ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಭಾವಿ: ಬತ್ತುತ್ತಿರುವ ಜಲಮೂಲಗಳು 

Published 23 ಮಾರ್ಚ್ 2024, 5:30 IST
Last Updated 23 ಮಾರ್ಚ್ 2024, 5:30 IST
ಅಕ್ಷರ ಗಾತ್ರ

ಕೆಂಭಾವಿ: ಪಟ್ಟಣ ಸೇರಿದಂತೆ ವಲಯದಲ್ಲಿ ಅಂತರ್ಜಲಮಟ್ಟ ಕುಸಿಯುತ್ತಿದ್ದು ತೀವ್ರ ಜಲಕ್ಷಾಮ ತಲೆದೋರುವ ಭೀತಿ ಎದುರಾಗಿದೆ. ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಏಕೈಕ ತೆರೆದ ಬಾವಿ ಎಪಿಎಂಸಿ ಬಾವಿ ಸಂಪೂರ್ಣ ಬತ್ತುವ ಹಂತಕ್ಕೆ ತಲುಪಿದೆ. 

ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಪಟ್ಟಣಕ್ಕೆ ನೀರಿನ ಕೊರತೆ ಉಂಟಾಗಿದ್ದು ಮುಂಬರುವ ದಿನಗಳಲ್ಲಿ 23 ವಾರ್ಡ್‌ಗಳಿಗೆ ನೀರು ಒದಗಿಸುವ ಸವಾಲು ಜಿಲ್ಲಾಡಳಿತದ ಮುಂದಿದೆ.

ಕೃಷ್ಣಾ ಕಾಲುವೆಯ ಪಕ್ಕದಲ್ಲೇ ಇರುವ ಬೃಹತ್ ಪ್ರಮಾಣದ ಈ ತೆರೆದ ಬಾವಿಯಿಂದ ಅರ್ಧಕ್ಕಿಂತ ಹೆಚ್ಚು ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತದೆ. ಮಸೂತಿ ಬಾವಿ, ಕೆಳಗೇರಿ ಬಡಾವಣೆಯ ರೇವಣಸಿಪ್ಪ ದೇವಸ್ಥಾನದ ಬಾವಿಯಿಂದ ಇನ್ನುಳಿದ ಬಡಾವಣೆಯ ಜನತೆಗೆ ನೀರು ಒದಗಿಸಲಾಗುತ್ತಿದೆ. ಆದರೆ ಮುಖ್ಯವಾಗಿ ಸಿಹಿ ನೀರಿನ ಸೆಲೆ ಇರುವ ಎಪಿಎಂಸಿ ಬಾವಿಯೂ ಈಗ ತಳಕಂಡಿದ್ದು ಇದರಲ್ಲಿ ಅಳವಡಿಸಿರುವ ಮೋಟಾರ್ ಕೂಡ ಮೇಲೆ ತೇಲುವ ಹಂತಕ್ಕೆ ಬಂದಿದೆ.

ಈ ಬಾವಿಯಿಂದ ಸುಮಾರು 3 ಕಿ.ಮೀ ಅಂತರದಲ್ಲಿರುವ ಯುಕೆಪಿ ಕ್ಯಾಂಪ್‌ನಲ್ಲಿರುವ ಓವರ್ ಹೆಡ್ ಟ್ಯಾಂಕ್‍ಗೆ ನೀರು ಪೂರೈಸುತ್ತಿದ್ದು ಇಲ್ಲಿಂದ ನಲ್ಲಿ ಮೂಲಕ ಜನತೆಗೆ ನೀರು ಪೂರೈಸಲಾಗುತ್ತಿದೆ.

ಈ ಮೊದಲು ಕಾಲುವೆ ನೀರನ್ನು ಸಂಗ್ರಹಸಿಕೊಂಡು ಬಾವಿಯಲ್ಲಿನ ಸೆಲೆಗಳು ತುಂಬಿಕೊಳ್ಳುತ್ತಿದ್ದವು. ಆದರೆ ಕಳೆದ ಐದು ವರ್ಷಗಳ ಹಿಂದೆ ಕಾಲುವೆಗೆ ಸಂಪೂರ್ಣ ಕಾಂಕ್ರೀಟ್ ಹಾಕಿದ್ದರಿಂದ ಸೆಲೆಗಳು ಕುಗ್ಗಿ ಹೋಗಿವೆ.

ನೆರೆ ಜಿಲ್ಲೆಗೆ ಭರಪೂರ ನೀರು: ನೆರೆಯ ವಿಜಯಪುರ ಜಿಲ್ಲೆಗೆ ಕೆರೆಕಟ್ಟೆ ತುಂಬಿಸಲು ಕಾಲುವೆಯಲ್ಲಿ ಕಳೆದ ಒಂದು ವಾರದಿಂದ ಭರಪೂರ ನೀರು ಹರಿಯುತ್ತಿದ್ದು ಅಂಗೈಯ್ಯಲ್ಲಿರುವ ನೀರನ್ನು ಬಳಸಿಕೊಳ್ಳುವ ಶಕ್ತಿ ಇಲ್ಲಿನ ಅಧಿಕಾರಿಗಳಿಗೆ ಇಲ್ಲವೆ ಎಂಬ ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ.

ಗುತ್ತಿ ಬಸವಣ್ಣ ಏತ ನೀರಾವರಿ ಮೂಲಕ ಕೆರೆಕಟ್ಟೆ ತುಂಬಿಸಲು (ಪ್ರಭಾವಿ ಸಚಿವರ ಪ್ರಭಾವದಿಂದ) ನೆರೆಯ ಜಿಲ್ಲೆಗೆ ಅಧಿಕಾರಿಗಳು ಕಾಲುವೆ ಮೂಲಕ ನೀರು ಹರಿಸುತ್ತಿದ್ದಾರೆ. ಕಾಲುವೆಗೆ ಹರಿಯುವ ಒಂದು ತೊಟ್ಟು ನೀರನ್ನೂ ಈ ಭಾಗದ ರೈತರು ಬಳಸಿಕೊಳ್ಳದಂತೆ ತೀವ್ರ ನಿಗಾ ಇಡಲು ಕೃಷ್ಣಾ ಭಾಗ್ಯ ನಿಗಮದ ಇಲಾಖೆ ತನ್ನ ನೌಕರರನ್ನು ಕಾಲುವೆಯ ಭಾಗದಲ್ಲಿ ಪಾಳೆಯದಲ್ಲಿ ಕಾಯುವ ಕೆಲಸಕ್ಕೆ ನೇಮಿಸಿದೆ.

ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪುರೈಸುವ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದ್ದು ಶೀಘ್ರವೇ ಪೂರ್ಣಗೊಳಿಸಲಾಗುವುದು. ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು
- ಶರಣಬಸಪ್ಪಗೌಡ ದರ್ಶನಾಪುರ, ಸಚಿವ
ಮಾರ್ಚ್‌ ಮೊದಲ ವಾರದಲ್ಲೇ ಬಾವಿಯ ನೀರು ಬತ್ತಿದ್ದು ಮುಂಬರುವ ದಿನಗಳಲ್ಲಿ ನೀರಿಗೆ ತೊಂದರೆಯಾಗಲಿದೆ. ಕೃಷ್ಣಾ ನೀರನ್ನು ಬಳಸಿಕೊಂಡು ಜನತೆಗೆ ಒದಗಿಸಲು ಅಧಿಕಾರಿಗಳು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು
ಸಂಗಣ್ಣ ತುಂಬಗಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT