ಮಂಗಳವಾರ, ಜನವರಿ 28, 2020
20 °C
ಎಂ.ಟಿ ಪಲ್ಲಿ: ತಿಪ್ಪೆಗುಂಡಿಗಳು; ರಸ್ತೆಯಲ್ಲೇ ಹರಿಯುವ ಚರಂಡಿ ನೀರು

ಶೌಚಾಲಯ ಬಳಕೆಗೆ ಜಾಗೃತಿ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ತಾಲ್ಲೂಕಿನ ಕಾಕಲವಾರ ಪಂಚಾಯತಿ ವ್ಯಾಪ್ತಿಯ, 2000 ಜನಸಂಖ್ಯೆ, 3 ಜನ ಗ್ರಾಮ ಪಂಚಾಯಿತಿ ಸದಸ್ಯರಿರುವ ಎಂ.ಟಿ ಪಲ್ಲಿ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ತಿಪ್ಪೆಗುಂಡಿಗಳು, ದುರ್ವಾಸನೆ ಬೀರುವ ಚರಂಡಿಗಳು ಸ್ವಾಗತಿಸುತ್ತವೆ.

‘ಗ್ರಾಮದಲ್ಲಿರುವ ಸುಮಾರು 300 ಮನೆಗಳಲ್ಲಿ ಶೌಚಾಲಯಗಳ ನಿರ್ಮಾಣವಾಗಿರುವುದು ಹೆಚ್ಚು ಕಡಿಮೆ 50-60 ಮಾತ್ರ' ಎನ್ನುತ್ತಾರೆ ಗ್ರಾಮದ ಯುವಕ ಮಹಾದೇವ.

ಕೆಲವೆಡೆ ಶೌಚಾಲಯ ನಿರ್ಮಿಸಿದ್ದರೂ ಗುಂಡಿಗಳನ್ನು ನಿರ್ಮಿಸಿಲ್ಲ, ಟಬ್ ಅಳವಡಿಕೆಯಾಗಿಲ್ಲ. ಇದರ ಜೊತೆಗೆ ಗ್ರಾಮಸ್ಥರಲ್ಲಿ ಶೌಚಾಲಯ ಬಳಕೆಯ ಕುರಿತು ತಿಳಿವಳಿಕೆ ಇಲ್ಲದಿರುವುದರಿಂದ ಬಯಲು ಶೌಚ ಪದ್ಧತಿಯೇ ಮುಂದುವರಿದಿದೆ. ಶೌಚಾಲಯ ಬಳಕೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಸಂಬಂಧಿತರು ಅಷ್ಟಾಗಿ ಮಾಡಿಲ್ಲ ಎಂಬುದು ಗ್ರಾಮಸ್ಥರ ಮಾತುಗಳಿಂದ ತಿಳಿದುಬರುತ್ತದೆ.

ಒಂದೆಡೆ 2017-18ನೇ ಸಾಲಿನಲ್ಲಿ ನಿರ್ಮಿಸಿದ ನೀರು ಶುದ್ಧೀಕರಣ ಘಟಕವು ಇಂದಿಗೂ ಕಾರ್ಯಾರಂಭ ಮಾಡದೆ ತುಕ್ಕು ಹಿಡಿದು ಹೋಗುತ್ತಿದ್ದರೆ ಇನ್ನೊಂದೆಡೆ ಗ್ರಾಮದ ಕೊಳವೆ ಸಂಪರ್ಕ ಜಾಲದಲ್ಲಿ ಅಲ್ಲಲ್ಲಿ ನೀರು ಸೋರಿಕೆಯಾಗಿ ಚರಂಡಿ ಸೇರುತ್ತಾ ಪೋಲಾಗುತ್ತಿದೆ. 'ನಳ ಬಂದ್ ಮಾಡಿದ ಮೇಲೆ ಮತ್ತೆ ಅದೇ ನೀರು ಪೈಪಿನಲ್ಲಿ ಸೇರುತ್ತಿದೆ’ ಎಂದು ಗ್ರಾಮದವರು ಹೇಳುತ್ತಾರೆ.

ಗ್ರಾಮದ ಹರಿಜನ ವಾಡಾದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಯ ಅಂಗಳ, ರಸ್ತೆ ಗುಂಡಿಗಳಲ್ಲೆಲ್ಲ ಚರಂಡಿಯ ನೀರು ನಿಂತು ಸೊಳ್ಳೆಗಳಿಗೆ ಆವಾಸ ಸ್ಥಾನವಾಗಿದೆ.

'ಏನಾದರರೂ ಮಾಡಿ ಚರಂಡಿಯನ್ನು ಮಾಡಿಕೊಟ್ಟರೆ ಸಾಕಪ್ಪಾ ಎನ್ನುವ ಸ್ಥಿತಿಯಲ್ಲಿ ಇದ್ದೇವೆ, ಸೊಳ್ಳೆಗಳ ಕಾಟದಿಂದಾಗಿ ಅನಾರೋಗ್ಯದ ಚಿಂತೆಯೂ ನಮ್ಮನ್ನು ಕಾಡುತ್ತಿದೆ' ಎನ್ನುತ್ತಾರೆ ಗ್ರಾಮದ ಮರೆಮ್ಮ ತಿಮ್ಮನೋಳ, ಬುಗ್ಗಪ್ಪ ಹಾಗೂ ಮಾದೇವಪ್ಪ.

ಈ ಕುರಿತು ಪಿಡಿಒ ಮಲ್ಲಪ್ಪನವರನ್ನು ಸಂಪರ್ಕಿಸಿದಾಗ, 'ನೀರು ಸೋರುವುದನ್ನು ನಿಲ್ಲಿಸುವ ಕೆಲಸ ಆರಂಭಿಸಲಾಗಿದೆ, ಶೌಚಾಲಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದೇವೆ, ಮತ್ತೊಮ್ಮೆ ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ' ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)