ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ | ಪಶು ಚಿಕಿತ್ಸಾಲಯಗಳಿಗೆ ಬೇಕು ಚಿಕಿತ್ಸೆ

Published 12 ಮೇ 2024, 4:46 IST
Last Updated 12 ಮೇ 2024, 4:46 IST
ಅಕ್ಷರ ಗಾತ್ರ

ಶಹಾಪುರ: ನಗರದಲ್ಲಿ ಪಶು ಚಿಕಿತ್ಸೆ ಕಟ್ಟಡ ನಿರ್ಮಿಸಿದ್ದಾರೆ ಆದರೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಲ್ಲ. ಮಳೆ ಬಂದರೆ ಸಾಕು ಆಸ್ಪತ್ರೆಯ ಆವರಣದಲ್ಲಿ ನೀರು ಸಂಗ್ರಹವಾಗಿ ಕರೆಯಂಗಳದಂತೆ ಆಗುತ್ತದೆ. ಚಿಕಿತ್ಸೆಗಾಗಿ ಜಾನುವಾರು ಕರೆ ತಂದರೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬುದು ರೈತರ ದೂರು.

ಸಾಕಷ್ಟು ಜಾಗವಿದೆ ಸರಿಯಾದ ನಿರ್ವಹಣೆ ಇಲ್ಲ. ಹಳೆ ಕಟ್ಟಡವನ್ನು ತೆರವುಗೊಳಿಸಿ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಆಸ್ಪತ್ರೆಗೆ ಕರೆತರುವ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತೆ ಆಗಿದೆ. ಕಡ್ಡಾಯವಾಗಿ ತೊಟ್ಟಿ ನಿರ್ಮಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಖಾಸಗಿ ವಾಹನಗಳನ್ನು ತಂದು ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸುತ್ತಾರೆ ಅದಕ್ಕೆ ಬ್ರೇಕ್ ಹಾಕಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಹ್ಮದ ಇಸ್ಮಾಯಿಲ್.

ಚಿಕಿತ್ಸೆ ನೀಡಿದ ನಂತರ ಔಷಧಿಯನ್ನು ಹೊರಗಡೆ ತರುವಂತೆ ಚೀಟಿಯನ್ನು ವೈದ್ಯರು ನೀಡುತ್ತಾರೆ. ಔಷಧಿಯ ಕೊರತೆ ಇದೆ. ಮೇಕೆ ಹಾಗೂ ಕುರಿಗಳಿಗೆ ಸಮರ್ಪಕವಾಗಿ ಔಷಧಿ ಸಿಗುತ್ತಿಲ್ಲ. ಇದರ ಬಗ್ಗೆ ಗಮನಹರಿಸಬೇಕು. ಗ್ರಾಮೀಣ ಪ್ರದೇಶದಲ್ಲಿಯೂ ಇದೆ ಸಮಸ್ಯೆ ಕಾಡುತ್ತಿದೆ. ಅಗತ್ಯ ಸೌಲಭ್ಯಗಳು ಕಾಡುತ್ತಲಿವೆ. ಕೆಲ ವೈದ್ಯರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಅವರು ಆರೋಪಿಸಿದರು.

ತಾಲ್ಲೂಕಿನಲ್ಲಿ 1.3 ಲಕ್ಷ ಕುರಿಗಳಿವೆ. ಅದರಂತೆ 2018ರ ಗಣತಿಯ ಪ್ರಕಾರ 55 ಸಾವಿರ ಜಾನುವಾರುಗಳಿವೆ. ವಾಸ್ತವವಾಗಿ 48,620 ಜಾನುವಾರು ಇವೆ. ಆಯಾ ಕಾಲಾವಧಿಯಲ್ಲಿ ರೋಗ ನಿಯಂತ್ರಣಕ್ಕೆ ಕಡ್ಡಾಯವಾಗಿ ಲಸಿಕೆ ಹಾಕುತ್ತೇವೆ. ಆಸ್ಪತ್ರೆಗೆ ಬಂದಾಗ ರಾಗಬಾಧೆಯಿಂದ ನರಳುವ ಕುರಿಗೆ ಔಷಧಿ ನೀಡುತ್ತೇವೆ. ಆದರೆ ಕುರಿಗಾರರು ಎಲ್ಲಾ ಕುರಿಗಳಿಗೆ ಔಷಧಿ ನೀಡಬೇಕು ಎಂದು ಒತ್ತಾಯಿಸುತ್ತಾರೆ. ಇದರಿಂದ ಔಷಧಿಯ ಸಮಸ್ಯೆ ಉಂಟಾಗುತ್ತದೆ ಎನ್ನುತ್ತಾರೆ ಪಶು ಕೇಂದ್ರದ ಸಹಾಯಕ ನಿರ್ದೇಶಕ ಡಾ.ಷಣ್ಮುಖಪ್ಪ ಕೊಂಗಡ.

ತಾಲ್ಲೂಕಿನಲ್ಲಿ 16 ಪಶು ಕೇಂದ್ರಗಳಿವೆ. ಅದರಲ್ಲಿ ಆರು ಪಶು ಕೇಂದ್ರದಲ್ಲಿ ಮಾತ್ರ ಕುಡಿಯುವ ನೀರಿನ ತೊಟ್ಟಿ ಇವೆ. ಉಳಿದಂತೆ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಕೆಟ್ ಹಾಗೂ ಕೊಡದಲ್ಲಿ ನೀರು ಇಟ್ಟಿರುತ್ತಾರೆ. ನಮ್ಮಲ್ಲಿ ಯಾವುದೇ ಔಷಧಿಯ ಕೊರತೆ ಇಲ್ಲ. ಸರ್ಕಾರದ ನಿಗದಿಪಡಿಸಿದಷ್ಟು ದಾಸ್ತಾನು ಲಭ್ಯವಿದೆ ಎಂದು ಅವರು ಸಮರ್ಥಿಸಿಕೊಂಡಿರು.

ತಾಲ್ಲೂಕಿನಲ್ಲಿ ಮೇವಿನ ಕೊರತೆ ಇಲ್ಲ. ಮೇವು ಸಂಗ್ರಹ ಮಾಡಿಲ್ಲ. ಪ್ರಸಕ್ತ ಬಾರಿ ನೀರಾವರಿ ಪ್ರದೇಶದಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆಗೆ ಬಂದಾಗ ಸಾಕಷ್ಟು ಹುಲ್ಲು ಮತ್ತು ಮೇವು ಸಂಗ್ರಹಿಸಿಕೊಂಡಿದ್ದಾರೆ ರೈತರು. ಸದ್ಯಕ್ಕೆ ಮೇವಿನ ಬರ ತಾಲ್ಲೂಕಿನಲ್ಲಿ ಇಲ್ಲ ಎಂದರು ಅವರು ತಿಳಿಸಿದರು.

ಮೇವು ಹಾಗೂ ಔಷಧಿಯ ಕೊರತೆ ಇಲ್ಲ. ಹೊಸ ಕಟ್ಟಡವಿದ್ದು ನೀರಿನ ತೊಟ್ಟಿ ನಿರ್ಮಿಸಿಲ್ಲ. ನಗರಸಭೆ ಅಧಿಕಾರಿಗೆ ತೊಟ್ಟಿ ನಿರ್ಮಿಸಿಕೊಡುವಂತೆ ಸೂಚಿಸಿದೆ. ಸದ್ಯಕ್ಕೆ ಬಕೆಟ್ ಹಾಗೂ ಕೊಡದ ಮೂಲಕ ನೀರು ಹಸಿದ ಜಾನುವಾರಿಗೆ ನೀಡುತ್ತೇವೆ.
ಡಾ.ಷಣ್ಮುಖಪ್ಪ ಕೊಂಗಡ, ಸಹಾಯಕ ನಿರ್ದೇಶಕ ಪಶು ಇಲಾಖೆ
ಪಶು ಆಸ್ಪತ್ರೆಯಲ್ಲಿ ಕನಿಷ್ಠ ಸೌಲಭ್ಯವಿಲ್ಲ. ಚಿಕಿತ್ಸೆಗಾಗಿ ಕರೆ ತರುವ ಯಾವುದೇ ಪ್ರಾಣಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವಿಲ್ಲ. ಔಷಧಿಯ ಕೊರತೆಯು ಇದೆ.
ಮಹ್ಮದ ಇಸ್ಮಾಯಿಲ್, ಸಾಮಾಜಿಕ ಕಾರ್ಯಕರ್ತ
ನೀರಿಲ್ಲದೆ ಹಾಳು ಬಿದ್ದಿರುವ ನೀರಿನ ತೊಟ್ಟಿ
ನೀರಿಲ್ಲದೆ ಹಾಳು ಬಿದ್ದಿರುವ ನೀರಿನ ತೊಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT