ಭಾನುವಾರ, ಮಾರ್ಚ್ 7, 2021
19 °C
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ‌ ಸಮಿತಿಯಿಂದ ಪ್ರತಿಭಟನೆ

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ವರ್ಷಕ್ಕೆ 200 ದಿನ ಕೆಲಸ ಕೊಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ವರ್ಷದಲ್ಲಿ 200 ದಿನ ಕೆಲಸ, ದಿನಕ್ಕೆ ₹600 ಕೂಲಿ, ಕೆಲಸ ಮಾಡುವಾಗ ಮೃತಪಟ್ಟ ಕುಟುಂಬಕ್ಕೆ ₹8 ಲಕ್ಷ ಪರಿಹಾರ ಕೊಡಬೇಕು ಎಂದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ‌ ಸಮಿತಿಯಿಂದ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನೀಡಿ ಇತರೆ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಹಾಗೂ ನೂತನ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆ೦ದು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೂಲಿಕಾರರಿಗೆ ಕೆಲಸ ನೀಡದೆ ಸತಾಯಿಸುತ್ತಿದ್ದಾರೆ. ಮೇಟಿಗಳಿಗೆ ಗೌರವಧನ ಕೊಡುತ್ತಿಲ್ಲ. ಕಾಮಗಾರಿಗಾಗಿ ಫಾರಂ 6 ಕೊಡಲು ಹೋದರೆ, ಇಲ್ಲದ ಸಬೂಬು ಪಿಡಿಒಗಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಗೆ ಉದ್ಯೋಗ ಖಾತ್ರಿಯ ಬಗ್ಗೆ ಕೂಲಿಕಾರರಿಗೆ ಹೆಚ್ಚನ ವಿಶ್ವಾಸ ಮೂಡಿತ್ತು. ಈಗ ಪಿಡಿಒಗಳು ಕೂಲಿಕಾರರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಾ ಇದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅನುಷ್ಠಾನ ಅಧಿಕಾರಿ, ಉಪಕಾರ್ಯದರ್ಶಿ ತಕ್ಷಣವೇ ಎಲ್ಲರಿಗೂ ಕೆಲಸ ನೀಡಿ (ವಲಸೆ) ತಡೆಗಟ್ಟಬೇಕೆ೦ದು ಒತ್ತಾಯಿಸಿದರು.

ಕೆಲಸದ ಸ್ಥಳದಲ್ಲಿ ಮೂಲಸೌಲಭ್ಯ ಒದಗಿಸಬೇಕು. ಸಲಕರಣೆ ಬಾಡಿಗೆ, ಪ್ರಯಾಣದ ವೆಚ್ಚ ನೀಡಬೇಕು. ನರೇಗಾ ಮೇಟಿಗಳಿಗೆ ₹4 ಪ್ರೋತ್ಸಾಹ ಧನ ಕೊಡಬೇಕು ಎಂದು ಆಗ್ರಹಿಸಿದರು.

ಕೂಲಿಕಾರರಿಗೆ ಕೆಲಸ ಕೊಡಬೇಕು. ತಕರಾರು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಮಾರ್ಚ್‌ 31 ರ ವರೆಗೂ 150 ದಿನಗಳ ಕೆಲಸ ಮುಕ್ತಾಯವಾಗುವಂತೆ ಕಾರ್ಯಕ್ರಮ ರೂಪಿಸಿ ಸತತ ಕೆಲಸ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಸಿಇಒ ಮೂಲಕ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕೆ. ನೀಲಾ ಮಾತನಾಡಿದರು.

ಕೂಲಿಕಾರರ ಸಂಘದಶರಣಪ್ಪ ಅನಸೂಗುರು, ಸವಿತಾ ಪೂಜಾರಿ, ಗುಲಾಂಹುಸೇನ್, ಶರಣಪ್ಪ ಜಂಬಲದಿನ್ನಿ, ಖಾಜೇಸಾಬ ನಾಗರಾಳ, ರಾಜು ದೊಡಮನಿ, ನಬಿ ನದಾಫ್, ರಂಗಮ್ಮ ಕಟ್ಟಿಮನಿ, ಬಾಬು ಗುಂಡಳ್ಳಿ, ಚಂದ್ರರಡ್ಡಿ ಇಬ್ರಾಹಿಂಪುರ, ನಾಗಪ್ಪ ತೇರಿನ, ಅಂಬ್ಲಯ್ಯ ಬೇವಿನಕಟ್ಟಿ, ಎ.ಡಿ.ಜುಬೇದಾರ, ಗಣೇಶ ಅನವಾರ, ಹನುಮಂತ ಗೋನಾಲ ಸೇರಿದಂತೆ ನೂರಾರು ಕೂಲಿಕಾರರು ಇದ್ದರು.

***

ಫಾರಂ ನಂ. 6 ಕೊಟ್ಟವರಿಗೆ ಸ್ವೀಕೃತಿ ಕಡ್ಡಾಯವಾಗಿ ಕೊಡಬೇಕು. ಕಾರ್ಮಿಕ ಇಲಾಖೆ ಆದೇಶದಂತೆ ಕೂಲಿ ಹಣ ಕೊಡಬೇಕು. ಈ ವರ್ಷ ಕೂಲಿ ಹೆಚ್ಚಿಸಬೇಕು

- ದಾವಲಸಾಬ ನದಾಫ್, ಜಿಲ್ಲಾ ಘಟಕದ ಅಧ್ಯಕ್ಷ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.