ಶುಕ್ರವಾರ, ಏಪ್ರಿಲ್ 23, 2021
23 °C
₹3ರಿಂದ ₹5ರ ವರೆಗೆ ಹೆಚ್ಚಳ, ಕೆಲ ಕಡೆ ಗ್ರಾಹಕರಿಂದ ಆಕ್ಷೇಪ

ಯಾದಗಿರಿ: ಹೋಟೆಲ್‌ ತಿಂಡಿ, ಊಟದ ದರ ಏರಿಕೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಬೆಲೆ ಏರಿಕೆಯಿಂದ ಬಳಲು ತ್ತಿರುವ ಹೋಟೆಲ್‌ ಉದ್ಯಮ ದರ ಹೆಚ್ಚಳ ಮಾಡಲು ಆಗದೇ ಆಡಕತ್ತರಿಗೆ ಸಿಕ್ಕಿದೆ. ಆದರೂ ಜಿಲ್ಲೆಯ ಕೆಲ ಕಡೆ ₹3ರಿಂದ ₹5ರ ವರೆಗೆ ತಿಂಡಿ, ಊಟದ ದರ ಹೆಚ್ಚಳ ಮಾಡಲಾಗಿದೆ. ಇದಕ್ಕೆ ಗ್ರಾಹಕರಿಂದ ಆಕ್ಷೇಪವೂ ವ್ಯಕ್ತವಾಗಿದೆ.

ನಗರದ ಪ್ರದೇಶದಲ್ಲಿ ಮಾತ್ರ ದಿನದಿನದಿಂದ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಗ್ಯಾಸ್‌ ಸಿಲಿಂಡರ್‌, ಪಾಮ್‌ ಆಯಿಲ್‌ ದರ ಏರಿಕೆಯಾಗುತ್ತಲೇ ಇದೆ. ಹೋಟೆಲ್‌ ಮಾಲೀಕರಿಗೆ ಇದು ನುಂಗಲಾರದ ತುತ್ತಾಗಿದೆ.

‌ಉತ್ತರ ಭಾರತದ ತಿನಿಸು ದರ ಹೆಚ್ಚಳ: ಬೆಲೆ ಏರಿಕೆಯಿಂದ ನಲುಗಿರುವ ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಉತ್ತರ ಭಾರದ ತಿಂಡಿ, ಊಟದ ದರ ಹೆಚ್ಚಳ ಮಾಡಲಾಗಿದೆ.

ಇಡ್ಲಿ ಒಂದು ಪ್ಲೇಟ್‌ ಬೆಲೆ ಮುಂಚೆ ₹25 ಇತ್ತು. ಈಗ ₹28 ದರ ಏರಿಕೆ ಯಾಗಿದೆ. ಆದರಂತೆ ಜೀರಾ ರೈಸ್‌, ಪನ್ನೀರ್‌ ಬಟರ್‌ ಮಸಾಲ ಸೇರಿದಂತೆ ಇನ್ನಿತರ ಉತ್ತರ ಭಾರದ ತಿಂಡಿ, ಊಟದ ದರ ₹5 ಹೆಚ್ಚಳವಾಗಿದೆ.

‘ಎಣ್ಣೆ, ಉದ್ದಿನ ಬೆಳೆ, ಸೋನಾ ಮಸೂರಿ ಅಕ್ಕಿ ಸೇರಿದಂತೆ ಇನ್ನಿತರ ಸಾಮಾಗ್ರಿ ಬೆಲೆ ಏರಿಕೆಯಾಗಿದೆ. ಹೀಗಾಗಿ ನಾವು ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಲಾಕ್‌ಡೌನ್‌ ನಂತರ ಪೂರ್ಣ ಪ್ರಮಾಣದಲ್ಲಿ ಇಲ್ಲಿಯ ವರೆಗೆ ಗ್ರಾಹಕರು ಬರುತ್ತಿಲ್ಲ’ ಎಂದು ಎನ್‌ವಿಎಂ ಹೋಟೆಲ್‌ ಮಾಲೀಕ ಮಹೇಶ ಪಾಟೀಲ ಹೇಳುತ್ತಾರೆ.

ಬೆಲೆ ಏರಿಕೆ ಜೊತೆಗೆ ವಿದ್ಯುತ್‌ ಬರೆ: ತಿಂಗಳ ಮೊದಲನೆ ದಿನ ಗ್ಯಾಸ್‌ ಸಿಲಿಂಡರ್‌ ಬೆಲೆ ಹೆಚ್ಚಳವಾಗುವುದು ಸಾಮಾನ್ಯ. ಇದರ ಜೊತೆಗೆ ವಿದ್ಯುತ್‌ ಬಿಲ್‌ ದರವೂ ಹೆಚ್ಚಳವಾಗಿರುವುದು ಹೋಟೆಲ್‌ ಮಾಲೀಕರ ನಿದ್ದೆಗಡೆಸಿದೆ.

ಚಹಾ ದರವೂ ಏರಿಕೆ: ಗ್ಯಾಸ್‌ ಸಿಲಿಂಡರ್‌ ಬೆಲೆ ಹೆಚ್ಚಳದಿಂದ ರಸ್ತೆ ಬದಿ ತಳ್ಳುಗಾಡಿಗಳಲ್ಲಿ ಚಹಾದ ಬೆಲೆ ಹೆಚ್ಚಳ ಮಾಡಲಾಗಿದೆ. ಮೊದಲು ₹8 ಇದ್ದ ಚಹಾ ₹10ಗೆ ಏರಿಕೆ ಮಾಡಲಾಗಿದೆ. ಇದರಂತೆ ದೊಡ್ಡ ಹೋಟೆಲ್‌ಗಳಲ್ಲಿ ₹3ರಿಂದ ₹5 ಏರಿಕೆಯಾಗಿದೆ. ‘ದೊಡ್ಡ ಹೋಟೆಲ್‌ಗಳಲ್ಲಿ ಬೆಲೆ ಏರಿಕೆ ಮಾಡ ಲಾಗಿದೆ. ಆದರೆ, ಸಣ್ಣ ಪುಟ್ಟ ಅಂಗಡಿ, ಖಾನಾವಳಿಗಳಲ್ಲಿ ಇನ್ನೂ ಏರಿಕೆ ಮಾಡಿಲ್ಲ. ಲಾಕ್‌ಡೌನ್‌ ನಂತರ ₹5 ದರ ಹೆಚ್ಚಳ ಮಾಡಲಾಗಿತ್ತು’ ಎಂದು ಸೂಗೂರೇಶ್ವರ ಖಾನಾವಳಿ ಮಾಲೀಕ ಬಸವರಾಜ ಹವಾಲ್ದಾರ್ ಹೇಳುತ್ತಾರೆ.

‘ದಿನಸಿ ಅಂಗಡಿಯಲ್ಲಿ ವಿವಿಧ ತಿನಿಸುಗಳ ಬೆಲೆ ಏರಿಕೆಯಾಗಿವೆ. ಆದರೆ, ಗ್ರಾಹಕರು ಮಾತ್ರ ಹಳೆ ದರ ದಲ್ಲಿ ನೀಡುವಂತೆ ಹೇಳುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಅರ್ಥ ಮಾಡಿಸು ವುದು ಸಾಕುಸಾಕಾಗಿ ಹೋಗಿದೆ’ ಎನ್ನುತ್ತಾರೆ ಕಿರಾಣಿ ಅಂಗಡಿ ಮಾಲೀಕ ರಾಘವೇಂದ್ರ ಶೆಟ್ಟಿ ಹೇಳುತ್ತಾರೆ.

***

ಜಿಲ್ಲೆಯಲ್ಲಿ ಬೆಲೆ ಏರಿಕೆ ಬಿಸಿ ಸಣ್ಣಪುಟ್ಟ ಹೋಟೆಲ್‌ಗಳಿಗೆ ತಟ್ಟಿದೆ. ಕೆಲ ಹೋಟೆಲ್‌ಗಳನ್ನು ಮುಚ್ಚಿದ್ದಾರೆ. ಜಿಲ್ಲೆಯಲ್ಲಿ ನೋಂದಣಿಯಾದ 23 ಹೋಟೆಲ್‌ಗಳಿವೆ.
-ಚಂದ್ರಶೇಖರ ಅರಬೋಳ, ಹೋಟೆಲ್‌ ಮಾಲಿಕರ ಸಂಘದ ಅಧ್ಯಕ್ಷ

***
ಪಾಮ್‌ ಆಯಿಲ್‌, ಸಿಲಿಂಡರ್‌ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ಅನಿವಾರ್ಯವಾಗಿ ತಿಂಡಿ, ಊಟದ ದರ ಹೆಚ್ಚಳ ಮಾಡುವುದು ಅವಶ್ಯವಾಗಿದೆ.
-ಮಹೇಶ ಪಾಟೀಲ, ಹೋಟೆಲ್‌ ಮಾಲೀಕ

***
ಲಾಕ್‌ಡೌನ್‌ ನಂತರ ದರ ಹೆಚ್ಚಳ ಮಾಡಲಾಗಿತ್ತು. ಆರ್ಥಿಕ ಹೊರೆ ಇದ್ದರೂ ಸದ್ಯಕ್ಕೆ ಬೆಲೆ ಏರಿಕೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಹೇಗಾಗುತ್ತದೊ ಕಾದು ನೋಡಬೇಕಿದೆ.
-ಬಸವರಾಜ ಹವಾಲ್ದಾರ್, ಖಾನಾವಳಿ ಮಾಲೀಕ

***
ಎಣ್ಣೆ ಸೇರಿದಂತೆ ಎಲ್ಲ ದಿನಸಿ ಬೆಲೆ ಗಗನಕ್ಕೇರಿದೆ. ಅನಿವಾರ್ಯವಾಗಿ ನಾವೂ ತಿಂಡಿ ಬೆಲೆ ಹೆಚ್ಚಳ ಮಾಡಿದ್ದೇವೆ. ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಾವು ಅಸಹಾಯಕರಾಗಿದ್ದೇವೆ
-ಬಾಲಕೃಷ್ಣಶೆಟ್ಟಿ, ಹೋಟೆಲ್ ಮಾಲೀಕ, ಸುರಪುರ

***

ಇದುವರೆಗೆ ಸಮಾರಂಭಗಳಿಗೆ ಪೂರೈಸುವ ಒಂದು ಎಲೆ (ಊಟ)ದ ಬೆಲೆ ₹250 ರಿಂದ ₹350ರ ವರೆಗೆ ಇತ್ತು. ಎಲ್ಲ ದಿನಸಿ ಬೆಲೆಗಳ ಹೆಚ್ಚಳದಿಂದ ಅನಿವಾರ್ಯವಾಗಿ ನಾವು ಕೇಟರಿಂಗ್ ಬೆಲೆ ಹೆಚ್ಚಿಸಬೇಕಿದೆ
-ಕೃಷ್ಣ ಕುಲಕರ್ಣಿ, ಅಡುಗೆ ಕಾಂಟ್ರಾಕ್ಟರ್, ಸುರಪುರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು