ಶನಿವಾರ, ಮಾರ್ಚ್ 6, 2021
32 °C
ನಿಖರ ಸಮೀಕ್ಷೆಗೆ ಹೆಲ್ತ್ ವಾಚ್ ಮೊಬೈಲ್ ಆ್ಯಪ್ ಬಳಕೆ: ಜಿಲ್ಲಾಧಿಕಾರಿ

12ರಿಂದ ಸಾರ್ವತ್ರಿಕ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೋವಿಡ್-19 ಸಂಬಂಧ ಜಿಲ್ಲೆಯ ಎಲ್ಲಾ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆಯನ್ನು ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‍ಒ)ಗಳು ಮತ್ತು ಶಿಕ್ಷಕರಿಂದ ‘ಹೆಲ್ತ್ ವಾಚ್ ಆ್ಯಪ್’ ಮೂಲಕ ಮೇ 12ರಿಂದ 16ರವರೆಗೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶುಕ್ರವಾರ ಯಾದಗಿರಿ, ಗುರುಮಠಕಲ್ ತಾಲ್ಲೂಕಿನ ಅಧಿಕಾರಿಗಳು/ಸಂಪನ್ಮೂಲ ವ್ಯಕ್ತಿಗಳಿಗೆ ಹಮ್ಮಿಕೊಂಡಿದ್ದ ‘ಹೆಲ್ತ್ ವಾಚ್ ಆ್ಯಪ್’ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಐಎಲ್ಐ/ ಸ್ಯಾರಿ/ ಇತರೆ ತೀವ್ರ ರೀತಿಯ ಆರೋಗ್ಯ ಸಮಸ್ಯೆಯನ್ನು ಹೊಂದಿರುವ ರೋಗಿಗಳನ್ನು ಮುಂಚಿತವಾಗಿ ಗುರುತಿಸಿ ಕೋವಿಡ್-19 ಸೋಂಕಿ ನಿಂದ ಉಂಟಾಗಬಹುದಾದ ವೈದ್ಯಕೀಯ ಸಂಕೀರ್ಣತೆಯಿಂದ ರಕ್ಷಿಸಬೇಕಾಗಿರುತ್ತದೆ. ಈ ಸಮೀಕ್ಷೆಯಲ್ಲಿ ಸಂಗ್ರಹಿಸುವ ಮಾಹಿತಿಯನ್ನು ನೇರವಾಗಿ ಅಪ್‍ಲೋಡ್ ಮಾಡಲು ‘ಹೆಲ್ತ್ ವಾಚ್ ಆ್ಯಪ್’ ಸಹ ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಕಡ್ಡಾಯವಾಗಿ ತಮ್ಮ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳ ಬಿಎಲ್‍ಒ ಮತ್ತು ಶಿಕ್ಷಕರಿಗೆ ಹೆಲ್ತ್ ವಾಚ್ ಆ್ಯಪ್ ಬಗ್ಗೆ ಮೇ 9ರಿಂದ 11ರೊಳಗೆ ಕಡ್ಡಾಯವಾಗಿ ತರಬೇತಿ ನೀಡಬೇಕು. ಬಿಎಲ್‍ಒ ಮತ್ತು ಶಿಕ್ಷಕರು ಮೇ 12ರಿಂದ 16ರೊಳಗೆ ಕುಟುಂಬ ಸಮೀಕ್ಷಾ ಕಾರ್ಯವನ್ನು ಕೈಗೊಂಡು ಅಂದೇ ದತ್ತಾಂಶಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಯ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಾಯವಾಗುವಂತೆ ಹೆಚ್ಚುವರಿಯಾಗಿ ಒಬ್ಬ ಶಿಕ್ಷಕರನ್ನು ನೇಮಿಸಲಾಗಿದೆ. ಮತಗಟ್ಟೆವಾರು ಸಂಗ್ರಹಿಸಲಾದ ಮಾಹಿತಿಯನ್ನು ನೇರವಾಗಿ ‘ಹೆಲ್ತ್ ವಾಚ್ ಆ್ಯಪ್’ ಮೂಲಕ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುವ ಗಣಕಯಂತ್ರ ಅಥವಾ ಲ್ಯಾಪ್‍ಟಾಪ್ ಮೂಲಕ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಮಾತನಾಡಿ, ಸಮೀಕ್ಷೆಗೆ ಈಗಾಗಲೇ ಕೈಗೊಂಡಿರುವ ಪೂರ್ವಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಭೂಮಿ ಸಮಾಲೋಚಕ ಮಹಾಂತೇಶ ಪ್ರಾಜೆಕ್ಟರ್ ಮೂಲಕ ತರಬೇತಿ ನೀಡಿದರು.

ತಹಶೀಲ್ದಾರರಾದ ಚನ್ನಮಲ್ಲಪ್ಪ ಘಂಟಿ, ಸಂಗಮೇಶ ಜಿಡಗೆ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹಣಮಂತರೆಡ್ಡಿ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಸಿಆರ್‌ಪಿಪಿ, ಬಿಆರ್‌ಪಿ, ಇಸಿಒ ಇದ್ದರು.

ಭೀಮರಾಯನಗುಡಿಯಲ್ಲಿ ತರಬೇತಿ: ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿಯೂ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅಧ್ಯಕ್ಷತೆಯಲ್ಲಿ ಶಹಾಪುರ ಮತ್ತು ವಡಗೇರಾ ತಾಲ್ಲೂಕಿನ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು