ಬುಧವಾರ, ಜನವರಿ 29, 2020
30 °C
ನಗರದ ಹೊರ ವಲಯದಲ್ಲಿರುವ ಸಣ್ಣ ಫ್ಯಾಕ್ಟರಿಯೇ ಆಸರೆ

ಭಿಕ್ಷಾಟನೆಯಿಂದ ಸ್ವ ಉದ್ಯಮದತ್ತ ಪಯಣ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಬುಡ್ಗ ಜಂಗಮ ವ್ಯಕ್ತಿಯೊಬ್ಬರು ನಗರದ ಹೊರ ವಲಯದಲ್ಲಿ ಕೊಡಗಳನ್ನು ತಯಾರಿಸುವ ಸ್ವಯಂ ಉದ್ಯಮ ಆರಂಭಿಸಿ ಹತ್ತಾರು ಜನರಿಗೆ ಆಸರೆಯಾಗಿದ್ದಾರೆ. ಬುಡ್ಗ ಜಂಗಮ ಸಮುದಾಯದಲ್ಲಿ ಭಿಕ್ಷಾಟನೆ, ಹಗಲು ವೇಷ, ರಾಮ, ಲಕ್ಷಣ ವೇಷ, ಊರೂರು ತಿರುಗುವ ಅಲೆಮಾರಿ ಜೀವನವೇ ಪ್ರಮುಖ ವೃತ್ತಿ. ಅದನ್ನು ತೊರೆದು ಆ ಸಮುದಾಯವರು ಕೊಡ (ಬಿಂದಿಗೆ) ತಯಾರಿಸುವ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ.

25 ಕುಟುಂಬಗಳ 50 ಜನರು ಇದರಿಂದ ಜೀವನ ಸಾಗಿಸುತ್ತಿದ್ದಾರೆ. 7 ರಿಂದ 8 ಕಾರ್ಮಿಕರು ದಿನ ನಿತ್ಯ ಸಣ್ಣ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ದಂಪತಿಗಳಿಬ್ಬರಿಗೆ ಉದ್ಯೋಗ ಸಿಕ್ಕಂತಾಗಿದೆ. ಆದರೆ, ಇಲ್ಲಿಯವರೆಗೆ ಸರ್ಕಾರದ ಯಾವ ಸೌಲಭ್ಯಗಳೂ ಸಿಕ್ಕಿಲ್ಲ. ಇವರಿಗೆ ಸ್ವಂತ ಸೂರು ಇಲ್ಲ. ಹೀಗಾಗಿ ಬ್ಯಾಂಕ್‌ಗಳು ಸಾಲ ಕೊಡಲು ಮುಂದೆ ಬರುತ್ತಿಲ್ಲ. ಸರ್ಕಾರವೂ ಇವರನ್ನು ನಿರ್ಲಕ್ಷ್ಯ ಮಾಡಿದೆ.

ಆದರೂ ಛಲ ಬಿಡದೆ ಬುಡ್ಗ ಸಮುದಾಯದವರು ಸ್ವ ಉದ್ಯಮದತ್ತ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ತಾವು ಬಡತನದಲ್ಲಿ ಬೆಳೆದರೂ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುತ್ತಿದ್ದಾರೆ. ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಿದ್ದಾರೆ.

ಆಂಧ್ರದಿಂದ ಕಚ್ಚಾವಸ್ತು: ಕೊಡಗಳನ್ನು ತಯಾರಿಸಲು ಬೇಕಾಗುವ ಕಚ್ಚಾ ವಸ್ತುಗಳನ್ನು ನೆರೆಯ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ಕ್ವಿಂಟಲ್‌ ಲೆಕ್ಕದಲ್ಲಿ ತರಿಸುತ್ತಾರೆ. ಇಲ್ಲಿಯೇ ಸಿಗುವ ಹಳೆ ಕೊಡಗಳಿಂದ ಕೆಲ ಕಚ್ಚಾ ವಸ್ತು ಸಿಕ್ಕರೂ ಬೇರೆಡೆಯಿಂದ ತಂದ ವಸ್ತುಗಳನ್ನು ಬೆರೆಸಿ ಕೊಡಕ್ಕೆ ಸುಂದರ ರೂಪ ಕೊಡುತ್ತಾರೆ.

ಕೊಡಗಳನ್ನು ತಯಾರಿಸಲು ಹಲವಾರು ಗಂಟೆಗಳ ಶ್ರಮವಿದೆ. ಕೊಡದ ಯಂತ್ರ ಹೆಚ್ಚಿನ ಶಾಖವನ್ನು ಹೊಂದಿದೆ. ಹೀಗಾಗಿ ನಮ್ಮ ರಾಜ್ಯದವರು ಇದಕ್ಕೆ ಹೊಂದಿಕೊಳ್ಳಲು ಕಷ್ಟ. ಹೀಗಾಗಿ ಬಿಹಾರ ರಾಜ್ಯದ ಇಬ್ಬರು ಕೆಲಸಗಾರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಿಂಗಳಿಗೆ /// ₹15,000 ಸಾವಿರ ವೇತನ ನೀಡಲಾಗುತ್ತಿದೆ ಎಂದು ಫ್ಯಾಕ್ಟರಿ ಮಾಲೀಕ ಆಂಜನೇಯ ಹೇಳುತ್ತಾರೆ.

2004ರಲ್ಲಿ ನಮ್ಮ ಸಮುದಾಯದವರನ್ನು ಭಿಕ್ಷಾಟನೆಯಿಂದ ಬಿಡಿಸಿ ಅವರಿಗೆ ಸ್ವಯಂ ಉದ್ಯೋಗ ಮಾಡಲು ನಗರದ ಚಿರಂಜೀವಿ ನಗರದಲ್ಲಿ ಸಣ್ಣ ಫ್ಯಾಕ್ಟರಿ ಆರಂಭಿಸಲಾಯಿತು. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ಛಲ ಬಿಡದೆ ಆರಂಭಿಸಿದ್ದರಿಂದ ನಷ್ಟವೇನೂ ಆಗಿಲ್ಲ. ಅಲ್ಲಿಂದ ಸಮುದಾಯದವರು ಇದನ್ನು ಉದ್ಯೋಗ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಕಲಬುರ್ಗಿ, ರಾಯಚೂರಿನಿಂದ ಕೊಡ ತರಿಸಲಾಗುತ್ತಿತ್ತು. ಇಲ್ಲಿಯೇ ಆರಂಭಿಸಿದ್ದರಿಂದ ಹಲವರಿಗೆ ಉಪಯೋಗವಾಗಿದೆ.  ಈಗ ನಗರದ ಹೊರ ವಲಯದಲ್ಲಿ ಸಣ್ಣ ಫ್ಯಾಕ್ಟರಿ ಕೆಲಸ ನಿರ್ವಹಿಸುತ್ತಿದೆ. 

‌‘ದಂಪತಿಗಳಿಬ್ಬರು ಕೊಡ ಮಾರಾಟಕ್ಕೆ ಬೆಳಿಗ್ಗೆ 5 ಗಂಟೆಗೆ ಹೊರಟು ಮಧ್ಯಾಹ್ನ 2 ಗಂಟೆಗೆ ಮನೆ ಸೇರುತ್ತಾರೆ. ದಿನಕ್ಕೆ ₹300ರಿಂದ ₹500ರ ತನಕ ಸಂಪಾದನೆ ಮಾಡುತ್ತಾರೆ. ಇನ್ನುಳಿದ ಮಹಿಳೆಯರು ಬಟ್ಟೆ ವ್ಯಾಪಾರ, ಸಾಬೂನು ಮಾರಾಟ ಮಾಡಿ ಜೀವನ ಸಾಗಿಸುತ್ತಾರೆ’ ಎನ್ನುತ್ತಾರೆ’ ಆ ಸಮುದಾಯದ ಹಿರಿಯ ವ್ಯಕ್ತಿ.

ಸೋಪ್‌ ಫ್ಯಾಕ್ಟರಿಗೆ ಹಣವಿಲ್ಲ: ತಮಿಳುನಾಡಿನಿಂದ ಮರು ಬಳಕೆ ಮಾಡುವ (ಸೆಕೆಂಡ್‌ ಹ್ಯಾಂಡ್‌) ಸೋಪ್‌ ತಯಾರಿಸುವ ಯಂತ್ರ ತರಲಾಗಿದೆ. ಆದರೆ, ಅದರ ಉಪ ಉತ್ಪನ್ನಗಳಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗಿದ್ದರಿಂದ ಇನ್ನೂ ಆರಂಭಿಸದೆ ಹಾಗೆಯೇ ಇಡಲಾಗಿದೆ. ಸರ್ಕಾರದ ನೆರವು ಸಿಕ್ಕರೆ ಸೋಪ್‌ ಫ್ಯಾಕ್ಟರಿ ಆರಂಭಿಸಿ ಮತ್ತಷ್ಟು ಜನರಿಗೆ ಆಸರೆಯಾಗಬಹುದು ಎನ್ನುತ್ತಾರೆ ಆಂಜನೇಯ.

 ***
ನಮ್ಮ ಸಮುದಾಯವರು ಎಲ್ಲರೂ ಸ್ವಉದ್ಯೋಗದತ್ತ ಮುಖ ಮಾಡಲು ಪ್ರಯತ್ನಿಸಲಾಗಿದೆ. ಭಿಕ್ಷೆ ಬೇಡುವ ಪದ್ಧತಿ ಬಿಡಿಸಲಾಗಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು
–ಅಂಜನೇಯ ರಾಮಯ್ಯ ಬಲಗಲ್, ಕೊಡ ಫ್ಯಾಕ್ಟರಿ ಮಾಲಿಕ.

 ***

₹200ರಿಂದ ₹250 ದಿನಕ್ಕೆ ಕೂಲಿ ಸಿಗುತ್ತಿದೆ. ಭಿಕ್ಷೆ ಬೇಡುವ ಪದ್ಧತಿಯಿಂದ ವಿಮುಕ್ತಿ ಪಡೆದು ಈಗ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇದು ಕುಟುಂಬಕ್ಕೆ ಆಸರೆಯಾಗಿದೆ
–ಜಮ್ಮಣ್ಣ ರುದ್ರಾಕ್ಷಿ, ಕಾರ್ಮಿಕ.

***

ಈ ಫ್ಯಾಕ್ಟರಿಯಲ್ಲಿ ಹಳೆ ಕೊಡಗಳನ್ನು ಮಷಿನ್‌ನಲ್ಲಿ ಹಾಕಿ ಪುಡಿ ಮಾಡುವ ಕೆಲಸ ನಿರ್ವಹಿಸುತ್ತಿದ್ದೇವೆ. ಇದು ನಮಗೆ ಜೀವನಾಧಾರವಾಗಿದೆ.
–ಜಮುಲಮ್ಮ ಅಗಸ್ತ್ಯ, ಕಾರ್ಮಿಕೆ.

 ***

ಅಲೆಮಾರಿ ಸಮುದಾಯಕ್ಕೆ ಸರ್ಕಾರದಿಂದ ₹31 ಲಕ್ಷ ಬಂದಿದ್ದು, 31 ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಕಲ್ಪಿಸಲಾಗುತ್ತದೆ. ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದರೆ ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಿ ಸೌಲಭ್ಯ ವಿತರಿಸಲಾಗುವುದು. 
– ಗೋಪಾಲ ಕಟ್ಟಿಮನಿ, ಜಿಲ್ಲಾ ವ್ಯವಸ್ಥಾಪಕ, ಡಾ.ಅಂಬೇಡ್ಕರ್ ಅಭಿವೃದ್ಧಿ ಪ್ರಾಧಿಕಾರ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು