ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಘೋಷಣೆಗೆ ಸೀಮಿತವಾದ ಆರ್ಥಿಕ ಪ್ಯಾಕೇಜ್‌

ರಾಜ್ಯ ಸರ್ಕಾರದಿಂದ ಬಾರದ ಅನುದಾನ, ಫಲಾನುಭವಿಗಳಿಗೆ ದಕ್ಕದ ಪರಿಹಾರದ ಹಣ
Last Updated 11 ಜುಲೈ 2021, 15:41 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್-19 ಎರಡನೇ ಅಲೆ ಕಾರಣದಿಂದ ರಾಜ್ಯ ಸರ್ಕಾರ ಘೋಷಿಸಿರುವ ಮೊದಲ ಮತ್ತು ಎರಡನೇ ಕೋವಿಡ್ ಬೆಂಬಲ ಪ್ಯಾಕೇಜ್‌ ವಿವಿಧ ವರ್ಗಗಳ ಅರ್ಹ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ. ಇದರಿಂದ ಪ್ಯಾಕೇಜ್‌ ಘೋಷಣೆಗೆ ಮಾತ್ರ ಸೀಮಿತವಾಗಿದೆ.

ಜಿಲ್ಲೆಯಲ್ಲಿ 64 ಸಾವಿರ ಕಟ್ಟಡ ಕಾರ್ಮಿಕರಿದ್ದಾರೆ. 6,122 ಅಸಂಘಟಿತ ಕಾರ್ಮಿಕರಿದ್ದು, ಅವರಲ್ಲಿ 4,515 ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಿದೆ. 2021ರ ಜೂನ್‌ 6ರಿಂದ ಜುಲೈ 9ರವರೆಗೆ 16,820ಫಲಾನುಭವಿಗಳುಅರ್ಜಿ ಸಲ್ಲಿಸಿದ್ದಾರೆ. 7,833 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ.

46,219 ಕಟ್ಟಡ ಕಾರ್ಮಿಕರಿಗೆ ಹಣ

ಜಿಲ್ಲೆಯಲ್ಲಿ ಅವಿಭಜಿತ ಮೂರು ತಾಲ್ಲೂಕುಗಳಿಂದ 46,219 ಕಟ್ಟಡ ಕಾರ್ಮಿಕರಿಗೆ ಪರಿಹಾರದ ಹಣ ವಿತರಿಸಲಾಗಿದೆ. 18,019 ಕಾರ್ಮಿಕರಿಗೆ ಹಣ ವಿತರಿಸುವುದು ಇನ್ನೂ ಬಾಕಿ ಇದೆ. ಯಾದಗಿರಿ ಮತ್ತು ಗುರುಮಠಕಲ್‌ ತಾಲ್ಲೂಕಿನ 18,233, ಸುರಪುರ ಮತ್ತು ಹುಣಸಗಿತಾಲ್ಲೂಕಿನ 16,169, ಶಹಾಪುರ ಮತ್ತು ವಡಗೇರಾತಾಲ್ಲೂಕಿನ 11,817 ಕಟ್ಟಡ ಕಾರ್ಮಿಕರಿಗೆ ಸರ್ಕಾರದ ₹3 ಸಾವಿರ ಹಣ ಜಮಾ ಮಾಡಲಾಗಿದೆ.

ಅರಿವಿನ ಕೊರತೆ: ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ ಬಗ್ಗೆ ಹಲವಾರು ಫಲಾನುಭವಿಗಳಿಗೆ ಅರಿವೇ ಇಲ್ಲ. ಇದರಿಂದ ಹಲವಾರು ಫಲಾನುಭವಿಗಳು ಇದರಿಂದ ವಂಚಿತರಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಸೈಬರ್‌ ಸೆಂಟರ್‌ಗಳಲ್ಲಿ ಕೆಲವರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದ ಮಹಿಳಾ ಕಾರ್ಮಿಕರಿಗೂ ಈ ಬಗ್ಗೆ ಮಾಹಿತಿ ಇಲ್ಲ. ಎಲ್ಲ ಕಟ್ಟಡ ಕಾರ್ಮಿಕರು ಮೇಸ್ತ್ರಿ ಮೇಲೆ ಅವಲಂಬಿತರಾಗಿದ್ದಾರೆ. ಅವರು ತಮಗೆ ಇದರ ಬಗ್ಗೇ ಹೇಳಿಯೇ ಇಲ್ಲ ಎಂದು ಕಾರ್ಮಿಕರು ಹೇಳುತ್ತಾರೆ.

ಸೈಬರ್‌ ಸೆಂಟರ್‌ಗಳಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಫಲಾನುಭವಿಗಳು ಪರದಾಡುತ್ತಿದ್ದಾರೆ. ₹100ರಿಂದ 150ರ ವರೆಗೆ ದರ ನಿಗದಿಪಡಿಸಲಾಗಿದ್ದು, ಒಂದೇ ದಿನ ಅರ್ಜಿ ಸಲ್ಲಿಸಲು ಆಗದಂತ ಪರಿಸ್ಥಿತಿ ಇದೆ. ಸರ್ವರ್‌ ಇಲ್ಲದ ಕಾರಣ ಫಲಾನುಭವಿಗಳಿಗೆ ಕಷ್ಟವಾಗುತ್ತಿದೆ.

‘ಕಟ್ಟಡ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 12 ರಂದು ರಾಜ್ಯವ್ಯಾಪಿ ಹೋರಾಟಕ್ಕೆ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ಮುಂದಾಗಿದೆ.

‘ಕಟ್ಟಡ ಕಾರ್ಮಿಕ ಸಂಘಗಳು ಮತ್ತು ಕೇಂದ್ರ ಕಾರ್ಮಿಕ ಸಂಘಗಳ ಮೂಲಕವೇ ನೈಜ ಫಲಾನುಭವಿಗಳಿಗೆ ರೇಷನ್ ಕಿಟ್ ವಿತರಿಸಲು ಆಗ್ರಹಿಸಲಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ಜಿಲ್ಲಾ ಸಂಚಾಲಕ ರಾಮಲಿಂಗಪ್ಪ ಬಿ.ಎನ್. ಹೇಳುತ್ತಾರೆ.

‘ಸಂಘಟಿತ ನೋಂದಣಿಯಾದ ಕಾರ್ಮಿಕರ ಸಂಖ್ಯೆ 64,238 ಇದೆ. ಇದರಲ್ಲಿ 46,219 ಕಾರ್ಮಿಕರ ಖಾತೆಗಳಿಗೆ ಈಗಾಗಲೇ ಪರಿಹಾರದ ಹಣ ಜಮೆಯಾಗಿದೆ. 4,515ಅಸಂಘಟಿತ ಕಾರ್ಮಿಕರ ಖಾತೆಗಳಿಗೆ ಪರಿಹಾರದ ಧನ ಜಮಾ ಮಾಡಲಾಗಿದೆ. ಕಾರ್ಮಿಕರಿಗೆ ವಿತರಿಸಲು ಮೊದಲ ಹಂತದಲ್ಲಿ ಜಿಲ್ಲೆಗೆ 30 ಸಾವಿರ ದಿನಸಿ ಕಿಟ್ ಬಂದಿವೆ. ಅವುಗಳನ್ನು ತಾಲ್ಲೂಕುವಾರು ಹಂಚಲಾಗಿಲ್ಲ. ಹಂಚಿದ ಮೇಲೆ ಆದ್ಯತೆ ಮೇಲೆ ಕಿಟ್ ವಿತರಿಸಲಾಗುವುದು’ ಎಂದು ಕಾರ್ಮಿಕ ನಿರೀಕ್ಷಕ ಗಂಗಾಧರ ತಿಳಿಸಿದರು.

***

‘ಬೋಗಸ್ ನೋಂದಣಿ ನಿಯಂತ್ರಿಸಿ’

ಶಹಾಪುರ: ತಾಲ್ಲೂಕಿನಲ್ಲಿ ಕಾರ್ಮಿಕ ಇಲಾಖೆಗೆ ಸ್ವಂತ ಕಟ್ಟಡವಿಲ್ಲ. ನಗರದ ಸಿ.ಬಿ.ಶಾಲೆಯ ಬಳಿ ಮನೆಯೊಂದರಲ್ಲಿ ಬಾಡಿಗೆ ಪಡೆದು, ಕೆಲಸ ಕಾರ್ಯ ನಡೆಸಲಾಗುತ್ತಿದೆ. ಸರ್ಕಾರ ಕೋವಿಡ್ ಆರ್ಥಿಕ ಪ್ಯಾಕೇಜ್ ಘೋಷಣೆಯಾದ ತಕ್ಷಣ ಜನರು ಸೈಬರ್ ಕೇಂದ್ರದ ಮುಂದೆ ನಿಂತು ಕಾರ್ಮಿಕರೆಂದು ನೋಂದಣಿ ಕಾರ್ಯ ನಡೆಸಿದ್ದಾರೆ.

ಒಂದೇ ದಿನ 800ಕ್ಕೂ ಹೆಚ್ಚು ಜನ ನೋಂದಣಿ ಮಾಡಿಸಿದ್ದಾರೆ. ಇದು ಬೋಗಸ್ ಹಾವಳಿಗೂ ಕಾರಣವಾಗುತ್ತಿದೆ. ನಿಜವಾದ ಫಲಾನುಭವಿಗಳು ವಂಚಿತರಾಗುವ ಆತಂಕ ಶುರುವಾಗಿದೆ. ಜುಲೈ 8ರಿಂದ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

‘ಆರ್ಥಿಕ ಪ್ಯಾಕೇಜ್‌ನಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಮಾನದಂಡ ಸಮರ್ಪಕವಾಗಿಲ್ಲ. ಇದರಿಂದ ಅಸಂಘಟಿತ ವಲಯದ ಕಾರ್ಮಿಕರು ಪರದಾಡುವಂತೆ ಆಗಿದೆ. ಕೆಲಸ ಬಿಟ್ಟು ಸೈಬರ್ ಕೇಂದ್ರಕ್ಕೆ ಹೋಗಿ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು ಎನ್ನುವಷ್ಟರಲ್ಲಿ ಸರ್ವರ್ ಸಮಸ್ಯೆ ಉಂಟಾಗಿ ಮರಳಿ ಮನೆಗೆ ಬರಬೇಕು. ನಕಲಿ ನೋಂದಣಿ ಪ್ರಕ್ರಿಯೆ ನಿಲ್ಲಿಸಿ’ ಎಂದು ತಾಲ್ಲೂಕು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಭೀಮರಾಯ ಕದರಾಪುರ ತಿಳಿಸಿದ್ದಾರೆ.
****
31ರ ವರೆಗೆ ನೋಂದಣಿಗೆ ಅವಕಾಶ

ಸುರಪುರ: ಅಸಂಘಟಿತ ವಲಯದ ಕಾರ್ಮಿಕರಾದ ಕ್ಷೌರಿಕರು, ಅಗಸರು, ಟೈಲರ್‌ಗಳು, ಹಮಾಲರು, ಕುಂಬಾರರು ಸೇರಿದಂತೆ ಸರ್ಕಾರ ಗುರುತಿಸಿದ 11 ವಿವಿಧ ವಲಯದ ಕಾರ್ಮಿಕರಲ್ಲಿ ಬಹುತೇಕರು ತಮ್ಮ ಹೆಸರನ್ನು ಕೋವಿಡ್ ಪರಿಹಾರ ಪಡೆದುಕೊಳ್ಳಲು ನೋಂದಣಿ ಮಾಡಿಕೊಂಡಿಲ್ಲ. ನೋಂದಣಿ ಮಾಡಿಕೊಳ್ಳಲು ಜುಲೈ 31ರ ವರೆಗೆ ಕಾಲಾವಕಾಶವಿದೆ.

ಶುಕ್ರವಾರದವರೆಗೆ ಅಸಂಘಟಿತ ವಲಯದಿಂದ ಕೇವಲ 6,122 ಕಾರ್ಮಿಕರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ಇದಕ್ಕೆ ಪುಷ್ಟಿ ನೀಡುತ್ತದೆ. ಸಂಘಟಿತ ಕಾರ್ಮಿಕರಲ್ಲಿ ಶೇ 95 ರಷ್ಟು ಜನ ಕಟ್ಟಡ ಕಾರ್ಮಿಕರಿದ್ದಾರೆ. ಅವರದ್ದು ಬಲಿಷ್ಠವಾದ ಸಂಘಟನೆಯಿದ್ದು, ಮೊದಲೇ ಅವರು ತಮ್ಮ ಹೆಸರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
***
‘ಸಹಾಯಧನ ಎಲ್ಲರಿಗೂ ಸಿಕ್ಕಿಲ್ಲ’

ಗುರುಮಠಕಲ್: ನೂತನ ತಾಲ್ಲೂಕುಗಳಾದ ಗುರುಮಠಕಲ್, ವಡಗೇರಾ ಹಾಗೂ ಹುಣಸಗಿ ತಾಲ್ಲೂಕುಗಳಿಗೆ ಇನ್ನೂ ಕಾರ್ಮಿಕ ಇಲಾಖೆ ಪ್ರತ್ಯೇಕವಾಗಿಲ್ಲ. ಹೊಸ ತಾಲ್ಲೂಕುಗಳು ಇನ್ನೂ ಹಳೆಯ ತಾಲ್ಲೂಕುಗಳ ‘ಕಾರ್ಮಿಕ ಅಧಿಕಾರಿಗಳ ವೃತ್ತ’ದಲ್ಲಿಯೇ ಮುಂದುವರೆದಿವೆ. ಯಾದಗಿರಿ ಹಾಗೂ ಗುರುಮಠಕಲ್ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಈವರೆಗೆ 18,233 ಜನರಿಗೆ ತಲಾ ₹3 ಸಾವಿರ ಖಾತೆಗಳಿಗೆ ನೇರವಾಗಿ ಸಂದಾಯವಾದ ಕುರಿತು ಕಾರ್ಮಿಕ ಇಲಾಖೆ ಮಾಹಿತಿ ನೀಡುತ್ತದೆ.

ಅಂದಾಜಿನ ಪ್ರಕಾರ ಪಟ್ಟಣದ ಸೈಬರ್ ಅಂಗಡಿ ಒಂದರಲ್ಲಿಯೇ ಸುಮಾರು 150 ರಿಂದ 210 ಅರ್ಜಿಗಳು ಸಲ್ಲಿಕೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿಯೂ ಅರ್ಜಿ ಹಾಕಲಾಗಿದೆ. ತಾಲ್ಲೂಕಿನಲ್ಲಿ ಕನಿಷ್ಠ 25,000 ಕ್ಕಿಂತಲೂ ಹೆಚ್ಚಿನ ಜನ ಅರ್ಜಿ ಸಲ್ಲಿಸಿರಬಹುದು ಎಂದು ಸೈಬರ್ ಅಂಗಡಿಯೊಂದರ ಮಾಲೀಕರು ಹೇಳುತ್ತಾರೆ. ‘ಕಳೆದ ವರ್ಷ ಆನ್‌ಲೈನ್‌ ಅರ್ಜಿ ಹಾಕಿದವರಿಗೆ ಸಹಾಯಧನ ಬಂದಿದೆ. ಆದರೆ, ಈ ಬಾರಿ ನಾನೂ ಅರ್ಜಿ ಹಾಕಿದ್ದು, ನನಗೆ ಇನ್ನೂ ಸಹಾಯಧನ ಬಂದಿಲ್ಲ’ ಎಂದು ಕೇಶ್ವಾರ ಗ್ರಾಮದ ಕಟ್ಟಡ ಕಾರ್ಮಿಕರೊಬ್ಬರು ತಿಳಿಸಿದರು.
***
ಅಸಂಘಟಿತ ಕಾರ್ಮಿಕರ ವಿವರ

ಕ್ಷೌರಿಕರು;1,500
ಗೃಹಕಾರ್ಮಿಕರು;150
ಅಕ್ಕಸಾಲಿಗರು;10
ಹಮಾಲರು;500
ಮಂಡಕ್ಕಿ ಭಟ್ಟಿ ಕಾರ್ಮಿಕರು;10
ಕುಂಬಾರರು;50
ಚಿಂದಿ ಆಯುವವರು;100
ಟೈಲರ್‌ಗಳು;300
ಕಮ್ಮಾರರು;10
ಮೆಕ್ಯಾನಿಕ್‌;85
ಅಗಸರು;1,800
ಒಟ್ಟು;4,515
ಆಧಾರ: ಕಾರ್ಮಿಕ ಇಲಾಖೆ

***

ನೈಜ ಕಟ್ಟಡ ಕಾರ್ಮಿಕರನ್ನು ಗುರುತಿಸಿ ಅರ್ಜಿ ಹಾಕಲು ಜಾಗೃತಿ ಮೂಡಿಸಲಾಗುತ್ತಿದೆ. ಜುಲೈ 31ರ ತನಕ ಅರ್ಜಿ ಸಲ್ಲಿಕೆಗೆ ಅವಕಾಶವಿದೆ

ಶ್ವೇತಾ ಸಂಗಂ, ಜಿಲ್ಲಾ ಕಾರ್ಮಿಕ ಅಧಿಕಾರಿ, ಯಾದಗಿರಿ ಉಪ ವಿಭಾಗ

***

ರಾಜ್ಯದ ಕಲ್ಯಾಣ ಮಂಡಳಿಯಲ್ಲಿ ₹10 ಸಾವಿರ ಕೋಟಿ ಸೆಸ್ ಹಣ ಸಂಗ್ರಹವಾಗಿದ್ದರೂ ಕಲ್ಯಾಣ ಮಂಡಳಿಯು ಕೇವಲ ₹3 ಸಾವಿರ ನೆರವು ಪ್ರಕಟಿದೆ. ಕಾರ್ಮಿಕರಿಗೆ ಸಂಪೂರ್ಣ ತಲುಪಿಲ್ಲ

ರಾಮಲಿಂಗಪ್ಪ ಬಿ.ಎನ್., ಜಿಲ್ಲಾ ಸಂಚಾಲಕ, ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ, ಯಾದಗಿರಿ

***

ಕಾರ್ಮಿಕರ ಗುರುತಿನ ಚೀಟಿ ಮಾಡಿಸಿ ಒಂದು ವರ್ಷ ಆಯ್ತು. ಆದರೂ ನಮಗೆ ಹಣ ಬಂದಿಲ್ಲ. ಈ ಬಗ್ಗೆ ನಮಗೆ ಕಾರ್ಮಿಕ ಅಧಿಕಾರಿಗಳು ಜಾಗೃತಿ ಮೂಡಿಸಿಲ್ಲ

ಮಣಿಯಮ್ಮ ಶೇಖಪ್ಪ, ಕಟ್ಟಡ ಕೂಲಿ ಕಾರ್ಮಿಕರು ಯಾದಗಿರಿ

***

ಶಹಾಪುರ ತಾಲ್ಲೂಕಿನಲ್ಲಿ 13,400 ಜನ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಆರ್ಥಿಕ ಪ್ಯಾಕೇಜ್ ಅನುದಾನದ ಮಾಹಿತಿ ನಮ್ಮ ಬಳಿ ಇಲ್ಲ

ಸಾಬೇರ ಬೇಗಂ, ಕಾರ್ಮಿಕ ನಿರೀಕ್ಷಕರು, ಶಹಾಪುರ

***

ಅಸಂಘಟಿತ ಕಾರ್ಮಿಕರು ಸಂಘಟಿತರಾದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸಂಘಟನೆಗಳು ಪ್ರಯತ್ನಿಸಬೇಕು

ಗಂಗಾಧರ ಕಾರ್ಮಿಕ ನಿರೀಕ್ಷಕ, ಸುರಪುರ

***

ಬಹಳಷ್ಟು ಜನ ಕಾರ್ಮಿಕರಲ್ಲದವರು ನೋಂದಣಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಠಿಣ ನಿಯಮಾವಳಿ ಜಾರಿಗೆ ತರಬೇಕು. ಅಸಂಘಟಿತ ಕಾರ್ಮಿಕರು ಸಂಘಟಿತರಾಗುತ್ತಿಲ್ಲ

ದೇವಿಂದ್ರಪ್ಪ ಪತ್ತಾರ, ಕಾರ್ಮಿಕ ಮುಖಂಡ, ಸುರಪುರ

***

ಕಾರ್ಮಿಕ ಅಧಿಕಾರಿಗಳು ಸಂಘಟನೆಗಳಿಗೆ ಸ್ಪಂದಿಸುತ್ತಿಲ್ಲ. ಕಾರ್ಮಿಕರಿಗೆ ನ್ಯಾಯ ಒದಗಿಸುತ್ತಿಲ್ಲ. ಫುಡ್ ಕಿಟ್ ವಿತರಣೆ ಮಾಡುವಾಗ ಕಾರ್ಮಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಿಟ್ ವಿತರಣೆ ಮಾಡಬೇಕು

ಅಯ್ಯಾಳಪ್ಪ ಅಚಿಕೇರಿ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘ

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT