ಭಾನುವಾರ, ಏಪ್ರಿಲ್ 2, 2023
23 °C
ಮೂಲ ಸೌಕರ್ಯಕ್ಕಾಗಿ ಗ್ರಾಮಸ್ಥರ ಪರದಾಟ, ಅಧಿಕಾರಿಗಳ ನಿರ್ಲಕ್ಷ್ಯ

ಗಾಜರಕೋಟ: ಬೇಕಾದವರಿಗೆ ಬೆಣ್ಣೆ, ನಮಗೆ ಬರೀ ಸುಣ್ಣ

ಎಂ.ಪಿ. ಚಪೆಟ್ಲಾ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ನಮ್ಮ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ಈ ಸಂಬಂಧ ಹಲವು ಬಾರಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರೂ ಸ್ಪಂದಿಸುತ್ತಿಲ್ಲ. ಆದರೆ ಪಂಚಾಯಿತಿ ಸಿಬ್ಬಂದಿ ತಾರತಮ್ಯ ಮಾಡುತ್ತಿದ್ದು, ತಮಗೆ ಬೇಕಾದವರಿಗೆ ನೀರು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಾರೆ. ಆದರೆ ನಮ್ಮ ಬಡಾವಣೆಯಲ್ಲಿರುವ ಸಮಸ್ಯೆ ಪರಿಹರಿಸುವುದಿಲ್ಲ. ಬೇಕಾದವರಿಗೆ ಬೆಣ್ಣೆ ಕೊಡ್ತಾರೆ, ನಮ್ಮ ಕಣ್ಣಿಗೆ ಸುಣ್ಣ ಹಚ್ಚುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಲ್ಲೂಕಿನ ಸಮೀಪದ ಗಾಜರ ಕೋಟ ಗ್ರಾಮದಲ್ಲಿ 8 ಸಾವಿರ ಜನಸಂಖ್ಯೆಯಿದ್ದು, 14 ಜನ ಸ್ಥಳೀಯ ಸದಸ್ಯರು ಸೇರಿ ಒಟ್ಟು 26 ಸದಸ್ಯ ಬಲದ ಗ್ರಾ.ಪಂ. ಇದೆ. ಆದರೆ ಗ್ರಾಮಸ್ಥರಿಗೆ ಮಾತ್ರ ಸೂಕ್ತ ಮೂಲಸೌಲಭ್ಯಗಳು ದೊರೆಯುತ್ತಿಲ್ಲ.

ನೀರು ಸರಬರಾಜಿಗೆ ಪೈಪ್‌ಲೈನ್‌ ಇದೆ, ಆದರೆ ನೀರು ಬರುವುದಿಲ್ಲ. ಈ ಸಮಸ್ಯೆ ಪರಿಹರಿಸಲು ಹಲವು ಬಾರಿ ಪಿಡಿಒ, ಅಧ್ಯಕ್ಷರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಚರಂಡಿ ನಿರ್ಮಾಣ ವೈಜ್ಞಾನಿಕವಾಗಿಲ್ಲ. ಹಂದಿಗಳ ಕಾಟ ಹೆಚ್ಚಿದ್ದು, ಮಕ್ಕಳು, ಹಿರಿಯರು ಓಡಾಡುವಂತಿಲ್ಲ. ಇಂತಹ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂದು ಗ್ರಾಮಸ್ಥರಾದ ದ್ಯಾವಮ್ಮ ಬುಟ್ಟ ಅಳಲು ತೋಡಿಕೊಂಡರು.

ಬಡಾವಣೆ ಹನುಮ ದೇವರ ಮುಂದಿನ ಸೇದುವ ಬಾವಿಗೆ ಕೊಳವೆ ಬಾವಿಗಳ ನೀರು ತುಂಬುತ್ತಿದ್ದು, ಅಲ್ಲಿಂದ ನೀರು ಹೊತ್ತೊಯ್ಯಬೇಕು. ಹೀಗೆ ನೀರು ತರಲೆಂದು ಬಂದ ಯುವತಿಯೊಬ್ಬರು ಬಾವಿಯಲ್ಲಿ ಬಿದ್ದು, ಮೃತಪಟ್ಟಿದ್ದಾರೆ. ಆದರೂ ಈವರೆಗೂ ಜನರಿಗೆ ನೀರು ಸರಬರಾಜಿಗೆ ಕ್ರಮಕೈಗೊಂಡಿಲ್ಲ.

ಚುನಾವಣೆಯಲ್ಲಿ ಮತ ಚಲಾಯಿಸಲು ಮಾತ್ರ ಬೇಕು, ನಂತರ ಅವಶ್ಯವಿಲ್ಲ. ಚರಂಡಿಗಳಲ್ಲಿನ ಹೂಳು ತೆಗೆಯಲ್ಲ. ರೋಗ ಬಂದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ನಮ್ಮ ಪಾಲಿಗೆ ಕೇವಲ ‘ಇಲ್ಲಗಳ ಸರಮಾಲೆ’ ಉಳಿದಿದೆ ಎಂದು ಬುಗ್ಗಮ್ಮ, ಲಕ್ಷ್ಮೀ, ಕೋಟಗಿರಿ ಲಲಿತಮ್ಮ, ಸಾಯಮ್ಮ ಕನಡಿ, ಸುಶೀಲಮ್ಮ ಅಳಲು ತೋಡಿಕೊಂಡರು.

ಆಸ್ಪತ್ರೆ ಪಕ್ಕದಲ್ಲಿನ ತಿಪ್ಪೆಗುಂಡಿಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ವಹಿಸಲಾಗುವುದು. ನೀರು ಸರಬರಾಜು ಮತ್ತು ಚರಂಡಿ ಸಮಸ್ಯೆ ಕುರಿತು ಪಿಡಿಒ ಜತೆಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ತಾ.ಪಂ. ಇಒ ಎಸ್.ಎಸ್. ಖಾದ್ರೋಳಿ ಅವರು
ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು