ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಹೆಸರಿಗೆ ಸೀಮಿತವಾದ ಸಂಸದರ ‘ಆದರ್ಶ ಗ್ರಾಮ’

ಪ್ರತ್ಯೇಕ ಅನುದಾನವಿಲ್ಲ; ವಿವಿಧ ಯೋಜನೆ ಬಳಸಿಕೊಂಡು ಮಾಡಬೇಕಿದೆ ಅಭಿವೃದ್ಧಿ
Last Updated 31 ಜುಲೈ 2022, 19:31 IST
ಅಕ್ಷರ ಗಾತ್ರ

ಯಾದಗಿರಿ: ಸಂಸದರು ಪ್ರತಿನಿಧಿಸುವ ಇಡೀ ಒಂದು ಗ್ರಾಮವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರ ‘ಸಂಸದರ ಆದರ್ಶ ಗ್ರಾಮ ಯೋಜನೆ’ಯನ್ನು ಜಾರಿ ಮಾಡಲಾಗಿದೆ.

2014ರ ಅಕ್ಟೋಬರ್ 11ರಂದು ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಜಯಂತಿ ದಿನದಂದು ‘ಸಂಸದರ ಆದರ್ಶ ಗ್ರಾಮ ಯೋಜನೆ‘ಗೆ ಪ್ರಧಾನಿ ಚಾಲನೆ ನೀಡಿದ್ದರು.

ಇಲಾಖಾವಾರು ಕಾಮಗಾರಿಗಳನ್ನು ಗುರುತಿಸಿ, ಆಯಾ ಇಲಾಖೆಗಳ ಅನುದಾನದಡಿ ಸಂಸದರ ಆದರ್ಶ ಗ್ರಾಮಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ಗ್ರಾಮಗಳ ಅಭಿವೃದ್ಧಿಗೆ ‘ಸಮಗ್ರ ಕ್ರಿಯಾಯೋಜನೆ’ ತಯಾರಿಸಿ ಕಾಮಗಾರಿ ಅನುಷ್ಠಾನ ಮಾಡಬೇಕಿದೆ. ಆದರೆ, ಈ ಯೋಜನೆ ಇರುವ ಬಗ್ಗೆ ಬಹುತೇಕ ಗ್ರಾಮಸ್ಥರಿಗೆ ತಿಳಿದಿಲ್ಲ.

ಜಿಲ್ಲೆಯಲ್ಲಿ ಮೂರು ಗ್ರಾಮಗಳನ್ನು ಇಲ್ಲಿಯವರೆಗೆ ಆದರ್ಶ ಗ್ರಾಮಗಳೆಂದು ಗುರುತಿಸಲಾಗಿದೆ.

ಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ), ಗುರುಮಠಕಲ್‌ ತಾಲ್ಲೂಕಿನ ಕೊಂಕಲ್‌, ಸುರಪುರ ತಾಲ್ಲೂಕಿನ ದೇವಪುರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೂರು ಗ್ರಾಮಗಳಲ್ಲಿ ಕೆಲವು ಕಾಮಗಾರಿಗಳನ್ನು ಮಾಡಲಾಗಿದ್ದು, ‘ಆದರ್ಶ ಗ್ರಾಮ’ವೆಂದು ಗುರುತಿಸುವಂತೆ ಯಾವ ಯೋಜನೆಗಳೂ ಕಂಡು ಬರುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಕೊಳ್ಳೂರ (ಎಂ) ಗ್ರಾಮವನ್ನು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಆಯ್ಕೆ ಮಾಡಿಕೊಂಡು ವರ್ಷದ ಹಿಂದೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಆದರೆ, ಗ್ರಾಮದಲ್ಲಿ ಮಾತ್ರ ಅಷ್ಟೊಂದು ಅಭಿವೃದ್ದಿಯ ಕೆಲಸಗಳು ಕಂಡು ಬಂದಿಲ್ಲ.

ಈ ಸಂಸದರ ಗ್ರಾಮ ಯೋಜನೆಗೆ ವಿವಿಧ ಇಲಾಖೆಯಿಂದ ಲಭ್ಯವಾದ ಅನುದಾನದಿಂದಲೇ ಕೆಲಸ ನಿರ್ವಹಿಸಲಾಗುತ್ತಿದೆ. ಆದರ್ಶ ಗ್ರಾಮದಲ್ಲಿ ಹೊಸತನ ಏನೂ ಇಲ್ಲ. ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರಕ್ಕೆ ಕಂಪೌಂಡ್‌ ನಿರ್ಮಾಣದ ಕೆಲಸವಾಗಿಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪ್ರತ್ಯೇಕವಾದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಆಗಿಲ್ಲ. ಕೃಷ್ಣಾ ನದಿ ದಂಡೆಗೆ ಗ್ರಾಮ ಹೊಂದಿಕೊಂಡಿದ್ದರಿಂದ ಪ್ರತಿ ವರ್ಷ ಪ್ರವಾಹದ ಭೀತಿ ಎದುರಾಗುತ್ತದೆ. ಆದರೆ, ಚೆಕ್ ಡ್ಯಾಂ ನಿರ್ಮಾಣದ ಕೆಲಸ ಕೈಗೆತ್ತಿಕೊಳ್ಳಲಾಗಿಲ್ಲ. ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಿಸಿಲ್ಲ ಎಂದು ಗ್ರಾಮದ ಮಹಿಳೆಯರ ಆರೋಪವಾಗಿದೆ.

ಗ್ರಾಮದಲ್ಲಿ ಹೆಚ್ಚಾಗಿ ಪರಿಶಿಷ್ಟ ಸಮುದಾಯದ ಜನಾಂಗವಿದೆ. ವಿಶೇಷ ಘಟಕ ಯೋಜನೆ ಅಡಿಯಲ್ಲಿ ಸ್ವಾವಲಂಬನೆ ಜೀವನ ನಡೆಸುವ ಸಲುವಾಗಿ ಯಾವುದೇ ಯೋಜನೆ ಸಿದ್ಧಪಡಿಸಿಲ್ಲ. ಕೇವಲ ಆಕರ್ಷಕ ‘ಆದರ್ಶ ಗ್ರಾಮ’ ಎಂಬ ಬಿರುದು ಪಡೆದುಕೊಂಡಿದ್ದೇವೆ. ಒಳಗೆ ಏನೂ ಇಲ್ಲ. ಇದು ಮುಗ್ಧ ಜನತೆಯನ್ನು ಯಾಮಾರಿಸುವ ಕೆಲಸವಾಗಿದೆ. ಸಂಸದರು ಅಭಿವೃದ್ಧಿ ಕಾಮಗಾರಿ ಪರಿಶೀಲನೆ ಹಾಗೂ ಪ್ರಗತಿ ಬಗ್ಗೆ ಒಂದು ದಿನವೂ ವಿಚಾರಿಸಿಲ್ಲ ಹಾಗೂ ಗ್ರಾಮಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ವಿಶ್ವ ಪ್ರಸಿದ್ಧ ಕೊಹಿನೂರ್ ವಜ್ರ ದೊರಕಿದ್ದು ಇದೇ ಕೊಳ್ಳೂರು (ಎಂ) ಕೃಷ್ಣಾ ನದಿಯ ತಟದಲ್ಲಿ ಎಂಬ ಮಾತು ಚರ್ಚೆಯಲ್ಲಿದೆ. ಅಂದಿನ ಕೆಕೆಆರ್‌ಡಿಬಿ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಕೃಷ್ಣಾ ನದಿಯ ದಂಡೆ (ವೃಂದಾವನ)ಯನ್ನು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಒಳಪಡಿಸುವಂತೆ ಸೂಚಿಸಿದ್ದರು. ಅದು ಇಂದಿಗೂ ದಾಖಲೆಯಾಗಿ ಉಳಿದುಕೊಂಡಿದೆ. ಇಂತಹ ಭವ್ಯ ಇತಿಹಾಸ ಪರಂಪರೆಯನ್ನು ಹೊಂದಿರುವ ಗ್ರಾಮಕ್ಕೆ ಕನಿಷ್ಠ ಅಗತ್ಯ ಸವಲತ್ತುಗಳನ್ನು ನೀಡಬೇಕು ಎಂಬುದು ಜನತೆಯ ಮನವಿಯಾಗಿದೆ.

ಗುರುಮಠಕಲ್ ತಾಲ್ಲೂಕಿನ ಕೊಂಕಲ್ ಗ್ರಾಮವನ್ನು 2017-18ನೇ ಸಾಲಿನಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ಮಲ್ಲಿಕಾರ್ಜುನ ಖರ್ಗೆಯವರು 'ಸಂಸದರ ಆದರ್ಶ ಗ್ರಾಮ'ವಾಗಿ ಆಯ್ಕೆಮಾಡಿಕೊಂಡಿದ್ದರು. ಅದರಂತೆ ವಿವಿಧ ಯೋಜನೆಗಳಲ್ಲಿ ಹಲವು ಕಾಮಗಾರಿಗಳನ್ನೂ ಅನುಷ್ಠಾನಗೊಳಿಸಿದ್ದು, ಅಲ್ಲಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ.

ಕ್ರೀಡಾಂಗಣ, ಪರಮೇಶಪಲ್ಲಿ ಗೇಟ್ ಹತ್ತಿರದಿಂದ ಕೊಂಕಲ್ ಗ್ರಾಮದ ರಸ್ತೆ ಡಾಂಬರೀಕರಣ, 3 ಸಿ.ಸಿ ರಸ್ತೆ, ಆಸ್ಪತ್ರೆ ಕಟ್ಟಡ, ಗ್ರಂಥಾಲಯ ಕಟ್ಟಡ, ಚರಂಡಿ ನಿರ್ಮಾಣ, ರೈತ ಸಂಪರ್ಕ ಕೇಂದ್ರಕ್ಕೆ ಕಟ್ಟಡ ನಿರ್ಮಾಣ, ಆಸ್ಪತ್ರೆಯ ಹತ್ತಿರದಲ್ಲಿ ನೀರು ಶುದ್ಧೀಕರಣ ಘಟಕ, ಅಂಬೇಡ್ಕರ್ ಭವನ, 1 ಸಾವಿರ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್, ಕೊಂಕಲ್–ಎಲ್ಹೇರಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ.

ಗ್ರಾಮದಲ್ಲಿ ಪಾಳುಬಿದ್ದ ಸರ್ಕಾರಿ ಕಟ್ಟಡಗಳನ್ನು ಅವಶ್ಯ ಇರುವ ಇಲಾಖೆಗಳಿಗೆ ವರ್ಗಾಯಿಸಿದರೆ ಉಪಯುಕ್ತವಾಗಲಿವೆ. ಆದರೆ, ಈ ಕುರಿತು ಮನವಿ ಮಾಡಿದರೂ ಉಪಯೋಗವಾಗುತ್ತಿಲ್ಲ. ಸ್ಥಳದ ಕೊರತೆಯ ಕಾರಣ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಣ್ಣು ಪರೀಕ್ಷಾ ಕೇಂದ್ರಗಳು ಬೇರೆಡೆಗೆ ವರ್ಗಗೊಂಡವು. ಪಾಳುಬಿದ್ದ ಕಟ್ಟಡಗಳನ್ನು ತೆರವುಗೊಳಿಸಿ ಇರುವ ಸ್ಥಳವನ್ನು ಸದ್ಬಳಕೆ ಮಾಡಿಕೊಳ್ಳಬೇಕು.

ಕೊಂಕಲ್ ಹೋಬಳಿ ಕೇಂದ್ರವಾದ್ದರಿಂದ ಸುತ್ತಲಿನ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಇತರೆ ಇಲಾಖೆಗಳ ಕಚೇರಿಗಳಿಗೆ ಅದನ್ನು ಬಳಕೆ ಮಾಡುವತ್ತ ಸಂಬಂಧಪಟ್ಟ ಅಧಿಕಾರಿಗಳು ಚಿಂತಿಸಲಿ ಎನ್ನುತ್ತಾರೆ ಗ್ರಾಮದ ನಿವಾಸಿ ಉದಯ.

ಗ್ರಾಮದ ಆಶ್ರಯ ಬಡಾವಣೆಯಲ್ಲಿ ಚರಂಡಿ ನೀರು ಹರಿದುಹೋಗುವ ವ್ಯವಸ್ಥೆಯಿಲ್ಲದೆ ಜನತೆ ಪರದಾಡುತ್ತಿದ್ದು, ಮನೆಯ ಮುಂದೆಯೇ ನಿಲ್ಲುವ ಚರಂಡಿ ನೀರಿನ ದುರ್ನಾತ, ಹೆಚ್ಚುತ್ತಿರುವ ಸೊಳ್ಳೆಗಳ ಕಾಟ, ರೋಗ ಭೀತಿಯಲ್ಲಿ ಜೀವನ ನಡೆಸುವ ಅನಿವಾರ್ಯೆತೆಗೆ ಸಿಲುಕಿದ್ದಾರೆ.

'ಮನೆಯಲ್ಲಿ ಸ್ನಾನ ಮಾಡಿದ ನೀರನ್ನು ಕೆಲದಿನಗಳ ಕಾಲ ಬಕೆಟ್‌ನಲ್ಲಿ ಹೊತ್ತೊಯ್ದು ಖಾಲಿ ಜಾಗದಲ್ಲಿ ಚೆಲ್ಲಿದ್ದೇವೆ. ಚರಂಡಿ ನಿರ್ಮಿಸಿದ್ದಾರೆ. ಆದರೆ, ಚರಂಡಿಯಿಂದ ನೀರು ಮುಂದೆ ಹೋಗಲು ಅವಕಾಶವಿಲ್ಲದ್ದರಿಂದ ಸಮಸ್ಯೆಯಾಗುತ್ತಿದೆ’ ಎಂದು ಬಡಾವಣೆಯ ನಿವಾಸಿಗಳಾದ ಆನಂದ ಸಿಳಾ ಹಾಗೂ ಗುಂಡಮ್ಮ ಅವರು ತಮ್ಮ ಸ್ಥಿತಿಯನ್ನು ವಿವರಿಸಿದರು.

ಆರಂಭವಾಗದ ಆದರ್ಶ ಗ್ರಾಮ ಯೋಜನೆ: ಸುರಪುರ ತಾಲ್ಲೂಕಿನ ದೇವಪುರ ಗ್ರಾಮ ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿದೆ. ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ (ಸಿಇಒ) 2022ರ ಏ. 22ರಂದು ಪತ್ರ ಬರೆದಿದ್ದಾರೆ.

ಸಿಇಒ ಅವರು ತಾಲ್ಲೂಕು ಪಂಚಾಯಿತಿ ಅಧಿಕಾರಿಗೆ ಪತ್ರ ಬರೆದು ಅಗತ್ಯ ಕಾಮಗಾರಿಗಳ ಪ್ರಸ್ತಾವ ಸಲ್ಲಿಸಲು ಸೂಚಿಸಿದ್ದಾರೆ.

ದೇವಪುರ ಗ್ರಾಮ ಪಂಚಾಯಿತಿಯಿಂದ ₹ 7.30 ಕೋಟಿಯ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪ್ರಸ್ತಾವ ಸಲ್ಲಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್‌ ರಾಜ್‌ ಎಂಜನಿಯರಿಂಗ್, ಕೆಕೆಆರ್‌ಡಿಬಿ, ಸಮಾಜ ಕಲ್ಯಾಣ ಇಲಾಖೆ, ಪಶು ವೈದ್ಯಕೀಯ ಇಲಾಖೆ, ಆರೋಗ್ಯ ಇಲಾಖೆ ಇತರ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಸೇರಿಸಲಾಗಿದೆ.

ಸಿ.ಸಿ. ರಸ್ತೆ, ಚರಂಡಿ, ಅಂಗನವಾಡಿ ಕಟ್ಟಡ, ಕುಡಿಯುವ ನೀರಿನ ಯೋಜನೆ, ಶುದ್ಧ ಕುಡಿಯುವ ನೀರಿನ ಘಟಕ, ಬಸ್ ನಿಲ್ದಾಣ, ಸಮುದಾಯ ಭವನ, ಸ್ಮಶಾನ ಭೂಮಿ ಅಭಿವೃದ್ಧಿ, ಪಶು ಆಸ್ಪತ್ರೆ, ಆರೋಗ್ಯ ಕೇಂದ್ರ, ಕಂಪೌಂಡ್ ನಿರ್ಮಾಣ ಇತರ ಕಾಮಗಾರಿಗಳು ಸೇರಿವೆ. ದೇವಪುರ ದೊಡ್ಡ ಗ್ರಾಮವಾಗಿದ್ದು, ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಯೋಜನೆಯಿಂದ ಗ್ರಾಮ ಅಭಿವೃದ್ಧಿ ಹೊಂದಬಹುದು ಎಂಬ ಆಶಾಭಾವನೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

***

ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಬೇರೆ ಬೇರೆ ಯೋಜನೆಗಳನ್ನು ಒಗ್ಗೂಡಿಸಿ ಕೊಂಡು ಗ್ರಾಮದ ಸಮಗ್ರ ಅಭಿವೃದ್ಧಿ ಪಡಿಸುವುದಾಗಿದೆ. ಈಗ ಆಗಿರುವ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ

–ಸ್ನೇಹಲ್‌ ಆರ್. ಜಿಲ್ಲಾಧಿಕಾರಿ

***

ಈ ಯೋಜನೆಗೆ ಪ್ರತ್ಯೇಕವಾದ ಅನುದಾನ ಇಲ್ಲ. ವಿವಿಧ ಯೋಜನೆಗಳನ್ನು ಬಳಸಿಕೊಂಡು ಅಭಿವೃದ್ಧಿ ಮಾಡುವುದಾಗಿದೆ. ಈಗಾಗಲೇ ಅಭಿವೃದ್ಧಿ ಕಾಮಗಾರಿಗಳು ಆಗಿವೆ

–ಬಸವರಾಜ ಶರಭೈ, ತಾ.ಪಂ. ಇಒ ಯಾದಗಿರಿ

***

ಪ್ರಸ್ತಾವವನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿದೆ. ಇನ್ನೂ ಮಂಜೂರಾತಿ ಸಿಕ್ಕಿಲ್ಲ. ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು

–ದೇವಿಂದ್ರಪ್ಪ ಹಳ್ಳಿ, ಪಿಡಿಒ ದೇವಪುರ

***

ಆದರ್ಶ ಗ್ರಾಮ ಯೋಜನೆಯಿಂದ ಗ್ರಾಮಸ್ಥರು ಖುಷಿಯಾಗಿದ್ದಾರೆ. ಪ್ರಸ್ತಾವದಲ್ಲಿ ಅಗತ್ಯ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ

–ಬಲಭೀಮನಾಯಕ, ಗ್ರಾ.ಪಂ. ಸದಸ್ಯ ದೇವಪುರ

***

ಪ್ರಸ್ತಾವಕ್ಕೆ ಶೀಘ್ರ ಮಂಜೂರಾತಿ ಪಡೆದುಕೊಂಡು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಾಗುವುದು. ಯೋಜನೆ ಸಮರ್ಪಕ ಅನುಷ್ಠಾನಗೊಳಿಸಲಾಗುವುದು

–ಚಂದ್ರಶೇಖರ ಪವಾರ, ಇಒ ಸುರಪುರ

***

ಚರಂಡಿಯ ನೀರು ಮುಂದೆ ಹೋಗುತ್ತಿಲ್ಲ. ಆಚೆ ಖಾಸಗಿಯವರ ಜಮೀನಿದೆ. ಚರಂಡಿ ನೀರೆಲ್ಲ ಅವರ ಜಮೀನಿಗೆ ನುಗ್ಗಿದರೆ ಅವರು ಸುಮ್ಮನಿರಲು ಸಾಧ್ಯವೇ? ಆದ್ದರಿಂದ ಹೊರವಲಯದ ಹಳ್ಳದವರೆಗೆ ಚರಂಡಿಯನ್ನು ನಿರ್ಮಿಸಬೇಕು

–ನರಸಮ್ಮ ಇಂದುಪುರ, ಆಶ್ರಯ ಬಡಾವಣೆ ನಿವಾಸಿ ಕೊಂಕಲ್‌

***

ಸಂಸದರ ಆದರ್ಶ ಗ್ರಾಮಕ್ಕೆ ಯಾವುದೇ ಪ್ರತ್ಯೇಕವಾದ ಅನುದಾನವಿಲ್ಲ ಹಾಗೂ ಬರುವುದಿಲ್ಲ. ಲಭ್ಯವಾದ ಅನುದಾನದ ಮೂಲಕ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು.

–ಬಸವರಾಜ ಸಜ್ಜನ, ತಾಪಂ ಇಒ ಶಹಾಪುರ

***

ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮೇಲಧಿಕಾರಿಗಳಿಗೆ ಅಂದಾಜುಪಟ್ಟಿಯ ಪ್ರಸ್ತಾವ ಸಲ್ಲಿಸಿದೆ. ಈಗಾಗಲೇ ಗ್ರಾಮದಲ್ಲಿ ಸಿ.ಸಿ ರಸ್ತೆ, ಚರಂಡಿ ಕಾಮಗಾರಿ ನಿರ್ವಹಿಸಲಾಗಿದೆ. ಯಾವುದೇ ಪ್ರತ್ಯೇಕವಾದ ಅನುದಾನ ಬಂದಿಲ್ಲ

–ರಮೇಶ ನಾಯಕ, ಪಿಡಿಒ ಕೊಳ್ಳೂರ (ಎಂ)

***

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT