ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ನಗರಸಭೆ ಹಗರಣ: ಒಂದೂವರೆ ತಿಂಗಳಾದರೂ ನೀಡದ ವರದಿ!

Published 30 ಸೆಪ್ಟೆಂಬರ್ 2023, 5:14 IST
Last Updated 30 ಸೆಪ್ಟೆಂಬರ್ 2023, 5:14 IST
ಅಕ್ಷರ ಗಾತ್ರ

ಯಾದಗಿರಿ: ನಗರಸಭೆಯಲ್ಲಿ ನಡೆದಿರುವ 1,310 ಅಕ್ರಮ ಖಾತಾ ನಕಲು, ₹4 ಕೋಟಿ ಮೌಲ್ಯದ ಸರ್ಕಾರಿ ಆಸ್ತಿ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲು ಎರಡು ತಂಡಗಳನ್ನು ರಚಿಸಿ ವರದಿ ನೀಡಲು ಒಂದೂವರೆ ತಿಂಗಳಾದರೂ ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ಇದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಹಿಂದಿನ ಪೌರಾಯುಕ್ತರಾಗಿದ್ದ ಸಂಗಮೇಶ ಉಪಾಸೆಯವರು ಈ ಪ್ರಕರಣಗಳ ತನಿಖೆಗೆ ಕಲಬುರಗಿ ಪ್ರಾದೇಶಿಕ ಆಯುಕ್ತ ಸೇರಿದಂತೆ ಜಿಲ್ಲಾಧಿಕಾರಿ, ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದರಂತೆ ಜಿಲ್ಲಾಡಳಿತ ಸುರಪುರ, ಶಹಾಪುರ ನಗರಸಭೆ ಪೌರಾಯುಕ್ತ, ಕಂದಾಯ ಅಧಿಕಾರಿಗಳು, ಉಪವಿಭಾಗಾಧಿಕಾರಿ ಒಳಗೊಂಡ ತಂಡ ರಚನೆ ಮಾಡಲಾಗಿತ್ತು.

ನಗರಸಭೆ ವ್ಯಾಪ್ತಿಯಲ್ಲಿ ಹಿಂದಿನ ನಾಲ್ವರು ಪೌರಾಯುಕ್ತರು, ಕಂದಾಯ ನಿರೀಕ್ಷಕರು, ಎಫ್‌ಡಿಎ ಸೇರಿದಂತೆ ನಗರಸಭೆ ಸಿಬ್ಬಂದಿ ಕೃಷಿ ಜಮೀನಿನಲ್ಲಿ ಖೊಟ್ಟಿ ದಾಖಲು ಸೃಷ್ಟಿಸಿ 1,310 ಅನಧಿಕೃತ ಖಾತಾಗಳು ನೀಡಿರುವ ಕುರಿತು ವರದಿಯಾಗಿತ್ತು. ಅಲ್ಲದೇ ಸತ್ತವರ ಹೆಸರಿನಲ್ಲಿ ದಾಖಲೆಗಳನ್ನು ನೀಡಿರುವ ಕುರಿತು ದೂರು ದಾಖಲಾಗಿತ್ತು. ಅಲ್ಲದೇ ಸರ್ಕಾರಿ ಜಾಗದ ಆಹಾರ ನಿಗಮದ ವ್ಯಾಪ್ತಿಯ ಗೋದಾಮುಗಳನ್ನು 6 ಜನರಿಗೆ ನಗರಸಭೆ ಸಿಬ್ಬಂದಿ ಪರಭಾರೆ ಮಾಡಿದ್ದರು. ಈ ಕುರಿತು ತನಿಖೆ ಮಾಡಲು ಜಂಟಿ ತನಿಖೆ ಕೈಗೊಂಡು ವರದಿ ನೀಡುವಂತೆ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟಪ್ಪಗೋಳ ಆಗಸ್ಟ್ 17ರಂದು ಆದೇಶಿಸಿದ್ದರು. ಆದರೆ, ಸೆಪ್ಟೆಂಬರ್‌ 29ರಂದು ಕಳೆದರೂ ವರದಿ ಅಧಿಕಾರಿಗಳ ಕೈ ಸೇರದಿರುವುದು ಸೋಜಿಗವಾಗಿದೆ ಎಂದು ನಾಗರಿಕರ ಅಭಿಪ್ರಾಯವಾಗಿವೆ.

ಯಾದಗಿರಿ ನಗರಸಭೆ ಹಗರಣಕ್ಕೆ ಸಂಬಂಧಿಸಿದಂತೆ ಎರಡು ತಂಡಗಳನ್ನು ರಚಿಸಲಾಗಿದ್ದು ವರದಿ ಇನ್ನೂ ಬಂದಿಲ್ಲ. ನಂತರ ನಂತರ ಪರಿಶೀಲನೆ ನಡೆಸಲಾಗುವುದು.
ಶರಣಬಸಪ್ಪ ಕೋಟೆಪ್ಪಗೋಳ, ಹೆಚ್ಚುವರಿ ಜಿಲ್ಲಾಧಿಕಾರಿ

ದೊಡ್ಡ ಹಗರಣ ಎಂದಿದ್ದರು

ಈಚೆಗೆ ಸುದ್ದಿಗಾರರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಯಾದಗಿರಿ ನಗರಸಭೆಯಲ್ಲಿ ದೊಡ್ಡ ಹಗರಣವಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಎಂದಿದ್ದರು. ಅಲ್ಲದೇ ಇದು ದೊಡ್ಡ ಹಗರಣವಾಗಿದ್ದರಿಂದ ಶೀಘ್ರವೇ ವರದಿ ಬರಲಿದೆ ಎಂದಿದ್ದರು. ಅವರು ಮಾತನಾಡಿ 15 ದಿನಗಳಾದರೂ ಇಲ್ಲಿಯವರೆಗೆ ವರದಿ ಬಂದಿಲ್ಲ.

ನಗರಸಭೆ ಹಗರಣ ತನಿಖೆಗಾಗಿ ಜಿಲ್ಲಾಡಳಿತದಿಂದ ತಂಡಗಳನ್ನು ರಚಿಸಿದ್ದರಿಂದ ನಾವು ಮಧ್ಯ ಪ್ರವೇಶಿಸುವುದಿಲ್ಲ. ವರದಿ ಬಂದ ಪರಿಶೀಲಿಸುತ್ತೇವೆ. ನಾವು ತನಿಖೆ ಮಾಡಬೇಕಾದರೆ ಸಮಕ್ಷ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾಗಿದೆ.
ಎ.ಆರ್.ಕರ್ನೂಲ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ

ಯಾರ ನೇತ್ವದಲ್ಲಿ ತಂಡ?

ಕೋಟ್ಯಂತರ ಹಗರಣಗಳನ್ನು ತನಿಖೆ ಮಾಡಲು ನಾಲ್ವರ ತಂಡವನ್ನು ರಚಿಸಲಾಗಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯಪಾಲಕ ಎಂಜಿನಿಯರ್ ಸೋಮ ರಾಠೋಡ್, ಸುರಪುರ ನಗರಸಭೆ ಪೌರಾಯುಕ್ತ ಪ್ರೇಮ್ ಚಾರ್ಲ್ಸ್‌, ಸುರಪುರ ಕಂದಾಯ ಅಧಿಕಾರಿ ವೆಂಕಟೇಶ, ಶಹಾಪುರ ನಗರಸಭೆ ಕಂದಾಯ ನಿರೀಕ್ಷಕ ಶರಣಬಸವ, ಸರ್ಕಾರಿ ಆಸ್ತಿ ಪರಭಾರೆ ಕುರಿತಾಗಿ ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್ ಅವರನ್ನು ತನಿಖಾ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು.

ಯಾದಗಿರಿ ನಗರಸಭೆ ಹಗರಣ ತನಿಖೆ ಮಾಡಲು ಮೇಲಾಧಿಕಾರಿಗಳನ್ನು ನಿಯುಕ್ತಿ ಮಾಡುವುದು ಬಿಟ್ಟು ಸರಿಸಮಾನದ ಹುದ್ದೆಗಳ ಅಧಿಕಾರಿಗಳನ್ನು ನೇಮಿಸಿದ್ದರಿಂದ ಅವರು ಹೇಗೆ ವರದಿಯನ್ನು ಕೊಡಲು ಸಾಧ್ಯ?
ಭಾಸ್ಕರರಾವ ಮುಡಬೂಳ, ಹಿರಿಯ ವಕೀಲ

‘ಲೋಕಯುಕ್ತ’ ಮೌನ

ನಗರಸಭೆಯಲ್ಲಿ ₹22ಕೋಟಿಗೂ ಹೆಚ್ಚು ಹಗರಣ ನಡೆದಿದ್ದು ಲೋಕಾಯುಕ್ತ ಪೊಲೀಸರು ಮೌನವಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಪ್ರತಿ ತಿಂಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಆಹವಾಲು ಸ್ವೀಕಾರ ನಡೆಯುತ್ತದೆ. ಆಗ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳಲ್ಲಿ ವಿಳಂಬ ಮಾಡುತ್ತಿದ್ದರೆ ಕಾರಣ ಇಲ್ಲದೆ ಅರ್ಜಿ ತಿರಸ್ಕರಿಸುತ್ತಿದ್ದರೆ ಅಥವಾ ಕಚೇರಿಗೆ ಅಲೆದಾಡಿಸುತ್ತಿದ್ದರೆ ಅಹವಾಲು ಸಲ್ಲಿಸಲು ಮನವಿ ಮಾಡುತ್ತಾರೆ. ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ಯಾರಾದರೂ ಲಂಚ ಕೇಳಿದರೆ ಗಮನಕ್ಕೂ ತರಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಕಟಣೆ ನೀಡುತ್ತಾರೆ. ಆದರೆ ನಗರಭೆಯಲ್ಲಿ ಕೋಟ್ಯಂತರ ಹಗರಣ ನಡೆದರೂ ಯಾಕೆ ಮೌನವಾಗಿದೆ ಎಂದು ನಾಗಕರು ಪ್ರಶ್ನಿಸುತ್ತಾರೆ. ‘ಅಕ್ರಮ ನಡೆದಾಗ ಮಧ್ಯ ಪ್ರವೇಶಿಸಿ ಸುಮೋಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಮಾಡದಿದ್ದರೆ ಭ್ರಷ್ಟಾಚಾರಕ್ಕೆ ಬೆಂಬಲಿಸಿದಂತೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಹಗರಣವನ್ನು ಬಯಲಿಗೆಳೆಯಲು ಲೋಕಾಯುಕ್ತ ಇಲಾಖೆ ಮುಂದಾಗಬೇಕು’ ಎಂದು ಹಿರಿಯ ವಕೀಲ ಭಾಸ್ಕರರಾವ ಮುಡಬೂಳ ಆಗ್ರಹಿಸುತ್ತಾರೆ.

ಉಪವಿಭಾಗಾಧಿಕಾರಿ ನಗರಸಭೆ ಪೌರಾಯುಕ್ತರಾಗಿದ್ದಾಗ ಯಾವ ಕೆಲಸಗಳು ಆಗಿರಲಿಲ್ಲ. ಈಗ ಪಿಡಿ ಪೌರಾಯುಕ್ತರಾಗಿ ನೇಮಕವಾಗಿದ್ದರಿಂದ ಸುಲಭವಾಗಿ ಸಾರ್ವಜನಿಕರ ಕೆಲಸಗಳು ಆಗುವ ನಿರೀಕ್ಷೆ ಇದೆ.
ಅವಿನಾಶ ಜಗನ್ನಾಥ, ಕರ್ನಾಟಕ ಪ್ರದೇಶ ರಾಜ್ಯ ಯುವ ಕಾಂಗ್ರೆಸ್‌ ಕಾರ್ಯದರ್ಶಿ

ಪ್ರಭಾರ ಪೌರಾಯುಕ್ತರ ನೇಮಕ

ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಲಕ್ಷ್ಮೀಕಾಂತ ಅವರು ಸೆ. 26 ರಂದು ನಗರಸಭೆ ಪೌರಾಯುಕ್ತರಾಗಿ ಪ್ರಭಾರ ವಹಿಸಿಕೊಂಡಿದ್ದಾರೆ. ಹಿಂದಿನ ಪೌರಾಯುಕ್ತ ಸಂಗಮೇಶ ಉಪಾಸೆಯವರನ್ನು ಆ.22ರಂದು ಜಿಲ್ಲಾಧಿಕಾರಿ ಪೌರಾಯುಕ್ತ ಹುದ್ದೆಯಿಂದ ಬಿಡುಗಡೆಗೊಳಿಸಿದ್ದರು. ಆನಂತರ ಉಪವಿಭಾಗಾಧಿಕಾರಿಗೆ ಪ್ರಭಾರ ನೀಡಲಾಗಿತ್ತು. ಅವರಿಂದ ನಗರಸಭೆ ಕೆಲಸಗಳು ಆಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದರಿಂದ ಯೋಜನಾ ನಿರ್ದೇಶಕರಿಗೆ ಪ್ರಭಾರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಒಂದೂವರೆ ತಿಂಗಳಿಂದ ಜಿಲ್ಲಾ ಕೇಂದ್ರವಾದ ಯಾದಗಿರಿ ನಗರಸಭೆಯಲ್ಲಿ ಕಾಯಂ ಪೌರಾಯುಕ್ತರಿಲ್ಲದೇ ಅನೇಕ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ತನಿಖೆಗಾಗಿ ಒಂದೂವರೆ ತಿಂಗಳ ಹಿಂದೆ ಆದೇಶ ಹೊರಡಿಸಿರುವ ಪ್ರತಿ
ತನಿಖೆಗಾಗಿ ಒಂದೂವರೆ ತಿಂಗಳ ಹಿಂದೆ ಆದೇಶ ಹೊರಡಿಸಿರುವ ಪ್ರತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT