ಬುಧವಾರ, ಮಾರ್ಚ್ 29, 2023
25 °C
ದುರಸ್ತಿಯಾಗದ ಕಳೆದ ವರ್ಷದ ಪ್ರವಾಹದಿಂದ ಉಂಟಾದ ರಸ್ತೆಗಳು, ಸವಾರರ ಪರದಾಟ

ಯಾದಗಿರಿ: ಮಳೆಗೆ ನಗರ, ಗ್ರಾಮೀಣ ರಸ್ತೆಗಳು ಹಾಳು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತಿದೆ. ಇದರಿಂದ ನಗರ, ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ನಗರದಲ್ಲಿ ಹಾದು ಹೋಗಿದ್ದು, ಈ ರಸ್ತೆಗಳಲ್ಲಿ ಗುಂಡಿ ಬಿದ್ದು ಸಂಚಾರಕ್ಕೆ ಸಂಚಕಾರ ತಂದಿವೆ.

ನಗರದ ಸುಭಾಷ ವೃತ್ತ, ಶಾಸ್ತ್ರಿ ವೃತ್ತ, ಗಾಂಧಿ ವೃತ್ತ, ಗಂಜ್‌ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ರಸ್ತೆ ಗುಂಡಿ ಬಿದ್ದು, ಮಳೆ ನೀರು ಮತ್ತಷ್ಟು ಹದಗೆಟ್ಟಿವೆ. ನಗರದಲ್ಲಿ ತಗ್ಗು, ದಿನ್ನೆಗಳ ರಸ್ತೆಗಳಿದ್ದರೆ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಕೆಸರು ಗದ್ದೆಗಳಾಗಿವೆ.

ಗ್ರಾಮೀಣ ಭಾಗದ ರಸ್ತೆಗಳಂತೆ ನಗರದಲ್ಲಿ ಹಲವಾರು ರಸ್ತೆಗಳು ಹದಗೆಟ್ಟಿವೆ. ಶಾಸ್ತ್ರಿ ವೃತ್ತದಿಂದ ಹಿಡಿದು ರೈಲ್ವೆ ಸ್ಟೇಷನ್‌ ತೆರಳುವ ರಸ್ತೆ ಹಲವಾರು ವರ್ಷಗಳಿಂದ ದುರಸ್ತಿಯಾಗದೇ ವಾಹನ ಸವಾರರು ತುಂಬಾ ತೊಂದರೆ ಪಡುತ್ತಿದ್ದಾರೆ.

ಶಾಸ್ತ್ರಿ ವೃತ್ತದಿಂದ ಹೆಜ್ಜೆ ಹೆಜ್ಜೆಗೂ ತಗ್ಗು, ಗುಂಡಿಗಳು ಬಿದ್ದಿವೆ. ಅಲ್ಲದೇ ಮಳೆ ನೀರು ನಿಂತು ತಗ್ಗು ಯಾವುದೋ ರಸ್ತೆ ಯಾವುದೋ ತಿಳಿದಂತೆ ಆಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

‘ನಿಗದಿತಗಿಂತ ಹೆಚ್ಚಿನ ಭಾರದ ಮರಳು, ಜಲ್ಲಿಕಲ್ಲುಗಳ ಲಾರಿಗಳು ನಗರದಲ್ಲಿ ಹೆಚ್ಚು ಓಡಾಡುತ್ತಿವೆ. ಮಳೆಗಾಲದಲ್ಲಿ ಸ್ವಲ್ವ ಗುಂಡಿ ಬಿದ್ದರೂ ಮತ್ತಷ್ಟು ರಸ್ತೆ ಹದಗೆಡುತ್ತದೆ. ಇದರಿಂದ ವಾಹನ ಸವಾರರು ಪ್ರಯಾಸ ಪಡುತ್ತಿದ್ದಾರೆ’ ಎಂದು ಆಟೊ ಚಾಲಕ ಮಲ್ಲಯ್ಯ ಹೇಳುತ್ತಾರೆ.

ಈಚೆಗೆ ವಡಗೇರಾ ತಾಲ್ಲೂಕಿನ ನಾಯ್ಕಲ್‌ ಗ್ರಾಮದ ಮುಖ್ಯ ರಸ್ತೆಯಲ್ಲಿ ನೀರು ನಿಂತು ಗದ್ದೆಯಂತಾಗಿದ್ದರಿಂದ ಕನ್ನಡಪರ ಸಂಘಟನೆಯಿಂದ ಭತ್ತ, ಹುಲ್ಲು ನಾಟಿ ಮಾಡಿ ರಸ್ತೆ ದುರಸ್ತಿಗೆ ಆಗ್ರಹಿಸಿದ್ದರು.

‘ವಿವಿಧ ಕಾರಣಗಳಿಗಾಗಿ ಈ ರಸ್ತೆಯಲ್ಲಿ ಸಂಚಾರ ಮಾಡಬೇಕಾಗುತ್ತದೆ. ಆದರೆ, ಗುಂಡಿ ಬಿದ್ದ ರಸ್ತೆ ಹಲವಾರು ವರ್ಷಗಳಿಂದ ದುರಸ್ತಿಯೇ ಮಾಡಿಲ್ಲ. ಎಡ ಭಾಗದಲ್ಲಿ ಆಸ್ಪತ್ರೆ, ಮೆಡಿಕಲ್‌ಗಳಿದ್ದರೆ ಬಲಭಾಗದಲ್ಲಿ ಅರಣ್ಯ ಇಲಾಖೆ, ಎಸ್‌ಬಿಐ ಬ್ಯಾಂಕ್‌ ಸೇರಿದಂತೆ ವ್ಯಾಪಾರ ಮಳಿಗೆಗಳಿವೆ. ಈ ಮಾರ್ಗದಲ್ಲಿ ಸಂಚಾರ ಮಾಡಲು ತೀವ್ರ ಪರದಾಡಬೇಕಾಗಿದೆ’ ಎನ್ನುವುದು ಬೈಕ್‌ ಸವಾರ ಅನಿಲ್ ಅನಿಸಿಕೆಯಾಗಿದೆ.

ಪ್ರವಾಹದಿಂದ ಹಾಳಾದ ರಸ್ತೆಗಿಲ್ಲ ಮುಕ್ತಿ: ಜಿಲ್ಲೆಯಲ್ಲಿ ಕಳೆದ ವರ್ಷ ಉಂಟಾದ ಕೃಷ್ಣಾ, ಭೀಮಾ ನದಿ ಪ್ರವಾಹದಿಂದ ಇಲ್ಲಿಯವರೆಗೆ ರಸ್ತೆಗಳು ದುರಸ್ತಿಯಾಗಿಲ್ಲ. ಯಾದಗಿರಿ ತಾಲ್ಲೂಕಿನ ಕಂದಳ್ಳಿ ಗ್ರಾಮದ ಸೇತುವೆ ಬಳಿ ಇನ್ನೂ ರಸ್ತೆ ದುರಸ್ತಿಯಾಗಿಲ್ಲ. ಭೀಮಾ ನದಿ ಪ್ರವಾಹದಿಂದ ಎಡ, ಬಲ ಭಾಗದಲ್ಲಿ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಇದು ಸೇತುವೆ ರಸ್ತೆ ಮೇಲೆ ತಿರುಗಾಡುವ ಪ್ರಯಾಣಿಕರಿಗೆ ಆತಂಕ ಉಂಟು ಮಾಡುತ್ತಿದೆ.

ಇನ್ನೂ ಶಹಾಪುರ, ಸುರಪುರ, ವಡಗೇರಾ ತಾಲ್ಲೂಕುಗಳಲ್ಲಿ ಹಲವಾರು ಕಿಲೋ ಮೀಟರ್‌ ರಸ್ತೆ ಹಾಳಾಗಿದೆ. ಇಲ್ಲಿಯವರೆಗೆ ದುರಸ್ತಿ ಭಾಗ್ಯ ಸಿಕ್ಕಿಲ್ಲ.

10 ವರ್ಷದಲ್ಲೇ ಕಿತ್ತಿ ಹೋದ ರಸ್ತೆ: ಜಿಲ್ಲಾಡಳಿತ ಭವನದಿಂದ ಕೇವಲ 2 ಕಿ.ಮೀ. ಅಂತರದಲ್ಲಿರುವ ತಾಲ್ಲೂಕಿನ ಮುದ್ನಾಳ ಗ್ರಾಮದಲ್ಲಿ ಕಳೆದ 10 ವರ್ಷಗಳ ಹಿಂದೇ ಸಿಸಿ ರಸ್ತೆ ನಿರ್ಮಾಣ ಮಾಡಿದ್ದು, ಈಗ ಎಲ್ಲ ಕಡೆ ಗುಂಡಿಮಯವಾಗಿದೆ.

‘ರೈತರ ಜಮೀನುಗಳಲ್ಲಿ ಅನುಮತಿ ಇಲ್ಲದೇ ಅನಗತ್ಯ ರಸ್ತೆಗಳ ನಿರ್ಮಾಣ ಮಾಡಿ ಹಣ ಲೂಟಿ ಮಾಡಲಾಗುತ್ತಿದೆ. ಆದರೆ, ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾದ ಕಡೆ ರಸ್ತೆ ದುರಸ್ತಿ ಮಾಡದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ’ ಎಂದು ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಆರೋಪಿಸುತ್ತಾರೆ.

‘ಮುದ್ನಾಳ ಗ್ರಾಮದಲ್ಲಿ ರಸ್ತೆ ಅಗಲೀಕರಣ ಮಾಡಿ ಚರಂಡಿ ನಿರ್ಮಿಸಲಾಗುತ್ತಿದೆ. ಅನಂತರ ರಸ್ತೆ ದುರಸ್ತಿ ಮಾಡಲಾಗುತ್ತಿದೆ. ಇದರಿಂದ ರಸ್ತೆಯನ್ನು ಹಾಗೇಯೆ ಬಿಡಲಾಗಿದೆ. ತೀರಾ ಬಡಕುಟುಂಬಗಳ ಮನೆಗಳನ್ನು ತೆರವುಗೊಳಿಸಬೇಕಾಗಿದೆ’ ಎನ್ನುತ್ತಾರೆ ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು.

***

ಮುದ್ನಾಳ ಗ್ರಾಮದಲ್ಲಿ ರಸ್ತೆ ಅಗಲೀಕರಣ ಮಾಡಿ ಚರಂಡಿ, ಸಿಸಿ ರಸ್ತೆ ನಿರ್ಮಿಸಲಾಗುವುದು. 5–6 ಮನೆಗಳ ತೆರವುಗೊಳಿಸಬೇಕಾಗಿದೆ. ಇರುವುದರಿಂದ ರಸ್ತೆ ದುರಸ್ತಿ ಮಾಡಿಸಿಲ್ಲ.
-ವೆಂಕಟರೆಡ್ಡಿ ಮುದ್ನಾಳ, ಯಾದಗಿರಿ ಶಾಸಕ

***
ಶಾಸಕರ ತವರೂರಿನಲ್ಲೇ ರಸ್ತೆಗಳ ಸ್ಥಿತಿ ಅಧ್ವಾನವಾದರೆ ಮತ್ತೆ ಬೇರೆ ಕಡೆ ಹೇಗಿರಬಹುದು. ಸಿಸಿ ರಸ್ತೆ ಹಾಳಾಗಿ ತಗ್ಗು ಗುಂಡಿಗಳು ಬಿದ್ದವೆ. ಮಳೆ ನೀರು ಚರಂಡಿ ನೀರು ರಸ್ತೆ ಮೇಲೆ ನಿಂತಿದ್ದು ದುರ್ವಾಸನೆ ಬೀರುತ್ತಿದೆ.
-ಉಮೇಶ ಕೆ. ಮುದ್ನಾಳ, ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ

***
ಪ್ರವಾಹದಿಂದ ಹಾನಿಯಾದ ರಸ್ತೆಗಳ ದುರಸ್ತಿಗಾಗಿ ₹55 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಳೆಯಿಂದ ಹಾನಿಯಾಗಿರುವ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
-ಅಮೀನ್‌ ಮುಕ್ತಾರ್‌, ಕಾರ್ಯನಿರ್ವಾಹಕ ಎಂಜಿನಿಯರ್ ಪಿಡಬ್ಲ್ಯೂಪಿ ಮತ್ತು ಈಡಬ್ಲ್ಯೂಟಿ ವಿಭಾಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.