆ ಮಾಡಿದ್ದು ಮಾತ್ರ ಮೋದಿ. ಪ್ರಧಾನಿ ಕಾರ್ಯಕ್ರಮಕ್ಕೆ ದುಡ್ಡುಕೊಟ್ಟು ಕರೆಸಲಾಗಿದೆ. ಸ್ಥಳೀಯ ಬಿಜೆಪಿ ಮುಖಂಡರ ಮುಖಗಳು ಅಳಿಸಿಹೋಗಿವೆ. ಹೀಗಾಗಿ ಕೇಂದ್ರದವರನ್ನು ಕರೆಸುತ್ತಿದ್ದಾರೆ. ಮೋದಿಯೇ ಇವರ ಬಂಡವಾಳವಾಗಿದೆ’ ಎಂದು ಮೂದಿಲಿಸಿದರು.
‘ಬಿಜೆಪಿ ಸರ್ಕಾರವನ್ನು ಕಿತ್ತೆಸೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ. ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಜನರು ನಿರೀಕ್ಷೆಗೂ ಮೀರಿ ಸ್ಪಂದನೆ ನೀಡಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಾನು ಸಿಎಂ ಆದಾಗ ಜನರಿಗೆ ನೀಡಿದ 165 ಭರವಸೆಯಲ್ಲಿ 158 ಭರವಸೆ ನೀಡಿ ಹೆಚ್ಚುವರಿ 30 ಕಾರ್ಯಕ್ರಮಗಳನ್ನು ನೀಡಿದ್ದೇವೆ. ಪ್ರಮಾಣವಚನ ಸ್ವೀಕರಿಸಿ ಒಂದು ತಾಸಿನಲ್ಲಿಯೇ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಕ್ಷೀರಧಾರೆ ಹಾಗೂ ಸಾಲಮನ್ನಾದಂತ ಭರವಸೆಗಳನ್ನು ಈಡೇರಿಸಿದ್ದೇವೆ. ಈಗ ನೀಡುತ್ತಿರುವ ಗೃಹ ಭಾಗ್ಯ ಹಾಗೂ ಗೃಹ ಜ್ಯೋತಿ ಯೋಜನೆಗಳನ್ನು ಖಂಡಿತವಾಗಿ ಜಾರಿ ಮಾಡುತ್ತೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಪ್ರತಿಕುಟುಂಬಕ್ಕೆ 10 ಕೆಜಿ ಉಚಿತ ಅಕ್ಕಿ ನೀಡಲಿದ್ದೇವೆ’ ಎಂದು ಸಿದ್ದರಾಮಯ್ಯ ಹೇಳಿದರು.
ಈ ವೇಳೆ ವಿಧಾನಪರಿಷತ್ ವಿರೋಧ ಪಕ್ಷದನಾಯಕ ಬಿ.ಕೆ.ಹರಿಪ್ರಸಾದ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ, ಪ್ರಿಯಾಂಕ್ ಖರ್ಗೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ, ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್, ಮಾಜಿ ಸಚಿವ ಶರಣಪ್ರಕಾಶ ಪಾಟೀಲ, ಮಾಜಿ ಶಾಸಕರಾದ ವೆಂಕಟಪ್ಪ ನಾಯಕ, ಶರಣಪ್ಪ ಮಟ್ಟೂರು, ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಅಲ್ಲಮಪ್ರಭು ಪಾಟೀಲ, ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಎ.ವಸಂತಕುಮಾರ, ಮರಿಗೌಡ ಹುಲಕಲ್, ಡಾ.ಭೀಮಣ್ಣ ಮೇಟಿ, ಡಾ. ಶರಣಬಸವಪ್ಪ ಕಾಮರೆಡ್ಡಿ, ಸತೀಶ ಕಂದಕೂರು, ಶರಣು ಮೋದಿ, ಸುದರ್ಶನ ನಾಯಕ, ವಿಶ್ವನಾಥ ನೀಲಹಳ್ಳಿ, ಮಹಿಪಾಲರೆಡ್ಡಿ ಹತ್ತಿಕುಣಿ, ಮರೆಪ್ಪ ಬಿಳ್ಹಾರ, ಮಾಣಿಕರೆಡ್ಡಿ ಕುರಕುಂದಿ, ಮಂಜುಳಾ ಗೂಳಿ, ಸಿದ್ದಲಿಂಗರೆಡ್ಡಿ ಉಳ್ಳೆಸೂಗೂರು, ಹನುಮೇಗೌಡ ಮರಕಲ್, ಚಿದಾನಂದಪ್ಪ ಕಾಳಬೆಳಗುಂದಿ, ಲಾಯಕ್ ಹುಸೇನ ಬಾದಲ್, ಎ.ಸಿ. ಕಾಡ್ಲೂರು, ರಾಘವೇಂದ್ರ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.
****
ನೂತನ ಅಧ್ಯಕ್ಷ ಪದಗ್ರಹಣ
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸರೆಡ್ಡಿ ಅನಪುರ ಇದೇ ವೇಳೆ ಪದಗ್ರಹಣ ಮಾಡಿದರು. ಕಳೆದ 12 ವರ್ಷಗಳಿಂದ ಡಿಸಿಸಿ ಅಧ್ಯಕ್ಷರಾಗಿ ಮರಿಗೌಡ ಹುಲಕಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕಾಂಗ್ರೆಸ್ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು.
‘ನಮ್ಮ ಯೋಜನೆ, ಮೋದಿ ಉದ್ಘಾಟನೆ’
‘ಈಚೆಗೆ ಜಿಲ್ಲೆಗೆ ಬಂದಿದ್ದ ಪ್ರಧಾನಿ ಮೋದಿ ಕಾಂಗ್ರೆಸ್ ಸರ್ಕಾರದಿಂದ ಅನುಷ್ಠಾನ ಮಾಡಿದ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
‘ಲಂಬಾಣಿ ಸಮುದಾಯದ ಮನೆಗಳಿಗೆ ಯಾವುದೇ ದಾಖಲಾತಿಗಳು ಇರಲಿಲ್ಲ. 2013 ರಲ್ಲಿ ನಾವು ಅಧಿಕಾಕ್ಕೆ ಬಂದ ಮೇಲೆ ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ನರಸಿಂಹಯ್ಯ ಅವರ ವರದಿಯನ್ನು ಆಧಿರಿಸಿ ಹೀರಾನಾಯ್ಕ ನೋಡಲ್ ಅಧಿಕಾರಿಯಾಗಿ ಸರ್ಕಾರಕ್ಕೆ ಸಲ್ಲಿಸಿದ ವರದಿ ಆಧಾರದ ಮೇಲೆ ನಮ್ಮ ಸರ್ಕಾರ ಕಂದಾಯ ಗ್ರಾಮಗಳನ್ನಾಗಿ ಮಾಡಲು ಎಲ್ಲ ಕ್ರಮ ಕೈಗೊಂಡಿತ್ತು. ಆಗ ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದಾಗ ಭೂಸುಧಾರಣೆ ಕಾಯ್ದೆಗೆ ವಾಸಿಸುವವನೇ ಒಡೆಯ ಎನ್ನುವ ತಿದ್ದುಪಡಿ ಮಾಡಿದ್ದೆವು. ಅಡುಗೆ ಮಾಡಿದ್ದು ನಾವು; ಮೋದಿ ಮಾತ್ರ ಊಟ ಬಡಿಸಿ ಹೋಗಿದ್ದಾರೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
‘ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿ‘
‘ಕಾಂಗ್ರೆಸ್‌ನಿಂದ ಹಲವರು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದು, ಯಾರೇ ಅಭ್ಯರ್ಥಿ ಆಗಲಿ ಅವರನ್ನು ಗೆಲ್ಲಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಎಲ್ಲ 41 ಕ್ಷೇತ್ರಗಳಲ್ಲಿ ಗೆಲ್ಲಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೌರವ ಸಲ್ಲಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮನವಿ ಮಾಡಿದರು.
ನಗರದ ವನಕೇರಿ ಲೇಔಟ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಲ್ಯಾಣ ಕರ್ನಾಟಕ ಭಾಗಕ್ಕೆ 10 ಪ್ರಮುಖ ಕೊಡುಗೆಗಳನ್ನು ಜಾರಿಗೆ ಮಾಡಲು ಯೋಜಿಸಿದ್ದೇವೆ. ಕೇಂದ್ರದ ಆಗಿನ ಬಿಜೆಪಿ ಸರ್ಕಾರ ಈ ಭಾಗಕ್ಕೆ 371 (ಜೆ) ಜಾರಿಗೆ ತರಲು ಆಗುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಆದರೆ, ನಾವು ಅದನ್ನು ಜಾರಿಗೆ ತಂದಿದ್ದೇವೆ’ ಎಂದರು
‘ಕಾಂಗ್ರೆಸ್ ಅಧಿಕಾರದಲ್ಲಿ ಯಾವ ಅಭಿವೃದ್ದಿ ಆಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಜಿಲ್ಲೆಗೆ ಬಂದಾಗ ಹೇಳಿದ್ದಾರೆ. ನಮ್ಮಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರು ಈ ಭಾಗ ಹಿಂದುಳಿದಿದ್ದರಿಂದ ಶೈಕ್ಷಣಿಕ ಹಾಗೂ ಔದ್ಯೋಗಿಕ ಅಭಿವೃದ್ದಿಗಾಗಿ ಕಲಂ 371 (ಜೆ) ಜಾರಿಗೆ ತಂದಿದ್ದಾರೆ. ಕಲಬುರಗಿಯಲ್ಲಿ ಇಎಸ್‌ಐ ಆಸ್ಪತ್ರೆ, ನಾರಾಯಣ ಹೃದಯಾಲಯ ಆಸ್ಪತ್ರೆ ಬಂದಿದೆ. ಅದು ಕಾಂಗ್ರೆಸ್ ಕೊಡುಗೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಈ ಭಾಗಕ್ಕೆ ಏನು ಮಾಡಿದ್ದೀರಿ’ ಎಂದು ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ ಎಲ್ಲವನ್ನು ಕೊಟ್ಟಿದೆ. ಕಾಂಗ್ರೆಸ್ ಈ ದೇಶದ ಶಕ್ತಿ. 100 ಪದವಿ ಕಾಲೇಜು ಆರಂಭ ಮಾಡುತ್ತೇವೆ. ನಾವೆಲ್ಲ ಒಂದೇ. ಹಿಂದೂ, ಮುಸ್ಲಿಂ, ಬೇಧ ಭಾವವಿಲ್ಲ. ಬಿಜೆಪಿಯವರು ಯಾವಾಗಲೂ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಕಾಂಗ್ರೆಸ್ ಈ ದೇಶಕ್ಕೆ ಹಲವಾರು ಕೊಡುಗೆ ನೀಡಿದೆ. ಆಣೆಕಟ್ಟು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ದೇಶದ ಸುಭದ್ರತೆಗೆ ಆದ್ಯತೆ ನೀಡಿದೆ’ ಎಂದರು.
‘ಕಾಂಗ್ರೆಸ್ ಅಧಿಕಾರಿಕ್ಕೆ ಬಂದರೆ ಪ್ರತಿ ತಿಂಗಳು ₹2,000 ಕೊಡುವ ಹಾಗೂ ಪ್ರತಿಮನೆಗೆ 200 ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದೇವೆ.ನಮ್ಮ ಸರ್ಕಾರ ಬಂದಾಗ ಪ್ರತಿ ಕುಡುಂಬಕ್ಕೆ ಹತ್ತು ಕೇಜಿ ಉಚಿತ ಅಕ್ಕಿ ನೀಡುತ್ತೇವೆ’ ಎಂದರು.
ಎಐಸಿಸಿ ಕಾರ್ಯದರ್ಶಿ ಹಾಗೂ ಕಲ್ಯಾಣ ಕರ್ನಾಟಕ ಉಸ್ತುವಾರಿ ಶ್ರೀಧರಬಾಬು ಮಾತನಾಡಿ, ಕೇಂದ್ರದ ಮೋದಿ ಸರ್ಕಾರ ಯುವಕರಿಗೆ ಉದ್ಯೋಗ ನೀಡದೆ ಮೋಸ ಮಾಡಿದೆ. ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ರೈತರು ಬೆಂಬಲ ಬೆಲೆ ಕೇಳುತ್ತಿದ್ದಾರೆ. ರೈತರ ಯಾವ ಬೇಡಿಕೆಗಳನ್ನು ಕೇಂದ್ರದ ಸರ್ಕಾರ ಈಡೇರಿಸಿಲ್ಲ. ಕಾಂಗ್ರೆಸ್ ಸರ್ಕಾರ ಕಡೆವಲು ಪ್ರಜಾತಂತ್ರ ವಿರೋಧ ನೀತಿ ಅನುಸರಿಸಿದ ಬಿಜೆಪಿ, ಶಾಸಕರನ್ನು ಖರೀದಿ ಮಾಡುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ವಿರೋಧಪಕ್ಷದನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ಶಾಸಕ ಶರಣಬಸಪ್ಪ ದರ್ಶನಾಪುರ, ಮುಖಂಡ ಡಾ.ಭೀಮಣ್ಣ ಮೇಟಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ದಿ ಕಾರ್ಯಗಳು ನಿಂತುಹೋಗಿದ್ದು, ಕೇವಲ ಧರ್ಮದ ಆಧಾರದ ಮೇಲೆ ರಾಜಕಾರಣ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಸುಳ್ಳು ಭರವಸೆಗಳಿಗೆ ಕಿವಿಗೊಡದೇ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಮುಂಬರುವ ವಿಧಾನಸಭೆ ಚುನಾವಣೆ ಮಹತ್ವದಾಗಿದೆ. ಇಡೀ ದೇಶವೇ ಈಕಡೆ ನೋಡುತ್ತಿದೆ. ಈ ಚುನಾವಣೆ ದೇಶದಲ್ಲಿ ಮುಂಬರುವ ಎಲ್ಲಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.