ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಿನ ವಿಷಯದಲ್ಲಿ ರಾಜಕೀಯ ಸಲ್ಲ’

ಬಿಜೆಪಿ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣ ಕೈಬಿಡಲು ಆಗ್ರಹಿಸಿ ಬೃಹತ್ ಪ್ರತಿಭಟನೆ
Published 21 ಸೆಪ್ಟೆಂಬರ್ 2023, 6:47 IST
Last Updated 21 ಸೆಪ್ಟೆಂಬರ್ 2023, 6:47 IST
ಅಕ್ಷರ ಗಾತ್ರ

ಹುಣಸಗಿ: ನಾರಾಯಣಪುರದ ಬಸವಸಾಗರ ಮತ್ತು ಆಲಮಟ್ಟಿ ಜಲಾಶಯಗಳಲ್ಲಿ ಅಪಾರ ಪ್ರಮಾಣದ ನೀರಿನ ಸಂಗ್ರಹವಿದ್ದರೂ ಚಾಲುಬಂದಿ ಹೆಸರಿನಲ್ಲಿ ರೈತರನ್ನು ಶೋಷಣೆ ಮಾಡುವುದು ಸರಿಯಲ್ಲ. ನೀರಿನ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿರುವುದನ್ನು ಸಹಿಸುವುದಿಲ್ಲ ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು.

ಕಾಲುವೆಗೆ ನಿರಂತರ ನೀರು ಹರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಹುಣಸಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ನಮ್ಮ ಅಧಿಕಾರ ಅವಧಿಯಲ್ಲಿ ಎಂಥ ಸಂದಿಗ್ಧ ಪರಿಸ್ಥಿತಿ ಬಂದರೂ ಎರಡನೇ ಅವಧಿಗೆ (ಹಿಂಗಾರು) ಮಾತ್ರ ಚಾಲುಬಂದಿ ಮಾಡಲಾಗಿತ್ತು. ಆದರೆ ಮುಂಗಾರು ಹಂಗಾಮಿನಲ್ಲಿ ಕಾಲುವೆ ನೀರು ಹರಿಸಲು ಇಂಥ ಕ್ರಮ ಕೈಗೊಂಡಿದ್ದಿಲ್ಲ. ರೈತರನ್ನು ಸಂಕಷ್ಟಕ್ಕೆ ಗುರಿ ಮಾಡಿ ಹಿಂಗಾರು ಹಂಗಾಮಿಗಾಗಿ ಹಾಗೂ ಒಂದು ವರ್ಷ ಕೈಗಾರಿಕೆಯ ಹೆಸರಿನಲ್ಲಿ ನೀರು ಶೇಖರಣೆ ಮಾಡಿಟ್ಟುಕೊಳ್ಳುವುದು ಏತಕ್ಕೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತಾಲ್ಲೂಕಿನಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ ಹಾಗೂ ಕಕ್ಕೇರಾ ಪುರಸಭೆ ಸದಸ್ಯ ಹಾಗೂ ಇತರರ ವಿರುದ್ಧ ಹುಣಸಗಿ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಬಿಜೆಪಿ ಕಾರ್ಯಕರ್ತರಿಗೆ ಅನಾವಶ್ಯಕವಾಗಿ ತೊಂದರೆ ನೀಡಲಾಗುತ್ತಿದೆ. ಹುಣಸಗಿ ಪಿಎಸ್ಐ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಯುವ ಮುಖಂಡ ಹನುಮಂತ ನಾಯಕ (ಬಬಲುಗೌಡ) ಮಾತನಾಡಿ,‘ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನವರು ಅನಾವಶ್ಯಕವಾಗಿ ರಾಜಕೀಯ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪೊಲೀಸ್ ಅಧಿಕಾರಿಗಳು ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸನಗೌಡ ಯಡಿಯಾಪುರ, ಜಿಲ್ಲಾ ಪ್ರಮುಖ ಎಚ್.ಸಿ.ಪಾಟೀಲ, ಬಸವರಾಜ ಸ್ಥಾವರಮಠ, ಸುರೇಶ ಸಜ್ಜನ್ ಮಾತನಾಡಿ,‘ಕಾನೂನು ಎಲ್ಲರಿಗೂ ಒಂದೇ. ಆದ್ದರಿಂದ ಸುಳ್ಳು ಪ್ರಕರಣ ಕೈಬಿಡಬೇಕು. ತಾಲ್ಲೂಕಿನಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿರುವ ನೀರಾವರಿ ಯೋಜನೆಯ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಬೇಕು’ ಎಂದು ಆಗ್ರಹಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶಿಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ, ಮುಖಂಡರಾದ ರಾಜಾ ಹನುಮಪ್ ಪನಾಯಕ ತಾತಾ, ವೀರೇಶ ಚಿಂಚೋಳಿ, ಸಂಗಣ್ಣ ವೈಲಿ, ಬಸನಗೌಡ ಅಳ್ಳಿಕೋಟಿ, ಬಿ.ಬಿ.ಬಿರಾದಾರ, ರಂಗನಾಥ ದೊರೆ, ವೀರಸಂಗಪ್ಪ ಹಾವೇರಿ, ವೆಂಕಟೇಶ ಸಾಹುಕಾರ, ಗದ್ದೆಪ್ಪ ಪೂಜಾರಿ, ಶರಣು ನಾಯಕ ಬೈರಿಮಡ್ಡಿ, ಅಣ್ಣಪ್ಪ ಸಾಹುಕಾರ ಹಾಗೂ ರಂಗನಗೌಡ ದೇವಿಕೇರಿ ಇದ್ದರು.

ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಯಾದಗಿರಿ ಉಪವಿಭಾಗಾಧಿಕಾರಿ ಹಂಪಣ್ಣ ಅವರಿಗೆ ಸಲ್ಲಿಸಲಾಯಿತು.

ಡಿವೈಎಸ್ಪಿಗಳಾದ ಜಾವೇದ್ ಇನಾಮದಾರ, ಬಸವೇಶ್ವರ ಅವರ ನೇತೃತ್ವದಲ್ಲಿ 6 ಜನ ಸಿಪಿಐ, 20 ಪಿಎಸ್ಐ ಹಾಗೂ 200ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.

ಹುಣಸಗಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ  ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳೆಯರು
ಹುಣಸಗಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ  ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳೆಯರು

Cut-off box - ‘ಸಂಕಷ್ಟಕ್ಕೆ ಗುರಿಮಾಡುವುದು ಸಲ್ಲ’ ನಾರಾಯಣಪುರ ಮತ್ತು ಆಲಮಟ್ಟಿ ಜಲಾಶಯಗಳಲ್ಲಿ ಸುಮಾರು 40 ಟಿಎಂಸಿ ಅಡಿ ನೀರನ್ನು ಮುಂದಿನ ಅವಧಿಗಾಗಿ ಶೇಖರಣೆ ಮಾಡಿಟ್ಟುಕೊಳ್ಳಲಾಗಿದೆ. ಇದರ ಹಿಂದೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ನಾಯಕರ ಕೈವಾಡವಿದೆ. ಅಲ್ಲಿನ ರೈತರ ಹಿತಕ್ಕಾಗಿ ಇಲ್ಲಿನ ರೈತರನ್ನು ಸಂಕಷ್ಟಕ್ಕೆ ಗುರಿಮಾಡುವುದು ಎಷ್ಟು ಸರಿ. ಇದನ್ನು ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ನಾಯಕರು ಪ್ರಶ್ನಿಸದೇ ಅವರು ಹೇಳಿದಂತೆ ತಲೆಯಾಡಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡರ ನಡೆಯ ಕುರಿತು ಮಾಜಿ ಸಚಿವ ರಾಜೂಗೌಡ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT