ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಿಂಥಣಿ ಮೌನೇಶ್ವರ ರಥೋತ್ಸವ ಇಂದು

ಕಳ್ಳತನ ತಡೆಗೆ ವಿಶೇಷ ತಂಡ ನಿಯೋಜನೆ; ಮದ್ಯ ಮಾರಾಟಕ್ಕೆ ಕಡಿವಾಣ
ಮಹಾಂತೇಶ ಸಿ.ಹೊಗರಿ
Published 23 ಫೆಬ್ರುವರಿ 2024, 4:44 IST
Last Updated 23 ಫೆಬ್ರುವರಿ 2024, 4:44 IST
ಅಕ್ಷರ ಗಾತ್ರ

ಕಕ್ಕೇರಾ: ತಿಂಥಣಿಯ ಐತಿಹಾಸಿಕ ಮೌನೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರುವರಿ 23ರಂದು ಸಂಜೆ 5 ಗಂಟೆಗೆ ರಥೋತ್ಸವ ಜರುಗಲಿದೆ.

ಗುರುವಾರ ಸುಕ್ಷೇತ್ರ ತಿಂಥಣಿಯ ಮೌನೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ವಿಶೇಷವಾಗಿ ಗುಹೆಯಿಂದ ಹೊರಗೆ ತಂದ ಮೌನೇಶ್ವರರ ಮೂರ್ತಿ ದರ್ಶನ ಪಡೆದು ಪುನೀತರಾದರು.

ಫೆ.23 ಮತ್ತು 24ರಂದು ನಡೆಯುವ ಜಾತ್ರೋತ್ಸವಕ್ಕೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸಕಲ ಸಿದ್ಧತಾ ಕ್ರಮ ಕೈಗೊಂಡಿದೆ.

‘ಭಕ್ತರು ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಜಾತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಪಿಐ, ಪಿಎಸ್ಐ ನೇತೃತ್ವದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪಿಕ್ ಪಾಕೆಟ್‌ ಹಾಗೂ ಸರಗಳವು ತಡೆಯುವ ಸಲುವಾಗಿ ವಿಶೇಷ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ. ದೇವಸ್ಥಾನದ ಒಳ-ಹೊರಗಿನ ಸುತ್ತಮುತ್ತ, ಬಸ್ ತಂಗುದಾಣ, ವಾಲ್ಮೀಕಿ ವೃತ್ತ, ಚೌಡಯ್ಯವೃತ್ತ, ನದಿತೀರ, ಕೈಲಾಸಕಟ್ಟೆ ರಥ ಹಾಗೂ ಇನ್ನಿತರ ಪ್ರದೇಶಗಳಲ್ಲಿ 16 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಳ್ಳತನ ಮಾಡುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಾಹನ ನಿಲುಗಡೆಗೆ ವ್ಯವಸ್ಥೆ:

ಜಾತ್ರೆಗೆ ಬ್ರಿಜ್ ಮಾರ್ಗವಾಗಿ ಬರುವ ಕ್ರೂಸರ್, ದ್ವಿಚಕ್ರ ವಾಹನಗಳ ನಿಲುಗಡೆಗೆ ಸರ್ಕಾರಿ ಪ್ರೌಢಶಾಲಾ ಆವರಣ, ಸುರಪೂರ ಮಾರ್ಗದಿಂದ ಬರುವ ವಾಹನಗಳಿಗೆ ಜಹಾಗೀರದಾರ ಜಮೀನಿನಲ್ಲಿ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ವಿಶೇಷ ಸಾರಿಗೆ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಾತ್ರೆಗೆ ಬರುವ ಭಕ್ತರಿಗೆ ಧೂಳಿನಿಂದ ಮುಕ್ತಿಗೊಳಿಸಲು ನಾಲ್ಕು ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ.

ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ, ವಾಹನಗಳ ಮೂಲಕ ತಿಂಥಣಿಗೆ ಬರುತ್ತಿದ್ದಾರೆ. ರಥೋತ್ಸವದಲ್ಲಿ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ದೇವಸ್ಥಾನದ ಆವರಣದಲ್ಲಿ ವಿವಿಧ ಗ್ರಾಮಗಳಿಂದ ಬಂದ ಭಕ್ತರು ಟೆಂಟ್‌ಗಳನ್ನು ಹಾಕಿ ದಾಸೋಹ ನಡೆಸುತ್ತಿದ್ದಾರೆ. ನಾಳೆ ಧೂಳಗಾಯಿ ಹಾಗೂ ಗುಹಪ್ರವೇಶ ಇರುವುದರಿಂದ ಜಾತ್ರೆಗೆ ಇನ್ನಷ್ಟು ಜನರು ಸೇರುವ ನಿರೀಕ್ಷೆ ಇದೆ. ರಥೋತ್ಸವದ ಸಂದರ್ಭದಲ್ಲಿ ಸುರಪುರ ರಾಜ ಸಂಸ್ಥಾನದ ರಾಜಾ ಕೃಷ್ಣಪ್ಪನಾಯಕ, ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿರುವರು.

ಭಕ್ತರು ದೇವಸ್ಥಾನಕ್ಕೆ ನೀಡುವ ಚಿನ್ನಾಭರಣ ಮತ್ತು ದೇಣಿಗೆಯನ್ನು ದೇವಸ್ಥಾನದ ಕಾರ್ಯಾಲಯಕ್ಕೆ ಖುದ್ದಾಗಿ ನೀಡಿ ರಸೀದಿ ಪಡೆಯುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

ಮದ್ಯ ಮಾರಾಟಕ್ಕೆ ಕಡಿವಾಣ:

ಜಾತ್ರೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ತಹಶೀಲ್ದಾರ್ ವಿಜಯಕುಮಾರ್‌ ಅವರ ನೇತೃತ್ವದಲ್ಲಿ ಮದ್ಯ ಮಾರಾಟಗಾರರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದರಿಂದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಬಿದ್ದಿದೆ. ತಹಶೀಲ್ದಾರ್‌ ಅವರ ಕ್ರಮಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.

ಮೌನೇಶ್ವರ ಜಾತ್ರೆಗೆ ಇಂದು ಮತ್ತು ನಾಳೆ ಸುಮಾರು 3 ಲಕ್ಷಕ್ಕೂ ಭಕ್ತರು ಬರುವ ಸಾಧ್ಯತೆಯಿದ್ದು ದರ್ಶನ ಪಡೆಯುವುದೇ ಸೌಭಾಗ್ಯ. ಜಿಲ್ಲಾಡಳಿತ ಉತ್ತಮವಾಗಿ ವ್ಯವಸ್ಥೆ ಮಾಡಿದೆ.

-ಗಂಗಾಧರನಾಯಕ ತಿಂಥಣಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT