ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಸ್ಥಳೀಯ ಸಂಸ್ಥೆಗಳಲ್ಲಿ ಪ್ರಭಾರಿಗಳ ಆಡಳಿತ

3 ನಗರಸಭೆ, 3 ಪುರಸಭೆ, 1 ಪಟ್ಟಣ ಪಂಚಾಯ್ತಿಯಲ್ಲಿ ಸಿಬ್ಬಂದಿ ಕೊರತೆ
Last Updated 18 ಜನವರಿ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಸಕಾಲಕ್ಕೆ ಅಭಿವೃದ್ಧಿ ಕಾರ್ಯ ಚಟುವಟಿಕೆಗಳು ನಡೆಯದೆ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕು ನಗರಸಭೆ ಹೊಂದಿದ್ದು, ಗುರುಮಠಕಲ್‌, ಕೆಂಭಾವಿ, ಕಕ್ಕೇರಾ ಪುರಸಭೆ, ಹುಣಸಗಿ ಪಟ್ಟಣ ಪಂಚಾಯಿತಿ ಹೊಂದಿವೆ. ವಡಗೇರಾ ತಾಲ್ಲೂಕು ಕೇಂದ್ರವಾದರೂ ಗ್ರಾಮ ಪಂಚಾಯಿತಿ ಸ್ಥಾನವನ್ನು ಹೊಂದಿದೆ.ಹುಣಸಗಿ ತಾಲ್ಲೂಕು ಕೇಂದ್ರವಾದರೂ ಪಟ್ಟಣ ಪಂಚಾಯಿತಿ ಸ್ಥಾನ ಹೊಂದಿದ್ದು, ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೆ ಏರಿಸಲಾಗಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನೇ ಪಟ್ಟಣ ಪಂಚಾಯಿತಿಗೂ ಮುಂದುವರಿಸಲಾಗಿದೆ.

ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯಿತಿಯಲ್ಲಿ ಪ್ರಭಾರಿ ಅಧಿಕಾರಿಗಳು, ಸಿಬ್ಬಂದಿಕಾರುಬಾರು ನಡೆಸುತ್ತಿದ್ದಾರೆ.ಯಾದಗಿರಿ ನಗರಸಭೆಯಲ್ಲಿ ಎರಡೂವರೆ ತಿಂಗಳಿನಿಂದ ಪ್ರಭಾರಿ ಪೌರಾಯುಕ್ತರು ಕಾರ್ಯನಿರ್ವಹಿಸುತ್ತಿದ್ದಾರೆ.

2021ರ ಅಕ್ಟೋಬರ್ 29ರಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಕ್ಕಪ್ಪ ಎಚ್‌. ಅವರಿಗೆ ಯಾದಗಿರಿ ನಗರಸಭೆ ಪೌರಾಯುಕ್ತ ಹೆಚ್ಚುವರಿ ಹೊಣೆ ನೀಡಲಾಗಿದೆ. ಅಂದಿನಿಂದ ಪ್ರಭಾರಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಗಿನ ಪೌರಾಯುಕ್ತ ಸೇರಿ ಮೂವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಅಂದಿನಿಂದ ಈ ಹುದ್ದೆಗಳು ಭರ್ತಿಯಾಗಿಲ್ಲ.

ಯಾದಗಿರಿ ನಗರಸಭೆಯಲ್ಲಿ ಎ, ಬಿ, ಸಿ, ಡಿ ವೃಂದದಲ್ಲಿ236 ಹುದ್ದೆಗಳಿದ್ದು, ಇದರಲ್ಲಿ 110 ಕಾಯಂ ಸಿಬ್ಬಂದಿಇದ್ದಾರೆ. 60 ಸಿಬ್ಬಂದಿಯನ್ನು ಹೆಚ್ಚುವರಿ ಮತ್ತು ಹೊರಗುತ್ತಿಗೆ, ದಿನಗೂಲಿ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. 66 ಹುದ್ದೆಗಳು ಖಾಲಿ ಉಳಿದಿವೆ.

ಪೌರಾಯುಕ್ತರು ಪ್ರಭಾರಿ ಇದ್ದು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ಎಂಜಿನಿಯರ್‌ ಹುದ್ದೆ ಸದ್ಯಕ್ಕೆ ಖಾಲಿ ಇದೆ. ಇವರ ಸ್ಥಾನವನ್ನು ಹೆಚ್ಚುವರಿ ಸಿಬ್ಬಂದಿಗೆ ಹೊಣೆ ವಹಿಸಲಾಗಿದೆ.

ಬಿ ಗ್ರೂಪ್‌ನ 4 ಸ್ಥಾನಗಳಲ್ಲಿ ಇಬ್ಬರು ಕಾಯಂ ಸಿಬ್ಬಂದಿ ಇದ್ದರೆ, ಒಬ್ಬರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಮತ್ತೊಂದು ಸ್ಥಾನ ಖಾಲಿಯಾಗಿ ಉಳಿದಿದೆ.

ಜ್ಯೂನಿಯರ್ ಎಂಜಿನಿಯರ್‌, ಪರಿಸರ ಎಂಜಿನಿಯರ್‌, ಆರೋಗ್ಯ ನಿರೀಕ್ಷಕರು, ಕಂದಾಯ ಅಧಿಕಾರಿ, ಬಿಲ್‌ ಕಲೆಕ್ಟರ್‌ ಮತ್ತು ವಾಲ್‌ ಮ್ಯಾನ್‌ಗಳ ಹುದ್ದೆಯೂ ಪೂರ್ಣ ಭರ್ತಿಯಾಗಿಲ್ಲ. ಯಾದಗಿರಿಯ ಕೆಲವರಿಗೆ ಬೇರೆ ಕಡೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಕೆಲವರು ಯಾದಗಿರಿಯಲ್ಲಿ ಮೂರು ದಿನ, ಮತ್ತೊಂದು ಕಡೆ ಮೂರು ದಿನ ಕೆಲಸ ಮಾಡುತ್ತಿದ್ದಾರೆ.

‘ಯಾದಗಿರಿ ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು, ಹಲವಾರು ವಾರ್ಡ್‌ಗಳಲ್ಲಿ ಮೂಲ ಸೌಕರ್ಯವಿಲ್ಲ. ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ’ ಎನ್ನುತ್ತಾರೆ ಯುವ ಕಾಂಗ್ರೆಸ್‌ ಮುಖಂಡ ಅವಿನಾಶ ಜಗನ್ನಾಥ ಹೇಳುತ್ತಾರೆ.

* ಸ್ಥಳೀಯ ಸಂಸ್ಥೆಗಳಲ್ಲಿ ಹುದ್ದೆ ಭರ್ತಿ ಮಾಡುವುದು ಸರ್ಕಾರದ ಹಂತದಲ್ಲಿದೆ. ಈಗಾಗಲೇ ಖಾಲಿ ಹುದ್ದೆಗಳ ಭರ್ತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

–ಶಾ ಆಲಂ ಹುಸೇನ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ

* 2021ರ ಅಕ್ಟೋಬರ್ 29ರಿಂದ ಯಾದಗಿರಿ ನಗರಸಭೆ ಪ್ರಭಾರಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಭಿವೃದ್ಧಿ ಕಾರ್ಯಗಳಿಗೆ ಸಮಸ್ಯೆಯಾಗಿಲ್ಲ.

– ಬಕ್ಕಪ್ಪ ಹೊಸಮನಿ, ನಗರಸಭೆ ಪ್ರಭಾರಿ ಪೌರಾಯುಕ್ತ

* ಯಾದಗಿರಿ ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಕಾಲಕ್ಕೆ ಕೆಲಸಗಳು ಆಗುತ್ತಿಲ್ಲ. ಪ್ರಭಾರಿ ಇದ್ದವರು ಬೇಕಾಬಿಟ್ಟಿ ವರ್ತಿಸುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ.

–ಅವಿನಾಶ ಜಗನ್ನಾಥ, ಯುವ ಕಾಂಗ್ರೆಸ್‌ ಮುಖಂಡ

* ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್‌ ಕಡಿತವಾದರೆ ಬ್ಯಾಕ್‌ ಅಪ್‌ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಸೇವೆ ಲಭ್ಯವಾಗುತ್ತಿಲ್ಲ. ಪೂರ್ಣ ಪ್ರಮಾಣದ ಸಿಬ್ಬಂದಿ ಇಲ್ಲದಿರುವುದು ಸಮಸ್ಯೆಯಾಗಿದೆ.

–ಮುಸ್ತಾಫ್‌ ಪಟೇಲ್‌, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT