ಸೋಮವಾರ, ಸೆಪ್ಟೆಂಬರ್ 27, 2021
20 °C
ಗುರುಮಠಕಲ್‌ ತಾಲ್ಲೂಕಿನ ಕೊಂಡಮೇಶ್ವರಿ ದೇವಸ್ಥಾನದಲ್ಲಿ ಚೇಳಿನ ಜೊತೆ ಭಕ್ತರ ಸಡಗರ

ಯಾದಗಿರಿ : ಕೊಂಡಮಹೇಶ್ವರಿ ದೇವಸ್ಥಾನದಲ್ಲಿ ಚೇಳಿನ ಜೊತೆ ಭಕ್ತರ ಸಡಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಚಿಕ್ಕ ಮಕ್ಕಳು, ಯುವಕ, ಯುವತಿಯರು ಕಲ್ಲಿನ ಸಂದಿನಲ್ಲಿ ಚೇಳು ಹುಡುಕುವುದು ಗುರುಮಠಕಲ್‌ ತಾಲ್ಲೂಕಿನ ಕಂದಕೂರ ಗ್ರಾಮದ ಕೊಂಡಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಕಂಡು ಬಂತು.

ಗುರುಮಠಕಲ್‌ ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿರುವ ಕೊಂಡಮೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ಬೆಟ್ಟದ ಪ್ರದೇಶದಲ್ಲಿ ಶ್ರಾವಣ ಮಾಸದ ಪಂಚಮಿ ದಿನ ಚೇಳುಗಳು ಕಾಣಿಸುತ್ತವೆ. ಇವುಗಳನ್ನು ಹುಡುಕಲು ಮಕ್ಕಳಾದಿಯಾಗಿ ಎಲ್ಲರೂ ಚಿಕ್ಕ, ಮಧ್ಯಮ ಗಾತ್ರದ ಕಲ್ಲುಗಳನ್ನು ಸರಿಸಿ ನೋಡುತ್ತಿದ್ದರು.

ಕೊಂಡಮೇಶ್ವರಿ ಅಥವಾ ಕೊಂಡಮಾಯಿ ಬೆಟ್ಟದಲ್ಲಿ ದೇವಸ್ಥಾನವಿದ್ದು, ಇಲ್ಲಿ ಚೇಳಿನ ಮೂರ್ತಿ ಇದೆ. ಗುಡಿಯಲ್ಲಿ ಚೇಳಿನ ಮೂರ್ತಿಗೆ ಪೂಜೆ ಸಲ್ಲಿಸುವುದರಿಂದ ಯಾರಿಗೂ ಕುಟುಕುವುದಿಲ್ಲ ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಶುಕ್ರವಾರ ಬೆಳಿಗ್ಗೆ ಬಿಸಿಲೇರಿದಂತೆ ಚೇಳುಗಳು ಹೆಚ್ಚು ಕಾಣಿಸಿಕೊಳ್ಳಲಾರಂಭಿಸಿದವು. ತಂಪಿನ ವಾತಾವರಣ ಇದ್ದಾಗ ಹೆಚ್ಚು ಚೇಳುಗಳು ಕಾಣಿಸದೆ ಕೆಲವರಿಗೆ ನಿರಾಶೆ ಮೂಡಿಸಿದವು.

ಚೇಳನ್ನು ಕೆನ್ನೆ, ಅಂಗೈ, ನಾಲಿಗೆ ಹೀಗೇ ಬಾಲ ಹಿಡಿದು ಚೇಳಿನ ಜೊತೆ ಭಕ್ತರು ಆಟವಾಡಿದರು. ಆದರೆ, ಚೇಳುಗಳು ಯಾರಿಗೂ ಕುಟುವುದಿಲ್ಲ. ಒಂದು ವೇಳೆ ಕುಟುಕಿದರೂ ವಿಷದ ಪ್ರಮಾಣ ಇರುವುದಿಲ್ಲ ಎನ್ನುವುದು ಭಕ್ತರ ಅಭಿಪ್ರಾಯವಾಗಿದೆ.

ಸುಮಾರು 5–6 ದಶಕಗಳಿಂದ ಕಂದಕೂರ ಕೊಂಡಮಾಯಿ ಜಾತ್ರೆ ಜರುಗುತ್ತಿದ್ದು, ಗ್ರಾಮಕ್ಕೆ ಮಾತ್ರ ಸೀಮಿತವಾಗಿತ್ತು. ಕಳೆದ 7–8 ವರ್ಷಗಳಲ್ಲಿ ಹೆಚ್ಚಿನ ಪ್ರಚಾರದಿಂದ ಸುತ್ತಮುತ್ತಲ ಗ್ರಾಮಗಳಲ್ಲದೇ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಿದ್ದರು.

ಅರಣ್ಯಾಧಿಕಾರಿ ಕಣ್ಣು ಕಾಣಿಸಲಿಲ್ಲ: ದೇವಸ್ಥಾನ ಹುಟ್ಟಿಕೊಂಡಿರುವ ಕುರಿತು ಕೊಂಡಮೇಶ್ವರಿ ದೇವಸ್ಥಾನದ ಆರ್ಚಕ ಬಾಬು ಪೂಜಾರಿ ಮಾತನಾಡಿ, ‘ಈ ಹಿಂದೆ ಇದು ಅರಣ್ಯ ಪ್ರದೇಶವಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಈಗ ಇರುವ ದೇವಸ್ಥಾನದ ಬಳಿ ಕುಳಿತುಕೊಂಡಿದ್ದರಂತೆ. ಆಗ ಅವರಿಗೆ ಕಣ್ಣು ಕಾಣಿಸದ ಕಾರಣ ಕೇಳಿ ದೇವಸ್ಥಾನ ನಿರ್ಮಿಸಿಸುತ್ತೇನೆ ಎಂದು ಹರಿಕೆ ಹೊತ್ತ ಮೇಲೆ ಕಣ್ಣು ಬಂದವು. ಅಂದಿನ ಇಂದಿನ ವರೆಗೆ ದೇವಸ್ಥಾನ ಜೀರ್ಣೋದ್ಧಾರವಾಗುತ್ತ ಬಂದಿದೆ’ ಎಂದು ಮಾಹಿತಿ ನೀಡಿದರು.

***

ಸುಮಾರು ವರ್ಷಗಳಿಂದ ಕೊಂಡಮೇಶ್ವರಿ ದೇವಸ್ಥಾನಕ್ಕೆ ಬರುತ್ತಿದ್ದು, ಚೇಳುಗಳನ್ನು ಹಿಡಿದು ಸಂಭ್ರಮಿಸುವುದು ಖುಷಿ ಕೊಡುತ್ತದೆ
ನವೀತಾ ಬೊಯಿನ್, ಗ್ರಾಮಸ್ಥೆ

***

ಕೊಂಡಮೇಶ್ವರಿ ದೇವಿಯ ಪ್ರಭಾವದಿಂದ ಪಂಚಮಿ ದಿನ ಚೇಳುಗಳು ಕಾಣಿಸಿಕೊಳ್ಳುತ್ತವೆ. ಆದರೆ, ಭಕ್ತರಿಗೆ ಕುಟುಕುವುದಿಲ್ಲ
ಅರ್ಜುನ್ ಹೊರಪೇಟ, ಗ್ರಾಮಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.