ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ–ಪಿಎಂ ಕಿಸಾನ್‌ ಸಮ್ಮಾನ್‌; ಅರಿವಿನ ಕೊರತೆ

ಕೃಷಿ ಚಟುವಟಿಕೆ ವೇಳೆ ರೈತನಿಗೆ ಹಣ ಸಹಾಯ ಮಾಡುವುದು ಪ್ರಮುಖ ಉದ್ದೇಶ, ಈಡೇರದ ಸರ್ಕಾರದ ಯೋಜನೆ
Last Updated 18 ಜುಲೈ 2021, 16:33 IST
ಅಕ್ಷರ ಗಾತ್ರ

ಯಾದಗಿರಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್‌ ನಿಧಿ ಯೋಜನೆ (ಪಿಎಂ ಕಿಸಾನ್‌) ರಾಜ್ಯದಲ್ಲಿ 2018ರ ಡಿಸೆಂಬರ್‌ 1ರಿಂದ ಆರಂಭವಾಗಿದ್ದು, 2019ರ ಫೆಬ್ರುವರಿಯಿಂದ ಇದು ಅನುಷ್ಠಾನಗೊಂಡಿದೆ. ಆದರೆ, ಇದರ ಬಗ್ಗೆ ಜಿಲ್ಲೆಯಲ್ಲಿ ಅರಿವಿನ ಕೊರತೆ ಇದ್ದು, ಅರ್ಹರು ಇದರಿಂದ ವಂಚಿತರಾಗಿದ್ದಾರೆ.

ಸಾಗುವಳಿ ಭೂಮಿ ಹೊಂದಿದ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ ₹6,000 ಸಾವಿರ ನೆರವನ್ನು ₹2,000ಗಳಲ್ಲಿ ಮೂರು ಕಂತುಗಳಲ್ಲಿ (ಡಿಸೆಂಬರ್–ಮಾರ್ಚ್‌, ಎಪ್ರಿಲ್‌–ಜುಲೈ ಮತ್ತು ಆಗಸ್ಟ್‌–ನವೆಂಬರ್‌) ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ₹4 ಸಾವಿರ ಸೇರಿಸಿ
ಒಟ್ಟು ₹10 ಸಾವಿರ ಒಬ್ಬ ರೈತನಿಗೆ ನೀಡಲಾಗುತ್ತಿದೆ. ಆದರೆ, ಈ ಬಗ್ಗೆ ಅನಕ್ಷರಸ್ತ ರೈತರಿಗೆ ಯಾವುದೇ ಮಾಹಿತಿ ಇಲ್ಲ.

ಕುಟುಂಬದಲ್ಲಿ ಒಬ್ಬರಿಗೆ ಹಣ: ರೈತ ಕುಟುಂಬದ ಒಬ್ಬರಿಗೆ ಮಾತ್ರ ಹಣ ಪಾವತಿಸಲಾಗುತ್ತಿದೆ. ಅಲ್ಲದೆ ಕುಟುಂಬದ ಎಲ್ಲರೂ ಅರ್ಜಿ ಹಾಕಿದರೆ ಅದು ತಿರಸ್ಕೃತವಾಗುತ್ತದೆ. ಪಹಣಿ ಜಂಟಿ ಇರಬಾರದು. ಇದು ಕೂಡ ಅನರ್ಹತೆಗೆ ಕಾರಣವಾಗಿದೆ. ಆಧಾರ, ಪಹಣಿ, ಬ್ಯಾಂಕ್‌ ಪಾಸ್‌ ಬುಕ್‌ ಸೇರಿದಂತೆ ರೈತರು ಸಲ್ಲಿಸುವ ದಾಖಲೆಯಲ್ಲಿ ಒಂದೇ ರೀತಿಯ ಹೆಸರು ಇರಬೇಕು. ಒಂದು ಅಕ್ಷರ ತಪ್ಪಿದ್ದರೂ ಹಣ ಬರುವುದಿಲ್ಲ. ಇಂಥ ಸಾಮಾನ್ಯ ತಿಳಿವಳಿಕೆಯನ್ನು ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಮೂಡಿಸಿಲ್ಲ ಎಂಬ ಆರೋಪವಿದೆ.

ಜಿಲ್ಲೆಯಲ್ಲಿ ಒಂದೇ ಕುಟುಂಬದವರು ಎಂದು 4,184 ಅರ್ಜಿಗಳನ್ನು ತಿರಸ್ಕೃತ ಮಾಡಲಾಗಿದೆ. ಸಂಶಯಾತ್ಮಕ ಪ್ರಕರಣಗಳೆಂದು 28 ಗುರುತಿಸಲಾಗಿದೆ. 3,170 ಅರ್ಜಿಗಳು 2019ರ ಫೆಬ್ರುವರಿ 1ರ ನಂತರ ಭೂ ಸ್ವಾಧೀನ ಗೊಂಡಿರುವ ಆಸ್ತಿಗಳಿವೆ.

ರಾಜಕಾರಣಿಗಳು, ಪುತ್ರರು, ನೌಕರರು ಹೆಸರು!: ಪಿಎಂ ಕಿಸಾನ್‌ ಯೋಜನೆಯಡಿ ಬಡವರಿಗೆ ಸಹಾಯ ಮಾಡಲು ಉದ್ದೇಶಿಸಿದ್ದರೆ ಜಿಲ್ಲೆಯಲ್ಲಿ ರಾಜಕೀಯ ವ್ಯಕ್ತಿಗಳು, ಅವರ ಮಕ್ಕಳು, ಸರ್ಕಾರಿ ನೌಕರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕೆಲವರು ಕೆಲ ಕಂತುಗಳ ಹಣವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಜಿಲ್ಲೆಯ ಪ್ರತಿಷ್ಠಿತ ಕುಟುಂಬಗಳ ಸದಸ್ಯರು ಈ ಯೋಜನೆಯಡಿ ಹಣ ಪಡೆದಿದ್ದಾರೆ. ಈಗ ಕೇಂದ್ರ ಸರ್ಕಾರ ಅಂಥವರನ್ನು ಗುರುತಿಸಿ ಅಂಥವರಿಂದ ಹಣ ವಾಪಾಸು ಪಡೆಯುವ ಪ್ರಕ್ರಿಯೆ ಆರಂಭಿಸಿದೆ.

1,031 ಆದಾಯ ಪಾವತಿಸುವವರು: 2019–20ರಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 1,031 ಜನರು ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಶಹಾಪುರ ತಾಲ್ಲೂಕಿನಲ್ಲಿ 432, ಸುರಪುರ ತಾಲ್ಲೂಕಿನಲ್ಲಿ 303, ಯಾದಗಿರಿ ತಾಲ್ಲೂಕಿನಲ್ಲಿ 296 ಸೇರಿದಂತೆ 1,031 ಮಂದಿ ಇದ್ದಾರೆ.

***

2 ತಾಲ್ಲೂಕುಗಳಲ್ಲಿ 45 ಸಾವಿರ ಫಲಾನುಭವಿಗಳು

ಸುರಪುರ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸುರಪುರ ಮತ್ತು ಹುಣಸಗಿ ತಾಲ್ಲೂಕುಗಳಲ್ಲಿ ಇದುವರೆಗೂ 45 ಸಾವಿರ ಫಲಾನುಭವಿಗಳು ಅರ್ಹತೆ ಪಡೆದಿದ್ದಾರೆ.

ಎರಡೂ ತಾಲ್ಲೂಕುಗಳು ಸೇರಿ ರೈತರ ಸಂಖ್ಯೆ ಅಂದಾಜು 1 ಲಕ್ಷಕ್ಕೂ ಅಧಿಕ. ಆದರೆ, ಇಲ್ಲಿಯವರೆಗೆ ಕೇವಲ 45 ಸಾವಿರ ರೈತರು ಮಾತ್ರ ಫಲಾನುಭವಿಗಳಾಗಿದ್ದಾರೆ. ಇನ್ನಷ್ಟು ರೈತರು ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಅಗತ್ಯವಿದೆ. 2019ಕ್ಕಿಂತ ಹಿಂದೆ ಖರೀದಿಯಾದ ಹೊಲಗಳ ರೈತರ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಇದರ ನಂತರ ಖರೀದಿ ಮಾಡಿದವರು 5 ವರ್ಷಗಳವರೆಗೆ ಕಾಯಬೇಕಾದ ನಿಯಮವಿದೆ. ಪಹಣಿಯಲ್ಲಿ ಗೊಂದಲ ಇರುವುದು. ಖಾತೆ ಬದಲಾವಣೆ ಆಗದಿರುವುದು, ಒಂದೇ ಕುಟುಂಬದ ಇತರ ಸದಸ್ಯರ ಅರ್ಜಿ ಪರಿಗಣಿಸಲಾಗುವುದಿಲ್ಲ.
***
ಕಿಸಾನ್ ಸಮ್ಮಾನ ಜಾಗೃತಿ ಕೊರತೆ

ಶಹಾಪುರ: ಕಿಸಾನ್‌ ಸಮ್ಮಾನ ಯೋಜನೆ ಉತ್ತಮವಾಗಿದೆ. ಆದರೆ, ಅನುಷ್ಠಾನಗೊಳಿಸುವಲ್ಲಿ ಸಾಕಷ್ಟು ತ್ರಾಸು ರೈತರು ಅನುಭವಿಸುವಂತೆ ಆಗಿದೆ.

ಆಧಾರ್‌ ಸಂಖ್ಯೆ ಜೋಡಣೆಯಿಂದ ಹಿಡಿದು ಇನ್ನಿಲ್ಲದ ತಾಂತ್ರಿಕ ಕಾರಣದಿಂದ ಕಚೇರಿಗೆ ಅಲೆದು ಸಾಕಾಗಿ ರೈತರು ಬಿಟ್ಟ ಹಲವು ಉದಾಹರಣೆಗಳು ಇವೆ. ಕೃಷಿ ಇಲಾಖೆ ಇಲ್ಲವೆ ಕಂದಾಯ ಇಲಾಖೆಯ ಸಿಬ್ಬಂದಿ ಸಮರ್ಪಕವಾಗಿ ಮಾಹಿತಿ ನೀಡುವುದಿಲ್ಲ ಎಂಬ ಆರೋಪವಿದೆ.

‘ಇನ್ನೂ ಯೋಜನೆ ಲಾಭ ಪಡೆಯುತ್ತಿರುವ ರೈತರು ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡಿದ್ದರೆ ಸಾಲದ ಖಾತೆಗೆ ಹಣ ಜಮಾ ಮಾಡುತ್ತಾರೆ. ಅಲ್ಲದೆ ಡಿಸಿಸಿ ಬ್ಯಾಂಕಿನವರು ಹಣ ನೀಡದೆ ಸತಾಯಿಸುವುದು ಸಾಮಾನ್ಯವಾಗಿದೆ. ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು ಎಂದರೆ ಕೃಷಿ ಇಲಾಖೆಯ ಜವಾಬ್ದಾರಿ ಹೆಚ್ಚಿದೆ’ ಎನ್ನುತ್ತಾರೆ ರೈತ ಮುಖಂಡ ಚೆನ್ನಪ್ಪ ಆನೇಗುಂದಿ.
***
ದಾಖಲಾತಿಗಳ ತಪ್ಪುಗಳೇ ದೊಡ್ಡ ಸಮಸ್ಯೆ

ಗುರುಮಠಕಲ್: ಪಿ.ಎಂ.ಕಿಸಾನ್ ಯೋಜನೆಯ ಫಲಾನುಭವಿಯಾಗಲು ಪಹಣಿ ಮತ್ತು ಆಧಾರ್ ಗುರುತಿನ ಚೀಟಿಗಳಲ್ಲಿ ಮಾಲೀಕರ ಹೆಸರಿನಲ್ಲಿರುವ ವ್ಯತ್ಯಾಸ ರೈತರಿಗೆ ದೊಡ್ಡ ಸಮಸ್ಯೆಯಾಗಿವೆ.

ಹೆಚ್ಚಾಗಿ ತಾಂಡಾಗಳ ರೈತರ ದಾಖಲಾತಿಗಳ ಹೆಸರುಗಳಲ್ಲಿ ವ್ಯತ್ಯಾಸಗಳಿವೆ. ಅವು ಅರ್ಜಿ ಸಲ್ಲಿಸುವ ಹಂತದಲ್ಲಿಯೇ ತಿರಸ್ಕೃತಗೊಳ್ಳುತ್ತವೆ. ಹಾಗೇ ಒಂದೇ ಕುಟುಂಬದಲ್ಲಿ ಹೆಚ್ಚಿನ ಅರ್ಜಿಗಳು ಸಲ್ಲಿಸಿದರೆ ಅಂಥ ಅರ್ಜಿಗಳೂ ತಿರಸ್ಕಾರವಾಗಲಿವೆ ಎನ್ನುತ್ತಾರ ಕೃಷಿ ಇಲಾಖೆಯ ಸಿಬ್ಬಂದಿಯೊಬ್ಬರು.

ಗುರುಮಠಕಲ್ 7,943, ಕೊಂಕಲ್ 6,063, ಬಳಿಚಕ್ರ 3,953, ಸೈದಾಪುರ 439 ಸೇರಿ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಸಲ್ಲಿಕೆಯಾದ ಒಟ್ಟು 18,400 ಅರ್ಜಿಗಳಲ್ಲಿ, 16,544 ಅರ್ಜಿಗಳು ವಿಲೆವಾರಿಯಾಗಿವೆ. ಉಳಿದಂತೆ 46 ಸಹಾಯಕ ಕೃಷಿ ಅಧಿಕಾರಿಗಳ ಹಂತದಲ್ಲಿ ಹಾಗೂ 81 ಅರ್ಜಿಗಳು ವಿಲೇವಾರಿಗೆ ಕೊನೆಯ ಹಂತದಲ್ಲಿವೆ. 22 ಪೌತಿ ಬಾಕಿ, 2019ರ ನಂತರ ಸ್ವಾಧೀನಗೊಂಡ ಆಸ್ತಿಗಳ 624, ಸಂಶಯಾಸ್ಪದ 12, ಕುಟುಂಬದ ಹೆಚ್ಚುವರಿ 1,004 ಅರ್ಜಿಗಳು ಬಾಕಿ ಉಳಿದಿದ್ದು, ಈ ಅರ್ಜಿಗಳು ಬಹುತೇಕ ತಿರಸ್ಕೃತವಾಗುವ ಸಾಧ್ಯತೆಗಳೆ ಹೆಚ್ಚು. ಆದಾಯ ತೆರಿಗೆ ಪಾವತಿಸುವ 45 ಜನರಿಗೆ ಈ ಮೊದಲು ಪಡೆದ ಯೋಜನೆಯ ಹಣವನ್ನು ಹಿಂಪಾವತಿಸುವಂತೆ ಸರ್ಕಾರ ಸೂಚಿಸಿದೆ.
***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT