ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಭಾರತ್‌ ಬಂದ್‌ಗೆ ಜಿಲ್ಲಾದ್ಯಂತ ಮಿಶ್ರಪ್ರತಿಕ್ರಿಯೆ

ಗ್ರಾಮಾಂತರ ಭಾಗದಲ್ಲಿ ನಡೆಯದ ‘ಬಂದ್‌’; ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ
Last Updated 8 ಡಿಸೆಂಬರ್ 2020, 13:45 IST
ಅಕ್ಷರ ಗಾತ್ರ

ಯಾದಗಿರಿ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿವಿಧ ವಲಯ ಖಾಸಗೀಕರಣ ವಿರೋಧಿಸಿ ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ ನೀಡಿದ್ದ ಭಾರತ್‌ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಸಾರಿಗೆ, ಆಟೊ, ಟಂಟಂ ಇನ್ನಿತರ ವಾಹನಗಳ ಓಡಾಟ ಎಂದಿನಂತೆ ಇತ್ತು. ಅಂಗಡಿ ಮುಂಗಟ್ಟುಗಳನ್ನು ತೆಗೆಯಲಾಗಿತ್ತು.

ಜಿಲ್ಲೆಯ ಶಹಾಪುರ, ಸುರಪುರ, ವಡಗೇರಾ, ಗುರುಮಠಕಲ್‌, ವಡಗೇರಾ, ಹುಣಸಗಿ, ಕಕ್ಕೇರಾ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಪ್ರತಿಭಟನೆ ನಡೆಸಲಾಯಿತು. ಆದರೆ, ಸಂಪೂರ್ಣ ಬಂದ್‌ ಆಗಿಲ್ಲ. ಕೆಲವೊತ್ತು ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಮಧ್ಯಾಹ್ನದ ನಂತರ ಬಹುತೇಕ ಅಂಗಡಿಗಳು ತೆಗೆದವು.

ಬಂದ್‌ ಬಗ್ಗೆ ತಿಳಿದಿದ್ದ ಗ್ರಾಮೀಣ ಭಾಗದ ಜನತೆಯೂ ನಗರದ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಲಿಲ್ಲ. ಬಸ್‌ ಸಂಚಾರಿಸುತ್ತಿದ್ದರೂ ಕಡಿಮೆ ಪ್ರಯಾಣಿಕರಿದ್ದರು. ನಗರದ ಕೆಲ ಕಡೆ ಹೋಟೆಲ್‌, ಮಾರ್ಟ್‌ ಮುಚ್ಚಲಾಗಿತ್ತು. ಹೂ, ಹಣ್ಣು, ತರಕಾರಿ ವ್ಯಾಪಾರ ಎಂದಿನಂತೆ ನಡೆಯಿತು.

ಮಂಗಳವಾರ ಬೆಳಿಗ್ಗೆ ಕಾರ್ಮಿಕ, ರೈತ, ವಿದ್ಯಾರ್ಥಿಗಳ ಸಂಘಟನೆಗಳಿಂದ ನಗರದ ಹೊಸ ಬಸ್‌ ನಿಲ್ದಾಣ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಕಾರ್ಮಿಕ,ರೈತ ಪರ ಸಂಘಟನೆಗಳ ಪದಾಧಿಕಾರಿಗಳು ಧಿಕ್ಕಾರ ಕೂಗಿದರು.

ಕಾರ್ಪೊರೇಟ್‌ ನೀತಿಗಳಾದ ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಹಾಗೂ ಗುತ್ತಿಗೆ ಕೃಷಿ ಪದ್ಧತಿ ಕಾಯ್ದೆ ತಿದ್ದುಪಡಿಗಳನ್ನು ರದ್ದುಗೊಳಿಸಲು ಆಗ್ರಹಿಸಿದರು.

ನಂತರ ಕೇಂದ್ರ ಬಸ್ ನಿಲ್ದಾಣದಿಂದ ನೇತಾಜಿ ಸುಭಾಷ್ ಚಂದ್ರಬೋಸ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಅಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಪ್ರಮುಖರು ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಆರ್‌ಕೆಎಸ್, ಎಐಡಿಎಸ್‌ಒ, ಎಐಯುಟಿಯುಸಿ, ಕಿಸಾನ್‌ ಕಾಂಗ್ರೆಸ್‌ ಸೇರಿದಂತೆ ಕಾರ್ಮಿಕ, ರೈತಪರ ಸಂಘಟನೆಗಳು ಭಾಗವಹಿಸಿದ್ದವು.

ಕರ್ನಾಟಕ ರಾಜ್ಯ ರೈತ ಸಂಘ ವಿಭಾಗೀಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದು ರೈತರನ್ನು ಪ್ರತಾಪಕ್ಕೆ ತಳ್ಳಿದೆ. ಹಲವು ದಿನಗಳಿಂದ ದೆಹಲಿ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಜನಪ್ರತಿನಿಧಿಗಳು ಸೊಪ್ಪು ಹಾಕುತ್ತಿಲ್ಲ. ಕೃಷಿ ಕಾಯ್ದೆಗಳು ರೈತರ ಪಾಲಿಗೆ ಮರಣ ಶಾಸನವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ಬಡವರ ಮೇಲೆ ಗದಾ ಪ್ರಹಾರ ಮಾಡುತ್ತಿದೆ. ರೈತ ವಿರೋಧಿ ಕಾಯ್ದೆಗಳಿಂದ ಕೃಷಿ ಚಟುವಟಿಕೆಗಳನ್ನು ಖಾಸಗೀಕರಣ ಮಾಡಿ ರೈತರನ್ನು ತುಚ್ಛವಾಗಿ ನೋಡುತ್ತಿದೆ. ಇದರ ವಿರುದ್ಧ ನಾವು ಹೋರಾಡುತ್ತಿದ್ದೇವೆ. ರೈತರನ್ನು ಶೋಷಣೆಗೆ ಒಳಪಡಿಸುವ ಕಾಯ್ದೆಗಳಿಂದ ಯಾವುದೇ ಉಪಯೋಗವಿಲ್ಲ ಎಂದು ಆರೋಪಿಸಿದರು.

ಖಾಸಗೀಕರಣ ಮತ್ತು ವ್ಯಾಪಾರೀಕರಣದ ಪೆಡಂಭೂತ ಎಲ್ಲಾ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಹುರಿದು ಮುಕ್ಕಿದ ಮೇಲೆ, ಈಗ ಕೃಷಿ ಕ್ಷೇತ್ರಕ್ಕೂ ದಾಂಗುಡಿ ಇಟ್ಟಿದೆ ಎಂದರು.

ಕಿಸಾನ್‌ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ, ಆರ್‌ಕೆಎಸ್‌ ಜಿಲ್ಲಾ ಅಧ್ಯಕ್ಷ ಶರಣಗೌಡ ಗೂಗಲ್, ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಚೆನ್ನಪ್ಪ ಆನೆಗುಂದಿ, ವಿಭಾಗೀಯ ಕಾರ್ಯದರ್ಶಿ ನಾಗರತ್ನ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ಸಾಗರ, ಆರ್‌ಕೆಎಸ್ ಜಿಲ್ಲಾ ಸಹ ಕಾರ್ಯದರ್ಶಿ ಜಮಾಲ್ ಸಾಬ್, ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷೆ ಡಿ.ಉಮಾದೇವಿ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್‌., ಸಿಐಟಿಯು ಜಿಲ್ಲಾ ಮುಖಂಡ ಗಾಲಿಬ್‍ಸಾಬ್ ಎಂ ಬೆಳಗೇರ, ಎಐಟಿಯುಸಿ ಜಿಲ್ಲಾ ಸಹಕಾರ್ಯದರ್ಶಿ ಕಲ್ಪನಾ ಗುರುಸುಣಗಿ, ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ಸೈದಪ್ಪ ಎಚ್.ಪಿ., ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

***

ಮೂರು ಕರಾಳ ರೈತ ವಿರೋಧಿ ನೀತಿಗಳೂ ಕಾರ್ಪೋರೇಟ್ ಮನೆತನಗಳನ್ನು ಉದ್ಧಾರ ಮಾಡುತ್ತದೆಯೇ ಹೊರತು ಆದರಿಂದ ಜನಸಾಮಾನ್ಯರಿಗೆ ಯಾವ ಲಾಭವೂ ಆಗುವುದಿಲ್ಲ

- ಕೆ.ಸೋಮಶೇಖರ್,ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT