ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕೃಷ್ಣಾ ಪ್ರವಾಹದ 200 ಟಿಎಂಸಿ ಅಡಿ ನೀರು ನದಿಗೆ

ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹರಿದು ಹೋದ ನೀರು
Last Updated 3 ಆಗಸ್ಟ್ 2021, 3:13 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ 15 ದಿನಗಳಿಂದ ಕೃಷ್ಣಾ ನದಿಗೆ ಪ್ರವಾಹದ ನೀರನ್ನು ಹರಿಸುತ್ತಿದ್ದು, ಅಂದಾಜು 200 ಟಿಎಂಸಿ ಅಡಿ ನೀರು ಹರಿದು ಹೋಗಿದೆ. ಪ್ರವಾಹ ಸಂಪೂರ್ಣ ಇಳಿಕೆಯಾದ ನಂತರ ಗಂಟೆಗೆ ಹರಿಸಿದ ನೀರಿನ ಹರಿವು ಲೆಕ್ಕ ಮಾಡಿದರೆ ಸರಿಯಾದ ನೀರಿನ ಪ್ರಮಾಣ ತಿಳಿದು ಬರಲಿದೆ.

ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶದಿಂದ ಕೃಷ್ಣಾ ನದಿಗೆ ಜುಲೈ 15 ರಿಂದ ನೀರು ಹರಿಸಲಾಗುತ್ತಿದ್ದು, ಹಂತ ಹಂತವಾಗಿ ಏರಿಕೆ ಮಾಡಲಾಗಿತ್ತು.

ಕೃಷ್ಣಾ ನದಿ ಪಾತ್ರದಲ್ಲಿ ಮಳೆಯಾಗಿದ್ದರಿಂದಾಗಿ ನಾರಾಯಣಪುರ ಬಸವಸಾಗರಕ್ಕೆ ಒಳಹರಿವು ಹೆಚ್ಚಳವಾಗಿತ್ತು. ಜುಲೈ 22ರಿಂದ ಪ್ರವಾಹದ ನೀರು ಏರಿಕೆ ಹೆಚ್ಚಾಗಿ ಜುಲೈ 24ರಂದು ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಸೇತುವೆ ಮುಳುಗಡೆಯಾಗಿತ್ತು. ಇದರಿಂದ ಮೂರು ಜಿಲ್ಲೆಗಳ ಸಂಚಾರ ಸ್ಥಗಿತವಾಗಿತ್ತು. ಇದರಿಂದ 46 ಕಿ.ಮೀ. ಸುತ್ತುವರೆದು ದೇವದುರ್ಗ ತಾಲ್ಲೂಕಿಗೆ ತೆರಳಬೇಕಿತ್ತು.

ಹರಿದು ಹೋದ ನೀರು: ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾರಾಯಣಪುರ ಜಲಾಶಯವನ್ನು ಸೆಪ್ಟೆಂಬರ್ 22, 1982ರಲ್ಲಿ ಅಂದಿನ ಮುಖ್ಯಮಂತ್ರಿ ಆರ್‌.ಗುಂಡೂರಾವ್ ಅವರು ಉದ್ಘಾಟಿಸಿ ರಾಷ್ಟ್ರಕ್ಕೆ ಅರ್ಪಿಸಿದ್ದರು. ಅಂದಿನಿಂದ ಜಲಾಶಯ ಜಿಲ್ಲೆಯ ಜೀವನಾಡಿಯಾಗಿದೆ.

ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ. ಇನ್ನೂ ಪ್ರವಾಹದ ಸಂದರ್ಭದಲ್ಲಿ ಲಕ್ಷಾಂತರ ಕ್ಯುಸೆಕ್‌ ನೀರು ಆಂಧ್ರ, ತೆಲಂಗಾಣದ ಪಾಲಾಗುತ್ತಿದೆ.

ನಿರ್ಮಾಣವಾಗದ ಬ್ಯಾರೇಜ್‌ಗಳು: ಯಾದಗಿರಿ ತಾಲ್ಲೂಕಿನ ಠಾಣಗುಂದಿ ಬಳಿ ಬ್ರೀಜ್‌ ಕಂ ಬ್ಯಾರೇಜ್‌, ವಡಗೇರಾ ತಾಲ್ಲೂಕಿನ ಚೆನ್ನೂರ (ಜೆ), ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಬಳಿ ಬ್ರೀಜ್‌ ಕಂ ಬ್ಯಾರೇಜ್‌ ನಿರ್ಮಿಸಲು ಆಯಾ ಭಾಗದ ರೈತರ ಒತ್ತಾಯವಾಗಿದೆ. ಬಜೆಟ್‌ನಲ್ಲಿಯೂ ಘೋಷಿಸುವಂತೆ ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಅಂದಿನ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಆದರೆ, ಇದು ಇಲ್ಲಿಯವರೆಗೆ ನನೆಗುದಿಗೆ ಬಿದ್ದಿದೆ. ಅಲ್ಲದೆ ಕೊಳ್ಳೂರು ಸೇತುವೆ ಎತ್ತರಿಸುವ ಬಗ್ಗೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಅದು ಭರವಸೆಯಾಗಿ ಉಳಿದಿದೆ.

‘ರಾಜ್ಯದಲ್ಲಿ ಸಣ್ಣಮಟ್ಟದ ಬ್ಯಾರೇಜ್‌ಗಳಿದ್ದು, ಹೆಚ್ಚಿನ ನೀರು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮುಂದೆ ನದಿಗೆ ಹರಿಸಬೇಕಾಗುತ್ತದೆ. ಆಂಧ್ರದಲ್ಲಿ ಜಲಾಶಯಗಳು ವಿಶಾಲವಾಗಿದ್ದು, ಪ್ರವಾಹದ ನೀರನ್ನು ಹಿಡಿದುಕೊಳ್ಳುತ್ತವೆ. ಹೀಗಾಗಿ ಅವರಿಗೆ ಸಮಸ್ಯೆ ಆಗಿಲ್ಲ. ಅಲ್ಲದೇ ನ್ಯಾಯಾಲಯದ ತೀರ್ಪಿನಂತೆ ನಾವು ನಡೆದುಕೊಳ್ಳಬೇಕಾಗುತ್ತದೆ’ ಎಂದು ಜಲಾಶಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಪ್ರತಿ ವರ್ಷ ಪ್ರವಾಹ ಬಂದಾಗ ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ. ಆದರೆ, ಜನಪ್ರತಿನಿಧಿಗಳು ಭೇಟಿ ನೀಡಿ ಕೇವಲ ಭರವಸೆ ನೀಡುತ್ತಿದ್ದಾರೆ. ನೂರಾರು ಎಕರೆ ಪ್ರದೇಶ ಜಲಾವೃತ್ತವಾಗಿದೆ. ಭತ್ತ, ಹತ್ತಿ, ಸೂರ್ಯಕಾಂತಿ ಬೆಳೆ ಹಾಳಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬೆಳೆ ನಷ್ಟವಾಗಿದೆ. ಇದರಿಂದ ನಮ್ಮ ಭಾಗಕ್ಕೆ ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕು’ ಎಂದು ರೈತ ಶಿವಾರೆಡ್ಡಿ ಪಾಟೀಲ ಕೊಳ್ಳೂರು ಆಗ್ರಹಿಸುತ್ತಾರೆ.

****

ಕೃಷ್ಣಾ ನದಿ ಅಬ್ಬರ ಇಳಿಕೆ

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹರಿಸುವ ಪ್ರಮಾಣ ಇಳಿಕೆಯಾಗಿದ್ದು, ರೈತರ ಆತಂಕ ದೂರವಾಗಿದೆ.

ಜಲಾಶಯದಿಂದ 1.54 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೀರು ಇಳಿಕೆಯಾಗುವ ಸಾಧ್ಯತೆ ಇದೆ.

ಕಳೆದ 10 ದಿನಗಳಿಂದ ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಸೇತುವೆ ಮುಳುಗಡೆಯಾಗಿತ್ತು. ಇದರಿಂದ ಯಾದಗಿರಿ, ಕಲಬುರ್ಗಿ, ರಾಯಚೂರು ಮಾರ್ಗ ಬಂದ್ ಆಗಿತ್ತು. ಸೋಮವಾರ ಸೇತುವೆ ಮೇಲೆ ಹರಿಯುವ ನೀರಿನ ಪ್ರಮಾಣ ಇಳಿಕೆಯಾಗಿದೆ.

ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ಹಾನಿ: ಕೃಷ್ಣಾ ನದಿ ಪ್ರವಾಹದಿಂದ ಜಿಲ್ಲೆಯ ಮೂರು ತಾಲ್ಲೂಕಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾಳಾಗಿವೆ. 50ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು.

ಸುರಪುರ, ಶಹಾಪುರ, ವಡಗೇರಾ ತಾಲ್ಲೂಕಿನ ನದಿಯಂಚಿನ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಭತ್ತ, ಹತ್ತಿ ಬೆಳೆಗಳು ಹಾಳಾಗಿವೆ. ಎಕರೆಗೆ ₹20 ರಿಂದ ₹30 ಸಾವಿರ ಹಣ ಖರ್ಚು ಮಾಡಿ ಬೆಳೆದಿದ್ದ ಫಸಲು ನಷ್ಟವಾಗಿದೆ.ಕಳೆದ 10 ದಿನಗಳಿಂದ ಜಿಲ್ಲೆ ಕೃಷ್ಣಾ ನದಿ ಪ್ರವಾಹ ಎದುರಿಸಿತ್ತು.

‘ಪ್ರವಾಹದ ನೀರು ಇಳಿಕೆಯಾಗುತ್ತಿದ್ದು, ಶೀಘ್ರ ಹಾನಿಯಾದ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸರ್ವೆ ಮಾಡಬೇಕು. ತಕ್ಷಣವೇ ಪರಿಹಾರ ನೀಡಬೇಕು’ ಎಂದು ರೈತ ಶಿವಾರೆಡ್ಡಿ ಪಾಟೀಲ ಆಗ್ರಹಿಸಿದ್ದಾರೆ.

***

ಕೃಷ್ಣಾ ನ್ಯಾಯಾಧೀಕರಣ ತೀರ್ಪಿನಂತೆ ನೀರಿನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ನೀರು ಹಿಡಿದಿಟ್ಟುಕೊಳ್ಳುವಂತೆ ಇಲ್ಲ
ಶಂಕರ್ ನಾಯ್ಕೋಡಿ,ಡ್ಯಾಂ ಡಿವಿಜನ್ ಕಾರ್ಯನಿರ್ವಾಹಕ ಎಂಜಿನಿಯರ್

***

ಕೊಳ್ಳೂರು ಗ್ರಾಮದ ಬಳಿ ಬ್ರೀಜ್‌ ಕಂ ಬ್ಯಾರೇಜ್‌ ನಿರ್ಮಿಸಿ ಪ್ರವಾಹದ ನೀರನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಈ ಮೂಲಕ ರೈತರಿಗೆ ನೆರವಾಗಬೇಕು
ಶಿವಾರೆಡ್ಡಿ ಪಾಟೀಲ, ಕೊಳ್ಳೂರು (ಎಂ) ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT