ಶುಕ್ರವಾರ, ಜುಲೈ 30, 2021
24 °C
ಯೋಗ ಮಾಡಿ ರೋಗ ಓಡಿಸಿ, ದೇಹದ ಆರೋಗ್ಯ, ಸದೃಢತೆಯಿಂದ ಯಶಸ್ಸು ಸಾಧ್ಯ: ಜಿಲ್ಲಾಧಿಕಾರಿ

ಯಾದಗಿರಿ ಜಿಲ್ಲೆಯಾದ್ಯಂತ ವಿಶ್ವ ಯೋಗ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಯೋಗ ದಿನವನ್ನು ಆಚರಿಸಲಾಯಿತು.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ‘ಯೋಗದೊಂದಿಗೆ ಮನೆಯಲ್ಲಿರಿ’ ಎಂಬ ಘೋಷ ವಾಕ್ಯದೊಂದಿಗೆ ಯೋಗ ದಿನ ಆಚರಿಸಲಾಯಿತು.

ಲುಂಬಿನಿ ವನ: 7ನೇ ಅಂತರರಾಷ್ಟ್ರೀಯ ಯೋಗಾ ದಿನಾಚರಣೆಯನ್ನು ನಗರದ ಲುಂಬಿನಿ ವನದಲ್ಲಿ ಆಚರಿಸಲಾಯಿತು. ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ, ಆಯುಷ್‌ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಪತಾಂಜಲಿ ಯೋಗ ಸಮಿತಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಸಸಿಗೆ ನೀರೆರೆದು ಚಾಲನೆ ನೀಡಿದರು.

ಯೋಗಾಭ್ಯಾಸದ ನಂತರ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾತನಾಡಿ, ಜೀವನದಲ್ಲಿ ದೇಹದ ಆರೋಗ್ಯ ಮತ್ತು ಸದೃಢತೆ ಮುಖ್ಯ. ನಾವು ಆರೋಗ್ಯವಂತರಾಗಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ನಮಗೆ ಕೊರೊನಾ ಸೋಂಕು ಮುಖ್ಯವಾದ ಪಾಠ ಕಲಿಸಿದೆ. ನಾವು ಔಷಧಿಗಳ ವಿಚಾರದಲ್ಲಿ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದಿದ್ದರೂ ನಮ್ಮ ರೋಗ ನಿರೋಧಕ ಶಕ್ತಿ ಗಟ್ಟಿಯಾಗಿದ್ದರೆ ಎಲ್ಲಾ ತರಹದ ಸಮಸ್ಯೆಗಳನ್ನು ಎದುರಿಸಬಹುದು. ಹೀಗಾಗಿ ನಾವು ದಿನಾಲೂ ಯೋಗ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿಗೂ ದಿನಾಲೂ ಯೋಗಾಭ್ಯಾಸ ಮಾಡಲು ತಿಳಿಸಿದ್ದೇನೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಯೋಗವನ್ನು ನಾವು ಪ್ರತಿನಿತ್ಯ ಅಳವಡಿಸಿಕೊಂಡರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಯೋಗವನ್ನು ನೀವು ಮಾಡುವುದಲ್ಲದೇ ನಿಮ್ಮ ಕುಟುಂಬದವರು ಮತ್ತು ನೆರೆಹೊರೆಯವರಿಗೂ ಯೋಗದ ಉಪಯುಕ್ತತೆ ತಿಳಿಸಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪತಾಂಜಲಿ ಯೋಗ ಸಮಿತಿಯ ಮುಖ್ಯಸ್ಥ ಅನಿಲ್ ಗುರೂಜಿ ಒಂದು ಗಂಟೆಗಳ ಕಾಲ ಯೋಗಾಭ್ಯಾಸ ಮಾಡಿಸಿದರು. ಗುರುಪ್ರಸಾದ್ ವೈದ್ಯ ನಿರೂಪಿಸಿದರು. ಜಿಲ್ಲಾ ಆಯುಷ್‌ ಅಧಿಕಾರಿ ವಂದನಾ ಜೆ ಗಾಳಿಯವರ್‌ ವಂದಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಹಳ್ಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಭೀಮರಾಯ ಕಲ್ಲೂರು, ಆಯುಷ್‌ ವೈದ್ಯಾಧಿಕಾರಿ ಡಾ.ಶಿವಲಿಂಗಪ್ಪ ಎಸ್ ಪಾಟೀಲ, ಸಂಗಮೇಶ ಕೆಂಭಾವಿ ಇದ್ದರು.

ಸಸಿ ನೆಡುವಿಕೆ: ಅಂತರರಾಷ್ಟ್ರೀಯ ಯೋಗಾ ದಿನಾಚರಣೆ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಸಸಿ ನೆಟ್ಟು ನೀರೆರೆದರು. ಆ ನಂತರ ಕ್ರೀಡಾಂಗಣ ಹೊರಾಂಗಣದಲ್ಲಿ ವೀಕ್ಷಕರ ಗ್ಯಾಲರಿ ನಿರ್ಮಾಣದ ಕಾಮಗಾರಿಗಳನ್ನು ಪರಿಶೀಲಿಸಿದರು. 

ಶಾಂತಿ ಸದನ ಆಂಗ್ಲ ಮಾಧ್ಯಮ ಶಾಲೆ: ನಗರದ ಶಾಂತಿ ಸದನ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನವನ್ನು  ಆನ್‌ಲೈನ್‌ ಮೂಲಕ ಸೋಮವಾರ ಆಚರಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಬಸವಂತರೆಡ್ಡಿ ವೀರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೋಗ ಶಿಕ್ಷಕಿ ಶ್ವೇತಾ ಜಯಂತ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರು.

ಮಕ್ಕಳು ಶ್ವೇತ ವಸ್ತ್ರಧಾರಿಗಳಾಗಿ ಉತ್ಸಾಹದಿಂದ ಪಾಲ್ಗೊಂಡು ಯೋಗ ದಿನಾಚರಣೆಯಲ್ಲಿ ಸಂಭ್ರಮದಿಂದ ಆಚರಿಸಿದರು.

***

ಯೋಗದಿಂದ ರೋಗವನ್ನು ಓಡಿಸಬಹುದು. ಕೊರೊನಾ ಮಾತ್ರವಲ್ಲ, ಯಾವುದೇ ಸೋಂಕು ಬಂದರೂ ಅದನ್ನು ನಾವು ಎದುರಿಸಲು ಸಾಧ್ಯವಾಗುತ್ತದೆ
ಡಾ.ರಾಗಪ್ರಿಯಾ ಆರ್‌, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು