ಯಾದಗಿರಿ: ಪ್ರವಾಸಿಗರಿಂದಲೇ ವೋಟ್ ಮಾಡಿಸಿ, ಅಧಿಕ ವೋಟ್ ಪಡೆಯುವ ಪ್ರವಾಸಿ ತಾಣಕ್ಕೆ ಹೆಚ್ಚಿನ ಅನುದಾನ ನೀಡಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಜಿಲ್ಲೆಯ ಸಾರ್ವಜನಿಕರು ಪ್ರವಾಸಿ ತಾಣಗಳ ಕುರಿತು ವೋಟ್ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ತಿಳಿಸಿದ್ದಾರೆ.
ದೇಶದ ಪ್ರವಾಸಿ ಸ್ಥಳಗಳ ಅಗತ್ಯ ಸೌಲಭ್ಯ ಅಭಿವೃದ್ಧಿಗಾಗಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯು ‘ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್’ ಎಂಬ ನೂತನ ಯೋಜನೆ ಜಾರಿಗೆ ತಂದು ಪ್ರವಾಸಿ ತಾಣಕ್ಕೆ ವೋಟಿಂಗ್ ಪವರ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದೇಶದ ಪ್ರವಾಸೋದ್ಯಮವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ಹಾಗೂ ಎಲ್ಲಾ ವರ್ಗದ ಪ್ರವಾಸೋದ್ಯಮ ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಪ್ರವಾಸಿಗರೇ ತಮ್ಮ ಮೆಚ್ಚಿನ ಪ್ರವಾಸಿ ತಾಣದ ಕುರಿತು ವೋಟ್ ಮಾಡಬೇಕು. ಅತಿ ಹೆಚ್ಚು ವೋಟ್ ಪಡೆದುಕೊಳ್ಳುವ ಪ್ರವಾಸಿ ತಾಣಕ್ಕೆ ಕೇಂದ್ರ ಸರ್ಕಾದಿಂದ ಹೆಚ್ಚಿನ ಅನುದಾನ ನೀಡಿ, ಸ್ಥಳದ ಅಭಿವೃದ್ಧಿಗೆ ಕೊಡುಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ದೇಶದ ಎಲ್ಲಾ ರಾಜ್ಯಗಳು ಹಾಗೂ ಆಯಾ ಜಿಲ್ಲೆಯಗಳ ಪ್ರವಾಸಿ ತಾಣಗಳನ್ನು ಈ ವ್ಯಾಪ್ತಿಗೆ ಸೇರಿಸಲಾಗಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ತಮ್ಮ ಮೆಚ್ಚಿನ ತಾಣಕ್ಕೆ ವೋಟ್ ಮಾಡುವ ಮೂಲಕ ಅಭಿವೃದ್ಧಿಗೆ ಕೊಡುಗೆ ನೀಡಬಹುದಾಗಿದೆ. ಆಗಸ್ಟ್ 5 ರಂದು ಇದು ಚಾಲ್ತಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಒಬ್ಬರಿಂದ ಜಿಲ್ಲೆಯ 3 ಸ್ಥಳಗಳಿಗೆ ವೋಟಿಂಗ್ ಪವರ್: ಈ ವೋಟ್ ಮಾಡುವಾಗ ಒಬ್ಬ ಪ್ರವಾಸಿಗ ಅಥವಾ ಸಾರ್ವಜನಿಕ ಕನಿಷ್ಠ 1 ರಿಂದ ಗರಿಷ್ಠ 3 ಸ್ಥಳದ ತನಕ ವೋಟ್ ಮಾಡಲು ಅವಕಾಶವಿದೆ. ಈ ವೇಳೆ ಲಿಂಕ್‌ನಲ್ಲಿ ತಮ್ಮ ಮೊಬೈಲ್ ನಂಬರ್, ಹೆಸರು, ವಯಸ್ಸು ಸೇರಿದಂತೆ ಪ್ರಾಥಮಿಕ ಮಾಹಿತಿ ಪೂರ್ತಿ ಮಾಡಿ, ದೇಶದ ಯಾವುದೇ ಪ್ರವಾಸಿ ಸ್ಥಳದ ಕುರಿತು ವೋಟ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ಪ್ರವಾಸಿಗರು ಹಾಗೂ ಸಾರ್ವಜನಿಕರಿಂದ ಆಗಮಿಸುವ ವೋಟ್ ಲೆಕ್ಕಾಚಾರದ ಆಧಾರದ ಮೇಲೆ ಕೇಂದ್ರ ಸರ್ಕಾರ ಆ ಸ್ಥಳದ ಅಭಿವೃದ್ಧಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಮಾಣ ಪತ್ರ: ಈ ವೋಟಿಂಗ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರವು ಅವರ ಹೆಸರಿನಲ್ಲಿ ಪ್ರಮಾಣ ಪತ್ರ ನೀಡಲಿದೆ.
ಜಿಲ್ಲೆಯ ಸಾರ್ವಜನಿಕರು https://innovateindia.mygov.in/ deskho-apna-desh/login/ ಲಿಂಕ್ ಬಳಸಿ ಜಿಲ್ಲೆಯ ನಿಮ್ಮ ಮೆಚ್ಚಿನ ಪ್ರವಾಸಿ ತಾಣದ ಕುರಿತು ವೋಟ್ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಯಾದಗಿರಿ ನಗರದಲ್ಲಿನ ಕೋಟೆ ಬೋನ್ಹಾಳ ಪಕ್ಷಿಧಾಮ ಸಂಗಮ (ಕೃಷ್ಣ ಮತ್ತು ಭೀಮಾನದಿಗಳ ಸಂಗಮ) ಲುಂಬಿನಿ ವನ ಗುರುಮಠಕಲ್ ದಬದಬಿ ಜಲಪಾತ ಹತ್ತಿಕುಣಿ ಜಲಾಶಯ ಚಿಂತನಹಳ್ಳಿ ಗವಿಸಿದ್ದಲಿಂಗೇಶ್ವರ ರಾಜನಕೋಳೂರು ಬುಡ್ಡರ ಮನೆಗಳು ರಾಜಾ ವೆಂಕಟಪ್ಪನಾಯಕ ಕೋಟೆ ಮತ್ತು ಅರಮನೆ ಬಸವಸಾಗರ ಜಲಾಶಯ ಸುರಪುರದ ವೇಣುಗೋಪಾಲಸ್ವಾಮಿ ದೇವಸ್ಥಾನ ತಿಂಥಣಿ ಮೌನೇಶ್ವರ ದೇವಸ್ಥಾನ ಶಹಾಪುರ ಬುದ್ಧ ಮಲಗಿದ ಬೆಟ್ಟ ಭೀಮರಾಯನ ಗುಡಿ ಶಿರವಾಳ ಏವೂರ ಟೇಲರ್ ಮಂಜಿಲ್ ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಜಿಲ್ಲೆಯಲ್ಲಿ ಕಾಣಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.