ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಯುಗಾದಿ ಹಬ್ಬದ ಖರೀದಿ ಭರಾಟೆ

ವಿವಿಧ ಹಣ್ಣು ಹಂಪಲುಗಳು ದಿಢೀರ್ ಬೆಲೆ ಏರಿಕೆ, ಚೌಕಾಶಿಗೆ ಇಳಿದ ಗ್ರಾಹಕರು
Last Updated 21 ಮಾರ್ಚ್ 2023, 15:17 IST
ಅಕ್ಷರ ಗಾತ್ರ

ಯಾದಗಿರಿ: ಯುಗಾದಿ ಬೇವು ಬೆಲ್ಲ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಪೂಜಾ ಸಾಮಾಗ್ರಿ ಸೇರಿದಂತೆ ವಿವಿಧ ಹಣ್ಣು ಹಂಪಲುಗಳು ದಿಢೀರ್ ಬೆಲೆ ಏರಿಕೆ ಕಂಡಿವೆ. ಬಟ್ಟೆ ಅಂಗಡಿ, ಕಿರಾಣಿ ಅಂಗಡಿ ಮತ್ತು ಆಭರಣದ ಅಂಗಡಿಗಳ ಮುಂದೆ ಜನದಟ್ಟಣೆ ಕಂಡು ಬಂತು.

ಮಂಗಳವಾರ ಅಮಾವ್ಯಾಸೆ ಇದ್ದ ಕಾರಣ ಕೆಲವರು ಖರೀದಿ ಮಾಡಿದರೆ, ಇನ್ನೂ ಕೆಲವರು ಬುಧವಾರವೇ ವಿವಿಧ ಪೂಜಾ ಸಾಮಾಗ್ರಿ ಖರೀದಿ ಮಾಡಲಿದ್ದಾರೆ.

ಹಬ್ಬಕ್ಕೆ ಹೆಚ್ಚಿದ ಬೆಲೆ:

ಹಬ್ಬದ ಪ್ರಯುಕ್ತ ವಿವಿಧ ಬಗೆಯ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಹಣ್ಣಿನ ಜತೆಗೆ ಹಬ್ಬದ ಸಾಮಗ್ರಿಗಳ ಬೆಲೆಯೂ ಕೊಂಚ ಏರಿಕೆಯಾಗಿದೆ.

ಗಾಂಧಿ ವೃತ್ತದಲ್ಲಿ ಖರೀದಿ ಭರಾಟೆ:

ನಗರದ ಹೃದಯ ಭಾಗವಾದ ಮಹಾತ್ಮಗಾಂಧಿ ವೃತ್ತದಲ್ಲಿ ಹಬ್ಬದ ಖರೀದಿ ಜೋರಾಗಿದೆ. ತಳ್ಳುಗಾಡಿಗಳಲ್ಲಿ ಹಣ್ಣುಹಂಪಲು ಇಟ್ಟು ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿಗಳು ವಿವಿಧ ರಾಗದಲ್ಲಿ ಗ್ರಾಹಕರನ್ನು ಕೂಗಿ ಗಮನಸೆಳೆಯುತ್ತಿದ್ದಾರೆ. ಹಣ್ಣು, ಹೂವಿನ ವ್ಯಾಪಾರ ಭರ್ಜರಿಯಾಗಿದೆ.

ಇನ್ನೂ ನಗರದ ಸುಭಾಷ ವೃತ್ತದ ಹಳೆ ಬಸ್‌ ನಿಲ್ದಾಣ, ಹಳೆ ಪ್ರವಾಸಿ ಮಂದಿರ, ಹೊಸ ಬಸ್‌ ನಿಲ್ದಾಣ, ರೈಲ್ವೆ ಸ್ಟೆಷನ್‌ ರಸ್ತೆ, ಗಂಜ್‌ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ತಳ್ಳುಗಾಡಿಗಳಲ್ಲಿ ವ್ಯಾಪಾರಿಗಳು ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಗಾಂಧಿ ವೃತ್ತದಲ್ಲಿ ವಾಹನ ದಟ್ಟಣೆಯಿಂದ ಟ್ರಾಫಿಕ್‌ ಜಾಂ ಉಂಟಾಗಿತ್ತು. ಹಲವಾರು ಗ್ರಾಹಕರು ಎಲ್ಲೆಂದರಲ್ಲೇ ವಾಹನಗಳನ್ನು ನಿಲ್ಲಿಸಿದ್ದರು.

ದಿಢೀರ್‌ ಬೆಲೆ ಏರಿಕೆ:

ಯುಗಾದಿ ಹಬ್ಬದ ಅಂಗವಾಗಿ ವ್ಯಾಪಾರಿಗಳು ಬೆಲೆಯನ್ನು ಎರಡು ಪಟ್ಟು ಏರಿಕೆ ಮಾಡಿದ್ದಾರೆ. ವಿಧಿ ಇಲ್ಲದೇ ಗ್ರಾಹಕರು ಚೌಕಾಶಿ ಮಾಡಿ ಖರೀದಿ ಮಾಡುತ್ತಿದ್ದಾರೆ.

ಖರ್ಜೂರ ಮತ್ತು ಬಾಳೆ ಹಣ್ಣಿನ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ಬಾಳೆ ಡಜನ್ ₹30 ರಿಂದ 50, ಖರ್ಜೂರ ಕೆಜಿಗೆ ₹60, ದ್ರಾಕ್ಷಿ ಕಿಲೋ ₹60 ರಿಂದ 100, ಸೇಬು ಕಿಲೋ ₹160 ರಿಂದ 180, ಸಪೋಟಾ (ಚಿಕೂ) ₹40 ರಿಂದ 60, ಮೋಸಂಬಿ ₹100, ಕಿತ್ತಾಳೆ ₹160 ರಿಂದ 180, ದಾಳಿಂಬೆ ₹160, ಕರ್ಬೂಜಾ ₹60 ರಿಂದ 100 ಬೆಲೆ ನಿಗದಿಯಾಗಿದೆ.

ತೆಂಗಿನಕಾಯಿ ₹20 ರಿಂದ ₹25, ಸೇಬು ₹20, ಮಾವಿನ ಕಾಯಿ ₹50, ದ್ರಾಕ್ಷಿ ₹80 ಕೆಜಿ, ಡಜನ್‌ ಬಾಳೆಗೆ ₹50, ಖರ್ಜೂರ ಕೆ.ಜಿಗೆ ₹80, ದಾಳಿಂಬೆ ₹50ಕ್ಕೆ ನಾಲ್ಕು, ಬೇವು ಬೆಲ್ಲ ಪ್ಯಾಕೇಟ್‌ಗೆ ₹20 ದರ ಇದೆ.

ಕನಕಾಂಬರ, ಮಲ್ಲಿಗೆ ಚೆಂಡು ಹೂವು ಒಂದು ಮೊಳ ₹50, ಸಣ್ಣ ಗಾತ್ರದ ಕರ್ಬೂಜ ₹30, ದೊಡ್ಡ ಗಾತ್ರದ ಹಣ್ಣು ₹50, ಕಲ್ಲಂಗಡಿ ಹಣ್ಣು ಗಾತ್ರಕ್ಕೆ ಅನುಗುಣಗುವಾಗಿ ₹50, ₹60, ₹70 ದರ ಇದೆ.

ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಸೌತೆಕಾಯಿ ಬೀಜ, ವಾಲ್ನಟ್‌, ಉತ್ತುತ್ತಿ, ಹೂವು, ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಬೇವಿನ ಎಲೆ ಮಾರಾಟ ಮಾಡುವುದು ಕಂಡು ಬಂದಿತು. ಹಣ್ಣು, ತರಕಾರಿ, ಹೂವು, ಪೂಜಾ ಸಾಮಗ್ರಿಗಳು ದುಬಾರಿಯಾಗಿವೆ ಎಂದು ಗ್ರಾಹಕರು ಅಲವತ್ತುಕೊಂಡರು.

ಮಡಿಕೆಗೆ ಬೇಡಿಕೆ:

ಪ್ರತಿ ವರ್ಷವೂ ಹೊಸ ವರ್ಷದ ಅಂಗವಾಗಿ ಬೇವನ್ನು ಹೊಸ ಕುಡಿಕೆ, ಮಡಿಯಲ್ಲಿಯೇ ಕಲಿಸಬೇಕು ಎಂಬ ರೂಢಿಯ ಕಾರಣ ಸಣ್ಣ ಮಡಿಕೆ–ಕುಡಿಗೆಗಳನ್ನು ಖರೀದಿಸುತ್ತಿದ್ದಾರೆ ಎಂದು ಮಡಿಕೆ ವ್ಯಾಪಾರಿ ತಿಳಿಸಿದರು.

***

ಸೇವಂತಿ, ಕಾಕಡ, ಕನಕಾಂಬರ, ದುಂಡು ಮಲ್ಲಿಗೆ ₹50 ಮೊಳ, ಒಂದು ಕೆಜಿ ಚೆಂಡು ಹೂ ₹150 ದರ ಇದೆ. ಹಬ್ಬಕ್ಕಾಗಿ ಬೇರೆಯಿಂದ ಆಮದು ಮಾಡಿಕೊಳ್ಳಲಾಗಿದೆ

ಮಹಮ್ಮದ್ ಬಾಬಾ, ಹೂವಿನ ವ್ಯಾಪಾರಿ

***

ಯುಗಾದಿ ಹಬ್ಬದ ಅಂಗವಾಗಿ ಬೆಲೆ ಏರಿಕೆ ಜಾಸ್ತಿಯಾಗಿದೆ. ಅನಿವಾರ್ಯವಾಗಿ ಹಬ್ಬದ ಸಾಮಾಗ್ರಿ ಖರೀದಿ ಮಾಡುತ್ತಿದ್ದೇವೆ

- ಶರಣಪ್ಪ ಹೂಗಾರ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT